ಶಾಸಕ ಸಂತೋಷ ಲಾಡ್, ಮತದಾರರ ಪಟ್ಟಿಯನ್ನು ಆಧಾರ್‌ಗೆ ಲಿಂಕ್ ಮಾಡುವುದರಿಂದ ನಕಲಿ ಮತದಾರರನ್ನು ತಡೆಯಬಹುದೆಂದು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ, ಬಿಜೆಪಿ ಎಐ ಸಾಫ್ಟ್‌ವೇರ್ ಬಳಸಿ ಕಾಂಗ್ರೆಸ್ ಬೆಂಬಲಿಗರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ
ಹುಬ್ಬಳ್ಳಿ (ಜೂ.26): ಮತದಾರರ ಪಟ್ಟಿಯನ್ನು ಆಧಾರ್‌ಗೆ ಲಿಂಕ್ ಮಾಡಲಿ. ಆಧಾರ್ ವ್ಯವಸ್ಥೆಯಲ್ಲಿ ಬಯೋಮೆಟ್ರಿಕ್ ಮಾಹಿತಿ ಒಳಗೊಂಡಿರುವುದರಿಂದ ನಕಲಿ ಮತದಾರರ ನೋಂದಣಿ ಕಡಿಮೆಯಾಗುತ್ತದೆ. ಈ ಕುರಿತು ದೇಶಾದ್ಯಂತ ಸಾರ್ವಜನಿಕರು ಚರ್ಚಿಸಬೇಕಿದೆ ಎಂದು ಶಾಸಕ ಸಂತೋಷ ಲಾಡ್ ಅಭಿಪ್ರಾಯಪಟ್ಟರು.
ಮತದಾರರ ಪರಿಷ್ಕರಣೆಗೆ ಬಿಜೆಪಿ ವಿಶೇಷ ಸಾಫ್ಟ್‌ವೇರ್:
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯವರು ಮತದಾರರ ಪರಿಷ್ಕರಣೆಗಾಗಿಯೇ ಒಂದು ವಿಶೇಷ ಎಐ ಸಾಫ್ಟ್‌ವೇರ್ ಸಿದ್ಧಪಡಿಸಿದ್ದಾರೆ. ಅದು ಕಾಂಗ್ರೆಸ್ ಬೆಂಬಲಿಗರು ಯಾರೆಂದು ಸಾಮಾಜಿಕ ಜಾಲತಾಣಗಳ ಮಾಹಿತಿ ಪಡೆದು ಸಿದ್ಧಪಡಿಸಿ ಕೊಡುತ್ತದೆ. ಅದನ್ನು ನೋಡಿಕೊಂಡು ಯಾರು ಅವರಿಗೆ ಮತ ಹಾಕುವುದಿಲ್ಲವೋ ಅಂತಹವರನ್ನು ಗುರುತಿಸಿ ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗುತ್ತಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಎಲ್ಲ ಶಾಸಕರೂ ಸಚಿವ ಸ್ಥಾನಕ್ಕೆ ಅರ್ಹರಾಗಿದ್ದು, ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂಬುದನ್ನು ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ. ಪಕ್ಷದ ತೀರ್ಮಾನವನ್ನು ಎಲ್ಲರೂ ಗೌರವಿಸಬೇಕು ಎಂದರು.
ರೈತರ ಹೋರಾಟ ಕಾಂಗ್ರೆಸ್ ಗೌರವಿಸುತ್ತೆ:
ಬಿಡದಿ ಟೌನ್‌ಶಿಪ್ ಯೋಜನೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಸರ್ಕಾರ ಯಾವುದೇ ಯೋಜನೆಗೆ ಸಂಬಂಧಿಸಿದಂತೆ ಸಮಗ್ರ ಅಧ್ಯಯನ ನಡೆಸಿ ತೀರ್ಮಾನ ಕೈಗೊಳ್ಳುತ್ತದೆ. ರೈತರ ಹೋರಾಟಗಳಿಗೆ ಕಾಂಗ್ರೆಸ್ ಸರ್ಕಾರ ಗೌರವ ನೀಡುತ್ತದೆ. ರೈತರ ಅಭಿಪ್ರಾಯ ಹಾಗೂ ಸಾಧಕ-ಬಾಧಕ ಸರ್ಕಾರ ಪರಿಗಣಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದರು.


