ಸಯ್ಯದ್ ಮುಷ್ತಾಕ್ ಅಲಿ ಟಿ20 ಆಡಿದ ಬಳಿಕ ವೇಗಿ ಮೊಹಮ್ಮದ್ ಶಮಿ ಆಸೀಸ್‌ಗೆ?
ಟೀಂ ಇಂಡಿಯಾ ಅನುಭವಿ ವೇಗಿ ಮೊಹಮ್ಮದ್ ಶಮಿ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿ ಆಡಿದ ಬಳಿಕ ಆಸೀಸ್ ಪ್ರವಾಸ ಮಾಡಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ
ನವದೆಹಲಿ: ಬರೋಬ್ಬರಿ ಒಂದು ವರ್ಷದ ಬಳಿಕ ಇತ್ತೀಚೆಗಷ್ಟೇ ರಣಜಿ ಕ್ರಿಕೆಟ್ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದ್ದ ತಾರಾ ವೇಗಿ ಮೊಹಮದ್ ಶಮಿ, ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾಕ್ಕೆ ತೆರಳುವುದು ಮತ್ತಷ್ಟು ವಿಳಂಬವಾಗಲಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಗಾಯದಿಂದ ಚೇತರಿಸಿಕೊಳ್ಳುತ್ತಿದ್ದ ಕಾರಣದಿಂದಾಗಿ ಆಸ್ಟ್ರೇಲಿಯಾ ವಿರುದ್ಧ ಸರಣಿಗೆ ಶಮಿ ಆಯ್ಕೆಯಾಗಿಲ್ಲ. ಆದರೆ ಕಳೆದ ವಾರ ರಣಜಿ ಟೂರ್ನಿಯಲ್ಲಿ ಬಂಗಾಳ ಪರ ಆಡಿದ್ದ ಶಮಿ, ಫಿಟ್ನೆಸ್ ಸಾಬೀತುಪಡಿಸಿದ್ದರು. ಹೀಗಾಗಿ ಶೀಘ್ರವೇ ಆಸೀಸ್‌ಗೆ ತೆರಳಿ ತಂಡ ಕೂಡಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಕೇವಲ ಒಂದೇ ಪಂದ್ಯ ಆಡಿ ನೇರವಾಗಿ ಭಾರತ ತಂಡಕ್ಕೆ ಸೇರಿಸಿಕೊಳ್ಳುವ ಬದಲು, ನ.23ರಿಂದ ಆರಂಭಗೊಳ್ಳಲಿರುವ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಬಂಗಾಳ ಪರ ಆಡುವಂತೆ ಬಿಸಿಸಿಐ ವೈದ್ಯಕೀಯ ತಂಡ, ಆಯ್ಕೆ ಸಮಿತಿ ಶಮಿಗೆ ಸೂಚಿಸಿದೆ ಎಂದು ತಿಳಿದುಬಂದಿದೆ.
ಪರ್ತ್ ಟೆಸ್ಟ್‌ಗೆ ರೋಹಿತ್ ಶರ್ಮಾ ಗೈರು: ಮೊದಲ ಟೆಸ್ಟ್‌ಗೆ ಜಸ್ಪ್ರೀತ್ ಬುಮ್ರಾ ಕ್ಯಾಪ್ಟನ್
ಶಮಿ ಬದಲು ಈಗಾಗಲೇ ಮುಖ್ಯ ತಂಡದಲ್ಲಿರುವ ಹರ್ಷಿತ್ ರಾಣಾ ಮತ್ತು ಕರ್ನಾಟಕದ ಪ್ರಸಿದ್ಧ್ ಕೃಷ್ಣರನ್ನು ಆಸೀಸ್ ಸರಣಿಯಲ್ಲಿ 3ನೇ ವೇಗಿಯಾಗಿ ಆಡಿಸಲು ಬಿಸಿಸಿಐ ಚಿಂತನೆ ನಡೆಸುತ್ತಿದೆ ಎಂದು ವರದಿಯಾಗಿದೆ. ಹರ್ಷಿತ್ ಈ ವರೆಗೂ ಕೇವಲ 10 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದರೆ, ಪ್ರಸಿದ್ಧ್ ಭಾರತ ಪರ 2 ಟೆಸ್ಟ್ ಆಡಿದ್ದಾರೆ.
ಮುಷ್ತಾಕ್ ಅಲಿ ಟಿ20 ಟೂರ್ನಿ: ಮುಂಬೈಗೆ ಅಯ್ಯರ್ ನಾಯಕ
ಮುಂಬೈ: ನ.23ರಿಂದ ಡಿ.15ರ ತನಕ ನಡೆಯಲಿರುವ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ತಾರಾ ಬ್ಯಾಟರ್ ಶ್ರೇಯಸ್ ಅಯ್ಯರ್ ಮುಂಬೈ ತಂಡದ ನಾಯಕನಾಗಿ ಆಯ್ಕೆಯಾಗಿದ್ದಾರೆ. ಮುಂಬೈ ಕ್ರಿಕೆಟ್ ಸಂಸ್ಥೆಯು ಭಾನುವಾರ ಟೂರ್ನಿಗೆ 17 ಆಟಗಾರರ ಹೆಸರನ್ನು ಪ್ರಕಟಿಸಿದ್ದು, ಫಿಟ್ನೆಸ್ ಕಾರಣಕ್ಕೆ ರಣಜಿ ಟೂರ್ನಿಯಿಂದ ಹೊರಗುಳಿದಿದ್ದ ಪೃಥ್ವಿ ಶಾ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಕಳೆದ ಬಾರಿ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಅಜಿಂಕ್ಯ ರಹಾನೆ ಮುಂಬೈ ತಂಡವನ್ನು ಮುನ್ನಡೆಸಿದ್ದರು. ಆದರೆ ಈ ಬಾರಿ ರಹಾನೆ ಅವರು ಅಯ್ಯರ್ ನಾಯಕತ್ವದಲ್ಲಿ ಆಡಲಿದ್ದಾರೆ. ಶ್ರೇಯಸ್ ಈ ಬಾರಿ ರಣಜಿಯಲ್ಲಿ ಉತ್ತಮ ಆಟ ಪ್ರದರ್ಶಿಸಿದ್ದರು. 2 ಶತಕ ಒಳಗೊಂಡಂತೆ ಒಟ್ಟು 452 ರನ್ ಕಲೆ ಹಾಕಿದ್ದರು. ಸದ್ಯ ಅವರು ಟೀಂ ಇಂಡಿಯಾಗೆ ಮರಳುವ ತವಕದಲ್ಲಿದ್ದಾರೆ.
ಆಸೀಸ್ ಎದುರಿನ ಪರ್ತ್ ಟೆಸ್ಟ್‌ಗೆ ಕೆ ಎಲ್ ರಾಹುಲ್ ಫಿಟ್, ರೋಹಿತ್ ಶರ್ಮಾ ಔಟ್!
ಮುಷ್ತಾಕ್ ಅಲಿ ಟಿ20 : ರಾಜ್ಯ ತಂಡಕ್ಕೆ ಮನ್ವಂತ್ ಆಯ್ಕೆ
ಬೆಂಗಳೂರು: ನ.23ರಿಂದ ಡಿ.5 ರ ವರೆಗೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆಯಲಿರುವ ಸಯ್ಯದ್ ಮುಷ್ತಾಕ್ ಅಲಿ ರಾಷ್ಟ್ರೀಯ ಟಿ20 ಟೂರ್ನಿಯ ಗುಂಪು ಹಂತದ ಪಂದ್ಯಗಳಿಗೆ 15 ಆಟಗಾರರ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ.
ಮಯಾಂಕ್ ಅಗರ್‌ವಾಲ್ ತಂಡದ ನಾಯಕತ್ವ ವಹಿಸಲಿದ್ದು, ಮಹಾರಾಜ ಟ್ರೋಫಿ ಲೀಗ್‌ನಲ್ಲಿ ಗಮನ ಸೆಳೆದಿದ್ದ ಯುವ ಆಲ್ರೌಂಡರ್ ಮನ್ವಂತ್ ಕುಮಾರ್‌ಗೆ ತಂಡದಲ್ಲಿ ಸ್ಥಾನ ಲಭಿಸಿದೆ. ಅನುಭವಿಗಳಾದ ಮನೀಶ್ ಪಾಂಡೆ, ದೇವದತ್ ಪಡಿಕ್ಕಲ್, ಶ್ರೇಯಸ್ ಗೋಪಾಲ್ ಕೂಡಾ ತಂಡದಲ್ಲಿದ್ದಾರೆ.
ತಂಡ: ಮಯಾಂಕ್(ನಾಯಕ), ದೇವದತ್ ಪಡಿಕ್ಕಲ್, ಮನೀಶ್ ಪಾಂಡೆ, ಅಭಿನವ್ ಮನೋಹರ್, ಶ್ರೇಯಸ್ ಗೋಪಾಲ್, ಸ್ಮರಣ್ ಆರ್., ಕೃಷ್ಣನ್ ಶ್ರೀಜಿತ್, ವೈಶಾಖ್, ಮ್ಯಾಕ್ನೀಲ್, ಕೌಶಿಕ್, ಮನೋಜ್ ಭಾಂಡಗೆ, ವಿದ್ಯಾಧರ್ ಪಾಟೀಲ್, ಎಲ್.ಆರ್.ಚೇತನ್, ಶುಭಾಂಗ್ ಹೆಗಡೆ, ಮನ್ವಂತ್ ಕುಮಾರ್,