ಕೆ.ಎನ್.ರವಿ

ಮಂಡ್ಯ [ಸೆ.22]:  ಜಿಲ್ಲೆಯ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆಗೆ ದಿನಾಂಕ ನಿಗದಿಯಾದ ಹಿನ್ನೆಲೆಯಲ್ಲಿ ಕ್ಷೇತ್ರ ದಲ್ಲಿ ಬಿರುಸಿನ ಚಟುವಟಿಕೆಗಳು ಆರಂಭವಾಗಿವೆ. ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಪಥನಗೊಂಡ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಏಕಾಂಗಿಯಾಗಿ ಹೋರಾಟ ನಡೆಸಲಿದ್ದಾರೆ. 

ಜೆಡಿಎಸ್ ಭದ್ರಕೋಟೆಯನ್ನು ಬೇಧಿಸುವ  ಕನಸು ಕಾಣುತ್ತಿರುವ ಕಾಂಗ್ರೆಸ್ ಮತ್ತು ಬಿಜೆಪಿಗೆ ಉಪ ಚುನಾವಣೆ ಒಂದು ದೊಡ್ಡ ಸವಾಲಾಗಲಿದೆ. ಈ ನಡುವೆ ಜೆಡಿಎಸ್‌ನಲ್ಲಿ ಬಂಡಾಯ ಬಾವುಟ ಹಾರಿಸಿ ಅಭಿವೃದ್ಧಿಯ ನೆಪಹೇಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹ ಶಾಸಕ ಪಟ್ಟ ಹೊತ್ತುಕೊಂಡಿರುವ ಕೆ.ಸಿ.ನಾರಾಯಣಗೌಡರು ಬಿಜೆಪಿಯಿಂದ ಸ್ಪರ್ಧಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ, ಸವೋಚ್ಛ ನ್ಯಾಯಾಲಯ ನೀಡುವ ತೀರ್ಪಿನ ಮೇಲೆ ನಾರಾಯಣಗೌಡರ ಭವಿಷ್ಯ ಅಡಗಿದೆ.

ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರ ಜೆಡಿಎಸ್‌ನ ಭದ್ರಕೋಟೆ. ಈ ಕೋಟೆಯನ್ನು ಬೇಧಿಸುವುದು ಕಾಂಗ್ರೆಸ್ ಮತ್ತು ಬಿಜೆಪಿಗೆ ಬಹುದೊಡ್ಡ ಸವಾಲು. ಈ ಬಾರಿ ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಬಲ ವೈರಿಗಳ ರೀತಿಯಲ್ಲಿ ಚುನಾವಣೆ ಎದುರಿಸುವ ಕಾರಣಕ್ಕಾಗಿ ಬಿಜೆಪಿ ಲೆಕ್ಕಚಾರ, ಮತದಾರರ  ಮನಸ್ಥಿತಿ ಒಪ್ಪಿದರೆ ಮುಖ್ಯಮಂತ್ರಿ ಯಡಿಯೂರಪ್ಪನವರ ತವರೂರಿನಲ್ಲಿ ಬಿಜೆಪಿ ಬಾವುಟ ಹಾರುವ ಲಕ್ಷಣಗಳು ಇವೆ. ಆದರೆ, ಇದು ಸುಲಭದ ಮಾತಲ್ಲ. 

