Mekedatu Project: ಜೆಡಿಎಸ್ ಪಾದಯಾತ್ರೆ ಕಾಂಗ್ರೆಸ್‌ನಿಂದ ಹೈಜಾಕ್: HDK
* ಪಾದಯಾತ್ರೆ ಆರಂಭವಾಗಿದ್ದೇ ದೇವೇಗೌಡರಿಂದ
* ಮೇಕೆದಾಟು ವಿಚಾರದಲ್ಲಿ ಜೆಡಿಎಸ್ ಪಕ್ಷದಿಂದಲೂ ಹೋರಾಟ
* ಜನರನ್ನು ಮರಳು ಮಾಡಲು ಕಾಂಗ್ರೆಸ್ ನಾಯಕರ ಪಾದಯಾತ್ರೆ
ರಾಮನಗರ(ಡಿ.24): ಮೇಕೆದಾಟು(Mekedatu) ಯೋಜನೆ ವಿಚಾರವಾಗಿ ಕಾಂಗ್ರೆಸ್ ಪಕ್ಷ ಪಾದಯಾತ್ರೆ(Padayatra) ಹಮ್ಮಿಕೊಂಡು ಹೈಜಾಕ್ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ .ಡಿ.ಕುಮಾರಸ್ವಾಮಿ(HD Kumaraswamy) ದೂರಿದ್ದಾರೆ. ತಾಲೂಕಿನ ಬಿಡದಿಯಲ್ಲಿ ಪುರಸಭಾ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್(JDS) ಅಭ್ಯರ್ಥಿಗಳ ಪರ ಗುರುವಾರ ರೋಡ್ ಶೋ ಮೂಲಕ ಪ್ರಚಾರ ನಡೆಸುವ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಪಾದಯಾತ್ರೆ ಆರಂಭವಾಗಿದ್ದೇ ದೇವೇಗೌಡರಿಂದ. ಮೇಕೆದಾಟು ವಿಚಾರದಲ್ಲಿ ಜೆಡಿಎಸ್ ಪಕ್ಷವೂ ಹೋರಾಟ ಮಾಡುತ್ತಿದೆ. ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳಿಗೂ ಮನವಿ ಕೊಟ್ಟಿದೆ ಎಂದರು.
2013ರಲ್ಲಿ ಕೃಷ್ಣೆಯ ಕಡೆಗೆ ಕಾಂಗ್ರೆಸ್(Congress) ನಡಿಗೆ ಎಂದು ಪಾದಯಾತ್ರೆ ಮಾಡಿದ್ದರು. ಕೃಷ್ಣಾನದಿ ಯೋಜನೆಗೆ(Krishna River Project) ವರ್ಷಕ್ಕೆ 10 ಸಾವಿರ ಕೋಡ್ತೀವಿ ಅಂತ ಹೇಳಿದ್ದರು. ಆದರೆ, 5 ವರ್ಷದಲ್ಲಿ ಕೊಟ್ಟಿದ್ದು ಕೇವಲ 8 ಸಾವಿರ. ಆದರೆ, ಹನಿ ನೀರು ರೈತರ ಜಮೀನಿಗೆ ಹರಿಯಲಿಲ್ಲ. ಕೃಷ್ಣಾ ನದಿ ಯೋಜನೆಗೆ ಸಂಬಂಧಿಸಿದಂತೆ ಮೈನ್ ಕೆನಾಲ್ ನಿರ್ಮಿಸಿದ್ದಾರೆ. ಆದರೆ, ಡಿಸ್ಟ್ರಿಬ್ಯೂಷನ್ ಕೆನಾಲ್ ನಿರ್ಮಿಸಿಲ್ಲ. ಇವರು ಗುತ್ತಿಗೆದಾರ ಜೊತೆ ಸೇರಿ ದುಡ್ಡು ಹಂಚಿಕೊಂಡರು. ಇದು ಸಾಧನೆಯೇ ಎಂದು ಟೀಕಿಸಿದರು.
Congress Padayatra: ಕಾಂಗ್ರೆಸ್‌ನಿಂದ ಪಾದಯಾತ್ರೆ, ಡಿಕೆಶಿ ಪ್ರಕಟಣೆ
ಜನರನ್ನು ಮರಳು ಮಾಡಲು ಮೇಕೆದಾಟು ಯೋಜನೆ ವಿಚಾರವಾಗಿ ಕಾಂಗ್ರೆಸ್ ನಾಯಕರು ಪಾದಯಾತ್ರೆ ಹೊರಟಿದ್ದಾರೆ. ಜೆಡಿಎಸ್ ಕೊಟ್ಟ ನೀರಾವರಿ ಯೋಜನೆಗಳಿಗೂ ಕಾಂಗ್ರೆಸ್‌ನ ಬೂಟಾಟಿಕೆಗೂ ಬಹಳ ವ್ಯತ್ಯಾಸವಿದೆ. ಕಾಂಗ್ರೆಸ್‌ನವರು ಈಗ ಹೈಜಾಕ್ ಮಾಡಿ ತರಾತುರಿಯಲ್ಲಿ ಪಾದಯಾತ್ರೆ ಹಮ್ಮಿಕೊಂಡಿದೆ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ಮೇಕೆದಾಟು ಯೋಜನೆ ಸಾಧ್ಯವಿಲ್ಲ. ಅದು ಜನತಾ ದಳದಿಂದ ಮಾತ್ರ ಸಾಧ್ಯ ಎಂದು ಹೇಳಿದರು.
