ಐಸೋಲೇಷನ್‌ ಆಗುತ್ತಿರುವವರ ಸಂಖ್ಯೆ ಹೆಚ್ಚಳದ ಬೆನ್ನಲ್ಲೇ ಕೊರೋನಾ ನಿಯಂತ್ರಣ ಉಪಕರಣಗಳ ಬೆಲೆ ಗಗನಮುಖಿ| ಆಕ್ಸಿಜನ್‌ ಕಾನ್ಸಟ್ರೇಟರ್‌ ಬೆಲೆ 45000 ದಿಂದ 85000ಕ್ಕೆ ಏರಿಕೆ| ಆಕ್ಸಿಮೀಟರ್‌ಗಳ ಬೆಲೆಯೂ 500 ರು.ಗಳ ವರೆಗೆ ಹೆಚ್ಚಳ| 

ಬೆಂಗಳೂರು(ಮೇ.03): ಮನೆಯಲ್ಲೇ ಕೊರೋನಾ ಚಿಕಿತ್ಸೆ ಪಡೆಯುತ್ತಿರುವವರು ಐಸೋಲೇಷನ್‌ ಕಿಟ್‌, ಆಕ್ಸಿಮೀಟರ್‌, ಆಕ್ಸಿಜನ್‌ ಕಾನ್ಸನ್‌ಟ್ರೇಟರ್ಸ್‌ (ಆಮ್ಲಜನಕ ಸಂಗ್ರಾಹಕ) ಸೇರಿದಂತೆ ವಿವಿಧ ಉಪಕರಣಗಳನ್ನು ಖರೀದಿಸುತ್ತಿರುವ ಪರಿಣಾಮ ಕೊರೋನಾ ನಿಯಂತ್ರಣ ಉಪಕರಣಗಳ ಬೆಲೆ ದುಪ್ಪಟ್ಟು ದುಬಾರಿಯಾಗಿದೆ.

ಕಳೆದ 15 ದಿನಗಳಿಂದ ಕೊರೋನಾ ಎರಡನೇ ಅಲೆ ರಣಕೇಕೆ ಹಾಕುತ್ತಿದ್ದು, ಸೋಂಕು ಇನ್ನಿಲ್ಲದಂತೆ ಶರವೇಗದಲ್ಲಿ ಹರಡುತ್ತಿದೆ. ನಗರದ ಆಸ್ಪತ್ರೆಗಳಲ್ಲಿ ಕರುಣಾಜನಕ ಸ್ಥಿತಿ ಇದ್ದು, ಹಾಸಿಗೆ ಮತ್ತು ಐಸಿಯು ವಾರ್ಡ್‌ಗಳನ್ನು ಪಡೆಯುವುದೇ ದುಸ್ಸಾಹಸವಾಗಿದೆ. ಆದ್ದರಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುವುದಕ್ಕಾಗಿ ಮನೆಯಲ್ಲಿಯೇ ಇದ್ದು (ಹೋಮ್‌ ಐಸೋಲೇಷನ್‌), ಚಿಕಿತ್ಸೆ ಪಡೆಯುವವರ ಸಂಖ್ಯೆ ಹೆಚ್ಚಳವಾಗುತ್ತಿದೆ.

"

ಕೊರೋನಾ ಭೀಕರತೆ: 24 ತಾಸೂ ದಹಿಸುತ್ತಿವೆ ಚಿತೆಗಳು..!

ಸರ್ಕಾರವನ್ನು ನಂಬಿ ಕುಳಿತರೆ ಜೀವ ಕಳೆದುಕೊಳ್ಳಬೇಕಾಗುತ್ತದೆ ಎಂದು ತಿಳಿದಿರುವ ಕೊರೋನಾ ಸೋಂಕಿತರು, ಮನೆಯಲ್ಲಿಯೇ ಆಮ್ಲಜನಕ ಪ್ರಮಾಣ ಪರಿಶೀಲಿಸಿಕೊಳ್ಳುವುದು, ಉಸಿರಾಟದ ಸಮಸ್ಯೆ ಎದುರಾದರೆ ಆಕ್ಸಿಜನ್‌ ಕಾನ್ಸನ್‌ಟ್ರೇಟರ್ಸ್‌ ಖರೀದಿ ಮಾಡುವ ಮೂಲಕ ವೈದ್ಯರ ಸಲಹೆ ಪಡೆದು ಮನೆಯಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಹೀಗಾಗಿ, ಅನಿವಾರ್ಯವಾಗಿ ಆಕ್ಸಿಮೀಟರ್‌ ಮತ್ತು ಆಕ್ಸಿಜನ್‌ ಕಾನ್ಸಟ್ರೇಟ​ರ್‍ಸ್ ಖರೀದಿಸುತ್ತಿದ್ದಾರೆ. ಸಾಮಾನ್ಯವಾಗಿ 45ರಿಂದ 55 ಸಾವಿರ ರು.ಗಳಿದ್ದ ಕಾನ್ಸಟ್ರೇಟ​ರ್‍ಸ್ ಬೇಡಿಕೆ ಹೆಚ್ಚಾಗುತ್ತಿದ್ದಂತೆ 70ರಿಂದ 85 ಸಾವಿರ ರು. ಗಳಿಗೆ ಮಾರಾಟ ಮಾಡಲಾಗುತ್ತಿದೆ.

ಈ ಕುರಿತು ಮಾತನಾಡಿದ ಮೆಡಿಕಲ್‌ ಸ್ಟೋರ್‌ ಮಾಲೀಕ ಮಹೇಶ್‌, ಆಕ್ಸಿಜನ್‌ ಕಾನ್ಸಟ್ರೇಟ​ರ್‍ಸ್ ಖರೀದಿ ಮಾಡುವವರ ಸಂಖ್ಯೆ ಬಹಳ ವಿರಳವಾಗಿತ್ತು. ಕೊರೋನಾ ಮೊದಲ ಅಲೆ ಇದ್ದಾಗಲೂ ಸಹ ಬೇಡಿಕೆ ಇರಲಿಲ್ಲ. ಆದರೆ, ಎರಡನೆ ಅಲೆಯಲ್ಲಿ ಉಸಿರಾಟದ ಸಮಸ್ಯೆ ಪ್ರಕರಣಗಳ ಸಂಖ್ಯೆ ದಿಢೀರ್‌ ಹೆಚ್ಚಳವಾದ್ದರಿಂದ ಹಾಗೂ ಏಕಾಏಕಿ ಬೇಡಿಕೆ ಬಂದಿದ್ದರಿಂದ ಸರಬರಾಜು ಕಡಿಮೆಯಾಗಿದೆ. ಬೇಡಿಕೆ ತಕ್ಕಂತೆ ಸರಬರಾಜು ಮಾಡಲು ಆಕ್ಸಿಜನ್‌ ಕಾನ್ಸಟ್ರೇಟ​ರ್‍ಸ್ ಕಂಪನಿಗಳಿಂದ ಸಾಧ್ಯವಾಗುತ್ತಿಲ್ಲ. ಬೇಡಿಕೆ ಹೆಚ್ಚಾಗಿರುವುದರಿಂದ ಸಹಜವಾಗಿಯೇ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಮತ್ತಷ್ಟುಬೇಡಿಕೆ ಹೆಚ್ಚಾಗಿದೆ ಎನ್ನುತ್ತಾರೆ.

ಕಂಪನಿಗಳೇ ಬೆಲೆ ಹೆಚ್ಚಳ ಮಾಡಿರುವುದರಿಂದ ಮಾರಾಟಗಾರರು ಕೂಡ ಮತ್ತಷ್ಟುದುಬಾರಿಯಾಗಿಸಿದ್ದಾರೆ. ಇದರಿಂದ ಗ್ರಾಹಕರಿಗೂ ಹೊರೆಯಾಗುತ್ತಿದೆ. ಮುಂದಿನ 15 ದಿನಗಳಲ್ಲಿ ಈ ಸಮಸ್ಯೆ ತಕ್ಕ ಮಟ್ಟಿಗೆ ಕಡಿಮೆಯಾಗಬಹುದು. ಆದರೆ, ಅಷ್ಟರಲ್ಲಿ ಬೇಡಿಕೆ ಕುಸಿದರೆ ಆಕ್ಸಿಜನ್‌ ಕಾನ್ಸ್‌ಟ್ರೇಟರ್‌ ಪ್ರಯೋಜನಕ್ಕೆ ಬರುವುದಿಲ್ಲ ಎಂದು ತಿಳಿಸಿದರು. ಇನ್ನು ಪಲ್ಸ್‌ ರೇಟ್‌ ಪರಿಶೀಲಿಸಿಕೊಳ್ಳುವುದಕ್ಕಾಗಿ ಖರೀದಿಸುವ ಆಕ್ಸಿಮೀಟರ್‌ ಬೆಲೆ ಕೂಡ 300ರಿಂದ 500 ರು. ವರೆಗೆ ಹೆಚ್ಚಳ ಮಾಡಲಾಗಿದೆ.

ಮಧ್ಯಮ ವರ್ಗದವರ ಪರದಾಟ

ಆರ್ಥಿಕವಾಗಿ ಸದೃಢರಾಗಿರುವವರು ಜೀವ ಉಳಿಸಿಕೊಳ್ಳುವುದಕ್ಕಾಗಿ ದುಪ್ಪಟ್ಟು ಹಣ ನೀಡಿ ಖರೀದಿ ಮಾಡುತ್ತಾರೆ. ಆದರೆ, ಬಡವರು ಹಾಗೂ ಮಧ್ಯಮ ವರ್ಗದ ಜನರು ಜೀವನ ನಡೆಸುವುದೇ ಕಷ್ಟವಾಗಿದೆ. ಇಂತಹ ಸಮಯದಲ್ಲಿ ಅಗತ್ಯ ವೈದ್ಯಕೀಯ ಉಪಕರಣಗಳ ಬೆಲೆ ಹೆಚ್ಚಳ ಮಾಡಿದರೆ ನಮ್ಮ ಗತಿ ಏನು? ನಮ್ಮ ಚಿಕ್ಕಪ್ಪನಿಗೆ ಉಸಿರಾಟದ ತೊಂದರೆ ಇತ್ತು. ಆಕ್ಸಿಜನ್‌ ಕಾನ್ಸ್‌ಟ್ರೇಟರ್‌ ವಿಚಾರಿಸಿದಾಗ 62 ಸಾವಿರ ರು. ಹೇಳಿದರು. ಖರೀದಿಸಲು ಸಾಧ್ಯವಿಲ್ಲವೆಂದು ಸುಮ್ಮನಾದೆವು ಎನ್ನುತ್ತಾರೆ ಬನಶಂಕರಿಯ ಕಿರಣ್‌ಕುಮಾರ್‌.

18​-45ಮೇಲ್ಪಟ್ಟವರಿಗೆ 122 ಕೋಟಿ ಡೋಸ್‌ ಲಸಿಕೆ ಬೇಕು!

ಮಾತ್ರೆಗಳಿಗೂ ಬೇಡಿಕೆ

ಇನ್ನು ಕೊರೋನಾ ಲಕ್ಷಣಗಳಾದ ಕೆಮ್ಮು, ನೆಗಡಿ, ಜ್ವರ ಮತ್ತು ಮೈಕೈ ನೋವುಗಳಂತಹ ಲಕ್ಷಣಗಳು ಕಾಣಿಸಿಕೊಂಡರೆ ಜನರು ಕೂಡಲೇ ಮಾತ್ರಗಳನ್ನು ಖರೀದಿಸಿ ತಕ್ಷಣವೇ ಗುಣಪಡಿಸಿಕೊಳ್ಳಲು ಮುಂದಾಗಿದ್ದಾರೆ. ಆದ್ದರಿಂದ ಪ್ಯಾರಾಸಿಟಮೆಲ್‌, ಡೋಲೋ 650, ಸಿರ್ಜಿನ್‌ ಸೇರಿದಂತೆ ಇನ್ನಿತರ ಆ್ಯಂಟಿಬಯೋಟಿಕ್‌ ಮಾತ್ರೆಗಳ ಖರೀದಿ ಹೆಚ್ಚಳವಾಗುತ್ತಿದೆ ಎನ್ನುತ್ತಾರೆ ಬಸವನಗುಡಿಯ ಮೆಡಿಕಲ್‌ ಸ್ಟೋರ್‌ನ ಶೀತಲ್‌.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona