ಸಕಾಲದಲ್ಲಿ ಸೇವೆ - ವೃದ್ಧರ ಖಾತೆಗೆ ಹಣ ಜಮೆ : ಶಾಸಕ ಸಾ ರಾ ಸೂಚನೆ
- ನವಂಬರ್ ತಿಂಗಳ ಮೂರನೇ ಶನಿವಾರ ಜಿಲ್ಲಾಧಿಕಾರಿಯ ಜತೆಗೂಡಿ ಹೆಬ್ಬಾಳು ಗ್ರಾಪಂ ವ್ಯಾಪ್ತಿಯಲ್ಲಿ ಗ್ರಾಮ ವಾಸ್ತವ್ಯ
- ವಿವಿಧ ಸೇವೆಗಳನ್ನು ಸಕಾಲದಲ್ಲಿ ನೀಡಲು ಶಾಸಕರಿಂದ ಸೂಚನೆ
ಕೆ.ಆರ್. ನಗರ (ನ.07): ನವಂಬರ್ ತಿಂಗಳ ಮೂರನೇ ಶನಿವಾರ ಜಿಲ್ಲಾಧಿಕಾರಿಯ ಜತೆಗೂಡಿ ಹೆಬ್ಬಾಳು ಗ್ರಾಪಂ ವ್ಯಾಪ್ತಿಯಲ್ಲಿ ಗ್ರಾಮ ವಾಸ್ತವ್ಯ ಹೂಡಲಾಗುವುದು ಎಂದು ಶಾಸಕ ಸಾ.ರಾ. ಮಹೇಶ್ (MLA Sa Ra Mahesh) ಹೇಳಿದರು.
ತಾಲೂಕು (Taluk) ಕಚೇರಿಯ ಸಭಾಂಗಣದಲ್ಲಿ ನಡೆದ ಕಂದಾಯ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ನವೆಂಬರ್ (November) ಮೂರನೇ ಶನಿವಾರದ ವಾಸ್ತ್ಯವ್ಯದ ನಂತರ ತಾಲೂಕಿನಾದಂತ್ಯ ತಿಂಗಳ ಎರಡನೆ ಶನಿವಾರ ಒಂದೊಂದು ಪಂಚಾಯಿತಿ ವ್ಯಾಪ್ತಿಯಲಿ ವಾಸ್ತವ್ಯ ಮಾಡಿ ಜನರ ಸಮಸ್ಯೆಗಳನ್ನು ಆಲಿಸಲಾಗುವುದು ಎಂದರು.
ಕಂದಾಯಾಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು (Village accountant) ಮತ್ತು ಪಂಚಾಯಿತಿಯ ಅಧಿಕಾರಿಗಳು ಸಾರ್ವಜನಿಕರು ಗ್ರಾಮ ವಾಸ್ತವ್ಯಕ್ಕೆ ತರುವ ದೂರುಗಳನ್ನು ಶೀಘ್ರವೇ ಇತ್ಯರ್ಥ ಮಾಡಿ ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ, ಮನಸ್ವಿನಿ ಹಾಗೂ ಇನ್ನಿತರ ಸರ್ಕಾರ ಸೌಲಭ್ಯಗಳನ್ನು ಸಕಾಲದಲ್ಲಿ ಅರ್ಹ ಫಲಾನುಭವಿಗಳಿಗೆ ತಲುಪುವಂತೆ ನೋಡಿಕೊಂಡು ರದ್ದಾಗಿರುವ ಮತ್ತು ತಡೆ ಹಿಡಿಯಲಾದ ಹಿರಿಯ ನಾಗರಿಕರ ವೃದ್ದಾಪ್ಯ ವೇತನವನ್ನು ಫಲಾನುಭವಿಗಳ ಮನೆಗೆ ತೆರಳಿ ದಾಖಲೆಗಳನ್ನು ಪಡೆದು ಸಕಾಲದಲ್ಲಿ ಅವರ ಖಾತೆಗೆ ಹಣ ಜಮಾ ಮಾಡುವಂತೆ ಅವರು ತಿಳಿಸಿದರು.
ಮಳೆಯಿಂದಾಗಿ ಹಾಳಾದ ಮನೆಗಳ ಪರಹಾರವನ್ನು ನೀಡುವಾಗ ಆ ಮನೆಗೆ ಆಗಿರುವ ಹಾನಿಯ ವಸ್ತು ಸ್ಥಿತಿಯನ್ನು ಪರಿಶೀಲಿಸಿ ಶೇ. 75ರಷ್ಟುಪರಿಹಾರ ಕೊಡುವಂತೆ ವರದಿಯನ್ನು ತಯಾರಿಸಿ ತಾಲೂಕು ಆಡಳಿತಕ್ಕೆ ನೀಡಿ ಯಾವುದೇ ಕಾರಣಕ್ಕೂ ಬಡವರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಇಲ್ಲವಾದಲ್ಲಿ ಅಂತಹ ಅಧಿಕಾರಿಯ ವಿರುದ್ದ ಕಠಿಣ ಕ್ರಮಕ್ಕೆ ಶಿಫಾರಸ್ಸು ಮಾಡುವುದಾಗಿ ಅವರು ಎಚ್ಚರಿಕೆ ನೀಡಿದರು.
