ಡಿ.19ಕ್ಕೆ ಮೀಸಲಾತಿ ಘೋಷಿಸದಿದ್ದರೆ, 22ಕ್ಕೆ ಸುವರ್ಣ ಸೌಧ ಮುತ್ತಿಗೆ: ಬೊಮ್ಮಾಯಿ ಸರ್ಕಾರಕ್ಕೆ ಕೂಡಲ ಶ್ರೀ ಎಚ್ಚರಿಕೆ
ಚನ್ನಮ್ಮಾಜಿ, ಬೆಳವಡಿ ಮಲ್ಲಮ್ಮ ಸಿಎಂ ಅವರಿಗೆ ಆಶೀರ್ವದಿಸಲಿ. ಬೇಗ ಮೀಸಲಾತಿ ಕಲ್ಪಿಸಬೇಕು. ಕಲ್ಪಿಸಿದರೆ ಸನ್ಮಾನ ಇಲ್ಲದಿದ್ದರೆ ವಿಧಾನಸೌಧ ಮುತ್ತಿಗೆ ಖಚಿತ ಎಂದು ಖಡಕ ಸಂದೇಶ ನೀಡಿದ ಬಸವಜಯಮೃತ್ಯುಂಜಯ ಸ್ವಾಮೀಜಿ
ಬೈಲಹೊಂಗಲ(ಡಿ.06): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಯನ್ನು ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದ ಡಿ.19ಕ್ಕೆ ಮಾತು ಕೊಟ್ಟಂತೆ ಹಿಂದುಳಿದ ಆಯೋಗದ ವರದಿ ಪಡೆದು ಆದೇಶ ಪತ್ರದೊಂದಿಗೆ ಘೋಷಿಸಬೇಕು. ಇಲ್ಲದಿದ್ದರೆ ಡಿ.22ಕ್ಕೆ ಸುವರ್ಣ ಸೌಧಕ್ಕೆ 25 ಲಕ್ಷ ಜನಸ್ತೋಮದೊಂದಿಗೆ ಮುತ್ತಿಗೆ ಹಾಕಲಾಗುವುದು ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ನೀಡಿದರು.
ಅವರು ಸೋಮವಾರ ಪಟ್ಟಣದ ಶೂರ ಸಂಗೊಳ್ಳಿ ರಾಯಣ್ಣ ಮೈದಾನದಲ್ಲಿ ನಡೆದ ಪಂಚಮಸಾಲಿ ಸಮಾವೇಶವನ್ನು ಶಾಲಾ ಮಕ್ಕಳೊಂದಿಗೆ ದೀಪ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿ, ಚನ್ನಮ್ಮಾಜಿ, ಬೆಳವಡಿ ಮಲ್ಲಮ್ಮ ಸಿಎಂ ಅವರಿಗೆ ಆಶೀರ್ವದಿಸಲಿ. ಬೇಗ ಮೀಸಲಾತಿ ಕಲ್ಪಿಸಬೇಕು. ಕಲ್ಪಿಸಿದರೆ ಸನ್ಮಾನ ಇಲ್ಲದಿದ್ದರೆ ವಿಧಾನಸೌಧ ಮುತ್ತಿಗೆ ಖಚಿತ ಎಂದು ಖಡಕ ಸಂದೇಶ ನೀಡಿದ ಅವರು ಪಂಚಮಸಾಲಿ ಸಮಾಜದ ಬಡ ಮಕ್ಕಳಿಗೆ ಶಿಕ್ಷಣ, ಉದ್ಯೋಗ ದೊರಕಿಸಲು ಕೇಂದ್ರ ಸರ್ಕಾರ ಹಿಂದುಳಿದ ವರ್ಗಕ್ಕೆ ಸೇರ್ಪಡೆ ಮಾಡಬೇಕು. ಇದರಿಂದ ಬಡ ಮಕ್ಕಳ ಶೈಕ್ಷಣಿಕ, ಆರ್ಥಿಕ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದರು. ಮುಖ್ಯಮಂತ್ರಿ ಬೊಮ್ಮಾಯಿ ಅವರು ನಾಲ್ಕು ಬಾರಿ ಮಾತು ಕೊಟ್ಟು ಎಡವಿದ್ದಾರೆ. ಮತ್ತೆ ಮಾತಿಗೆ ತಪ್ಪಿದರೆ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಬಿಸಿ ಮುಟ್ಟಿಸಬೇಕೆಂದು ಕರೆ ನೀಡಿದರು.
