ಲಾಕ್‌ಡೌನ್‌ ಎಫೆಕ್ಟ್‌: ಹೆಚ್ಚಿದ ಅಕ್ರಮ ಮದ್ಯದ ಹಾವಳಿ

* ಕಿರಾಣಿ ಅಂಗಡಿ, ಮನೆಗಳ ಹಿಂಬಾಗಿಲ ಮೂಲಕ ಮದ್ಯ ಮಾರಾಟ
* ಅಬಕಾರಿ ಇನಸ್ಪೆಕ್ಟರ್‌ ಎಸ್‌. ದೀಪಕ್‌ ವರ್ಗಾವಣೆಗೆ ನಾಗರಿಕರ ಆಗ್ರಹ
* ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ
 

Increased Illicit Liquor Due to Lockdown at Mundargi in Gadag grg

ಮುಂಡರಗಿ(ಜೂ.03): ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮೇ 27ರಿಂದ ಮದ್ಯದ ಅಂಗಡಿಗಳು ಬಾಗಿಲು ಮುಚ್ಚಿದ್ದರೂ ಮುಂಡರಗಿ ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲೆಡೆ ಅಕ್ರಮ ಸಾರಾಯಿ ಮಾರಾಟ ಮತ್ತು ಕುಡುಕರ ಹಾವಳಿ ಮಿತಿಮೀರಿದೆ.

ಇಲ್ಲಿನ ಹೆಸರೂರು ರಸ್ತೆ, ಘಟ್ಟಿರಡ್ಡಿಹಾರ ರಸ್ತೆ, ಮುರ್ಲಾಪುರ ರಸ್ತೆ, ಗದಗ ರಸ್ತೆ, ಊರ ಹೊರಗಿರುವ ವಿವಿಧ ಶಾಲಾ ಕೊಠಡಿಗಳು, ಸರ್ಕಾರಿ ಕಚೇರಿ ಕೊಠಡಿಗಳು ಸೇರಿದಂತೆ ಎಲ್ಲೆಂದರಲ್ಲಿ ಕುಡುಕರು ಕುಡಿದು ಬಾಟಲಿ ಹಾಗೂ ಖಾಲಿ ಪ್ಯಾಕೆಟ್‌ಗಳನ್ನು ಎಸೆದಿರುವುದು ಕಂಡು ಬಂದಿದೆ. ಅದು ಅಕ್ರಮ ಸಾರಾಯಿ ಮಾರಾಟದ ಕುರುಹಾಗಿದೆ.

ಇದು ಕೇವಲ ಮುಂಡರಗಿ ಪಟ್ಟಣಕ್ಕೆ ಮಾತ್ರ ಸೀಮಿತವಾಗಿಲ್ಲ. ತಾಲೂಕಿನ ವಿವಿಧ ಗ್ರಾಮಗಳಲ್ಲಿನ ಕಿರಾಣಿ ಅಂಗಡಿ ಹಾಗೂ ಮನೆಗಳ ಹಿಂಬಾಗಿಲ ಮೂಲಕ ಮದ್ಯ ಮಾರಾಟ ಮಾಡುತ್ತಿದ್ದಾರೆ. ದಿನದ 24 ಗಂಟೆಯೂ ಹಳ್ಳಿಗಳಲ್ಲಿ ಸಾರಾಯಿ ಸಿಗುತ್ತಿದೆ. ರಾಜಾರೋಷವಾಗಿ ಮಾರಾಟ ಮಾಡುತ್ತಿದ್ದಾರೆ.

ದೆಹಲಿಗೆ ಹೋಗಿ ಲಾಬಿ ಮಾಡಿದ್ರೆ ಸಿಎಂ ಬದಲಾವಣೆ ಸಾಧ್ಯವಿಲ್ಲ: ಸಿ.ಸಿ.ಪಾಟೀಲ್‌

ಗ್ರಾಪಂಗೆ ಮುತ್ತಿಗೆ:

ಮೇ 28ರಂದು ತಾಲೂಕಿನ ಕದಾಂಪುರದಲ್ಲಿನ ಮಹಿಳೆಯರು ಹಾಗೂ ಕೆಲ ಪುರುಷರು ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ‘ನಮ್ಮ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟವಾಗುತ್ತಿದ್ದು, ನಮ್ಮ ಗಂಡ, ಮಕ್ಕಳು ಎಲ್ಲರೂ ಕುಡಿತಕ್ಕೊಳಗಾಗಿ ಸಾವನ್ನಪ್ಪುತ್ತಿದ್ದಾರೆ. ತಕ್ಷಣವೇ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು’ ಎಂದು ಒತ್ತಾಯಿಸಿ ಗ್ರಾಪಂ ಅಧ್ಯಕ್ಷರಿಗೆ ಮನವಿ ಸಲ್ಲಿಸಿದ್ದಾರೆ. ಆದರೆ ಅಲ್ಲಿನ ಆ ಸಮಸ್ಯೆ ಪರಿಹಾರ ಆಗುವ ಬದಲು ಇನ್ನಷ್ಟು ಹೆಚ್ಚಿದೆಯಂತೆ.

