ನರಗುಂದ(ಜೂ.02): ಸದ್ಯ ಸಿಎಂ ಖುರ್ಚಿ ಖಾಲಿಯಿಲ್ಲ, ಮುಂದಿನ 2 ವರ್ಷ ನಮ್ಮ ನಾಯಕರಾದ ಬಿ.ಎಸ್‌.ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿ ಅಧಿಕಾರ ಮಾಡಲಿದ್ದಾರೆ. ಯಾರೋ ದೆಹಲಿಗೆ ಹೋಗಿ ಲಾಬಿ ಮಾಡಿದರೆ ಸಿಎಂ ಬದಲಾವಣೆ ಸಾಧ್ಯವಿಲ್ಲ, ನಮ್ಮ ಪಕ್ಷದ ಸಚಿವರು ಮತ್ತು ಎಲ್ಲಾ ಶಾಸಕರು ಒಗ್ಗಟ್ಟಾಗಿದ್ದೇವೆ ಎಂದು ಸಣ್ಣ ಕೈಗಾರಿಕೆ ಹಾಗೂ ವಾರ್ತಾ ಇಲಾಖೆ ಸಚಿವ ಸಿ.ಸಿ. ಪಾಟೀಲ್‌ ಹೇಳಿದ್ದಾರೆ. 

ಅವರು ಮಂಗಳವಾರ ಪಟ್ಟಣದ ಬಾಬಾಸಾಹೇಬ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಶಾಸಕರ ಅನುದಾನದ ಅಡಿಯಲ್ಲಿ ಆಸ್ಪತ್ರೆಗೆ 17 ಲಕ್ಷ 50 ರು.ಗಳ ಮೊತ್ತದ 23 ಆಕ್ಸಿಜನ್‌ ಕಾನ್ಸಂಟ್ರೇಟರ್‌ ಹಾಗೂ 137 ಪಲ್ಸ್‌ ಆಕ್ಸಿಮೀಟರ್‌ಗಳನ್ನು ಕೋವಿಡ್‌ ಸೋಕಿತರ ಚಿಕಿತ್ಸೆಗೆ ನೀಡಿ ನಂತರ ಮಾತನಾಡಿದರು.

ಜಿಲ್ಲೆಯಲ್ಲಿ 5 ದಿನ ಬಿಗಿಯಾದ ಲಾಕ್‌ಡೌನ್‌ ಮಾಡಿದ್ದರಿಂದ ಕೊರೋನಾ ಪ್ರಕರಣಗಳು ಕಡಿಮೆಯಾಗುತ್ತಿವೆ. 2ನೇ ಅಲೆ ನಿಯಂತ್ರಣ ಮಾಡಲು ಸರ್ಕಾರ ಹಲವಾರು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದೆ. ಅದೇ ರೀತಿ ನಮ್ಮ ವೈದ್ಯರು, ನರ್ಸ್‌, ಆಶಾ ಕಾರ್ಯಕರ್ತೆಯರು, ಪೊಲೀಸರು, ಪುರಸಭೆ, ತಾಪಂ, ಗ್ರಾಪಂ ಅಧಿಕಾರಿಗಳು ಮತ್ತು ಸಿಬ್ಬಂದಿ ಹಗಲಿರುಳು ಪ್ರಯತ್ನ ಮಾಡಿದ್ದರಿಂದ ಇಂದು ಸ್ವಲ್ಪ ಮಟ್ಟಿಗೆ ಈ ರೋಗ ನಿಯಂತ್ರಣ ಸಾಧ್ಯವಾಗಿದೆ. ನಾನು ನಮ್ಮ ಜಿಲ್ಲಾಡಳಿತ ಅಧಿಕಾರಿಗಳ ಜೊತೆ ಚರ್ಚೆ ಮಾಡಿ 2 ದಿನ ದಿನಸಿ ಮತ್ತು ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿ ಮತ್ತೆ ಜೂ. 3ರಿಂದ 7ರ ವರೆಗೆ ಕಠಿಣ ಲಾಕ್‌ಡೌನ್‌ ಮಾಡಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಕಳೆದ ಕೆಲವು ದಿನಗಳಿಂದ ಕೊರೋನಾಕ್ಕೆ ಹಲವಾರು ಜನ ಬಲಿಯಾಗಿದ್ದು ನೋವು ತಂದಿದೆ ಎಂದರು.

