ಬೆಂಗಳೂರಿನ ಜಿಗಣಿಯಲ್ಲಿ, ಪತಿ-ಮಕ್ಕಳನ್ನು ತೊರೆದು ಪ್ರಿಯಕರನೊಂದಿಗೆ ವಾಸಿಸುತ್ತಿದ್ದ ಅಕ್ಷತಾ ಎಂಬ ಮಹಿಳೆಯನ್ನು ಉಸಿರುಗಟ್ಟಿಸಿ ಕೊ* ಮಾಡಲಾಗಿದೆ. ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಕೊ* ಬಳಿಕ ಪ್ರಿಯಕರ ನಾನಾ ಸಾಹೇಬ್ ಪರಾರಿಯಾಗಿದ್ದಾನೆ. ಜಿಗಣಿ ಪೊಲೀಸರು ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.

ಆನೇಕಲ್(ಜೂ.7): ಬೆಂಗಳೂರು ಹೊರವಲಯದ ಜಿಗಣಿಯ ಪಟಾಲಮ್ಮ ಬಡಾವಣೆಯಲ್ಲಿ ಭೀಕರ ಕೊ* ಪ್ರಕರಣವೊಂದು ಬೆಳಕಿಗೆ ಬಂದಿದೆ. ವಿವಾಹಿತ ಮಹಿಳೆಯೊಬ್ಬಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಶವವನ್ನು ಮನೆಯೊಳಗೇ ಬಿಟ್ಟು ಪ್ರಿಯಕರ ಪರಾರಿಯಾಗಿರುವ ಆಘಾತಕಾರಿ ಘಟನೆ ನಡೆದಿದೆ. ಇಳಕಲ್ ಮೂಲದ ಅಕ್ಷತಾ (30) ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದೆ. ಸದ್ಯ ಕೊಲೆಗೈದು ಪರಾರಿಯಾಗಿರುವ ಶಂಕಿತ ಆರೋಪಿ ನಾನಾ ಸಾಹೇಬ್ ಪತ್ತೆಗಾಗಿ ಜಿಗಣಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದೇ ತಿಂಗಳ (ಜೂನ್) 20ರಂದು ಜಿಗಣಿಯ ಪಟಾಲಮ್ಮ ಬಡಾವಣೆಯ ಬಾಡಿಗೆ ಮನೆಯೊಂದರಿಂದ ವಿಪರೀತ ದುರ್ವಾಸನೆ ಬರಲಾರಂಭಿಸಿತ್ತು. ಇದರಿಂದ ಸಂಶಯಗೊಂಡ ಮನೆ ಮಾಲೀಕರು ಕಿಟಕಿ ತೆರೆದು ನೋಡಿದಾಗ ಅಕ್ಷತಾ ಅವರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ತಕ್ಷಣವೇ ಜಿಗಣಿ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದ್ದು, ಆರಂಭದಲ್ಲಿ ಪೊಲೀಸರು ಅಸಹಜ ಸಾವು (UDR) ಪ್ರಕರಣ ದಾಖಲಿಸಿಕೊಂಡಿದ್ದರು.

ಆದರೆ, ಅಕ್ಷತಾ ಅವರ ಮರಣೋತ್ತರ ಪರೀಕ್ಷೆಯ ವರದಿ ಬಂದಾಗ ಬೆಚ್ಚಿಬೀಳಿಸುವ ಸತ್ಯ ಹೊರಬಿದ್ದಿದೆ. ಯಾರೋ ಆಕೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವುದು ವೈದ್ಯಕೀಯ ವರದಿಯಲ್ಲಿ ದೃಢಪಟ್ಟಿದೆ. ವರದಿಯ ಆಧಾರದ ಮೇಲೆ ಪೊಲೀಸರು ಸದ್ಯ ಇದನ್ನು ಕೊ* ಪ್ರಕರಣವಾಗಿ ಪರಿವರ್ತಿಸಿ, ತನಿಖೆಯನ್ನು ತೇಜಸ್ವಿಗೊಳಿಸಿದ್ದಾರೆ.

