ಉತ್ತರಕನ್ನಡ: ಕಾಳ ಸಂತೆಯಲ್ಲಿ ದುಪ್ಪಟ್ಟು ಬೆಲೆಗೆ ಮಾರಾಟ, ಜನಸಾಮಾನ್ಯರಿಗೆ ಲಭ್ಯವಾಗದ ಮರಳು..!
ಉತ್ತರಕನ್ನಡ ಜಿಲ್ಲೆಯಲ್ಲಿ ಉಂಟಾಗಿದೆ ಮರಳಿಗೆ ಭಾರೀ ಪ್ರಮಾಣದ ಅಭಾವ, ನಿಯಮಾನುಸಾರ ಮರಳು ತೆಗೆಯಲು ಅನುಕೂಲ ಮಾಡಿಕೊಡುವಂತೆ ಮರಳು ಗುತ್ತಿಗೆದಾರರ ಒತ್ತಾಯ
ಭರತ್ ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಾರವಾರ
ಉತ್ತರಕನ್ನಡ(ಅ.22): ಕರಾವಳಿ ಭಾಗದಲ್ಲಿ ಸಿ.ಆರ್.ಜೆಡ್ ವಲಯದಲ್ಲಿ ಮರಳನ್ನು ತೆಗೆದು ಮಾರಾಟ ಮಾಡುವಂತಿಲ್ಲ ಎನ್ನುವ ಆದೇಶವನ್ನು ರಾಷ್ಟ್ರೀಯ ಹಸಿರು ಪೀಠ ಆದೇಶ ಮಾಡಿತ್ತು. ಸದ್ಯ ಮರಳುಗಾರಿಕೆ ಬಂದ್ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಅನಧಿಕೃತವಾಗಿ ಮರಳನ್ನು ತೆಗೆದು ಮಾರಾಟ ಮಾಡಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಜತೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಕಾಮಗಾರಿಗಳು ನಡೆಯುತ್ತಿದ್ದು, ಇದಕ್ಕೆ ಮರಳು ಎಲ್ಲಿಂದ ಬರುತ್ತಿದೆ ಎಂದು ಮರಳು ಗುತ್ತಿಗೆದಾರರು ಪ್ರಶ್ನಿಸುತ್ತಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ...
ಹೌದು, ಸಿಆರ್‌ಜೆಡ್ ವಲಯದಲ್ಲಿ ಮರಳುಗಾರಿಕೆಗೆ ಅವಕಾಶ ನೀಡುವುದರಿಂದ ಸ್ಥಳೀಯರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಈ ಮರಳುಗಾರಿಕೆ ಮಾಫಿಯಾವಾಗಿದ್ದು, ಜಲಚರಗಳ ಜೀವನಕ್ಕೆ ಸಮಸ್ಯೆಯಾಗುತ್ತಿದೆ. ಈ ಕಾರಣದಿಂದ ಇಲ್ಲಿ ಮರಳುಗಾರಿಕೆ ಬಂದ್ ಮಾಡುವಂತೆ ರಾಷ್ಟ್ರೀಯ ಹಸಿರು ಪೀಠ ಆದೇಶ ಮಾಡಿತ್ತು. ಸದ್ಯ ಕಳೆದ ಆರು ತಿಂಗಳಿನಿಂದ ಉತ್ತರಕನ್ನಡ ಜಿಲ್ಲೆಯಲ್ಲಿ ಮರಳುಗಾರಿಕೆ ಬಂದ್ ಆಗಿದ್ದು, ಜಿಲ್ಲೆಯಲ್ಲಿ ಮರಳಿನ ಅಭಾವ ಸಹ ಎದುರಾಗಿದೆ. ಇದರ ನಡುವೆ ಸದ್ದಿಲ್ಲದೇ ಅಕ್ರಮವಾಗಿ ಮರಳನ್ನು ಸಾಗಾಟ ಮಾಡುವ ದಂಧೆ ಮಾತ್ರ ಜೋರಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಅದರಲ್ಲೂ ಕಾಳಿ ನದಿಯಲ್ಲಿ ಈ ಹಿಂದೆ ಮರಳನ್ನು ತೆಗೆಯಲು ಅವಕಾಶ ನೀಡಿದಾಗ ಹೆಚ್ಚಿನ ಪ್ರಮಾಣದಲ್ಲಿ ಮರಳನ್ನು ತೆಗೆದು ಈಗ ರಾತ್ರೋ ರಾತ್ರಿ ಕದ್ದು ಗೋವಾಕ್ಕೆ ಸಾಗಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಇತ್ತೀಚೆಗೆ ಗೋವಾ ಗಡಿಯಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿಯೊಂದನ್ನು ಕೂಡ ಕಾರವಾರ ಉಪವಿಭಾಗಾಧಿಕಾರಿ ಹಿಡಿದು ಪ್ರಕರಣ ದಾಖಲಿಸಿದ್ದರು. ಈ ಬೆಳವಣಿಗೆಗಳನ್ನು ಗಮನಿಸಿದಲ್ಲಿ ಜಿಲ್ಲೆಯಲ್ಲಿ ಮರಳುಗಾರಿಕೆಗೆ ಪರವಾನಗಿ ಇಲ್ಲದಿರುವುದರಿಂದಲೇ ಅಕ್ರಮವಾಗಿ ಮರಳು ವಹಿವಾಟು ನಡೆಸಲು ಅವಕಾಶವಾದಂತಾಗಿದ್ದು, ಅಕ್ರಮಕ್ಕೆ ಕಡಿವಾಣ ಹಾಕುವಂತೆ ಮರಳು ಗುತ್ತಿಗೆದಾರರ ಸಂಘಟನೆಗಳು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
'ಪರೀಕ್ಷೆನಾ ಬಡಿಯಾ.. ಪರೀಕ್ಷೆನಾ ಬಡಿಯಾ...' ಅಂದ್ಕೊಂಡು ಹುಡ್ಗಿ ಮಾಡಿದ್ಲು ಖತರ್ನಾಕ್ ಐಡಿಯಾ!
ಇನ್ನು ಜಿಲ್ಲೆಯ ಕಾರವಾರ ತಾಲೂಕಿನ ಕಾಳಿ, ಅಂಕೋಲಾ ತಾಲೂಕಿನ ಗಂಗಾವಳಿ, ಕುಮಟಾ ತಾಲೂಕಿನ ಅಘನಾಶಿನಿ ಹಾಗೂ ಹೊನ್ನಾವರ ತಾಲೂಕಿನ ಶರಾವತಿ ನದಿಯಲ್ಲಿ ಮರಳನ್ನು ತೆಗೆಯಲು ಅವಕಾಶ ನೀಡಲಾಗಿತ್ತು. ಸುಮಾರು 100ಕ್ಕೂ ಅಧಿಕ ಮಂದಿ ಲೀಸ್ ಪಡೆದವರು ಮರಳು ತೆಗೆಯುತ್ತಿದ್ದರು. ಸದ್ಯ ಮರಳುಗಾರಿಕೆ ಬಂದ್ ಆದ ಹಿನ್ನಲೆಯಲ್ಲಿ ಜನರಿಗೆ ಮರಳು ಅವಶ್ಯಕತೆ ಹೆಚ್ಚಾಗಿದೆ.
ಈ ಹಿನ್ನಲೆ ಅನಧಿಕೃತವಾಗಿ ಮರಳನ್ನು ತೆಗೆದು ಸಾಗಾಟ ಮಾಡುವ ಕೃತ್ಯಕ್ಕೆ ಇಳಿದಿದ್ದಾರೆ ಎನ್ನುವ ಆರೋಪ ಸಾರ್ವಜನಿಕರದ್ದು. ಇದರೊಂದಿಗೆ ಜಿಲ್ಲೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ರಸ್ತೆ, ಕಟ್ಟಡ ಕಾಮಗಾರಿಗಳು ನಡೆಯುತ್ತಿದ್ದು, ಇದಕ್ಕೆ ಮರಳು ಎಲ್ಲಿಂದ ಬರುತ್ತದೆ ಅನ್ನೋದು ಕೂಡಾ ಜನರಿಂದ ಎದುರಾಗಿರುವ ಪ್ರಶ್ನೆ. ಕಾಳಸಂತೆಯಲ್ಲಂತೂ ಹೆಚ್ಚಿನ ದರದಲ್ಲಿ ಮರಳು ಮಾರಾಟವಾಗುತ್ತಿದ್ದು, ಇದರಿಂದ ಜನ ಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ನಿಯಮಾನುಸಾರ ಮರಳು ತೆಗೆಯಲು ಅವಕಾಶ ಮಾಡಿಕೊಡಬೇಕು ಎಂದು ಜನರು ಒತ್ತಾಯಿಸಿದ್ದಾರೆ.
ಉತ್ತರಕನ್ನಡ: ಅರಣ್ಯ ಇಲಾಖೆಯ ವಿರುದ್ಧ ಬೃಹತ್ ಪ್ರತಿಭಟನೆ
ಇದಕ್ಕೆ ಪ್ರತಿಕ್ರಯಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕಾನೂನಿನಲ್ಲಿ ಏನು ಅವಕಾಶ ನೀಡಲಾಗಿದೆ ಹಾಗೂ ಸುಪ್ರೀಂಕೋರ್ಟ್ ಯಾವ ಆದೇಶ ನೀಡಿದೆ ಎಂದು ನೋಡಿಕೊಂಡು ಮರಳು ಗುತ್ತಿಗೆದಾರರ ಮನವಿಯ ಕುರಿತು ತೀರ್ಮಾನ ಮಾಡುತ್ತೇವೆ. ಹಸಿರುಪೀಠದ ತಡೆಯಾಜ್ಞೆ ತೆರವಾದಾಗ ಮಾತ್ರ ಹಿಂದಿನ ರೂಪಕ್ಕೆ ಹೋಗಲು ಸಾಧ್ಯ. ಇಲ್ಲದಿದ್ದರೆ ಅವರು ತೀರ್ಪು ನೀಡುವವರೆಗೆ ಕಾಯಬೇಕು. ಎಲ್ಲಾ ವಿಚಾರಗಳನ್ನು ಪರಿಶೀಲಿಸಿ, ಸಭೆ ನಡೆಸಿಕೊಂಡು ಮುಂದೇನು ಮಾಡಬೇಕೆಂದು ನಿರ್ಧರಿಸುತ್ತೇವೆ ಎಂದು ಸಚಿವರು ತಿಳಿಸಿದ್ದಾರೆ.
ಒಟ್ಟಿನಲ್ಲಿ ಜನರು ತಮ್ಮ ಮನೆಗಳ ಕೆಲಸ ಕಾರ್ಯಕ್ಕೆ ಮರಳು ಸಿಗದೇ ಪರದಾಡುತ್ತಿರುವ ನಡುವೆ ಅಕ್ರಮವಾಗಿ ಗೋವಾಕ್ಕೆ ಸಾಗಾಟವಾಗುತ್ತಿರುವುದಲ್ಲದೇ, ಕಾಳ ಸಂತೆಯಲ್ಲಿ ಅತೀ ಹೆಚ್ಚಿನ ದರದಲ್ಲಿ ಮರಳು ಮಾರಾಟವಾಗುತ್ತಿದೆ. ಇದರಿಂದ ಜನ ಸಾಮಾನ್ಯರಿಗೆ ತೀವ್ರ ತೊಂದರೆಯಾಗಿದ್ದು, ಆದಷ್ಟು ಸರ್ಕಾರ ಹಾಗೂ ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಜನರಿಗೆ ಅನುಕೂಲಕರ ಸ್ಥಿತಿ ಒದಗಿಸಬೇಕಿದೆ.