Asianet Suvarna News Asianet Suvarna News

ಪಂಚಮಸಾಲಿಗೆ ಮೀಸ​ಲಾತಿ ನೀಡ​ದಿ​ದ್ರೆ 20 ಲಕ್ಷ ಜನ​ರಿಂದ ಹೋರಾ​ಟ: ಜಯಮೃತ್ಯುಂಜಯ ಶ್ರೀ

ಪಂಚಮಸಾಲಿ ಸಮಾಜಕ್ಕೆ ಸಿಎಂ 2ಎ ಮೀಸಲಾತಿ ನೀಡುತ್ತಾರೆ ಎನ್ನುವ ಭರವಸೆ ಇದೆ| ಪಂಚಮಸಾಲಿ ಸಮುದಾಯದವರು ಬಹುತೇಕ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದಿದ್ದಾರೆ| ಇಂಥವರ ಏಳ್ಗೆಗಾಗಿ ನಮ್ಮ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು: ಬಸವ ಜಯಮೃತ್ಯುಂಜಯ ಸ್ವಾಮೀಜಿ| 

Jayamrutunjaya Swamiji Talks Over Panchamasali Reservation grg
Author
Bengaluru, First Published Apr 3, 2021, 12:09 PM IST

ಕನಕಗಿರಿ(ಏ.03):  ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ವಿಚಾರವಾಗಿ ಶಾಸಕ ಬಸವರಾಜ ಪಾಟೀಲ್‌ ಯತ್ನಾಳ ಅಧಿವೇಶನದಲ್ಲಿ ಹೋರಾಟ ಮಾಡಿದ್ದರಿಂದಲೇ ಸರ್ಕಾರ 6 ತಿಂಗಳ ಕಾಲಾವಕಾಶ ತೆಗೆದುಕೊಂಡಿದೆ ಎಂದು ಕೂಡಲಸಂಗಮ ಪಂಚಮಸಾಲಿಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

ಗುರುವಾರ ರಾತ್ರಿ ಪಟ್ಟಣದ ವೆಂಕಟೇಶ್ವರ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಪಂಚಮಸಾಲಿ ಸಮಾಜದಿಂದ ಹಮ್ಮಿಕೊಳ್ಳಲಾಗಿದ್ದ ಶರಣು ಶರಾಣಾರ್ಥಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು. ಮೀಸಲಾತಿಗಾಗಿ ನಡೆದ ಚಳುವಳಿ ಇತಿಹಾಸದ ಪುಟ ಸೇರಿದೆ. ಅಂದು ಗಾಂಧಿ ಸ್ವಾತಂತ್ರ್ಯಕ್ಕಾಗಿ ನಡೆಸಿದ ಚಳುವಳಿಯಂತೆ ಇಂದು ಸಮಾಜದ ಮೀಸಲಾತಿಗಾಗಿ ಚಳುವಳಿ ನಡೆಸುತ್ತೇವೆ. ಸಮಾಜದ ಹಿತ ದೃಷ್ಟಿಯಿಂದ ಶಾಸಕ ಯತ್ನಾಳ್‌ ಅಧಿವೇಶನದಲ್ಲಿ ಹೋರಾಟ ಮಾಡಿದ್ದರ ಫಲವಾಗಿ ಸರ್ಕಾರ ಆರು ತಿಂಗಳ ಅವಕಾಶ ಕೇಳಿದ್ದು, ನಮಗೆ ಮೊದಲ ಗೆಲುವಾಗಿದೆ. ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಅಗತ್ಯವಿದೆ. ಮುಖ್ಯಮಂತ್ರಿಗಳು ಮೀಸಲಾತಿ ಕೊಡುವ ಭರವಸೆ ಇದೆ. ಕೊಡದಿದ್ದರೆ ನಮ್ಮ ಹೋರಾಟವನ್ನು ಮೋದಿ ನೋಡುವಂತೆ ಮಾಡುತ್ತೇವೆ ಎಂದರು.