ಮೈದಾನ ತಯಾರಿದೆ, ಅಖಾಡಕ್ಕೆ ಧುಮುಕಿ: ಪರೋಕ್ಷವಾಗಿ ಜಾರಕಿಹೊಳಿಗೆ ಹೆಬ್ಬಾಳಕರ ಸವಾಲು
ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಜಿಲ್ಲೆಯು ಕೆಲ ವ್ಯಕ್ತಿಗಳ ಕಪಿಮುಷ್ಠಿಯಲ್ಲಿ ಸಿಲುಕಿದೆ. ಸವದತ್ತಿ, ಕಿತ್ತೂರವರೆಗೆ ಸಾಮ್ರಾಜ್ಯ ವಿಸ್ತರಣೆ ಮುಂದಾಗಿದ್ದರು. ಮತ್ತೆ ಅವರು ಯಮಕನಮರಡಿಯತ್ತ ಮುಖ ಮಾಡಿದ್ದಾರೆ. ಮೊನ್ನೆ ಅರಭಾವಿ, ಗೋಕಾಕ, ಯಮಕನಮರಡಿ ಸಮಾವೇಶಗಳ ನಂತರ ಎಲ್ಲರೂ ಭಯಭೀತಿ ಇಲ್ಲದೇ ಮುಂದೆ ಬರುತ್ತಿದ್ದಾರೆ ಎಂದರು.
ಬೈಲಹೊಂಗಲ ಮತಕ್ಷೇತ್ರದ ಜನತೆಯನ್ನು ಕತ್ತಲಲ್ಲಿ ಇಡಲಾಗುತ್ತಿದ್ದು, ಇನ್ನೂ ಮುಂದೆ ಅಂತಹ ಪರಿಸ್ಥಿತಿ ಬರಬಾರದು. ನಮ್ಮ ಸಮಾಜದವನ್ನು ಮುಂದೆ ತನ್ನಿ ಎಂದರಲ್ಲದೆ, ಇನ್ನೂ ಮುಂದಿನ 20 ವರ್ಷ ನನಗೆ ರಾಜಯೋಗವಿದೆ. ಮೂರನೇ ಮಹಡಿಯಲ್ಲಿ ಕುಳಿತುಕೊಳ್ಳುವುದು ಖಚಿತ ಎಂದರು.
ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಮಾತನಾಡಿ, ಎಲ್ಲ ನಾಯಕರು ಶಕ್ತಿ ಮೀರಿ ಮೀಸಲಾತಿಗಾಗಿ ಪ್ರಯತ್ನಿಸುತ್ತಿದ್ದಾರೆ. ಪಕ್ಷ ನೋಡಿ ಮತ ನೀಡುವ ಕಾಲ ಹೋಯಿತು. ಪಂಚಮಸಾಲಿ ಸಮಾಜ ನೋಡಿ ಮತ ಹಾಕುವ ಕಾಲ ಬಂದಿದೆ. 224 ವಿಧಾನಸಭಾ ಕ್ಷೇತ್ರದಲ್ಲಿ ಶೇ.70 ಪ್ರತಿಶತ ಸಮಾಜ ನಮ್ಮದಿದೆ ಎಂದರಲ್ಲದೆ, ಚಿತ್ರನಟ ಚೇತನ ಅವರಿಗೆ ಹುಚ್ಚು ಹಿಡಿದಿದ್ದು ಮೀಸಲಾತಿ ಅವಶ್ಯಕತೆ ಇಲ್ಲ ಎಂಬ ಹೇಳಿಕೆ ನೀಡಿದ್ದಾರೆ. ಅವರ ಸಿನೆಮಾಗಳನ್ನು ಸಮಾಜ ಬಾಂಧವರು ತಿರಸ್ಕರಿಸಬೇಕೆಂದರು.