ಕೇಂದ್ರದಿಂದ ಮಲತಾಯಿ ಧೋರಣೆ: ಎಚ್‌ಡಿಕೆ
ಬೆಳಗಾವಿ(Belagavi): ನೆರೆ ರಾಜ್ಯಗಳಲ್ಲಿ ವೇಗ ನಡೆಯುವಷ್ಟು ನೀರಾವರಿ ಯೋಜನೆಗಳು(Irrigation Projects) ನಮ್ಮಲ್ಲಿ ನಡೆಯುವುದಿಲ್ಲ. ಅವರಿಂದ ನಾವು ಕಲಿಯುವುದು ಬಹಳಷ್ಟಿದೆ ಎಂದು ಅಭಿಪ್ರಾಯಪಟ್ಟಿರುವ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ, ನೀರಾವರಿ ಯೋಜನೆಗಳ ಬಗ್ಗೆ ಕೇಂದ್ರವೂ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಬುಧವಾರ ವಿಧಾನಸಭೆಯಲ್ಲಿ ಉತ್ತರ ಕರ್ನಾಟಕ(North Karnataka) ಸಮಸ್ಯೆಗಳ ಮೇಲಿನ ಚರ್ಚೆಯಲ್ಲಿ ಮಾತನಾಡಿದ್ದ ಅವರು, ಕೃಷ್ಣಾ ಮೇಲ್ದಂಡೆ ಯೋಜನೆ ಕೇಂದ್ರ ಸರ್ಕಾರ ಈವರೆಗೂ ಗೆಜೆಟ್ ನೋಟಿಫಿಕೇಶನ್ ಹೊರಡಿಸುತ್ತಿಲ್ಲ. ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ(BJP Government) ಇದ್ದರೂ ಕೆಲಸ ಮಾತ್ರ ಆಗುತ್ತಿಲ್ಲ ಎಂದು ಆಕ್ಷೇಪಿಸಿದರು. ಕೇಂದ್ರ ಸರ್ಕಾರ(Central Government) ಮನಸು ಮಾಡಿದರೆ ಎರಡು ನಿಮಿಷದ ಕೆಲಸವದು ಎಂದರು.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ: ಚರ್ಚೆಯಾಗಲಿಲ್ಲ ಮೇಕೆದಾಟು ಯೋಜನೆ
ಕೇಂದ್ರ ಸರ್ಕಾರದ ಮೇಲೆ ರಾಜ್ಯ ಸರ್ಕಾರ ಒತ್ತಡ ಹೇರಬೇಕು ಎಂದ ಅವರು, ದೇವೇಗೌಡ(HD Devegowda) ಅವರು ಮುಖ್ಯಮಂತ್ರಿಯಾಗಿದ್ದಾಗ ಕೃಷ್ಣಾ ಮೇಲ್ದಂಡೆ ಯೋಜನೆಗೆ ಸಂಬಂಧಪಟ್ಟಂತೆ ಆಗಿರುವ ಕೆಲಸಗಳು ನಮಗೆ ಮಾರ್ಗದರ್ಶನದಂತೆ. ಆಗ ಭೂ ಸ್ವಾಧೀನ ಯಾವ ರೀತಿ ಮಾಡಿದರು. ಈಗ 11 ವರ್ಷವಾದರೂ ಬರೀ 22 ಸಾವಿರ ಎಕರೆ ಮಾತ್ರ ಭೂಸ್ವಾಧೀನ ಪಡಿಸಿಕೊಳ್ಳಲಾಗಿದೆ. ಆಗಿನ ಮಾದರಿಯಂತೆ ಈಗಲೂ ಭೂಸ್ವಾಧೀನಕ್ಕೆ ಒತ್ತು ನೀಡಬೇಕಿದೆ. ಇದಕ್ಕಾಗಿ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ಇದೇ ರೀತಿ ಉಳಿದ ನೀರಾವರಿ ಯೋಜನೆಗಳ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದರು.
ಕಾಂಗ್ರೆಸ್ ಕಾಲೆಳೆದ ಎಚ್‌ಡಿಕೆ:
ಹಿಂದೆ ಕೃಷ್ಣೆಯ ಕಡೆಗೆ ಕಾಂಗ್ರೆಸ್ ನಡಿಗೆ ಎಂದು ಪಾದಯಾತ್ರೆ ನಡೆಸಿತ್ತು. ಆದರೆ ಹೇಳಿದಂತೆ ನಡೆದುಕೊಳ್ಳಲಿಲ್ಲ. 2013ರಿಂದ 2018ರವರೆಗೆ 8 ಸಾವಿರ ಕೋಟಿ ಖರ್ಚು ಮಾಡಿತು. ಆದರೆ ಬರೀ ಮುಖ್ಯಕಾಲುವೆಗಳ ಕಾಮಗಾರಿ ನಡೆಸಿತು. ವಿತರಣಾ ಕಾಲುವೆ ಕಾಮಗಾರಿ ಮಾಡಲೇ ಇಲ್ಲ. ಇದು ರೈತರಿಗೆ ಏನು ಉತ್ತರ ನೀಡಬೇಕು. ಈಗ ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ನಡೆಸಲು ಸಿದ್ಧವಾಗಿದೆ ಎಂದು ಕಾಂಗ್ರೆಸ್ ಮುಖಂಡರನ್ನು ಕಾಲೆಳೆದರು.