ಅನೇಕ ಕಡೆಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟವಾಗುತ್ತಿರುವ ಬಗ್ಗೆ ಆಗಾಗ ದೂರುಗಳು ಕೇಳಿ ಬರುತ್ತಿವೆಯಾದರೂ ತಾಲೂಕಿನ ಅಬಕಾರಿ ಇನಸ್ಪೆಕ್ಟರ್‌ ಎಸ್‌. ದೀಪಕ್‌ ಮತ್ತು ಇತರರು ಜಾಣ ಕುರುಡುತನ ಪ್ರದರ್ಶನ ಮಾಡುತ್ತಿದ್ದು, ಅವರೇ ಪರೋಕ್ಷವಾಗಿ ಮಾರಾಟಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ. ಆ ಅಕ್ರಮದಲ್ಲಿ ಸ್ವತಃ ಅವರೇ ಭಾಗಿಯಾಗಿದ್ದಾರೆ ಎನ್ನುವ ಆರೋಪ ಬಲವಾಗಿ ಕೇಳಿ ಬರುತ್ತಿದೆ.

ಇದಕ್ಕೆ ಪುಷ್ಟಿ ನೀಡುವಂತೆ ತಾಲೂಕಿನ ಎಲ್ಲೂ ಅಕ್ರಮ ಸಾರಾಯಿ ವಶಪಡಿಸಿಕೊಂಡ, ಆರೋಪಿಗಳನ್ನು ಬಂಧಿಸಿದ ನಿದರ್ಶನಗಳಿಲ್ಲ. ಹಾಗಾಗಿ ಎಸ್‌.ದೀಪಕ್‌ ಅವರು ಬಂದ ಬಳಿಕ ಮುಂಡರಗಿ ತಾಲೂಕಿನಲ್ಲಿ ಅಕ್ರಮ ಸಾರಾಯಿ ದಂಧೆ ಗರಿಗೆದರಿದ್ದು, ಬಡ ಕುಟುಂಬಗಳ ನೆಮ್ಮದಿಗೆ ಕೊಳ್ಳಿ ಇಟ್ಟಿದೆ. ಹಾಗಾಗಿ ತಕ್ಷಣ ದೀಪಕ್‌ ಅವರನ್ನು ವರ್ಗಾವಣೆ ಮಾಡಿ ಬೇರೊಬ್ಬ ದಕ್ಷ ಅಧಿಕಾರಿಯನ್ನು ಮುಂಡರಗಿ ತಾಲೂಕಿಗೆ ತರುವಂತೆ ಸಾರ್ವಜನಿಕರು ಜಿಲ್ಲಾ ಅಬಕಾರಿ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.

ಒಂದು ಕಡೆ ಕೊರೋನಾದಿಂದ ಉದ್ಯೋಗವಿಲ್ಲದೇ ಜನತೆ ತಮ್ಮ ಜೀವನ ನಡೆಸಲು ತೊಂದರೆ ಅನುಭವಿಸುತ್ತಿದ್ದರೆ, ಮತ್ತೊಂದೆಡೆ ಮದ್ಯದ ಅಂಗಡಿಗಳು ಬಾಗಿಲು ಮುಚ್ಚಿದ್ದರೂ ನಮ್ಮವರು ಹೇಗೆ ಕುಡಿದು ಬರುತ್ತಾರೆ ಎನ್ನುವುದು ಆಯಾ ಕುಟುಂಬಗಳ ಪ್ರಶ್ನೆ.

ಜಿಲ್ಲೆಯಲ್ಲಿಯೇ ಮದ್ಯ ಮಾರಾಟ ನಿಲ್ಲಿಸಿದ್ದರೂ ಇಲ್ಲಿನ ಕುಡುಕರಿಗೆ ಮದ್ಯ ಸಿಗುತ್ತದೆಯೆಂದರೆ ಏನರ್ಥ? ತಾಲೂಕಿನಲ್ಲಿ ಮದ್ಯ ಪ್ರಿಯರಿಗೆ ಎಲ್ಲಿ ಮದ್ಯ ದೊರೆಯುತ್ತಿದೆ? ಯಾರಾದರೂ ಇಲಾಖೆಗೆ ಮೋಸ ಮಾಡಿ ಮಾರಾಟ ಮಾಡುತ್ತಿದ್ದಾರೆಯೇ? ಎನ್ನುವ ಕುರಿತು ಪರಿಶೀಲನೆ ನಡೆಯುವುದು ಮತ್ತು ಈ ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಕೊಳ್ಳುವುದು ಅವಶ್ಯವಿದೆ.

ಅನೇಕ ವರ್ಷಗಳಿಂದ ನಮ್ಮ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ತಡೆಯುವಂತೆ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಾ ಬಂದರೂ ಇದುವರೆಗೂ ನಿಂತಿಲ್ಲ. ಕುಡಿತದ ಚಟಕ್ಕೆ ನಿತ್ಯ ಅನೇಕರು ಬಲಿಯಾಗುತ್ತಿದ್ದು, ಮನೆಗಳಲ್ಲಿ ನೆಮ್ಮದಿ ಹಾಳಾಗಿ, ಕಿರಿಯ ವಯಸ್ಸಿನಲ್ಲಿಯೇ ಮಕ್ಕಳು ಕುಡಿದು ಬರುವುದನ್ನು ನೋಡಿ ತಂದೆ ತಾಯಿಯರು ಚಿಂತೆಗೀಡಾಗಿದ್ದಾರೆ. ಆದ್ದರಿಂದ ಗ್ರಾಮಗಳಲ್ಲಿ ಅಕ್ರಮ ಮದ್ಯಮಾರಾಟ ನಿಲ್ಲಬೇಕು ಎಂದು ಕದಾಂಪುರ ಗ್ರಾಮಸ್ಥ ಶಿವಣ್ಣ ಬೀಡನಾಳ ತಿಳಿಸಿದ್ದಾರೆ. 
 

Latest Videos
Follow Us:
Download App:
  • android
  • ios