Asianet Suvarna News Asianet Suvarna News

ಸಾವಯವ ಉತ್ಪಾದನೆಗಳಿಂದ ದೇಶಿಯ ಉದ್ಯೋಗದಲ್ಲಿ ಹೆಚ್ಚಳ

  ಸಾವಯವ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡುವುದರಿಂದ ದೇಶಿಯ ಉದ್ಯೋಗ ಮತ್ತು ರಾಷ್ಟ್ರದ, ಸಮಾಜದ ಆರೋಗ್ಯ ಹೆಚ್ಚುತ್ತದೆ ಎಂದು ಕೊಲ್ಹಾಪುರ ಕನ್ನೇರಿ ಸಿದ್ದಗಿರಿಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು.

Increase in domestic employment from organic production says kadasiddeshwar swamiji at dharwad rav
Author
First Published Jun 29, 2023, 5:58 AM IST

ಧಾರವಾಡ (ಜೂ.29) :  ಸಾವಯವ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡುವುದರಿಂದ ದೇಶಿಯ ಉದ್ಯೋಗ ಮತ್ತು ರಾಷ್ಟ್ರದ, ಸಮಾಜದ ಆರೋಗ್ಯ ಹೆಚ್ಚುತ್ತದೆ ಎಂದು ಕೊಲ್ಹಾಪುರ ಕನ್ನೇರಿ ಸಿದ್ದಗಿರಿಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ನಗರದ ಸರ್ಕಾರಿ ನೌಕರ ಭವನದ ಸಾಂಸ್ಕೃತಿಕ ಸಭಾಭವನದಲ್ಲಿ ಬುಧವಾರ ರಾಜೀವ ದಿಕ್ಷೀತ ವಿಚಾರ ವೇದಿಕೆ ಆಯೋಜಿಸಿದ್ದ ಶೀತಲ ತಂತ್ರಜ್ಞಾನ ಮೂಲಕ ಅಡುಗೆ ಗಾಣದ ಎಣ್ಣೆ ತಯಾರಿಕೆ ಉದ್ಯಮದ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಡಿಕೆಶಿ ನಂಬಿ ನಡೆವ ಸೋಮೆಕಟ್ಟೆ ಕಾಡಸಿದ್ಧೇಶ್ವರ ಮಠದ ವಿಶೇಷತೆಯೇನು?

ಕಲಬರಕೆ ಉತ್ಪನ್ನಗಳನ್ನು ಅದರಲ್ಲೂ ಕಡಿಮೆ ಗುಣಮಟ್ಟದ ಅಡುಗೆ ಎಣ್ಣೆ ಬಳಕೆಯಿಂದಾಗಿ ವಯೋಮಾನದ ತಾರತಮ್ಯವಿಲ್ಲದೆ ಎಲ್ಲರಲ್ಲೂ ಅನಾರೋಗ್ಯ ಕಾಡುತ್ತಿದೆ. ಅದನ್ನು ಗುಣಪಡಿಸಲು ಮತ್ತೇ ಇಂಗ್ಲಿಷ್‌ ಮೆಡಿಸನ್‌ ಬಳಸಲಾಗುತ್ತಿದೆ. ಒಟ್ಟಾರೆ ದೇಶಿಯ ಉತ್ಪನ್ನ, ಔಷಧಿ, ಆಹಾರಗಳನ್ನು ಮರೆತು ಮುನ್ನಡೆದಿರುವುದು ನಮ್ಮ ಹಾಗೂ ನಮ್ಮತನದ ದಿವಾಳಿಗೆ ಸಾಕ್ಷಿ ಆಗುತ್ತಿದೆ ಎಂದು ಶ್ರೀಗಳು ವಿಷಾದಿಸಿದರು.

ಕಳೆದ ಕೆಲವು ವರ್ಷಗಳಿಂದ ಶೀತಲ ತಂತ್ರಜ್ಞಾನ ಮೂಲಕ ಅಡುಗೆ ಗಾಣದ ಎಣ್ಣೆ ಉತ್ಪಾದನೆ ಮಾಡಲಾಗುತ್ತಿದೆ. ಇದಕ್ಕೆ ಹೆಚ್ಚಾಗಿ ಸಾವಯವ ಮೂಲಕ ಬೆಳೆದ ಶೇಂಗಾ, ಕೊಬ್ಬರಿ, ಎಳ್ಳು, ಕುಸುಬೆ, ಸಾಸಿವೆ, ಬದಾಮ ಸೇರಿದಂತೆ ಸ್ಥಳೀಯ ಕೃಷಿ ಉತ್ಪನ್ನಗಳನ್ನು ಬಳಸಲಾಗುತ್ತಿದೆ. ಇದರಿಂದ ನಮ್ಮ ರೈತರಿಗೆ ಆರ್ಥಿಕ ಅನುಕೂಲ ಹಾಗೂ ನಮ್ಮವರಿಗೆ ಉತ್ತಮ ಆರೋಗ್ಯ ಸಾಧ್ಯವಾಗುತ್ತದೆ ಎಂದರು.

ರೈತರಾಗಲಿ, ವ್ಯಾಪಾರಿಗಳಾಗಲಿ ಆಸೆ ಪಡಬೇಕು ಹೊರತು ದುರಾಸೆ ಅಲ್ಲ. ಉತ್ಪನಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ಪ್ರಾಮಾಣಿಕತೆ ಇರಬೇಕು, ಮೋಸವಿರಬಾರದು. ಭಾರತ ಪ್ರತಿಯೊಬ್ಬರಿಗೂ ತಮ್ಮ ಬದುಕು ಸುಂದರಗೊಳಿಸಲು ಅವಕಾಶ ನೀಡಿದೆ. ಸ್ಥಳೀಯ ಉತ್ಪನ್ನ, ಸಂಪ್ರದಾಯ, ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ಅಳವಡಿಸಿಕೊಂಡು ಉಳಿಸಿ, ಬೆಳೆಸಿದರೆ ಮಾತ್ರ ಭಾರತ ಭಾರತವಾಗಿ ಉಳಿಯುತ್ತದೆ ಎಂದು ಶ್ರೀಗಳು ನುಡಿದರು.

ಅಡುಗೆ ಗಾಣದ ಎಣ್ಣೆ ತಯಾರಿಸಲು ಸಾವಯವ ಕೃಷಿ ಮಾಡಲು ಆಸಕ್ತ ರೈತರ ಒಕ್ಕೂಟ ರಚಿಸಬೇಕು. ಒಬ್ಬರೆ ಸಾವಯವ ಆರಂಭಿಸಿದರೂ ಆಸಕ್ತರನ್ನು ಸೇರಿಸಿಕೊಂಡು ಬೆಳೆಸಬೇಕು ಎಂದ ಅವರು, ದೇಶದ ಆರೋಗ್ಯ ರಕ್ಷಣೆ ಜವಾಬ್ದಾರಿ ಗ್ರಾಮೀಣರಲ್ಲಿದೆ. ಕಷ್ಟವಾದರೂ ಇಷ್ಟಪಟ್ಟು ಮಾಡಬೇಕು ಎಂದರು.

ನೌಕರ ಸಂಘದ ಜಿಲ್ಲಾಧ್ಯಕ್ಷ ಎಸ್‌.ಎಫ್‌. ಸಿದ್ದನಗೌಡರ ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳನ್ನು ಸತ್ಕರಿಸಿ, ನೌಕರರು ದೇಶಿಯ ಉತ್ಪನ್ನ ಬಳಕೆ ಬಗ್ಗೆ ಹೆಚ್ಚು ಆಸಕ್ತಿ ವಹಿಸಿದ್ದು, ಸಂಘದ ಆವರಣದಲ್ಲಿ ದೇಶಿಯ ಮತ್ತು ಸಾವಯವ ಆಹಾರ ಉತ್ಪನ್ನಗಳ ಮಾರಾಟಕ್ಕೆ ಪ್ರೋತ್ಸಾಹ ನೀಡುವ ಉದ್ದೇಶವಿದೆ. ಮುಂದಿನ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ, ಗುಣಮಟ್ಟದ ಎಲ್ಲ ರೀತಿಯ ಆಹಾರ ಉತ್ಪನ್ನಗಳನ್ನು ಮಾರಾಟ ಮಾಡುವ ಶಾಶ್ವತ ಮಳಿಗೆ ಸ್ಥಾಪಿಸಲು ಕ್ರಮ ವಹಿಸಲಾಗುವುದು ಎಂದರು.

