ಮಂಡ್ಯ(ಅ.04): ತೀವ್ರ ಕುತೂಹಲ ಕೆರಳಿಸಿದ್ದ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ (ಮನ್ಮುಲ್) ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳು ಲಾಟರಿ ಮೂಲಕ ಜೆಡಿಎಸ್‌ ಒಲಿದಿದೆ. ಬಿಜೆಪಿ ಹಾಗೂ ಕಾಂಗ್ರೆಸ್‌ ಕೆಲವು ನಾಯಕರಿಗೆ ಮುಖಭಂಗವಾಗಿದೆ.

ಮದ್ದೂರು ಜೆಡಿಎಸ್‌-ಕಾಂಗ್ರೆಸ್‌ ಹಾಗೂ ಬಿಜೆಪಿಗೆ ಮನ್ಮುಲ್ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಪ್ರತಿಷ್ಠೆಯ ಕಣವಾಗಿತ್ತು. ಹೀಗಾಗಿ ಮನ್‌ಮುಲ್‌ ನಲ್ಲಿ ಕಾಂಗ್ರೆಸ್‌ ಬೆಂಬಲದಿಂದ ಅಧಿಕಾರ ಪಡೆಯಬೇಕೆಂಬ ಬಿಜೆಪಿ ಕನಸು ನುಚ್ಚು ನೂರಾಗಿದೆ.

ರಾಜ್ಯ ಬೊಕ್ಕಸದಲ್ಲಿ ಹಣವಿದೆ, ಕೊರತೆ ಇಲ್ಲ : ಆರ್. ಅಶೋಕ್

ಲಾಟರಿ ಮೂಲಕ ಅದೃಷ್ಟಲಕ್ಷ್ಮಿ ಜೆಡಿಎಸ್‌ ಬೆಂಬಲಿತ ನಿರ್ದೇಶಕರಾದ ಬಿ.ಆರ್‌.ರಾಮಚಂದ್ರ ಅಧ್ಯಕ್ಷರಾಗಿ ಎಂ.ಎಸ್‌. ರಘುನಂದನ್‌ ಉಪಾಧ್ಯಕ್ಷರಾಗಿ ಗುರುವಾರ ಆಯ್ಕೆಯಾದರು.

ತಲಾ 8 ಮತಗಳು:

ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಜೆಡಿಎಸ್‌ ಬೆಂಬಲಿತ ಬಿ.ಆರ್‌.ರಾಮಚಂದ್ರ ಪ್ರತಿಸ್ಪರ್ಧಿ ಬಿಜೆಪಿ ಬೆಂಬಲಿತ ಎಸ್‌.ಪಿ.ಸ್ವಾಮಿ ಅವರಿಗೆ ತಲಾ 8 ಮತಗಳು ಚಲಾವಣೆಯಾಗಿದ್ದವು. ಅಂತಿಮವಾಗಿ ಚುನಾವಣಾಧಿಕಾರಿಯೂ ಆದ ಅಪರ ಜಿಲ್ಲಾಧಿಕಾರಿ ಟಿ. ಯೋಗೇಶ ಲಾಟರಿಗೆ ಮೊರೆ ಹೋದರು. ಅದೃಷ್ಟಲಕ್ಷ್ಮಿ ಜೆಡಿಎಸ್‌ ಬೆಂಬಲಿತ ಬಿ.ಆರ್‌. ರಾಮಚಂದ್ರಗೆ ಒಲಿದಳು. ಬಿಜೆಪಿ ಸೇರಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಎಸ್‌.ಪಿ.ಸ್ವಾಮಿ ತೀವ್ರ ಮುಖಭಂಗ ಅನುಭವಿಸಿದ್ದಾರೆ.

JDS ತೊರೆದು ಬಿಜೆಪಿ ಸೇರಿದ ಮಂಡ್ಯ ಮುಖಂಡ : ರಾಜೀನಾಮೆ ನೀಡಲು ಪತ್ನಿಗೆ ವಾರ್ನಿಂಗ್

ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಜೆಡಿಎಸ್‌ ಬೆಂಬಲಿತ ಎಂ.ಎಸ್‌. ರಘುನಂದನ್‌ 9 ಮತಗಳನ್ನು ಪಡೆದು ಆಯ್ಕೆಯಾದರು. ಪ್ರತಿಸ್ಪರ್ಧಿ ಬಿಜೆಪಿ ಬೆಂಬಲಿತ ಕೆ.ಜಿ. ತಮ್ಮಣ್ಣ 7 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ.