ಕಾಂಗ್ರೆಸ್‌ನಿಂದ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಪ್ರಬಲ ಆಕಾಂಕ್ಷಿ. ಆದರೆ, ಉಪ ಚುನಾವಣೆ ಸ್ಪರ್ಧೆ ಯಿಂದ ತಾವು ಗೆದ್ದ ಮೇಲೆ ಆಗುವ ಪರಿಣಾಮಗಳನ್ನು ಮಾಜಿ ಶಾಸಕರು ಲೆಕ್ಕಚಾರ ಹಾಕುತ್ತಿದ್ದಾರೆ. ಮಾಜಿ ಶಾಸಕ ಬಿ.ಪ್ರಕಾಶ್, ಕಿಕ್ಕೇರಿ ಸುರೇಶ್, ಮತ್ತಿಘಟ್ಟ ಕೃಷ್ಣ ಮೂರ್ತಿ, ಹರಳಹಳ್ಳಿ ವಿಶ್ವನಾಥ್ ಸೇರಿದಂತೆ ಬಹು ತೇಕರು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿತರಾಗಿದ್ದಾರೆ. ಅದೇ ರೀತಿ ಜೆಡಿಎಸ್‌ನಲ್ಲಿ ಜಿಪಂ ಸದಸ್ಯ ಬಿ.ಎಲ್ .ದೇವರಾಜು ಸ್ಥಳೀಯ ಅಭ್ಯರ್ಥಿ ಎಂದು ಈಗಾಗಲೇ ಗುರುತಿಸಲಾಗಿದೆ. ಬಹುತೇಕ ಕಣಕ್ಕೆ ಇಳಿಸುವ ಸಾಧ್ಯತೆ ಇದೆ. ಆದರೆ, ದೇವೇಗೌಡರ ಪುತ್ರಿ ಅನುಸೂಯ ಕೂಡ ಒಬ್ಬ ಆಕಾಂಕ್ಷಿ ಎಂದು ಬೆಂಬಲಿಗರು ಹೇಳುತ್ತಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಗೌಡರ ಕುಟುಂಬದ ನಿರ್ಧಾರವೇ ಅಂತಿಮವಾಗಲಿದೆ. ಎಚ್.ಟಿ.ಮಂಜುನಾಥ್, ಬಸ್ ಕೃಷ್ಣೇಗೌಡ, ಕೆ.ಎಸ್. ಪ್ರಭಾಕರ್ ಕೂಡ ಜೆಡಿಎಸ್ ಆಕಾಂಕ್ಷಿತರ ಪಟ್ಟಿಯಲ್ಲಿದ್ದಾರೆ. ಬಿಜೆಪಿಯಲ್ಲಿ ಅನರ್ಹ ಶಾಸಕ ಕೆ.ಸಿ.ನಾರಾಯಣ ಗೌಡರಿಗೆ ಸ್ಪರ್ಧೆ ಮಾಡುವ ಅವಕಾಶ ಸ್ಪಷ್ಟವಾಗಿದೆ. ಆದರೆ, ಸರ್ವೋಚ್ಛ ನ್ಯಾಯಾಲಯದಲ್ಲಿರುವ ಪ್ರಕರಣ ದಿಂದಾಗಿ ಸ್ಪರ್ಧೆಗೆ ತೊಡಕಾಗುವ ಸಾಧ್ಯತೆ ಇದೆ. ಒಂದು ವೇಳೆ ಸ್ಪರ್ಧೆಗೆ ನ್ಯಾಯಾಲಯ ಅನುಮತಿ ನೀಡಿದರೆ ನಾರಾಯಣಗೌಡರೇ ಅಭ್ಯರ್ಥಿಯಾಗಿ ಕಣಕ್ಕೆ ಇಳಿದು ಹ್ಯಾಟ್ರಿಕ್ ಜಯ ಕಾಣುವ ಕನಸು ಕಾಣುತ್ತಿದ್ದಾರೆ.

ಬಿಜೆಪಿ ಕಾರ್ಯಕರ್ತರು, ಮುಖಂಡರ ಆಶಯದಂತೆ ಸಿಎಂ ಪುತ್ರ ವಿಜಯೇಂದ್ರ ಅವರನ್ನು ಕಣಕ್ಕೆ ಇಳಿಸುವ ಬಗ್ಗೆ ಒತ್ತಡಗಳು ಬಂದಿವೆ. ಬೂಕಹಳ್ಳಿ ಮಂಜು ಕೂಡ ಆಕಾಂಕ್ಷಿಯಾಗಿದ್ದಾರೆ. ಏನೇ ಆದರೂ ಬಿಜೆಪಿ ಹೈಕಮಾಂಡ್ ಕೈಗೊಳ್ಳುವ ನಿರ್ಧಾರ ಅಂತಿಮವಾಗಲಿದೆ.

ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 21ರಂದು ಚುನಾವಣೆ ನಡೆಯಲಿದ್ದು, ಅ.24ಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ.