Asianet Suvarna News Asianet Suvarna News

ಕೊರೋನಾ ಭೀಕರತೆ: 24 ತಾಸೂ ದಹಿಸುತ್ತಿವೆ ಚಿತೆಗಳು..!

ಚಿತಾಗಾರಗಳ ಮುಂದೆ ಸಾಲುಗಟ್ಟುತ್ತಲೇ ಇವೆ ಆ್ಯಂಬುಲೆನ್ಸ್‌ಗಳು| ಅಂತ್ಯಕ್ರಿಯೆ ನೆರವೇರಿಸಲು ತಾಸುಗಟ್ಟಲೇ ಕಾಯುವ ದುಸ್ಥಿತಿ| ತಡರಾತ್ರಿವರೆಗೂ ಮೃತದೇಹಗಳ ದಹನ ಕಾರ್ಯದಲ್ಲಿ ತೊಡಗಿದ್ದ ಚಿತಾಗಾರದ ಸಿಬ್ಬಂದಿ| ಮುಗಿಲು ಮುಟ್ಟಿದ ಆಕ್ರಂದನ| 

Crematorium staff Did Work 24 Hours at Cemetery in Bengaluru grg
Author
Bengaluru, First Published May 3, 2021, 12:42 PM IST

ಬೆಂಗಳೂರು(ಮೇ.03): ಕೊರೋನಾದಿಂದ ಮೃತಪಟ್ಟವರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ನಗರದಲ್ಲಿ ಚಿತಾಗಾರಗಳ ಮುಂದೆ ಮೃತ ದೇಹಗಳ ಅಂತ್ಯಕ್ರಿಯೆಗಾಗಿ ಆ್ಯಂಬುಲೆನ್ಸ್‌ಗಳು ತಾಸುಗಟ್ಟಲೇ ಸರತಿ ಸಾಲಿನಲ್ಲಿ ಕಾದು ನಿಲ್ಲುವ ಸ್ಥಿತಿ ಭಾನುವಾರವೂ ಮುಂದುವರೆದಿತ್ತು.

ಮೇಡಿ ಅಗ್ರಹಾರ, ಬನಶಂಕರಿ, ಪೀಣ್ಯ, ಸುಮ್ಮನಹಳ್ಳಿ, ಬೊಮ್ಮನಹಳ್ಳಿ, ಚಾಮರಾಜಪೇಟೆ, ಕೆಂಗೇರಿ ಮತ್ತು ತಾವರೆಕರೆ ಚಿತಾಗಾರದ ಮುಂದೆ ಭಾನುವಾರವೂ ಬೆಳಗ್ಗೆ ಆರು ಗಂಟೆಯಿಂದಲೇ ಆ್ಯಂಬುಲೆನ್ಸ್‌ಗಳ ದೊಡ್ಡ ಸಾಲು ಕಂಡು ಬಂದಿತ್ತು. ಚಿತಾಗಾರದ ಸಿಬ್ಬಂದಿ ವಿಶ್ರಾಂತಿ ಇಲ್ಲದೇ ದಿನವಿಡೀ ಮೃತದೇಹಗಳ ಅಂತ್ಯಕ್ರಿಯೆ ನೆರವೇರಿಸುತ್ತಿದ್ದರೂ ಆ್ಯಂಬುಲೆನ್ಸ್‌ಗಳ ಸಾಲು ಮಾತ್ರ ಕರಗುತ್ತಿಲ್ಲ.

"

ಸುಮ್ಮನಹಳ್ಳಿ ವಿದ್ಯುತ್‌ ಚಿತಾಗಾರದಲ್ಲಿ ಭಾನುವಾರ 27 ಕೋವಿಡ್‌, ಪೀಣ್ಯದಲ್ಲಿ 30ಕ್ಕೂ ಹೆಚ್ಚು ಮೃತದೇಹ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ನಗರದ ಹೊರವಲಯದ ತಾವರೆಕೆರೆ ಹಾಗೂ ಗಿಡ್ಡೇನಹಳ್ಳಿಯ ಚಿತಾಗಾರದ ಎದುರು ಒಟ್ಟು 32 ಆ್ಯಂಬುಲೆನ್ಸ್‌ಗಳು ಸಾಲುಗಟ್ಟಿ ನಿಂತಿದ್ದವು. ಭಾನುವಾರ 13 ಕೋವಿಡ್‌ ಹಾಗೂ ಎರಡು ನಾನ್‌ ಕೋವಿಡ್‌ ಮೃತದೇಹಗಳ ಅಂತ್ಯಕ್ರಿಯೆ ನಡೆಸಲಾಗಿದೆ.

ಚಿತಾಗಾರದಿಂದ ಸ್ಥಳೀಯರಿಗೆ ಸೋಂಕು ಹಬ್ಬುವ ಭೀತಿ..!

ಇನ್ನೂ ಇದೇ ಚಿತಾಗಾರದ ಸಿಬ್ಬಂದಿಯು ತಡರಾತ್ರಿಯಾದರೂ ಕೋವಿಡ್‌ನಿಂದ ಮೃತ ಪಟ್ಟವರ ಬಗ್ಗೆ ಮಾಹಿತಿ ದಾಖಲಿಸಿಕೊಳ್ಳುತ್ತಿದ್ದರು. ರಾತ್ರಿ 8 ಗಂಟೆ ವೇಳೆಗಾಗಲೇ ಒಟ್ಟು 40 ಮೃತದೇಹಗಳ ಅಂತ್ಯ ಸಂಸ್ಕಾರ ನಡೆಸಲು ನೋಂದಣಿ ಮಾಡಿಕೊಂಡಿದ್ದಾರೆ.

ಪೀಣ್ಯ ಚಿತಾಗಾರದಲ್ಲಿ ಭಾನುವಾರ ಮುಂಜಾನೆಯಿಂದಲೇ 25ಕ್ಕೂ ಹೆಚ್ಚು ಆ್ಯಂಬುಲೆನ್ಸ್‌ಗಳು ಸಾಲುಗಟ್ಟಿ ನಿಂತಿದ್ದವು. ಈ ಚಿತಾಗಾರದಲ್ಲಿ ಶನಿವಾರ ಸಂಜೆ ವೇಳೆಗೆ 14 ಮೃತದೇಹ ಅಂತ್ಯ ಸಂಸ್ಕಾರ ಮಾಡಿದ್ದ ಸಿಬ್ಬಂದಿ, ಭಾನುವಾರ ಬೆಳಗ್ಗೆಯಿಂದ ಸಂಜೆಯವರೆಗೆ 21 ಕೋವಿಡ್‌ ಮೃತದೇಹಗಳನ್ನು ಅಂತ್ಯ ಸಂಸ್ಕಾರ ನಡೆಸಿದ್ದಾರೆ. ಹಾಗೆಯೇ, ಮೇಡಿ ಅಗ್ರಹಾರ, ಬನಶಂಕರಿ, ವಿಲ್ಸನ್‌ ಗಾರ್ಡ್‌ನ್‌, ಬೊಮ್ಮನಹಳ್ಳಿ ಮತ್ತು ಚಾಮರಾಜಪೇಟೆ ಚಿತಾಗಾರದಲ್ಲಿ ತಲಾ 15ಕ್ಕೂ ಹೆಚ್ಚು ಮೃತದೇಹಗಳ ಅಂತ್ಯಕ್ರಿಯೆ ನಡೆಸಲಾಗಿದೆ.

ಈ ಮಧ್ಯೆ ಕೊರೋನೇತರ ಮೃತದೇಹಗಳ ಅಂತ್ಯಕ್ರಿಯೆಯೂ ಇದೇ ಚಿತಾಗಾರದಲ್ಲಿ ನಡೆಯುತ್ತಿದ್ದವು. ಕೋವಿಡ್‌ ಮೃತದೇಹಗಳನ್ನು ಆದ್ಯತೆ ಮೇರೆಗೆ ದಹನ ಮಾಡುತ್ತಿದ್ದರಿಂದ ಕೋವಿಡ್‌ಯೇತರ ಮೃತದೇಹಗಳ ಅಂತ್ಯಕ್ರಿಯೆ ಸಾಕಷ್ಟುವಿಳಂಬವಾಗುತ್ತಿತ್ತು. ಮೃತರ ಸಂಬಂಧಿಕರು ಐದಾರು ಗಂಟೆ ಚಿತಾಗಾರದ ಮುಂದೆ ಕಾದು ನಿಲ್ಲಿಸುವ ಸ್ಥಿತಿ ಉಂಟಾಗಿದೆ.

ಮುಗಿಲು ಮುಟ್ಟಿದ ಆಕ್ರಂದನ

ದಹನ ಪ್ರಕ್ರಿಯೆ ನಿರಂತರವಾಗಿ ಸಾಗುತ್ತಿದ್ದ ವೇಳೆಯೇ, ಚಿತಾಗಾರಗಳ ಮುಂದೆ ಕೋವಿಡ್‌ನಿಂದ ಮೃತಪಟ್ಟವರ ಕುಟುಂಬದ ಸದಸ್ಯರು ಹಾಗೂ ಸಂಬಂಧಿಕರು ಆಕ್ರಂದನ ಮುಗಿಲು ಮುಟ್ಟಿತ್ತು. ಚಿತಾಗಾರದ ಆವರಣದಲ್ಲಿ ಆ್ಯಂಬುಲೆನ್ಸ್‌ಗಳಲ್ಲಿ ತಮ್ಮ ಪ್ರೀತಿಪಾತ್ರರ ಮೃತದೇಹಗಳನ್ನು ಕಂಡು ಸಂಬಂಧಿಕರು ಕಣ್ಣಿರಿಡುವ ದೃಶ್ಯಗಳು ನೋಡುಗರ ಮನಕಲಕುತ್ತಿತ್ತು. ಕೆಲ ಸಂಬಂಧಿಕರು ಮೃತದೇಹದ ಅಂತಿಮ ದರ್ಶನ ಪಡೆಯಲಾಗದೇ ಚಿತಾಗಾರದ ಹೊರ ಆವರಣದಲ್ಲಿ ರೋದಿಸಿ ಕಣ್ಣೀರಿಡುತ್ತಿದ್ದರು.

ನೋಂದಣಿ ಬಳಿಕವೇ ಕೋವಿಡ್‌ ಮೃತದೇಹ ಚಿತಾಗಾರಕ್ಕೆ ರವಾನೆಗೆ ಅವಕಾಶ

ಬಿಡುವಿಲ್ಲದೆ ದಣಿದ ಸಿಬ್ಬಂದಿ

ಭಾನುವಾರವಾದರೂ ನಗರದ ಚಿತಾಗಾರದ ಸಿಬ್ಬಂದಿಗೆ ರಜೆ ಇರಲಿಲ್ಲ. ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ ಹೆಚ್ಚಿದ್ದು, ಬೆಳಗ್ಗೆಯಿಂದಲೇ ಶವವನ್ನು ಹೊತ್ತ ಆ್ಯಂಬುಲೆನ್ಸ್‌ಗಳ ಚಿತಾಗಾರದ ಮುಂದೆ ಸಾಲು ಗಟ್ಟಿದ್ದರಿಂದ ದಿನವಿಡೀ ಸಿಬ್ಬಂದಿ ಮೃತದೇಹಗಳ ಅಂತ್ಯ ಕ್ರಿಯೆ ನೆರವೇರಿಸುವಲ್ಲಿ ನಿರತರಾಗಿದ್ದರು. ಸಿಬ್ಬಂದಿ ಕೊಂಚವೂ ಬಿಡುವಿಲ್ಲದೆ ಕರ್ತವ್ಯ ನಿರ್ವಹಿಸುವಂತಾಗಿದೆ.

ಚಿತಾಗಾರದಲ್ಲಿ ನಿಗದಿತ ಪ್ರಕ್ರಿಯೆ ಮುಗಿಸಿ ಮೃತದೇಹ ಅಂತ್ಯಕ್ರಿಯೆ ಮಾಡಲು ಸುಮಾರು ಒಂದು ಗಂಟೆಗೂ ಹೆಚ್ಚು ಸಮಯ ಹಿಡಿಯುತ್ತಿತ್ತು. ಒಂದೆಡೆ ಮೃತದೇಹಗಳ ದಹನ ಕಾರ್ಯ ನಡೆಯುತ್ತಿದ್ದರೆ, ಮತ್ತೊಂದೆಡೆ ಹೊಸ ಮೃತದೇಹಗಳು ಬರುತ್ತಿದ್ದವು. ಇದರಿಂದ ಚಿತಾಗಾರದ ಸಿಬ್ಬಂದಿ ತಡರಾತ್ರಿವರೆಗೂ ಮೃತದೇಹಗಳ ದಹನ ಕಾರ್ಯದಲ್ಲಿ ತೊಡಗಿದ್ದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
 

Follow Us:
Download App:
  • android
  • ios