ಒಳ ಮೀಸಲಾತಿ: ಸಾಮಾಜಿಕ ನ್ಯಾಯಕ್ಕೆ ಸಿಕ್ಕ ಜಯ: ಸಂಸದ ಗೋವಿಂದ ಕಾರಜೋಳ
ಶೋಷಿತ ಸಮುದಾಯಗಳ ನ್ಯಾಯಯುತ ಬೇಡಿಕೆಯನ್ನು ಮಣ್ಣಿಸಿ ಪರಿಶಿಷ್ಟರ ಮೀಸಲಾತಿಯಲ್ಲಿನ ಒಳ ಮೀಸಲಾತಿ ವರ್ಗೀಕರಣಕ್ಕೆ ಅಸ್ತು ಎಂದಿರುವ ಸುಪ್ರೀಂ ಕೋರ್ಟಿನ ತೀರ್ಪನ್ನು ಸ್ವಾಗತಿಸಿರುವ ಮಾಜಿ ಡಿಸಿಎಂ, ಹಾಲಿ ಸಂಸದ ಗೋವಿಂದ ಕಾರಜೋಳ, ಈ ತೀರ್ಪು ಸಾಮಾಜಿಕ ನ್ಯಾಯಕ್ಕೆ ಸಿಕ್ಕ ಜಯ ಎಂದು ಬಣ್ಣಿಸಿದ್ದಾರೆ.
ಹುಬ್ಬಳ್ಳಿ (ಆ.02): ಶೋಷಿತ ಸಮುದಾಯಗಳ ನ್ಯಾಯಯುತ ಬೇಡಿಕೆಯನ್ನು ಮಣ್ಣಿಸಿ ಪರಿಶಿಷ್ಟರ ಮೀಸಲಾತಿಯಲ್ಲಿನ ಒಳ ಮೀಸಲಾತಿ ವರ್ಗೀಕರಣಕ್ಕೆ ಅಸ್ತು ಎಂದಿರುವ ಸುಪ್ರೀಂ ಕೋರ್ಟಿನ ತೀರ್ಪನ್ನು ಸ್ವಾಗತಿಸಿರುವ ಮಾಜಿ ಡಿಸಿಎಂ, ಹಾಲಿ ಸಂಸದ ಗೋವಿಂದ ಕಾರಜೋಳ, ಈ ತೀರ್ಪು ಸಾಮಾಜಿಕ ನ್ಯಾಯಕ್ಕೆ ಸಿಕ್ಕ ಜಯ ಎಂದು ಬಣ್ಣಿಸಿದ್ದಾರೆ. ಕನ್ನಡಪ್ರಭದೊಂದಿಗೆ ಮಾತನಾಡಿದ ಅವರು, ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ನೀಡಿದ ಸಂವಿಧಾನ ಬದ್ಧ ಮೀಸಲಾತಿ ಸೌಲಭ್ಯ ತಮಗೆ ಸಿಗುತ್ತಿಲ್ಲ ಎಂದು ಹಲವು ಶೋಷಿತ ಸಮುದಾಯಗಳು ಕಳೆದ ಮೂರು ದಶಕಗಳಿಂದ ಹೋರಾಟ ಮಾಡುತ್ತ ಬಂದಿದ್ದವು. ಅದೀಗ ಸಾಕಾರವಾಗಿದೆ ಎಂದರು.
ಒಳಮೀಸಲಾತಿಗಾಗಿ ಹೋರಾಟ ಮಾಡುತ್ತ ಪ್ರಮುಖರು ರಾಜ್ಯದಲ್ಲಿ ಅಧಿಕಾರ ನಡೆಸಿದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಎದುರು ತಮ್ಮ ಅಹವಾಲು ಸಲ್ಲಿಸುತ್ತಲೇ ಬಂದಿದ್ದರು. ಆ ಎಲ್ಲರ ಹೋರಾಟಕ್ಕೆ ಸಂದ ಜಯ ಎಂಬಂತೆ ಇಂದು ಸುಪ್ರೀಂ ಕೋರ್ಟಿನ ಏಳು ಜನ ನ್ಯಾಯಮೂರ್ತಿಗಳ ಸಂವಿಧಾನ ಪೀಠದಿಂದ ತೀರ್ಪು ಹೊರ ಬಿದ್ದಿದೆ. ನಿಜಕ್ಕೂ ಶೋಷಿತರ ಹೋರಾಟ ಸಾರ್ಥಕವಾಗಿದೆ ಎಂದರು.
ಇಂಥದೊಂದು ಐತಿಹಾಸಿಕ ತೀರ್ಪು ಬರಲು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪೂರಕ ದಾಖಲೆ, ಶೋಷಿತರು ಎದುರಿಸುತ್ತಿರುವ ನೋವು, ಅಸಹಾಯಕತೆಯನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡುವಲ್ಲಿ ಯಶಸ್ವಿಯಾಗಿದೆ. ತುಳಿತಕ್ಕೆ ಒಳಗಾದ ಈ ಶೋಷಿತ ಸಮುದಾಯಗಳನ್ನು ಮೇಲೆತ್ತಲೇಬೇಕು ಎನ್ನುವ ಮಾನವೀಯ ನೆಲೆಯಲ್ಲಿ ಕಾಳಜಿ ತೋರಿದ ಆರೆಸ್ಸೆಸ್ ಪ್ರಮುಖರು ಕೇಂದ್ರ ಸರ್ಕಾರಕ್ಕೆ ಒತ್ತಾಸೆಯಾಗಿ ನಿಂತಿದ್ದರು ಎನ್ನುವುದನ್ನು ಮರೆಯುವಂತಿಲ್ಲ ಎಂದು ಕಾರಜೋಳ ಸ್ಮರಿಸಿದರು.
ನೈಸ್ ರಸ್ತೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ರಸ್ತೆ ಅಫಘಾತ: ಹೊಸ ರೂಲ್ಸ್ ಜಾರಿ!
ಎಲ್ಲದಕ್ಕೂ ಹೆಚ್ಚಾಗಿ ಕರ್ನಾಟಕದಲ್ಲಿ ಕಳೆದ ಬಾರಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕಾನೂನು ಸಚಿವ ಮಾಧುಸ್ವಾಮಿ ಅವರು ಆಸ್ತೆ ವಹಿಸಿ ಈ ಒಳಮೀಸಲಾತಿ ವರ್ಗೀಕರಣದ ಬಗ್ಗೆ ಸಚಿವ ಸಂಪುಟದ ನಿರ್ಧಾರವನ್ನು ಕೇಂದ್ರ ಸರ್ಕಾರಕ್ಕೆ ತಲುಪಿಸಿದ್ದರು. ಆಂಧ್ರಪ್ರದೇಶ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಒಳಮೀಸಲಾತಿ ಪರವಾಗಿ ಇರುವುದಾಗಿ ಭರವಸೆ ನೀಡಿದ್ದರು. ಅದೀಗ ನ್ಯಾಯಾಲಯದ ತೀರ್ಪಿನ ಮೂಲಕ ಸಾಕಾರವಾಗಿದೆ ಎಂದು ಕಾರಜೋಳ ಹೇಳಿದರು.