ನಾಯಕರಿಗೆ ಮುಖಭಂಗ:

ಜೆಡಿಎಸ್‌ಗೆ ಮನ್‌ ಮುಲ್‌ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ತಪ್ಪಿಸುವ ಸಲುವಾಗಿ ಕಾಂಗ್ರೆಸ್‌ ನಾಯಕ ಮಾಜಿ ಸಚಿವ ಎನ್‌. ಚಲುವರಾಯಸ್ವಾಮಿ ತೀವ್ರ ಕಸರತ್ತು ನಡೆಸಿದ್ದರು. ಅಲ್ಲದೆ, ಉಪ ಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ್‌, ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಅಶೋಕ್‌ ಜೊತೆ ಕೈ ಜೋಡಿಸುವ ಮೂಲಕ ರಣತಂತ್ರ ರೂಪಿಸಿದ್ದರು.

ಎಸ್‌.ಪಿ.ಸ್ವಾಮಿ ಅವರನ್ನು ಬಿಜೆಪಿಗೆ ಸೆಳೆದುಕೊಂಡು ಅವರನ್ನು ಮನ್ಮುಲ್ ಅಧ್ಯಕ್ಷ ಸ್ಥಾನದ ಹುರಿಯಾಳಾಗಿ ಮಾಡಿ ಜೆಡಿಎಸ್‌ಗೆ ಭಾರಿ ಪೈಪೋಟಿ ನೀಡಿದ್ದರು. ಅಲ್ಲದೆ, ಕಾನೂನು ದಾಳ ಉರುಳಿಸುವ ಮೂಲಕ ಮನ್ಮುಲ್‌ ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ನೆಲ್ಲಿಗೆರೆ ಬಾಲು ಮತ್ತು ಎಚ್‌. ಟಿ. ಮಂಜು ಅವರನ್ನು ಅನರ್ಹ ಮಾಡುವ ಕಸರತ್ತು ಕೂಡ ವಿಫಲವಾಯಿತು.

ಮಂಡ್ಯ ಕಣಕ್ಕೆ ಸಿಎಂ ಪುತ್ರ : ಕಮಲ ಅರಳಿಸಲು ಮಾಸ್ಟರ್ ಪ್ಲಾನ್

ಈ ಹಿನ್ನಲೆಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರ ಈ ಎಲ್ಲಾ ತಂತ್ರಗಳಿಗೆ ಪ್ರತಿತಂತ್ರ ಎಣೆದ ಜೆಡಿಎಸ್‌ ನಾಯಕರುಗಳು, ಕಾನೂನು ಹೋರಾಟ ನಡೆಸಿ ಅನರ್ಹ ನಿರ್ದೇಶಕರನ್ನು ಕಾಪಾಡುವಲ್ಲಿ ಯಶಸ್ವಿಯಾಗಿದ್ದರು. ಮನ್ಮುಲ್ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಸರ್ಕಾರದ ಪರವಾಗಿ ಮತ ಚಲಾವಣೆ ಮಾಡಬೇಕಾಗಿದ್ದ ಅಧಿಕಾರಿಯೊಬ್ಬರನ್ನು ಅಡ್ಡಮತದಾನ ಮಾಡುವಂತೆ ನೋಡಿಕೊಳ್ಳುವಲ್ಲಿ ಜೆಡಿಎಸ್‌ ನಾಯಕರು ಸಫಲರಾದರು.

ಬಿಜೆಪಿಗೆ ತೀವ್ರ ಮುಖಭಂಗ

ಈ ಎಲ್ಲಾ ರಾಜಕೀಯ ಚದುರಂಗದಾಟದಲ್ಲಿ ಅಂತಿಮವಾಗಿ ಮನ್‌ ಮುಲ್‌ ಅಧ್ಯಕ್ಷ - ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧಿಕಾರಿ ಮತ್ತು ಬಿಜೆಪಿ ಬೆಂಬಲಿತ ನಿರ್ದೆಶಕರಿಂದ ಅಡ್ಡಮತದಾನ ಮಾಡಿಸುವಲ್ಲಿ ಜೆಡಿಎಸ್‌ ನಾಯಕರುಗಳು ಯಶಸ್ವಿಯಾಗಿ ಮನ್‌ ಮುಲ್‌ ಆಡಳಿತವನ್ನು ಜೆಡಿಎಸ್‌ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರಿಗೆ ತೀವ್ರ ಮುಖಭಂಗ ಉಂಟುಮಾಡಿದ್ದಾರೆ.