* ಒಂದೇ ದಿನದಲ್ಲಿ 10 ಬ್ಲ್ಯಾಕ್‌ ಫಂಗಸ್‌ ರೋಗಿಗಳು ವಿಮ್ಸ್‌ ಆಸ್ಪತ್ರೆಗೆ ದಾಖಲು* ಶೀಘ್ರದಲ್ಲಿಯೇ ಹೆಚ್ಚಿನ ಇಂಜೆಕ್ಷನ್‌ಗಳು ಬರುವ ನಿರೀಕ್ಷೆ * ವಿಮ್ಸ್‌ನಲ್ಲಿ ಎರಡು ವಾರ್ಡ್‌ ಓಪನ್‌ 

ಬಳ್ಳಾರಿ(ಮೇ.31): ವಿಜಯನಗರ-ಬಳ್ಳಾರಿ ಜಿಲ್ಲೆಯಲ್ಲಿ ಬ್ಲ್ಯಾಕ್‌ ಫಂಗಸ್‌ ಪ್ರಕರಣಗಳು ಮತ್ತಷ್ಟು ಏರಿಕೆ ಕಂಡಿವೆ. ಭಾನುವಾರ ಒಂದೇ ದಿನದಲ್ಲಿ 10 ಬ್ಲ್ಯಾಕ್‌ ಫಂಗಸ್‌ ಲಕ್ಷಣವುಳ್ಳವರು ವಿಮ್ಸ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರಿಂದ ಅವಳಿ ಜಿಲ್ಲೆಯಲ್ಲಿ ಬ್ಲ್ಯಾಕ್‌ ಫಂಗಸ್‌ನಿಂದ ಬಳಲುತ್ತಿರುವವರ ಸಂಖ್ಯೆ 56ಕ್ಕೇರಿದೆ.

ಭಾನುವಾರ ದೃಢಗೊಂಡಿರುವ ಬ್ಲ್ಯಾಕ್‌ ಫಂಗಸ್‌ ಸೋಂಕಿತರ ಪೈಕಿ ಬಳ್ಳಾರಿ ಐದು, ಸಂಡೂರು ಮೂರು, ಹೊಸಪೇಟೆ ಹಾಗೂ ಹಡಗಲಿ ತಾಲೂಕಿನಲ್ಲಿ ತಲಾ ಒಂದು ಪ್ರಕರಣಗಳಿವೆ. ರೋಗಿಗಳಿಗೆ ಚಿಕಿತ್ಸೆಗೆ ಬೇಕಾದ ಇಂಜೆಕ್ಷನ್‌ ಲಭ್ಯವಿಲ್ಲ. ಈ ವರೆಗೆ ಸೋಂಕಿನಿಂದ ಅವಳಿ ಜಿಲ್ಲೆಯಲ್ಲಿ ಏಳು ಜನರು ಮೃತಪಟ್ಟಿದ್ದಾರೆ.

ತಜ್ಞವೈದ್ಯರ ತಂಡ:

ಬ್ಲ್ಯಾಕ್‌ ಫಂಗಸ್‌ ಸೋಂಕಿತರು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿಮ್ಸ್‌ ಹಾಗೂ ಆರೋಗ್ಯ ಇಲಾಖೆ ತಜ್ಞ ವೈದ್ಯರ ಪ್ರತ್ಯೇಕ ತಂಡವನ್ನು ರಚಿಸಿದೆ. ಈ ತಂಡ ಸೋಂಕಿತರ ಮೇಲೆ ವಿಶೇಷ ನಿಗಾ ವಹಿಸಿ, ಅಗತ್ಯ ಚಿಕಿತ್ಸೆಯ ಕಡೆ ಗಮನ ಹರಿಸಲಿದೆ. ರೋಗಿಯ ಆರೋಗ್ಯ ಗಂಭೀರತೆ ತಿಳಿದು 21 ದಿನಗಳ ವರೆಗೆ ಚಿಕಿತ್ಸೆ ನೀಡಲಾಗುತ್ತದೆ. ಸೋಂಕಿತರಿಗೆ ಚಿಕಿತ್ಸೆ ನೀಡುವ ಸಂಬಂಧ ವಿಮ್ಸ್‌ನಲ್ಲಿ ಎರಡು ವಾರ್ಡ್‌ಗಳನ್ನು ತೆರೆಯಲಾಗಿದ್ದು ಪಾಸಿಟಿವ್‌ ಹಾಗೂ ನೆಗೆಟಿವ್‌ ವಾರ್ಡ್‌ಗಳ ಕಾರ್ಯನಿರ್ವಹಿಸಲಿವೆ ಎಂದು ವಿಮ್ಸ್‌ ನಿರ್ದೇಶಕ ಡಾ. ಗಂಗಾಧರಗೌಡ ತಿಳಿಸಿದ್ದಾರೆ.

ಬಳ್ಳಾರಿ: ಕೊರೋನಾ ಗೆದ್ದು ಬಂದ ಶತಾಯುಷಿ ದಂಪತಿ..!

ಬ್ಲ್ಯಾಕ್‌ ಫಂಗಸ್‌ನಿಂದ ದಾಖಲಾಗಿರುವ ರೋಗಿಗಳಿಗೆ ಇಂಜೆಕ್ಷನ್‌ ಕೊರತೆ ಎದುರಾಗಿದ್ದು, ಇದು ರೋಗಿಗಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಫಂಗಸ್‌ ರೋಗಿಗಳ ಸಂಖ್ಯೆಗೆ ತಕ್ಕಂತೆ ಬೇಡಿಕೆಯನ್ನು ಇಡಲಾಗಿದೆಯಾದರೂ ರಾಜ್ಯದಿಂದ ಅಗತ್ಯದಷ್ಟು ಇಂಜೆಕ್ಷನ್‌ಗಳು ಪೂರೈಕೆಯಾಗುತ್ತಿಲ್ಲ. ಸದ್ಯಕ್ಕೆ 40 ಇಂಜೆಕ್ಷನ್‌ಗಳು ಮಾತ್ರ ಬಂದಿವೆ. ಇವು ಯಾವುದಕ್ಕೂ ಸಾಕಾಗುವುದಿಲ್ಲ. ಇದು ಹೊಸ ಕಾಯಿಲೆಯಾಗಿರುವುದರಿಂದ ಕೂಡಲೇ ಪೂರೈಕೆಯೂ ಕಷ್ಟವಾಗಲಿದೆ. ಶೀಘ್ರದಲ್ಲಿಯೇ ಹೆಚ್ಚಿನ ಇಂಜೆಕ್ಷನ್‌ಗಳು ಬರುವ ನಿರೀಕ್ಷೆ ಇಟ್ಟುಕೊಂಡಿದ್ದೇವೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಬ್ಲ್ಯಾಕ್‌ ಫಂಗಸ್‌ ರೋಗಿಗಳಿಗೆ ಚಿಕಿತ್ಸೆ ನೀಡುವ ಸಂಬಂಧ ತಜ್ಞ ವೈದ್ಯರ ತಂಡವಿದೆ. ವೈದ್ಯರು ಹಾಗೂ ಸಿಬ್ಬಂದಿಯ ಸಮಸ್ಯೆಯೇನಿಲ್ಲ. ಆದರೆ, ಪ್ರಮುಖವಾಗಿ ಇಂಜೆಕ್ಷನ್‌ ಕೊರತೆ ಎದುರಾಗಿರುವುದರಿಂದ ನಿಭಾಯಿಸುವುದು ಕಷ್ಟವಾಗುತ್ತಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.