ಪಂಚಮಸಾಲಿಗಳಿಗೆ ಕಡೇ ಕ್ಷಣದಲ್ಲಿ ಸಿಎಂ ಹುದ್ದೆ ತಪ್ಪಿಸಿದ್ದಾರೆ: ಕೂಡಲಶ್ರೀ
* ಪಂಚಮಸಾಲಿಗಳಿಗೆ ಸಿಎಂ ಸ್ಥಾನ ತಪ್ಪಿಸಿದವರು ಯಾರೆಂದು ಗೊತ್ತು
* ಬಿಜೆಪಿ ವರಿಷ್ಠರು ಆಗಿರುವ ಅನ್ಯಾಯ ಸರಿಪಡಿಸಬೇಕು
* ಬಿಜೆಪಿ ವರಿಷ್ಠರು ಪಂಚಮಸಾಲಿ ಜನಾಂಗದವರಿಗೆ ಸಿಎಂ ಸ್ಥಾನ ನೀಡುತ್ತೇನೆಂದು ನಂಬಿಸಿದ್ದರು
ಅಥಣಿ(ಆ.02): ಪಂಚಮಸಾಲಿ ಸಮುದಾಯದವರಿಗೆ ಕೊನೇ ಕ್ಷಣದಲ್ಲಿ ಮುಖ್ಯಮಂತ್ರಿ ಹುದ್ದೆ ತಪ್ಪಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಕೂಡಲಸಂಗಮ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಈಗ 2ಎ ಮೀಸಲಾತಿ ಕೊಟ್ಟು ಸಮಾಜಕ್ಕಾಗಿರುವ ಅಗೌರವ ಸರಿಪಡಿಸಿ ಎಂದು ಆಗ್ರಹಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಬಿಜೆಪಿ ವರಿಷ್ಠರು ಪಂಚಮಸಾಲಿ ಜನಾಂಗದವರಿಗೆ ಸಿಎಂ ಸ್ಥಾನ ನೀಡುತ್ತೇನೆಂದು ನಂಬಿಸಿದ್ದರು. ಕೊನೆಗಳಿಗೆಯಲ್ಲಿ ಕೈ ತಪ್ಪಿಸಿ ಸಮಾಜಕ್ಕೆ ಅಗೌರವ ಮಾಡಲಾಗಿದೆ. ಕೂಡಲೇ ಬಿಜೆಪಿ ವರಿಷ್ಠರು ಆಗಿರುವ ಅನ್ಯಾಯ ಸರಿಪಡಿಸಬೇಕು. ಇಲ್ಲದಿದ್ದರೆ ಮುಂದಿನ ಚುನಾವಣೆಗಳಲ್ಲಿ ಸಮುದಾಯ ಪಾಠ ಕಲಿಸಲಿದೆ ಎಂದರು.
ಪಂಚಮಸಾಲಿಗೆ ಮೀಸಲಾತಿ ನೀಡದಿದ್ರೆ 20 ಲಕ್ಷ ಜನರಿಂದ ಹೋರಾಟ: ಜಯಮೃತ್ಯುಂಜಯ ಶ್ರೀ
ಮೀಸಲಾತಿ ನೀಡಲು ಗಡುವು:ಪಂಚಮಸಾಲಿಗಳಿಗೆ ಸಿಎಂ ಸ್ಥಾನ ತಪ್ಪಿಸಿದವರು ಯಾರೆಂದು ಗೊತ್ತು. ಅವರು ಪ್ರವಾಸ ಬಂದಾಗ ನಮ್ಮ ಸಮುದಾಯ ಪ್ರಶ್ನಿಸುತ್ತೆ ಎಂದು ಮಾರ್ಮಿಕವಾಗಿ ಹೇಳಿದರು.
ಪ್ರಸ್ತುತ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿರುವದನ್ನು ಪಂಚಮಸಾಲಿ ಸಮಾಜದ ಪರವಾಗಿ ಸ್ವಾಗತಿಸಿ ಅಭಿನಂದಿಸುತ್ತೇವೆ. ನಾವು ಕೂಡಸಂಗಮದಿಂದ ಬೆಂಗಳೂರುವರಗೆ 750 ಕಿ.ಮೀ. ಪಾದಯಾತ್ರೆ ಮಾಡಿದಾಗ ಬಸವರಾಜ ಬೊಮ್ಮಾಯಿ ಕಾನೂನು ಮಂತ್ರಿಗಳಾಗಿ ಅಂದಿನ ಸಿಎಂ ಯಡಿಯೂರಪ್ಪನವರ ಜೊತೆಗೆ ಅನೇಕ ಪೂಜ್ಯರ ಜೊತೆಗೆ ನಿಂತು ಸಹಕರಿಸಿದ್ದಾರೆ. ಈಗ ಸ್ವತಃ ಅವರೇ ಸಿಎಂ ಆಗಿದ್ದು ನಮ್ಮ ಬೇಡಿಕೆ ಈಡೇರಿಸುತ್ತಾರೆ ಎಂದು ನಂಬಿದ್ದೇವೆ. ಈ ದಿಸೆಯಲ್ಲಿ ಸರ್ಕಾರಕ್ಕೆ ಮತ್ತೆ ನೆನಪಿಸುವ ಉದ್ದೇಶದಿಂದ ಆ.15ರಿಂದ ಸೆ.30ರವರೆಗೆ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್ ಎಂಬ ಧ್ಯೇಯ ವಾಕ್ಯದೊಂದಿಗೆ ಅಭಿಯಾನ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಭರವಸೆಯಂತೆ ಸೆ.30ರೊಳಗಾಗಿ ಪಂಚಮಸಾಲಿ ಸಮಾಜವನ್ನು 2ಎ ಮೀಸಲಾತಿಗೆ ಸೇರಿಸದಿದ್ದರೆ ಅ.1ರಂದು ಪ್ರೀಡಂ ಪಾರ್ಕ್ದಲ್ಲಿ ಮತ್ತೆ ಧರಣಿ ಮುಂದುವರೆಸಬೇಕಾಗುತ್ತದೆ ಎಂದು ಶ್ರೀಗಳು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.