ಹಿಂದುಳಿದ ಹಣೆ ಪಟ್ಟಿಹೊತ್ತ ಪ್ರದೇಶಗಳ ಸರ್ವಾಂಗೀಣ ಅಭಿವೃದ್ಧಿ: ಸಚಿವ ಹೆಬ್ಬಾರ್
ಹಲವು ವರ್ಷಗಳಿಂದ ಹಿಂದುಳಿದ ಹಣೆ ಪಟ್ಟಿಹೊತ್ತಿರುವ ಪ್ರದೇಶಗಳ ಸರ್ವಾಂಗೀಣ ಅಭಿವೃದ್ಧಿ ಪಡಿಸುವುದೇ ನಮ್ಮ ಉದ್ದೇಶವಾಗಿದೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು.
ಮುಂಡಗೋಡ (ನ.26) : ಹಲವು ವರ್ಷಗಳಿಂದ ಹಿಂದುಳಿದ ಹಣೆ ಪಟ್ಟಿಹೊತ್ತಿರುವ ಪ್ರದೇಶಗಳ ಸರ್ವಾಂಗೀಣ ಅಭಿವೃದ್ಧಿ ಪಡಿಸುವುದೇ ನಮ್ಮ ಉದ್ದೇಶವಾಗಿದೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು. ತಾಲೂಕಿನ ಮೈನಳ್ಳಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಕೊಠಡಿ ಉದ್ಘಾಟನೆ ಹಾಗೂ ರಸ್ತೆ ನಿರ್ಮಾಣ ಕಾಮಗಾರಿ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಈ ಭಾಗದ ಗೌಳಿ, ಸಿದ್ದಿ ಮುಂತಾದ ಬುಡಕಟ್ಟು ಜನಾಂಗ ಒಂದು ಕಾಲದಲ್ಲಿ ಶಾಲೆಗೆ ಹೋಗುವುದೇ ದೂರದ ಮಾತಾಗಿತ್ತು. ಆದರೆ ಈಗ ಪ್ರತಿಯೊಬ್ಬರು ಕೂಡ ಶಿಕ್ಷಣ ಪಡೆಯುತ್ತಿದ್ದಾರೆ. ಎಲ್ಲ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ಮೇಲುಗೈ ಸಾಧಿಸುವ ಮೂಲಕ ಕ್ರಾಂತಿಕಾರಿ ಬದಲಾವಣೆಯನ್ನು ಗಮನಿಸುತ್ತಿದ್ದೇವೆ ಎಂದರು.
ಮೂಲ ಬಿಜೆಪಿ, ವಲಸೆ ಬಿಜೆಪಿಗ ಎಂಬ ಪ್ರಶ್ನೆ ನನ್ನೆದುರಿಗಿಲ್ಲ: ಸಚಿವ ಹೆಬ್ಬಾರ
ಮಕ್ಕಳಿಗೆ ವಿದ್ಯೆಯೊಂದಿಗೆ ಶಿಸ್ತು ಮತ್ತು ಸಂಸ್ಕಾರವನ್ನು ಕಲಿಸಬೇಕು. ಹಾಗಾದರೆ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಅಗತ್ಯ ಮೂಲಭೂತ ವ್ಯವಸ್ಥೆ ಕಲ್ಪಿಸುವ ಜವಾಬ್ದಾರಿ ನಮ್ಮ ಮೇಲಿದೆ. ಮಕ್ಕಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜು ಹಾಗೂ ಪ್ರಥಮ ದರ್ಜೆ ಕಾಲೇಜು ಮಕ್ಕಳಿಗೆ ಪಠ್ಯ ಪುಸ್ತಕ ವಿತರಿಸಲಾಗುತ್ತಿದೆ.
ವಿದ್ಯಾರ್ಥಿ ಜೀವನ ಬದುಕಿನಲ್ಲಿ ಬಂಗಾರದ ಕ್ಷಣವಿದ್ದಂತೆ. ಈ ಅವಕಾಶ ಮತ್ತೆ ಮತ್ತೆ ಸಿಗುವುದಿಲ್ಲ. ಹಾಗಾಗಿ ವಿದ್ಯಾರ್ಥಿ ಜೀವನದ ವ್ಯರ್ಥ ಮಾಡಿಕೊಳ್ಳದೇ ಒಳ್ಳೆಯ ಶಿಕ್ಷಣ ಪಡೆದು ಉತ್ತಮ ಜೀವನ ರೂಪಿಸಿಕೊಳ್ಳುವಂತೆ ಮಕ್ಕಳಿಗೆ ಕರೆ ನೀಡಿದರು.
ಸುಮಾರು 4 ದಶಕಗಳ ಕಾಲ ಆಳಿದ ಪ್ರಭಾವಿಗಳಿಂದ ರಸ್ತೆ ಅಗಲೀಕರಣ ಮಾಡಲಾಗಲಿಲ್ಲ. ಅಭಿವೃದ್ಧಿ ಬಗ್ಗೆ ಕಾಳಜಿ ತೋರಲಿಲ್ಲ. ಈಗ .28 ಕೋಟಿ ವೆಚ್ಚದಲ್ಲಿ ಮುಂಡಗೋಡ ತಾಲೂಕಿನ ಶಿಡ್ಲಗುಂಡಿ ಮುಂಡಗೋಡ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುತ್ತಿದ್ದು, ಕಾಮಗಾರಿ ಕೂಡ ತ್ವರಿತಗತಿಯಲ್ಲಿ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಪ್ರತಿಯೊಂದು ರಸ್ತೆ ಅಭಿವೃದ್ಧಿ ಪಡಿಸಲಾಗುವುದು ಎಂದರು. ಜಿಪಂ ಮಾಜಿ ಉಪಾಧ್ಯಕ್ಷ ಎಲ್.ಟಿ. ಪಾಟೀಲ ಮಾತನಾಡಿ, ಗೌಳಿ ಹಾಗೂ ಸಿದ್ದಿ ಬುಡಕಟ್ಟು ಜನಾಂಗ ವಾಸಿಸುವ ಪ್ರದೇಶದ ಅಭಿವೃದ್ಧಿಗಾಗಿ ಸರ್ಕಾರ ಸಾಕಷ್ಟುಅನುದಾನ ನೀಡುತ್ತಿದ್ದು, ಸಾಕಷ್ಟುಪ್ರಗತಿ ಸಾಧಿಸಿದೆ ಎಂದರು.
ರೈತರ ಸಮಗ್ರ ಅಭಿವೃದ್ಧಿಗೆ ಸಹಕಾರ: ಸಚಿವ ಶಿವರಾಮ್ ಹೆಬ್ಬಾರ್
ಮಾಜಿ ಜಿಪಂ ಸದಸ್ಯ ರವಿಗೌಡ ಪಾಟೀಲ, ಗ್ರಾಪಂ ಅಧ್ಯಕ್ಷೆ ಸೀತಾ ಎಡಗೆ, ಕ್ಷೇತ್ರ ಶಿಕ್ಷಣಾಧಿಕಾರಿ ಅಕ್ಕಮಹಾದೇವಿ ಗಾಣಿಗೇರ, ದೇವು ಪಾಟೀಲ, ನಾಗಭೂಷಣ ಹಾವಣಗಿ, ಕೆಂಜೋಡಿ ಗಲಬಿ, ಸಿ.ಕೆ. ವಿಜು, ಸಿ.ಕೆ. ಅಶೋಕ ಮುಂತಾದವರು ಉಪಸ್ಥಿತರಿದ್ದರು.