ಸ್ವಾಮೀಜಿ, ದೇಶಿಯತೆಗೆ ಒತ್ತು ಕೊಟ್ಟು ಜಾಗೃತಿ ಮೂಡಿಸುತ್ತಿದ್ದಾರೆ. ಇದರಿಂದ ಕೃಷಿ, ಕೃಷಿಕರು ಮತ್ತು ಗ್ರಾಮಗಳು ಬಲವರ್ಧನೆ ಆಗಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಯುವ ರೈತನಿಂದ 'ಸಮಗ್ರ ಬೇಸಾಯ' ಪದ್ಧತಿ; ವಾರ್ಷಿಕ ₹9 ಲಕ್ಷ ಆದಾಯ!

ಹಿರಿಯ ಉದ್ಯಮಿ ಹನುಮಂತ ಮಾನೆ ಮಾತನಾಡಿದರು. ಅಡುಗೆ ಗಾಣದ ಎಣ್ಣೆ ಉದ್ಯಮದ ಪ್ರಮುಖರಾದ ಪುರುಷೋತ್ತಮ ಮಾಡಿಕರ ಸ್ವಾಗತಿಸಿದರು. ಸ್ವದೇಶಿ ಉದ್ಯಮಿ ಮಲ್ಲನಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಾನಂದ ಕುಂಬಾರ ನಿರೂಪಿಸಿದರು. ಮುಮ್ಮಿಗಟ್ಟಿಯ ಡಾ. ಬಸವಾನಂದ ಸ್ವಾಮೀಜಿ, ಉದ್ಯಮಿಗಳಾದ ಶ್ರೀಶೈಲ ಬದಾಮಿ, ಮಲ್ಲಿಕಾರ್ಜುನ ಸೊಲಗಿ, ರಾಜಶೇಖರ ಹೊನ್ನಪ್ಪನವರ, ಗಿರೀಶ ಚೌಡಕಿ ಇದ್ದರು. ಕಾರ್ಯಾಗಾರದಲ್ಲಿ ರಾಜ್ಯ ಹಾಗೂ ಹೊರ ರಾಜ್ಯಗಳ ಸುಮಾರು 200 ಜನ ರೈತರು ಭಾಗವಹಿಸಿದ್ದರು. ಶೀತಲ ತಂತ್ರಜ್ಞಾನ ಮೂಲಕ ಅಡುಗೆ ಎಣ್ಣೆ ತಯಾರಿಕಾ ಉದ್ಯಮ ಸ್ಥಾಪಿಸಲು ಅಗತ್ಯವಿರುವ ಆರ್ಥಿಕ ಅನುಕೂಲ, ಬ್ಯಾಂಕ್‌ ಸಾಲ ಸೌಲಭ್ಯ, ಕೃಷಿ ಉತ್ಪನ್ನಗಳು, ಕಚ್ಚಾ ಪದಾರ್ಥಗಳು, ಕಾರ್ಮಿಕರ ಅಗತ್ಯತೆ ಮತ್ತು ಮಾರಾಟ ವ್ಯವಸ್ಥೆ ಕುರಿತು ನುರಿತ ಅನುಭವಿ ಉದ್ಯಮಿಗಳು ವಿಷಯ ಮಂಡಿಸಿದರು.

Latest Videos
Follow Us:
Download App:
  • android
  • ios