ಲೋಕೋಪಯೋಗಿ ರಸ್ತೆಗೆ (Road) ಮನೆ ಕಳೆದುಕೊಂಡು ಸಾಲಿಗ್ರಾಮದ ನಿವಾಸಿ ಉಮೇಶ್ ಎಂಬವವರಿಗೆ ಪರಿಹಾರ ನೀಡದ ಲೋಕೋಪಯೋಗಿ ಇಲಾಖೆಯ ಎಇಇ (AEE) ವಿರುದ್ದ ಆಕ್ರೋಶ ವ್ಯಕ್ತಡಿಸಿದ ಅವರು ಸೋಮವಾರದೊಳಗೆ ಅವರಿಗೆ ಪರಿಹಾರ ನೀಡದಿದ್ದಲ್ಲಿ ನಿಮ್ಮ ವಿರುದ್ಧವೂ ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂದರು.
ತಹಸೀಲ್ದಾರ್ ಎಸ್. ಸಂತೋಷ್, ಇಓ ಎಚ್.ಕೆ. ಸತೀಶ್, ಪಶು ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜು, ಉಪತಹಸೀಲ್ದಾರ್ ಮಹೇಶ್, ಜಿಪಂ ಎಇಇ ಕೆ. ಬಸವರಾಜು, ಎಇಗಳಾದ ಸ್ವಾಮಿ, ಮಲ್ಲಿಕಾರ್ಜುನ್, ಲಿಖಿತ, ಪಿಎಸ್‌ಐ ಚಂದ್ರಹಾಸ್, ಪಿಡಿಓ ಮಂಜುನಾಥ್ ಇದ್ದರು.
ಸಾರಾ ವಿರುದ್ಧ ಭುಗಿಲೆದ್ದಿದ್ದ ಅಸಮಾಧಾನ
ನಮ್ಮ ಹಕ್ಕು ಚ್ಯುತಿಯಾಗಿದೆ ಎಂದು ವಿಧಾನಸೌಧದಲ್ಲಿ ಚರ್ಚೆ ಮಾಡುವ ಶಾಸಕ ಸಾ.ರಾ. ಮಹೇಶ್ (Sa Ra mahesh) ಅವರು ಪುರಸಭೆ (Municipality) ಆಡಳಿತ ಮಂಡಳಿ ಗಮನಕ್ಕೆ ತಾರದೆ ಮತ್ತು ದೂರಿಲ್ಲದೆ ಪುರಸಭೆಗೆ ಬಂದು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚೆ ಮಾಡಲು ಅಧಿಕಾರ ಕೊಟ್ಟವರಾರು ಎಂದು ಪುರಸಭೆ ಅಧ್ಯಕ್ಷ ಕೆ.ಜಿ. ಸುಬ್ರಹ್ಮಣ್ಯ (KG Subramanya) ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ನಟರಾಜು (Nataraj) ಪ್ರಶ್ನಿಸಿದ್ದರು.
ಶಾಸಕರು ನಮ್ಮ ಅಧಿಕಾರವನ್ನು ಮೊಟಕುಗೊಳಿಸಿ ಹಕ್ಕುಚ್ಯುತಿಗೊಳಿಸಿದ್ದಾರೆ (Privilege Motion) ನಾವು ಇದನ್ನು ಯಾರ ಹತ್ತಿರ ಪ್ರಶ್ನೆ ಮಾಡಬೇಕು ಯಾರ ಬಳಿ ಹಕ್ಕುಚ್ಯುತಿ ಮಂಡಿಸಬೇಕು ಎಂದು ಪ್ರಶ್ನಿಸಿದ್ರುದ.
ಪುರಸಭೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಖಾತೆ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲಿ ಅದಕ್ಕೆ ನಮ್ಮ ಸ್ವಾಗತ ಇದೆ ಆದರೆ ಪುರಸಭೆಗೆ ಉಪವಿಭಾಗಾಧಿಕಾರಿ ಮತ್ತು ತಹಸೀಲ್ದಾರ್ (Tahasildar) ಜತೆ ನಮ್ಮ ಗಮನಕ್ಕೆ ತಾರದೇ ಪುರಸಭೆಗೆ ಬಂದು ಸಭೆ ನಡೆಸಿದ್ದು, ನಮಗೆ ಬೇಸರ ತರಿಸಿದೆ. ಸಭೆಗೆ ನಮ್ಮನ್ನು ಕರೆದು ಯಾವ ದಾಖಲೆ ಬೇಕು ಎಂದು ಕೇಳಿದಲ್ಲಿ ನಾವೆ ಸಹಕರಿಸುತ್ತಿದ್ದೆವು ಅಧಿಕಾರಿಗಳ ವಿರುದ್ದ ಹಕ್ಕುಚ್ಯುತಿ ಎನ್ನುವ ಶಾಸಕರು ನಮಗೂ ಹಕ್ಕುಚ್ಯುತಿ ಎಂಬುದಿದೆ ಅದನ್ನು ಅರ್ಥಮಾಡಿಕೊಳ್ಳುತ್ತಾರೆ ಎಂದುಕೊಳ್ಳುತ್ತೇವೆ ಎಂದರು.