ನಂತರ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್‌ ಮಾತನಾಡಿ, 1994ರಿಂದ 2ಎ ಮೀಸಲಾತಿಗಾಗಿ ಪಂಚಸಾಲಿಗಳು ಹೋರಾಟ ಮಾಡಿಕೊಂಡು ಬಂದಿ​ದ್ದೇ​ವೆ. ಈಗ ಸಮಾಜದ ಶ್ರೀಗಳಿಂದ ರಾಜ್ಯಾದ್ಯಂತ 712 ಕಿಮೀ ಬೃಹತ್‌ ಪಾದಯಾತ್ರೆ ನಡೆಸಿದ್ದೇವೆ. ಮಾಡು ಇಲ್ಲವೇ ಮಡಿ ಹೋರಾಟ ನಡೆಯುತ್ತಿದ್ದು, ಆರು ತಿಂಗಳೊಳಗಾಗಿ ಮೀಸಲಾತಿ ಕೊಡದಿದ್ದರೆ ಕ್ರಾಂತಿಕಾರಿ ಹೋರಾಟಕ್ಕೆ ಇಳಿಯುತ್ತೇವೆ. ನಮ್ಮವರ ಕುತಂತ್ರದಿಂದ ಆದೇಶ ಆರು ತಿಂಗಳು ಮುಂದಕ್ಕೆ ಹೋಗಿದೆ. ಆದರೆ ನಮ್ಮ ಹೋರಾಟಕ್ಕೆ ಜಯ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸವಿದೆ. ಇನ್ನೂ ನಮ್ಮದೇ ಸಮಾಜದ ಸಚಿವರು ಇದ್ದು, ಜೀವ ಕೊಟ್ಟಾದರೂ ಮೀಸಲಾತಿ ಪಡೆಯುತ್ತೇವೆ ಎಂದರು.
ಈ ವೇಳೆ ಮಾಜಿ ಶಾಸಕ ಎಚ್‌.ಎಸ್‌. ಶಿವಶಂಕರ, ಸಮಾಜದ ಹಿರಿಯರಾದ ಶೇಖರಗೌಡ ಪಾಟೀಲ್‌, ನೀಲಕಂಠಗೌಡ ಪಾಟೀಲ್‌, ದೊಡ್ಡಬಸಪ್ಪ ಬಾವಿಕಟ್ಟಿ, ನಾಗೇಶ ರೊಟ್ಟಿ, ಶರಣಪ್ಪ ಬಾವಿಕಟ್ಟಿ, ವೀರೇಶ ದೇವರಾಳ, ಬಸವರಾಜ ಕೋರಿ, ಅಮರೇಶ ತೆಗ್ಗಿನಮಿ ಇತರರು ಇದ್ದರು.

ಬಿಎಸ್‌ವೈ ಬದಲಾವಣೆ: 'ಯತ್ನಾಳ ಯಾಕೆ ಹಾಗೆ ಹೇಳಿದ್ರೋ ಗೊತ್ತಿಲ್ಲ'

ಮೀಸ​ಲಾತಿ ನೀಡ​ದಿ​ದ್ದರೆ 20 ಲಕ್ಷ ಜನ​ರಿಂದ ಹೋರಾ​ಟ

ರಾಜ್ಯ ಸರಕಾರ ನೀಡಿದ ಭರವಸೆಯಂತೆ ಅವಧಿಯೊಳಗೆ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕು, ಇಲ್ಲವಾದಲ್ಲಿ ಮೊದಲ ಹೋರಾಟಕ್ಕೆ ರಾಜ್ಯದ 10 ಲಕ್ಷ ಪಂಚಮಸಾಲಿ ಜನರನ್ನು ನೋಡಿದ್ದ ಸರಕಾರ 20 ಲಕ್ಷ ಜನರನ್ನು ಸೇರಿಸಿ ಮತ್ತೇ ಹೋರಾಟ ಮಾಡಬೇಕಾಗುತ್ತದೆ ಎಂದು ಪಂಚಮಸಾಲಿ ಸಮಾಜ ಕೂಡಲಸಂಗಮದ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಸಿದ್ದಾರೆ.

