ಹುಣಸೂರಿನ ಸ್ಕೈ ಗೋಲ್ಡ್ ಶೋರೂಂನಲ್ಲಿ ನಡೆದ ಭಾರೀ ದರೋಡೆಯಲ್ಲಿ, ಖದೀಮರು ಕೇವಲ 6 ನಿಮಿಷಗಳಲ್ಲಿ 8 ಕೆಜಿ ಚಿನ್ನವನ್ನು ದೋಚಿದ್ದಾರೆ. ಘಟನೆ ನಡೆದು 10 ದಿನ ಕಳೆದರೂ, ವಿಪಿಎನ್ ಕರೆಗಳಂತಹ ತಂತ್ರಜ್ಞಾನ ಬಳಸಿರುವ ದರೋಡೆಕೋರರ ಸುಳಿವು ಪತ್ತೆಹಚ್ಚಲು ತಡವಾಗುತ್ತಿದೆ.

ಹುಣಸೂರು: ಮೈಸೂರು ಜಿಲ್ಲೆಯ ಹುಣಸೂರು ಬೈಪಾಸ್ ರಸ್ತೆಯಲ್ಲಿರುವ ಸ್ಕೈ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಂನಲ್ಲಿ ನಡೆದ ಭಾರೀ ಚಿನ್ನದಂಗಡಿ ದರೋಡೆ ಪ್ರಕರಣ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದ್ದು, ಘಟನೆ ನಡೆದು 10 ದಿನ ಕಳೆದರೂ ದರೋಡೆಕೋರರ ಸುಳಿವು ಸಿಕ್ಕಿಲ್ಲ. ಕೇವಲ 6 ನಿಮಿಷಗಳಲ್ಲಿ ಸುಮಾರು 8 ಕೆಜಿ ಚಿನ್ನವನ್ನು ದೋಚಿ ಪರಾರಿಯಾದ ಖದೀಮರ ಕರಾಮತ್ತು ಪೊಲೀಸರಿಗೂ ದೊಡ್ಡ ಸವಾಲಾಗಿ ಪರಿಣಮಿಸಿದ್ದಾರೆ.

ಮುಖ ಮುಚ್ಚಿಕೊಳ್ಳದೇ, ರಾಜಾರೋಷವಾಗಿ ಅಂಗಡಿಗೆ ನುಗ್ಗಿದ ದರೋಡೆಕೋರರು, ಯಾವುದೇ ಗಾಬರಿಯಿಲ್ಲದೆ ದರೋಡೆ ನಡೆಸಿರುವ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿವೆ. ಈ ದೃಶ್ಯಗಳು ಪ್ರಕರಣದ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಪ್ರಕರಣ ಭೇದಿಸಲು ಮೈಸೂರು ಜಿಲ್ಲಾ ಪೊಲೀಸರು ಐದು ವಿಶೇಷ ತಂಡಗಳನ್ನು ರಚಿಸಿದ್ದು, ದರೋಡೆಕೋರರಿಗಾಗಿ ಬಿಹಾರ್, ಉತ್ತರಪ್ರದೇಶ, ರಾಜಸ್ಥಾನ ಹಾಗೂ ಆಂಧ್ರಪ್ರದೇಶ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ವ್ಯಾಪಕ ಹುಡುಕಾಟ ನಡೆಸುತ್ತಿದ್ದಾರೆ. ರಾಜ್ಯದಿಂದ ರಾಜ್ಯಕ್ಕೆ ಸುತ್ತಾಡಿದರೂ, ಇದುವರೆಗೆ ಆರೋಪಿಗಳ ನಿಖರ ಸುಳಿವು ಪತ್ತೆಯಾಗಿಲ್ಲ.

ಪೊಲೀಸ್ ತನಿಖೆಯಲ್ಲಿ ದರೋಡೆ ಅತ್ಯಂತ ಪೂರ್ವಯೋಜಿತವಾಗಿದ್ದು ಎಂಬುದು ಬಹಿರಂಗವಾಗಿದೆ. ದರೋಡೆಗೂ ಮುನ್ನ ಮೂರು ದಿನಗಳ ಕಾಲ ಹುಣಸೂರು ನಗರದಲ್ಲೇ ವಾಸ್ತವ್ಯ ಹೂಡಿದ್ದ ಖದೀಮರು, ಪಟ್ಟಣದ ಪ್ರಶಾಂತ ಲಾಡ್ಜ್, ಆರ್ಯ ಲಾಡ್ಜ್ ಹಾಗೂ ಮುರುಳಿ ಲಾಡ್ಜ್‌ಗಳಲ್ಲಿ ಒಂದೊಂದು ದಿನ ತಂಗಿದ್ದರು. ಇಬ್ಬರು ಪ್ರತ್ಯೇಕ ತಂಡಗಳಾಗಿ ವಿಭಜನೆಗೊಂಡು ವಾಸ್ತವ್ಯ ಹೂಡಿದ್ದು, ಪೊಲೀಸರ ಗಮನ ತಪ್ಪಿಸಲು ಈ ತಂತ್ರ ಬಳಸಿದ್ದಾರೆ.