ಪತಿ, ಮಕ್ಕಳನ್ನು ಬಿಟ್ಟು ಪ್ರಿಯಕರನ ಜೊತೆ ಬಂದಿದ್ದ ಅಕ್ಷತಾ!

ಮೃತ ಅಕ್ಷತಾಗೆ ಈ ಹಿಂದೆ ಮದುವೆಯಾಗಿತ್ತು. 2014ರಲ್ಲಿ ಆಕೆ ಕೃಷ್ಣ ಎಂಬುವವರನ್ನು ಪ್ರೀತಿಸಿ ವಿವಾಹವಾಗಿದ್ದಳು. ಈ ದಂಪತಿಗೆ ಒಂದು ಹೆಣ್ಣು ಮತ್ತು ಒಂದು ಗಂಡು ಮಗು ಕೂಡ ಇದೆ. ಪತಿ ಕೃಷ್ಣ ವುಡ್ ವರ್ಕ್ (ಮರದ ಕೆಲಸ) ಮಾಡುತ್ತಿದ್ದರೆ, ಮೃತ ಅಕ್ಷತಾ ಸೀರೆ ನೇಯ್ಗೆ ಕೆಲಸ ಮಾಡುತ್ತಿದ್ದಳು. ಈ ನೇಯ್ಗೆ ಕಾರ್ಖಾನೆಯಲ್ಲೇ ಕೆಲಸ ಮಾಡುತ್ತಿದ್ದ ನಾನಾ ಸಾಹೇಬ್ ಎಂಬಾತನ ಪರಿಚಯ ಅಕ್ಷತಾಗೆ ಆಗಿತ್ತು. ದಿನ ಕಳೆದಂತೆ ಇವರಿಬ್ಬರ ಪರಿಚಯ ಅಕ್ರಮ ಪ್ರೇಮಸಂಬಂಧಕ್ಕೆ ತಿರುಗಿತ್ತು. ಪ್ರಿಯಕರನ ವ್ಯಾಮೋಹಕ್ಕೆ ಬಿದ್ದ ಅಕ್ಷತಾ, ತನ್ನ ಇಬ್ಬರು ಮಕ್ಕಳು ಹಾಗೂ ಪತಿಯನ್ನು ತೊರೆದು ನಾನಾ ಸಾಹೇಬ್ ಜೊತೆ ಓಡಿ ಬಂದಿದ್ದಳು.

ಗಂಡ-ಹೆಂಡತಿ ಎಂದು ಬಾಡಿಗೆ ಮನೆ ಪಡೆದಿದ್ದರು!

ಕಳೆದ ನವೆಂಬರ್ ತಿಂಗಳಲ್ಲಿ ಜಿಗಣಿಯ ಪಟಾಲಮ್ಮ ಬಡಾವಣೆಗೆ ಬಂದಿದ್ದ ಅಕ್ಷತಾ ಮತ್ತು ನಾನಾ ಸಾಹೇಬ್, ತಾವಿಬ್ಬರು ಗಂಡ-ಹೆಂಡತಿ ಎಂದು ಸುಳ್ಳು ಹೇಳಿ ಬಾಡಿಗೆ ಮನೆ ಪಡೆದಿದ್ದರು. ಅಲ್ಲಿಂದ ಇಬ್ಬರೂ ಒಟ್ಟಿಗೇ ವಾಸಿಸುತ್ತಿದ್ದರು. ಆದರೆ, ಇತ್ತೀಚೆಗೆ ಇಬ್ಬರ ನಡುವೆ ಯಾವುದೋ ವಿಚಾರಕ್ಕೆ ಗಲಾಟೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಇದೇ ಕಾರಣಕ್ಕೆ ನಾನಾ ಸಾಹೇಬ್, ಅಕ್ಷತಾಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಮನೆಗೆ ಬೀಗ ಹಾಕಿ ಪರಾರಿಯಾಗಿದ್ದಾನೆ ಎಂದು ಶಂಕಿಸಲಾಗಿದೆ. ಸದ್ಯ ಜಿಗಣಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ಆರೋಪಿ ನಾನಾ ಸಾಹೇಬ್ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಿ ಬಲೆ ಬೀಸಿದ್ದಾರೆ.