ಮಹಾಂತೇಶ ದೊಡಗೌಡರ ಮಾತನಾಡಿ, ಸಿಎಂ ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು. ಸಮಾಜವನ್ನು ಕಡೆಗಣಿಸಬಾರದು ಎಂದರು.
ಮಾಜಿ ಸಚಿವ ಎ.ಬಿ.ಪಾಟೀಲ, ರೋಹಿಣಿ ಪಾಟೀಲ ಮಾತನಾಡಿದರು. ಬಾಲಕಿ ನೀಶಾ ಮಾಳಕ್ಕನವರ ಸಮಾಜದ ಮೀಸಲಾತಿಗಾಗಿ ಸಿಎಂ ಅವರನ್ನು ಒತ್ತಾಯಿಸಿದರು. ವೇದಿಕೆಯ ಮೇಲೆ ಮಾಜಿ ಸಚಿವ ಶಶಿಕಾಂತ ನಾಯಕ, ಸಮಾಜದ ಮುಖಂಡ ಗುರುಪುತ್ರಪ್ಪ ತುರಮರಿ, ಬಸವರಾಜ ಬಾಳೇಕುಂದರಗಿ, ಸಮಾಜದ ತಾಲೂಕಾಧ್ಯಕ್ಷ ಶ್ರೀಶೈಲ ಬೊಳನ್ನವರ, ಪ್ರಧಾನ ಕಾರ್ಯದರ್ಶಿ ಮಹೇಶ ಹರಕುಣಿ, ಪುರಸಭೆ ಅಧ್ಯಕ್ಷ ಬಸವರಾಜ ಜನ್ಮಟ್ಟಿ, ಮಾಜಿ ಅಧ್ಯಕ್ಷ ಬಾಬು ಕುಡಸೋವåಣ್ಣವರ, ರಾಜಶೇಖರ ಮೂಗಿ, ಮಹಾಂತೇಶ ತುರಮರಿ, ಮುರುಗೇಶ ಗುಂಡ್ಲೂರ, ಸಿ.ಆರ್. ಪಾಟೀಲ, ಪಂಚನಗೌಡ ದ್ಯಾಮನಗೌಡ್ರ, ಮಾಜಿ ಶಾಸಕ ಎಚ್.ಎಸ್. ಶಿವಶಂಕರಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ, ಎಫ್.ಎಸ್. ಸಿದ್ದನಗೌಡರ, ಬಿ.ಎಂ. ಚಿಕ್ಕನಗೌಡರ, ಬಾಳನಗೌಡ ಪಾಟೀಲ, ದಿಗ್ವಿಜಯ ಸಿದ್ನಾಳ ಮುಂತಾದವರು ಇದ್ದರು. ಸಹಸ್ರಾರು ಸಮಾಜ ಬಾಂಧವರು ಇದ್ದರು. ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ ಸ್ವಾಗತಿಸಿದರು. ಗೌರಿ ಮಟ್ಟಿನಿರೂಪಿಸಿ, ವಂದಿಸಿದರು.