ಪಟ್ಟಣದ ಎಲ್‌ವಿಟಿ ಕಲ್ಯಾಣಮಂಟಪದಲ್ಲಿ ಗುರುವಾರ ನಡೆದ ಶರಣು ಶರಣಾರ್ಥಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು. ಪಂಚಮಸಾಲಿ ಸಮಾಜಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ 2ಎ ಮೀಸಲಾತಿ ನೀಡುತ್ತಾರೆ ಎನ್ನುವ ಭರವಸೆ ಇದೆ. ರಾಜ್ಯದಲ್ಲಿ ಒಟ್ಟು 80 ಲಕ್ಷ ಪಂಚಮಸಾಲಿ ಸಮುದಾಯದವರಿದ್ದು, ಇದರಲ್ಲಿ ಬಹುತೇಕ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದಿದ್ದಾರೆ. ಇಂಥವರ ಏಳ್ಗೆಗಾಗಿ ಸರಕಾರ ನೀಡಿರುವ ಅವಧಿಯೊಳಗೆ ನಮ್ಮ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು. ಈಗ ಮೊದಲ ಹೋರಾಟಕ್ಕೆ 10 ಲಕ್ಷ ಜನರನ್ನು ಕಂಡಿದೀರಿ ಮುಂದಿನ ದಿನದಲ್ಲಿ 20 ಲಕ್ಷ ಜನರನ್ನ ಸೇರಿಸಿ ಮತ್ತೆ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನಂತರ ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಮಾತನಾಡಿ, ಪ್ರಸಕ್ತ ಬಿಜೆಪಿ ಸರಕಾರದಲ್ಲಿ ಸಮಾಜದ 15 ಜನ ಶಾಸಕರಿದ್ದಾರೆ. ಅದರಲ್ಲಿ ಕೆಲವರು ನಮ್ಮ ಹೋರಾಟಕ್ಕೆ ಸಹಮತ ತೋರಿಲ್ಲ. ಅಂತಹವರಿಗೆ ಮುಂದಿನ ದಿನದಲ್ಲಿ ತಕ್ಕ ಉತ್ತರ ನೀಡಬೇಕು. ಇನ್ನೂ ಕೆಲವರು ಹೋರಾಟ ಹತ್ತಿಕ್ಕುವ ಕೆಲಸ ಮಾಡಿದ್ದಾರೆ. ಹೋರಾಟ ಪ್ರಾರಂಭಕ್ಕೂ ಮುನ್ನವೇ ಅಡ್ಡಿ ಆತಂಕಗಳಿದ್ದವು. ನಮ್ಮ ಹೋರಾಟ ಬಂದ್‌ ಆಗುತ್ತದೆ ಎನ್ನುವ ಆತಂಕವಿತ್ತು. ಆದರೆ, ಶ್ರೀಗಳ ಅಚಲವಾದ ನಂಬಿಕೆಯಿಂದ ಹೋರಾಟ ಮಾಡಿ ಸರಕಾರಕ್ಕೆ ಬಿಸಿ ಮುಟ್ಟಿಸಿದ್ದೇವೆ. ನಮ್ಮ ಹೋರಾಟ ಇನ್ನೂ ಹೆಚ್ಚಿನ ಕ್ರಾಂತಿಗೆ ಮುನ್ನುಡಿಯಾಯಿತು ಎಂದರು.

ಈ ವೇಳೆ ಮಾಜಿ ಸಚಿವ ಶಿವರಾಜ ತಂಗಡಗಿ ಮಾತನಾಡಿ, ಗುರಿ ಮತ್ತು ಗುರಿ ಇರಬೇಕು ಎನ್ನುತ್ತಾರೆ. ಪಂಚಮಸಾಲಿ ಸಮಾಜಕ್ಕೆ ಗುರಿ ಹೊಂದಿದ ಗುರುಗಳು ಇದ್ದಾರೆ. ಅದಕ್ಕಾಗಿ ಸಮಾಜದವರು ಪುಣ್ಯವಂತರು. ಪಾದಯಾತ್ರೆ ನಡೆಸಿದ ಶ್ರೀಗಳು ಎಂದರೆ ಬಸವ ಜಯಮೃತ್ಯುಂಜಯ ಸ್ವಾಮಿಗಳು ಒಬ್ಬರೇ. ನಾನು ಕೂಡ ಪಂಚಮಸಾಲಿ ಸಮಾದಲ್ಲೊಬ್ಬನು ಎಂದುಕೊಂಡು ಕೆಲಸ ಮಾಡುತ್ತೇನೆ. ನಿಮ್ಮದು ಕೃಷಿಕರ ಸಮುದಾಯ ನಿಮಗೆ 2ಎ ಮೀಸಲಾತಿ ನೀಡಬೇಕು. ಈ ವಿಷಯದಲ್ಲಿ ನಿಮ್ಮ ಜೊತೆಯಲ್ಲಿ ಕೆಲಸ ಮಾಡುತ್ತೇನೆ ಎಂದರು.