ಇನ್ನೂ ಆತಂಕಕಾರಿ ವಿಷಯವೆಂದರೆ, ದರೋಡೆ ವೇಳೆ ಹಾಗೂ ಮುನ್ನ ವಿಪಿಎನ್ ಕರೆಗಳ ಮೂಲಕ ಪರಸ್ಪರ ಸಂಪರ್ಕ ಸಾಧಿಸಿದ್ದ ಖದೀಮರು, ತಮ್ಮ ಲೊಕೇಶನ್ ಹಾಗೂ ಗುರುತು ಪತ್ತೆಯಾಗದಂತೆ ಅತ್ಯಂತ ಜಾಣ್ಮೆಯಿಂದ ಕಾರ್ಯಾಚರಣೆ ನಡೆಸಿದ್ದಾರೆ. ತಂತ್ರಜ್ಞಾನ ಬಳಕೆಯಲ್ಲಿ ನಿಪುಣರಾಗಿರುವ ಈ ದರೋಡೆಕೋರರು, ಪೊಲೀಸರ ತನಿಖೆಯನ್ನು ಮತ್ತಷ್ಟು ಕಠಿಣಗೊಳಿಸಿದ್ದಾರೆ.

ತನಿಖೆಯ ಪ್ರಕಾರ, ದರೋಡೆಕೋರರು ಸ್ಕೈ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಂನ ಇಂಚಿಂಚು ಮಾಹಿತಿಯನ್ನು ಪೂರ್ವದಲ್ಲೇ ಸಂಗ್ರಹಿಸಿದ್ದರು. ಅಂಗಡಿಯ ಒಳಹೊರಗಿನ ವ್ಯವಸ್ಥೆ, ಕ್ಯಾಮೆರಾ ಅಳವಡಿಕೆ, ಸಿಬ್ಬಂದಿಯ ಚಲನವಲನ ಸೇರಿದಂತೆ ಪ್ರತಿಯೊಂದು ಅಂಶವನ್ನೂ ಸೂಕ್ಷ್ಮವಾಗಿ ಅಧ್ಯಯನ ಮಾಡಿದ ಬಳಿಕವೇ ದರೋಡೆ ನಡೆಸಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.

ಈ ಭಾರೀ ದರೋಡೆ ಪ್ರಕರಣದಿಂದ ಹುಣಸೂರು ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ವ್ಯಾಪಾರಿಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಭದ್ರತಾ ವ್ಯವಸ್ಥೆ ಬಗ್ಗೆ ಗಂಭೀರ ಪ್ರಶ್ನೆಗಳು ಉದ್ಭವಿಸಿವೆ. ಪ್ರಕರಣವನ್ನು ಶೀಘ್ರವಾಗಿ ಭೇದಿಸುವುದಾಗಿ ಪೊಲೀಸರು ಭರವಸೆ ನೀಡಿದರೂ, 10 ದಿನವಾದರೂ ಕಳ್ಳರು ಕೈಗೆ ಸಿಕ್ಕಿಲ್ಲ ಎಂಬುದು ಪೊಲೀಸರ ಕಾರ್ಯಕ್ಷಮತೆ ಕುರಿತು ಟೀಕೆಗೆ ಕಾರಣವಾಗಿದೆ.

ಘಟನೆ ಹಿನ್ನೆಲೆ

ಡಿಸೆಂಬರ್ 28ರ ಭಾನುವಾರ ಮಧ್ಯಾಹ್ನ 12.30ಕ್ಕೆ 2 ಬೈಕ್‌ನಲ್ಲಿ ಆಗಮಿಸಿದ ಐವರು ದರೋಡೆಕೋರರು ಈ ಕೃತ್ಯ ಎಸಗಿದ್ದಾರೆ. ಪ್ರತಿಯೊಬ್ಬರ ಕೈಯಲ್ಲೂ ಗನ್ ಇತ್ತು. ಒಬ್ಬ ಹೆಲ್ಮೆಟ್ ಧರಿಸಿದ್ದರೆ, ಮಿಕ್ಕವರು ಮಳಿಗೆಯೊಳಗೆ ಬಂದ ನಂತರ ಮಾಸ್ಕ್ ಧರಿಸಿದ್ದರು.

