* ಅಗೆದ ರಸ್ತೆ ದುರಸ್ತಿಗೆ ಬಿಬಿಎಂಪಿ ವಿಳಂಬ ಇದರಿಂದ ಅಸಮಾಧಾನಗೊಂಡಿದ್ದ ಸಿಎಂ* ಹೊಸ ಆದೇಶ ಹೊರಡಿಸಿದ ಬಿಬಿಎಂಪಿ ಆದೇಶದ ಅಂಶಗಳು* ರಸ್ತೆ ಅಗೆಯಲು ಅನುಮತಿ ಕಡ್ಡಾಯ
ಬೆಂಗಳೂರು(ಏ.19): ಅನುಮತಿ ಇಲ್ಲದೇ ರಸ್ತೆ ಅಗೆಯುವ ಸಂಸ್ಥೆ ವಿರುದ್ಧ ಎಫ್‌ಐಆರ್(FIR) ದಾಖಲಿಸುವ ಎಚ್ಚರಿಕೆ ನೀಡಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP) ಇದೀಗ ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಗಿದ್ದು, ರಸ್ತೆ ಅಗೆಯುವ ಸಂಸ್ಥೆಯೇ ಆ ರಸ್ತೆಯ ಪುನಶ್ಚೇತನ ಅಥವಾ ದುರಸ್ತಿ ಮಾಡಬೇಕೆಂಬ ಹೊಸ ಆದೇಶವನ್ನು ಜಾರಿಗೆ ತಂದಿದೆ.
ಸೋಮವಾರ ಈ ನೂತನ ಆದೇಶ ಜಾರಿಗೆ ಬಂದಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ ವಿವಿಧ ಅನುಸಾಧನ ಅಳವಡಿಕೆ ಅಥವಾ ದುರಸ್ತಿಗಾಗಿ ರಸ್ತೆ ಅಗೆಯುವ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳೇ ಅಗೆದ ರಸ್ತೆಯನ್ನು ಮುಚ್ಚಬೇಕಿದೆ. ರಸ್ತೆ ಅಗೆಯಲು ಅನುಮತಿ ಪಡೆಯುವ ಸಂದರ್ಭದಲ್ಲಿ ಓರ್ವ ಸಿವಿಲ್ ಎಂಜಿನಿಯರ್ ಮೂಲಕ ರಸ್ತೆ ಅಗೆತ ಮತ್ತು ಪುನಶ್ಚೇತನದ ನಕ್ಷೆ ಸಿದ್ಧಪಡಿಸಿ ಸಲ್ಲಿಸಬೇಕಿದೆ.
ರಸ್ತೆ ಗುಂಡಿಯಿಂದ ಸಂಭವಿಸುವ ಅಪಘಾತಕ್ಕೆ ಬಿಬಿಎಂಪಿ ಹೊಣೆ: ಪರಿಹಾರ ಕೊಡ್ತೀವಿ ಅಂದ್ರೂ ಅರ್ಜಿ ಬರ್ತಿಲ್ಲ!
ಬೆಸ್ಕಾಂ(BESCOM), ಜಲಮಂಡಳಿ(Water Board), ಕೆಪಿಟಿಸಿಎಲ್ ಸೇರಿದಂತೆ ಹಲವು ಸಂಸ್ಥೆಗಳು ವಿವಿಧ ಕಾರಣಕ್ಕಾಗಿ ರಸ್ತೆ ಅಗೆದು ಕೆಲಸ ಮುಗಿದ ಕೂಡಲೇ ದುರಸ್ತಿಗೊಳಿಸದೆ ಬಿಟ್ಟು ಹೋಗುತ್ತಿದ್ದವು. ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದ್ದು ಸಾವು, ನೋವಿಗೂ ಕಾರಣವಾಗಿತ್ತು. ಇಂತಹ ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರಿದ್ದು, ಬಿಬಿಎಂಪಿ ಛೀಮಾರಿಗೊಳಗಾಗಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಬಿಬಿಎಂಪಿ ಸೇರಿದಂತೆ ಇತರೆ ಸಂಸ್ಥೆಗಳ ಮುಖ್ಯಸ್ಥರ ಸಭೆ ನಡೆದಿತ್ತು. ಸಭೆಯಲ್ಲಿ ರಸ್ತೆ ಅಗೆಯುವ ಸಂಸ್ಥೆಗಳೇ ಅದನ್ನು ದುರಸ್ತಿಗೊಳಿಸಬೇಕೆಂಬ ಸೂಚನೆ ಮೇರೆಗೆ ಹೊಸ ಆದೇಶ ಹೊರಡಿಸಲಾಗಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.
ರಸ್ತೆ ಅಗೆಯಲು ಅರ್ಜಿ ಸಲ್ಲಿಸುವ ಸಂಸ್ಥೆಯು ಬಿಬಿಎಂಪಿಗೆ ಪರವಾನಗಿ ಶುಲ್ಕವನ್ನು ಮಾತ್ರ ಕಟ್ಟಬೇಕು (ಈ ಹಿಂದೆ ರಸ್ತೆ ಪುನಶ್ಚೇತನದ ಶುಲ್ಕವನ್ನು ಸಂಸ್ಥೆಗಳು ಬಿಬಿಎಂಪಿಗೆ ಕಟ್ಟುತ್ತಿದ್ದವು). ರಸ್ತೆ ಕತ್ತರಿಸುವ ಸಂಸ್ಥೆಯು ಒಬ್ಬ ನುರಿತ ಯೋಜನಾ ಸಮಾಲೋಚಕನನ್ನು(ಸಿವಿಲ್) ನಿಯೋಜನೆ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ರಸ್ತೆ ಕತ್ತರಿಸುವ ತಾಂತ್ರಿಕ ಅಂಶಗಳಾದ ಆಳ, ಅಗಲ ಮತ್ತು ರಸ್ತೆಯ ಉದ್ದವನ್ನು ನಿಖರವಾಗಿ ಗುರುತಿಸಬೇಕು. ರಸ್ತೆ ಪುನಶ್ಚೇತನಗೊಳಿಸುವ ತಾಂತ್ರಿಕ ವಿಶಿಷ್ಟವಿಶ್ಲೇಷಣೆ ಹಾಗೂ ನಕ್ಷೆಯೊಂದಿಗೆ ರಸ್ತೆ ಕತ್ತರಿಸಲು ಮತ್ತು ಪುನಃಶ್ಚೇತನಗೊಳಿಸುವ ಪ್ರಮಾಣ ಪತ್ರವನ್ನು ನೀಡಿ ಶೇ.10ರಷ್ಟುಮೇಲ್ವಿಚಾರಣಾ ಶುಲ್ಕವನ್ನು ಪರವಾನಗಿ ಪಡೆಯುವ ಸಂಸ್ಥೆಯು ಪಾವತಿಸಬೇಕಿದೆ.
BBMP: ಹೈಕೋರ್ಟ್ ತರಾಟೆಗೆ ತೆಗೆದುಕೊಂಡ್ರೂ ರಸ್ತೆ ದುರಸ್ತಿಗೆ ಬಿಬಿಎಂಪಿ ನಕಾರ..!
ಹಾಗೆಯೇ ರಸ್ತೆ ಪುನಶ್ಚೇತನಗೊಳಿಸುವ ತಾಂತ್ರಿಕ ವಿಶ್ಲೇಷಣೆಯನ್ನು ಪಾಲಿಕೆಯ ಮುಖ್ಯ ಅಭಿಯಂತರರು ಹಾಗೂ ರಸ್ತೆ ಕತ್ತರಿಸುವ ಸಂಸ್ಥೆಯ ಯೋಜನಾ ಸಮಾಲೋಚಕರು(ಸಿವಿಲ್ ಎಂಜಿನಿಯರ್) ಅವರು ಜಂಟಿಯಾಗಿ ದೃಢೀಕರಿಸಬೇಕು. ರಸ್ತೆ ಪುನಃಶ್ಚೇತನ ತಾಂತ್ರಿಕ ವಿಶ್ಲೇಷಣೆಯು ರಸ್ತೆಯ ಮಾದರಿ, ಆಳತ ಮತ್ತು ಅಗಲದ ಮೇಲೆ ಆವಲಂಬಿತವಾಗಿದ್ದು, ಪ್ರತಿ ರಸ್ತೆ ಪರವಾನಗಿಯಲ್ಲಿ ರಸ್ತೆ ಪುನಃಶ್ಚೇತನ ವಿನ್ಯಾಸವನ್ನು ಆಯಾ ಸಂಸ್ಥೆಗಳು ಸಲ್ಲಿಸುವುದು ಕಡ್ಡಾಯವಾಗಿದೆ.
ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆದ ರಸ್ತೆ ಪುನಃಶ್ಚೇತನದ ಸಭೆಯಲ್ಲಿ ಗೇಯ್‌್ಲ ಗ್ಯಾಸ್ ಇಂಡಿಯಾ, ಗೇಯ್‌ಲ ಲಿಮಿಟೆಡ್, ಸಣ್ಣ ನೀರಾವರಿ ಮತ್ತು ಬಿಎಂಆರ್‌ಸಿಎಲ್ ಸಂಸ್ಥೆಗಳಿಗೆ ಅಳವಡಿಸಿರುವ ಪದ್ಧತಿಯನ್ನು ಎಲ್ಲಾ ರಸ್ತೆ ಅಗೆಯುವ ಪರವಾನಗಿ ಕೋರುವ ಸಂಸ್ಥೆಗಳಿಗೆ ವಿಧಿಸಬೇಕೆಂಬ ಸೂಚನೆ ನೀಡಲಾಗಿದೆ. ಹಾಗಾಗಿ ರಸ್ತೆ ಅಗೆಯುವ ಸಂಸ್ಥೆಯೇ ರಸ್ತೆಯನ್ನು ಪುನಃಶ್ಚೇತನ ಮಾಡಬೇಕೆಂಬ ಹೊಸ ನಿಯಮ ಜಾರಿಗೆ ತರಲಾಗಿದೆ ಅಂತ ಬಿಬಿಎಂಪಿ ರಸ್ತೆ ಮತ್ತು ಮೂಲಸೌಕರ್ಯ ಮುಖ್ಯ ಎಂಜಿನಿಯರ್ ಪ್ರಹ್ಲಾದ್ ತಿಳಿಸಿದ್ದಾರೆ.