ನರಗುಂದ: 8 ತಿಂಗಳ ಮಗು ಚಿಕಿತ್ಸೆಗೆ 8 ಕಿಮೀ ಚಕ್ಕಡಿಯಲ್ಲೇ ತೆರಳಿದ ದಂಪತಿ!

ದಾನಿಗಳ ಸಹಾಯದಿಂದ ಇನ್ನು 30 ಆಕ್ಸಿಜನ್‌ ಕಾನ್ಸಂಟ್ರೇಟರ್‌ ಆಸ್ಪತ್ರೆಗೆ ಬರಲಿವೆ, ಅದೇ ರೀತಿ ಆಸ್ಪತ್ರೆಯ ಆವರಣದಲ್ಲಿ 390 ಎಲ್‌ಪಿಎಂ ಆಕ್ಸಿಜನ್‌ ಘಟಕದ ಕಾಮಗಾರಿ ನಡೆದಿದೆ, ಈ ಘಟಕದಿಂದ 150 ಜನಕ್ಕೆ ಆಕ್ಸಿಜನ್‌ ನೀಡಲು ಸಾಧ್ಯವಿದೆ. ಜಿಲ್ಲೆಯ ಆಸ್ಪತ್ರೆಯಲ್ಲಿ ಹೊಸದಾಗಿ 250 ಹಾಸಿಗೆಯ ಆಸ್ಪತ್ರೆಯ ನಿರ್ಮಾಣ ಮಾಡಲಾಗುವುದು. ಖನಿಜ ಇಲಾಖೆಯಿಂದ 15 ಲಕ್ಷ ಸಹಾಯಧನ ಕೇಳಲಾಗಿದೆ. ಈ ಇಲಾಖೆ ಅಧಿಕಾರಿಗಳು ಒಪ್ಪಿದ್ದಾರೆ. ಈ ಹಣದಲ್ಲಿ ಆಸ್ಪತ್ರೆಯ ಸಲಕರಣೆಗಳನ್ನು ಖರೀದಿ ಮಾಡಲಾಗುವುದು. ಶಾಸಕರ ಅನುದಾನದಲ್ಲಿ ಇನ್ನು 35 ಲಕ್ಷ ನೀಡಲಾಗುವುದು. ಅದರಲ್ಲಿ ನರಗುಂದ ಆಸ್ಪತ್ರೆಗೆ 20 ಲಕ್ಷ, ಜಿಲ್ಲಾ ಆಸ್ಪತ್ರೆಗೆ 15 ಲಕ್ಷ ಅನುದಾನ ನೀಡಿ ಅಮೂಲ್ಯ ಜೀವಗಳನ್ನು ಉಳಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.

ಪುರಸಭೆ ಅಧ್ಯಕ್ಷೆ ಭಾವನಾ ಪಾಟೀಲ, ಉಪಾಧ್ಯಕ್ಷ ಪ್ರಶಾಂತ ಜೋಶಿ, ಸದಸ್ಯರಾದ ಸುನೀಲ ಕುಷ್ಟಗಿ, ರಾಚನಗೌಡ ಪಾಟೀಲ, ಚಂದ್ರಗೌಡ ಪಾಟೀಲ, ಬಿ.ಬಿ. ಐನಾಪುರ, ಅಜ್ಜಪ್ಪ ಹುಡೇದ, ಚಂದ್ರ ದಂಡಿನ, ಬಸು ಪಾಟೀಲ, ಪವಾಡಪ್ಪ ವಡ್ಡಗೇರಿ, ಮಂಜು ಮೆಣಸಗಿ, ಕಿರಣ ಮುಧೋಳೆ, ಅನಿಲ ಧರಿಯಣ್ಣವರ, ಹುಸೇನಸಾಬ ನವಲೆ, ಡಾ. ಪ್ರವೀಣ ಮೇಟಿ, ಡಾ. ಜಡೇಶ ಭದ್ರಗೌಡ, ಎಂ.ಸಿ. ಹಿರೇಮಠ ಇದ್ದರು.