ಕ್ಷೇತ್ರಕ್ಕೆ ಚಚಡಿ, ಮುರಗೋಡ ನೀರಾವರಿ ಯೋಜನೆಯ ಕೊಡುಗೆ ನೀಡಿದ್ದೇ್ದನೆ. ಈ ಹಿಂದೆ ರೈತರನ್ನು ಕಡೆಗಣಿಸಿ ತಮ್ಮ ಬೆಳೆ ಬೆಳೆಸಿಕೊಳ್ಳಲಾಗಿತ್ತು. 2ಎ ಮೀಸಲಾತಿ ಹೋರಾಟ ಅಂತಿಮ ಹಂತಕ್ಕೆ ಬಂದಿದ್ದು, ಹೋರಾಟಕ್ಕೆ ಜಯ ಸಿಗುವ ವಿಶ್ವಾಸವಿದೆ ಅಂತ ಕಾಡಾ ಅಧ್ಯಕ್ಷ ಡಾ. ವಿಶ್ವನಾಥ ಪಾಟೀಲ ತಿಳಿಸಿದ್ದಾರೆ.
ಬೆಳಗಾವಿ ಗಡಿ ಗಲಾಟೆಗೆ ಶರದ್ ಪವಾರ್ ಕೆಂಡ, ಕರ್ನಾಟಕಕ್ಕೆ ತಾಳ್ಮೆ ಪರೀಕ್ಷಿಸದಂತೆ ಎಚ್ಚರಿಕೆ!
160 ಕ್ಷೇತ್ರಗಳಲ್ಲಿ ಪಂಚಮಸಾಲಿಗಳಿದ್ದು, ಒಗ್ಗಟ್ಟಾದರೆ 80 ಕ್ಷೇತ್ರಗಳನ್ನು ಗೆಲ್ಲುವ ತಾಕತ್ತು ಇದೆ. ಎಲ್ಲ ಸಮಾಜಗಳನ್ನು ವಿಶ್ವಾಸಕ್ಕೆ ಪಡೆದು ಮೀಸಲಾತಿ ಪಡೆಯೋಣ ಅಂತ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದ್ದಾರೆ.
ನಮ್ಮಗೆ ಮೀಸಲಾತಿ ಬೇಕೆ ಬೇಕು. ಚನ್ನಮ್ಮನ ನಾಡಿನಲ್ಲಿ ನಡೆಯುವಂತ ಹೋರಾಟ ಯಶಸ್ಸು ಸಿಕ್ಕೆ ಸಿಗುತ್ತದೆ. ನಮ್ಮ ಹೋರಾಟ ಕುಗ್ಗಿಸಲು ಹುನ್ನಾರ ನಡೆದಿದ್ದು ಅದಕ್ಕೆ ಕಿವಿಗೊಡಬೇಡಿ ಅಂತ ಮಾಜಿ ಸಚಿವ ವಿನಯ ಕುಲಕರ್ಣಿ ತಿಳಿಸಿದ್ದಾರೆ.
ಯಾವುದೇ ಸರ್ಕಾರ ಬಂದರೂ ನಮ್ಮ ಸಮಾಜದ ಕುರಿತು ವಿಚಾರಿಸುತ್ತಿಲ್ಲ. ಸಮಾಜಕ್ಕೆ ಅನ್ಯಾಯವಾಗುತ್ತಿದೆ. ನಮ್ಮ ಸಹನೆ ಕೆಣಕಬೇಡಿರಿ ನೀವೆ ಸುಟ್ಟು ಹೋಗುತ್ತಿರಿ ಅಂತ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದ್ದಾರೆ.
ನಮ್ಮ ಬಿಜೆಪಿ ಸರ್ಕಾರದಿಂದ ನಾವು, ಈರಣ್ಣ ಕಡಾಡಿ, ಮಹಾಂತೇಶ ದೊಡಗೌಡರ ಸೇರಿ ವಿಶ್ವನಾಥ ಪಾಟೀಲ ಅವರಿಗೆ ಟಿಕೆಟ್ ಕೊಡಿಸುತ್ತೇವೆ. ಅವರನ್ನು ಗೆಲ್ಲಿಸುವ ಹೊಣೆ ಎಲ್ಲ ಪಂಚಮಸಾಲಿಗರಿಗೆ ಇದೆ ಅಂತ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ.