ರಸ್ತೆ ಗುಂಡಿಯಿಂದ ಸಂಭವಿಸುವ ಅಪಘಾತಕ್ಕೆ ಬಿಬಿಎಂಪಿ ಹೊಣೆ: ಪರಿಹಾರ ಕೊಡ್ತೀವಿ ಅಂದ್ರೂ ಅರ್ಜಿ ಬರ್ತಿಲ್ಲ!
* ರಸ್ತೆಗಳ ಅಸಮರ್ಪಕ ನಿರ್ವಹಣೆಯಿಂದ ಸಂಭವಿಸುವ ಅಪಘಾತಕ್ಕೆ ಪರಿಹಾರ ನೀಡಲು ಹೈಕೋರ್ಟ್ ಸೂಚನೆ
* 2020ರಲ್ಲೇ ಅಧಿಸೂಚನೆ
* ಈವರೆಗೂ ರಸ್ತೆ ಗುಂಡಿಗೆ 6 ಬಲಿ ಆದರೂ ಅರ್ಜಿ ಸಲ್ಲಿಸಲು ಮುಂದಾಗದ ಸಂತ್ರಸ್ತರು
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು(ಮಾ.19): ರಸ್ತೆಗಳ ಅಸಮರ್ಪಕ ನಿರ್ವಹಣೆಯಿಂದ ಉಂಟಾಗುವ ಅಪಘಾತ(Accident) ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಪರಿಹಾರ ನೀಡಬೇಕೆಂಬ ನಿಯಮ ಜಾರಿಯಾಗಿ ವರ್ಷ ಕಳೆದಿದೆ. ದಿನ ಬೆಳಗಾದರೆ ರಸ್ತೆ ದುಸ್ಥಿತಿಯಿಂದ ಅಪಘಾತ ಸಂಭವಿಸುವ ಸುದ್ದಿ ಪತ್ರಿಕೆಗಳಲ್ಲಿ ರಾರಾಜಿಸುತ್ತವೆ. ಇಷ್ಟಾದರೂ ಪರಿಹಾರಕ್ಕಾಗಿ ಬಿಬಿಎಂಪಿಗೆ(BBMP) ಅರ್ಜಿಗಳೇ ಸಲ್ಲಿಕೆಯಾಗುತ್ತಿಲ್ಲ!
ಹೈಕೋರ್ಟ್(High Court of Karnataka) ನಿರ್ದೇಶನದಂತೆ ರಸ್ತೆಗಳ ಅಸಮರ್ಪಕ ನಿರ್ವಹಣೆಯಿಂದ ಅಪಘಾತವಾಗಿ ಪ್ರಾಣ ಹಾನಿ ಅಥವಾ ಗಾಯಗೊಂಡರೆ ಅವರಿಗೆ ಬಿಬಿಎಂಪಿಯಿಂದ ಪರಿಹಾರ(compensation) ನೀಡುವುದಕ್ಕೆ 2020ರ ಡಿಸೆಂಬರ್ 1ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಈ ಪ್ರಕಾರ ಮೃತ ಕುಟುಂಬಕ್ಕೆ .3 ಲಕ್ಷ, ಗಂಭೀರ ಗಾಯಗೊಂಡರೆ .15 ಸಾವಿರ, ಮೂರು ದಿನಕ್ಕಿಂತ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ .10 ಸಾವಿರ ಸಣ್ಣ ಗಾಯಗಳಾದರೆ .5 ಸಾವಿರ ನೀಡುವುದಾಗಿ ಪಾಲಿಕೆ ತಿಳಿಸಿತ್ತು. ಈ ವರೆಗೂ ಯಾರೊಬ್ಬರೂ ಪರಿಹಾರಕ್ಕೆ ಅರ್ಜಿ ಹಾಕಿಲ್ಲ.
Protest Against Potholes: ಪ್ರತಿಭಟನೆಗೆ ಬಂದ ಆಪ್ ಕಾರ್ಯಕರ್ತರಿಗೆ ಸ್ಥಳೀಯರಿಂದ ಕ್ಲಾಸ್
ಕಳೆದ ಒಂದು ವರ್ಷದ ಅವಧಿಯಲ್ಲಿ 618 ಅಪಘಾತ ಸಂಭವಿಸಿ ಇದರಲ್ಲಿ 651 ಮಂದಿ ಮೃತಪಟ್ಟಿದ್ದಾರೆ(Death) ಎಂದು ಪೊಲೀಸ್ ಇಲಾಖೆ(Police Department) ತಿಳಿಸಿದೆ. ಇದರಲ್ಲಿ ರಸ್ತೆಗೆ ಗುಂಡಿಯಿಂದಲೇ 6 ಮಂದಿ, ರಸ್ತೆಕಾಮಗಾರಿಯಿಂದ ಇಬ್ಬರು, ರಸ್ತೆ ಉಬ್ಬುನಿಂದ ಆರು ಮಂದಿ, ಬೆಳಕಿನ ಕೊರತೆಗೆ ನಾಲ್ವರು, ರಸ್ತೆ ಕಿರಿದಾಗಿರುವುದರಿಂದ ಮೂವರು ಮೃತಪಟ್ಟಿದ್ದಾರೆ ಎಂದು ದೃಢಪಡಿಸಿದೆ. ಆದರೆ, ಸಂತ್ರಸ್ತರು(Victims) ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿಲ್ಲ ಎಂಬ ಕಾರಣಕ್ಕೆ ಪರಿಹಾರ ಸಂದಾಯವಾಗಿಲ್ಲ.
ನಿರ್ವಹಣೆ ಕೊರತೆಯಿಂದ ಹೆಚ್ಚು ಅಪಘಾತ:
ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 13,900 ಕಿ.ಮೀ. ಉದ್ದದ ರಸ್ತೆ ಜಾಲವಿದ್ದು, ಈ ಪೈಕಿ 192 ಕಿ.ಮೀ. ಹೈಡೆನ್ಸಿಟಿ ಕಾರಿಡಾರ್, 1,300 ಕಿ.ಮೀ ಆರ್ಟೀರಿಯಲ್ ಹಾಗೂ ಸಬ್ ಆರ್ಟೀರಿಯಲ್ ರಸ್ತೆ ಇದೆ. ನಗರ ವ್ಯಾಪ್ತಿಯಲ್ಲಿರುವ ರಾಷ್ಟ್ರೀಯ, ರಾಜ್ಯ ಮತ್ತು ನೈಸ್ ರಸ್ತೆಗೆ ಹೋಲಿಸಿದರೆ ಈ ರಸ್ತೆಗಳಲ್ಲಿ ಹೆಚ್ಚಿನ ಸಂಖ್ಯೆ ಅಪಘಾತಗಳು ಸಂಭವಿಸುತ್ತಿವೆ. 2021ರಲ್ಲಿ ಪಾಲಿಕೆಯ ಹೈಡೆನ್ಸಿಟಿ ಕಾರಿಡಾರ್, ಆರ್ಟೀರಿಯಲ್, ಸಬ್ ಆರ್ಟೀರಿಯಲ್ ರಸ್ತೆಗಳಲ್ಲಿ 334 ಅಪಘಾತ ಉಂಟಾಗಿವೆ. ಇನ್ನು ಪ್ಲೈಓವರ್‌ನಲ್ಲಿ 17 ಅಪಘಾತ ಉಂಟಾಗಿವೆ ಎಂದು ಪೊಲೀಸ್ ವರದಿಯಲ್ಲಿ ತಿಳಿಸಿದೆ.
ಜಾಗೃತಿ ಮೂಡಿಸದ ಪಾಲಿಕೆ
ಹೈಕೋರ್ಟ್‌ನ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳುವುದಕ್ಕೆ ಪಾಲಿಕೆ ಅಧಿಕಾರಿಗಳು ಪರಿಹಾರ ನೀಡುವುದಾಗಿ ಮಾರ್ಗಸೂಚಿಸಿ ಸಿದ್ಧಪಡಿಸಿದ್ದು ಬಿಟ್ಟರೆ, ಸಂತ್ರಸ್ತರಿಗೆ ಈ ಕುರಿತು ಜಾಗೃತಿ(Awareness) ಮೂಡಿಸುವುದಕ್ಕೆ ಯಾವುದೇ ಪ್ರಯತ್ನ ಮಾಡಿಲ್ಲ. ಹೀಗಾಗಿ, ಸಂತ್ರಸ್ತರು ಮಾಹಿತಿ ಕೊರತೆಯಿಂದ ಪರಿಹಾರಕ್ಕೆ ಅರ್ಜಿ ಸಲ್ಲಿಕೆ ಮಾಡಿಲ್ಲ ಎಂಬ ಆರೋಪಗಳಿವೆ.
ಹೀಗೆ ಅರ್ಜಿ ಸಲ್ಲಿಸಿ
ಅಪಘಾತ ನಡೆದ 30 ದಿನದಲ್ಲಿ ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತರಿಗೆ ಅರ್ಜಿ ಸಲ್ಲಿಸಬೇಕು. ಒಂದು ತಿಂಗಳ ನಂತರದಲ್ಲಿ ಬರುವ ಮನವಿಯನ್ನು ಬಿಬಿಎಂಪಿ ಸ್ವೀಕಾರ ಮಾಡುವುದಿಲ್ಲ. ಅರ್ಜಿ ಸಲ್ಲಿಸಿದ 7 ದಿನಗಳ ಒಳಗಾಗಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು. ಅರ್ಜಿದಾರ ನೀಡಿದ ದಾಖಲೆಗಳು ಸರಿಯಾಗಿದ್ದರೆ, ಪಾಲಿಕೆ ಅಧಿಕಾರಿಗಳು ಅಪಘಾತ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಬೇಕು. ಅಪಘಾತಕ್ಕೆ ಪಾಲಿಕೆ ಅಸಮರ್ಪಕ ನಿರ್ವಹಣೆ ಕಾರಣ ಎಂಬುದು ದೃಢಪಟ್ಟರೆ ಪಾಲಿಕೆಯಿಂದ ಪರಿಹಾರ ನೀಡಲಾಗುತ್ತದೆ.
Bengaluru: ಜಲಮಂಡಳಿ ಅಗೆದಿದ್ದ ರಸ್ತೆ ಗುಂಡಿಗೆ ಬಿದ್ದು ಬೈಕ್ ಸವಾರ ಸಾವು
ರಸ್ತೆ ಅಸಮರ್ಪಕ ನಿರ್ವಹಣೆಯಿಂದ ಉಂಟಾಗುವ ಅಪಘಾತಗಳ ಸಂಖ್ಯೆ ಅತಿ ವಿರಳ. ಅವಗಢಗಳು ಸಂಭವಿಸದಂತೆ ಕ್ರಮ ಕೈಗೊಳ್ಳುವುದು ನಮ್ಮ ಮೊದಲ ಆದ್ಯತೆ ಆಗಿದೆ ಅಂತ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ.
ಕಳೆದ 3 ವರ್ಷದ ಅಪಘಾತ ವಿವರ:
ವರ್ಷ ಅಪಘಾತ ಸಂಖ್ಯೆ ಸಾವು
2019 810 832
2020 632 657
2021 618 651
ಯಾವ ರಸ್ತೆಯಲ್ಲಿ ಎಷ್ಟು ಅಪಘಾತ?
ರಸ್ತೆ ಮಾದರಿ 2019 2020 2021
ಸಿಮೆಂಟ್ ರಸ್ತೆ 35 29 77
ಡಾಂಬಾರ್ ರಸ್ತೆ 744 588 535
ಮಣ್ಣಿನ ರಸ್ತೆ 31 15 6
ರಸ್ತೆಯ ಭೌತಿಕ ದೋಷದಿಂದ ಸಂಭವಿಸಿದ ಅಪಘಾತ ವಿವರ (2021)
ಅಡಚಣೆ ಅಪಘಾತ ಸಂಖ್ಯೆ
ಕಾಮಗಾರಿ 2
ರಸ್ತೆ ಗುಂಡಿ ಮತ್ತು ಹಳ್ಳಗಳು 6
ಪಾದಚಾರಿ ಮಾರ್ಗ ಇಲ್ಲದಿರುವುದು 1
ಅನಧಿಕೃತ ಪಾರ್ಕಿಂಗ್ 16
ಪ್ರಾಣಿ ಅಡ್ಡ ಬಂದು 3
ಬೆಳಕಿನ ಕೊರತೆ 4
ರಸ್ತೆಯಲ್ಲಿ ಕೊಚ್ಚೆ ನೀರು ನಿಂತು 1