1871ರಲ್ಲಿ ಪಂಚಮಸಾಲಿ ಶೂದ್ರರ ಪಟ್ಟಿಯಲ್ಲಿತ್ತು!

ನಂತರ ರಾಜ್ಯ ದಾಸೋಹ ಸಮಿತಿ ಅಧ್ಯಕ್ಷ ಚನ್ನಬಸಪ್ಪ ಸುಂಕದ್‌ ಮಾತನಾಡಿ, ನಮ್ಮ ಸಮಾಜಕ್ಕ ಇಂಥ ಸ್ವಾಮಿಗಳು ಸಿಕ್ಕಿರುವುದು ನಮ್ಮ ಪುಣ್ಯ. ಸ್ವಾಮೀಜಿಗಳು ಎಂದರೆ ಬರಿ ಮಠಮಾನ್ಯಗಳಿಗೆ ಸಂಚಾರ ಮಾಡುತ್ತಾರೆ. ಆದರೆ, ನಮ್ಮ ಸ್ವಾಮಿಗಳು ಸಮಾಜದ ಏಳ್ಗೆಗಾಗಿ 500 ಕಿಮೀ ನಡೆದು ಹೋರಾಟ ಮಾಡಿದರು. ಹೀಗಾಗಿ ನಾವು ಅವರಿಗೆ ಯಾವ ರೀತಿ ಕೃತಜ್ಞತೆ ಹೇಳಿದರೂ ಸಾ​ಲದು, ನಾವುಗಳೇ ಧನ್ಯರು ಎಂದರು.

ಇದಕ್ಕೂ ಮುನ್ನ ಪಂಚಮಸಾಲಿ ಬಾಂಧವರು ನವಲಿ ವೃತ್ತದಲ್ಲಿ ಪಟಾಕಿ ಸಿಡಸಿ ಅಲ್ಲಿಂದ ಕಲ್ಯಾಣ ಮಂಟಪದ ವರೆಗೆ ಹೂವು ಹಾಕುವುದರ ಮೂಲಕ ಶ್ರೀಗಳನ್ನ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ರಾಣಿ ಚನ್ನಮ್ಮಾಜಿ ಹಾಗೂ ಶಿವಕುಮಾರ ಸ್ವಾಮಿಗಳ ಭಾವಚಿತ್ರಕ್ಕೆ ಪುಷ್ಪ ಸಮರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಎಚ್‌.ಎಸ್‌. ಶಿವಶಂಕರ್‌, ಬಸವನಗೌಡ ಪಾಟೀಲ್‌, ಮೃತ್ಯುಂಜಯ ಬಾದಾಮಿ, ಪರಮೇಶ ಗೌಡ, ಕೆ. ಸಣ್ಣಸೂಗಪ್ಪ, ಗುಂಡಪ್ಪ ಕುಳಗಿ, ಕಳನಗೌಡ ಪಾಟೀಲ್‌ ಕಲ್ಲೂರು, ಶರಣೇಗೌಡ ಬುದಗುಂಪಾ, ಅಮರೇಶ ಕುಳಗಿ, ಭಾರತೇಶ ಕೆಂಡದ್‌, ಅಮರೇಶ ಪಾಟೀಲ್‌ ಸೇರಿದಂತೆ ಪಂಚಮಸಾಲಿ ತಾಲೂಕು ಘಟಕ, ಯುವ ಘಟಕ ಮತ್ತು ಮಹಿಳಾ ಘಟಕದ ಸದಸ್ಯರಿದ್ದರು.
 

Follow Us:
Download App:
  • android
  • ios