ವಿಧಾನಸೌಧ (Vidhan soudha) ಮತ್ತು ಹಲವೆಡೆ ಹಕ್ಕುಚ್ಯುತಿ ಆಗಿದೆ ಎಂದು ಜಿಲ್ಲಾಧಿಕಾರಿಗಳ (DC) ವಿರುದ್ಧ ಮಾತನಾಡುತ್ತಾರೆ. ಅಲ್ಲದೆ ತಾಲೂಕಿನಲ್ಲಿ ಹಕ್ಕುಚ್ಯುತಿ ಮಾಡಿದರು ಎಂದು ಬಿಇಒ (BEO) ಒಬ್ಬರನ್ನು ಅಡಿಗೆ ಮನೆ ಟೇಪ್ ಕಟ್ ಮಾಡಿದ ಮಾತ್ರಕ್ಕೆ ಸಸ್ಪೆಂಡ್ ಮಾಡಿಸುತ್ತಾರೆ. ಆದರೆ ಅವರು ಈಗ ನಮ್ಮ ಹಕ್ಕುಚ್ಯುತಿ ಮಾಡಿದ್ದಾರಲ್ಲ ನಾವು ಯಾರಿಗೆ ಕೇಳಬೇಕು ನಮಗಾಗಿರುವ ಹಕ್ಕುಚ್ಯುತಿಯನ್ನು ಎಲ್ಲಿ ಮಂಡನೆ ಮಾಡಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹೊಣೆ ಹೊರುವಿರಾ : ಮಾಜಿ ಸಚಿವ ಎಸ್. ನಂಜಪ್ಪ ಮತ್ತು ಎಚ್. ವಿಶ್ವನಾಥ್ (H Vishwanath) ಅವರು ಶಾಸಕರಾಗಿದ್ದಾಗ ಮಾತ್ರ ಆಶ್ರಯ ನಿವೇಶನ ಹಂಚಿಕೆಯಾಗಿದೆ. ಆ ನಂತರ ಯಾವುದೇ ನಿವೇಶನ ಹಂಚಿಕೆ ಮಾಡಿಲ್ಲ. ಆದರೆ ಕಳೆದ ಎರಡು ವರ್ಷಗಳ ಹಿಂದೆ ಅಕ್ರಮ ಖಾತೆ ಮಾಡಲಾಗಿದೆ ಎಂದು ಪತ್ರಿಕೆಗಳಲ್ಲಿ ಹಲವು ಬಾರಿ ವರದಿಯಾದಾಗ ಮತ್ತು ಪತ್ರಕರ್ತರ ವಿರುದ್ಧ ದೂರು ದಾಖಲಾದಾಗ ಬಹಿರಂಗವಾಗಿ ಅಕ್ರಮ ಖಾತೆ ಬಗ್ಗೆ ಸಾರ್ವಜನಿಕರು ದೂರಿದಾಗ, ಗೋಮಾಳ, ರಾಜಕಾಲುವೆ ಹಾಗೂ ಸಾರ್ವಜನಿಕ ಆಸ್ತಿ ಅಕ್ರಮವಾಗಿ ಖಾತೆ ಆಗುತ್ತಿರುವ ಬಗ್ಗೆ ಅಲ್ಲದೆ, ಈ ಹಿಂದೆ ಜಾ.ದಳ ಮುಖಂಡರಿಗೆ ಪುರಸಭೆ ನಿವೇಶನ ಹಂಚಿಕೆ ಮಾಡಲು ಮುಂದಾಗಿದ್ದ ವಿಚಾರ ಇದ್ಯಾವುದು ಶಾಸಕರ ಗಮನಕ್ಕೆ ಬಂದಿರಲಿಲ್ಲವೆ ಎಂದು ಕೇಳಿದರು.
ಹಳೆಯ ಆಶ್ರಯ ನಿವೇಶನದ ಪ್ರತಿಯನ್ನು ತೆಗೆಸಿ ಪರಿಶೀಲಿಸಿ ಹಂಚಿಕೆಯಾಗಿರುವುದನ್ನು ಬಿಟ್ಟು ಬೇರೆಯದನ್ನು ರದ್ದುಮಾಡುವುದಾಗಿ ಹೇಳಿದ್ದೀರಿ ಅದಕ್ಕೆ ನಮ್ಮ ಸಂಪೂರ್ಣ ಸ್ವಾಗತವಿದೆ ರದ್ದು ಮಾಡದಿದ್ದರೆ ನೈತಿಕತೆ ಹೊಣೆ ಹೊರುವಿರಾ ಎಂದು ಸಾ.ರಾ. ಮಹೇಶ್‌ಗೆ ಕೆ.ಜಿ. ಸುಬ್ರಹ್ಮಣ್ಯ ಪ್ರಶ್ನಿಸಿದರು.