ಮಳಿಗೆಯ ವ್ಯವಸ್ಥಾಪಕ ಅಜ್ಗರ್ ಊಟಕ್ಕೆ ತೆರಳಿದ್ದ ವೇಳೆ ಆಗಮಿಸಿದ ದರೋಡೆಕೋರರು, ಮಳಿಗೆಯಲ್ಲಿ ಚಿನ್ನ ಖರೀದಿಸುತ್ತಿದ್ದ ಗ್ರಾಹಕರನ್ನು ಸುಮ್ಮನೆ ಕೂರಲು ತಿಳಿಸಿದರು. ನಂತರ, ಕರ್ತವ್ಯದಲ್ಲಿದ್ದ ಎಲ್ಲಾ 18 ಸಿಬ್ಬಂದಿಗೆ ಹ್ಯಾಂಡ್ಸ್ ಅಪ್ ಮಾಡಿಸಿದ್ದಾರೆ. ದರೋಡೆಕೋರರ ಪೈಕಿ ಇಬ್ಬರು ಚಿನ್ನಾಭರಣಗಳನ್ನು ಬ್ಯಾಗಿನಲ್ಲಿ ತುಂಬಿಸಿದ್ದಾರೆ. ದರೋಡೆಕೋರರು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತನಾಡುತ್ತಿದ್ದರು. ಕ್ಷಣಮಾತ್ರದಲ್ಲಿ ಚಿನ್ನಾಭರಣಗಳನ್ನು ತುಂಬಿಕೊಂಡ ದರೋಡೆಕೋರರು ಮಳಿಗೆಯಿಂದ ತೆರಳಿದ್ದಾರೆ. ತೆರಳುವಾಗ ಒಬ್ಬ ಗಾಳಿಯಲ್ಲಿ ಒಂದು ಗುಂಡು ಹಾರಿಸಿದ್ದಾನೆ. ಎರಡೂ ಬೈಕುಗಳು ಮೈಸೂರು ರಸ್ತೆ ಕಡೆ ತೆರಳಿದವು ಎನ್ನಲಾಗಿದೆ.

ಬಸ್ ನಿಲ್ದಾಣದ ಮುಂಭಾಗವೇ ದರೋಡೆ:

ಮೈಸೂರು-ಮಡಿಕೇರಿಯ ಹೆದ್ದಾರಿ ಬೈಪಾಸ್ ಇದಾಗಿದ್ದು, ಬೈಪಾಸ್ ರಸ್ತೆಯ ಮೂಲಕ ಬಸ್‌ ನಿಲ್ದಾಣ ಪ್ರವೇಶಿಸುವ ಮುಖ್ಯದ್ವಾರದ ಬಳಿಯೇ ಮಳಿಗೆ ಇದೆ. ತಿಂಗಳ ಕೊನೆಯ ಭಾನುವಾರ ಹುಣಸೂರು ದಿನಸಿ ಅಂಗಡಿಗಳು ಬಂದ್ ಆಗಿರುತ್ತವೆ. ಜನ ಓಡಾಟವೂ ಕಡಿಮೆ ಇತ್ತು. ಬೈಪಾಸ್ ರಸ್ತೆಯಲ್ಲಿ ವಾಹನ ಸಂಚಾರ ಕಡಿಮೆಯಿತ್ತು. ಈ ಎಲ್ಲಾ ವಿಷಯಗಳನ್ನು ಗಮನಿಸಿರುವ ದರೋಡೆಕೋರರು, ಸಂಚು ರೂಪಿಸಿ ಕೃತ್ಯ ಎಸಗಿದ್ದಾರೆ ಎನ್ನಲಾಗುತ್ತಿದೆ. ಪ್ರಕರಣದ ತನಿಖೆ ನಡೆಸಲಾಗುತ್ತಿದ್ದು, ದರೋಡೆಕೋರರ ಪತ್ತೆಗಾಗಿ 5 ತಂಡಗಳನ್ನು ರಚಿಸಲಾಗಿದೆ ಎಂದು ಡಿಐಜಿ ಡಾ.ಎಂ.ಬಿ.ಬೋರಲಿಂಗಯ್ಯ ತಿಳಿಸಿದ್ದಾರೆ.