ಮೈಸೂರು(ನ.20): ಎಪ್ಪತ್ತರ ದಶಕದಲ್ಲಿ ರಾಜ್ಯದಲ್ಲಿ ಎರಡು ಬಾರಿ ಅಧಿಕಾರದ ಚುಕ್ಕಾಣಿ ಹಿಡಿದು, ಶೋಷಿತರ ಧ್ವನಿಯಾಗಿ ‘ಪರಿವರ್ತನೆಯ ಹರಿಕಾರ’ ಎನಿಸಿಕೊಂಡಿದ್ದ ಡಿ. ದೇವರಾಜ ಅರಸರ ಕರ್ಮಭೂಮಿ ಹುಣಸೂರು ಕ್ಷೇತದಲ್ಲಿ ನಾಲ್ಕನೇ ಬಾರಿಗೆ ಉಪಚುನಾವಣೆ ನಡೆಯುತ್ತಿದೆ.

1952ರಲ್ಲಿ ಕಾಂಗ್ರೆಸ್‌ನ ಡಿ. ದೇವರಾಜ ಅರಸು ಪಕ್ಷೇತರರಾದ ಬಿ.ಎಲ್‌. ಮರೀಗೌಡರನ್ನು ಸೋಲಿಸಿ, ಆಯ್ಕೆಯಾದರು. ಪಕ್ಷೇತರರಾದ ಎಚ್‌.ಟಿ. ತಿಮ್ಮಯ್ಯ, ಎಸ್‌. ಕುಂಟಯ್ಯ, ಕೆಎಂಪಿಪಿಯ ಎಂ. ಚಂದ್ರಶೇಖರಯ್ಯ, ಭಾರತೀಯ ಜನಸಂಘದ ಪಿ.ಎನ್‌. ರಾಮರಾವ್‌ ಕಣದಲ್ಲಿದ್ದರು.

ಜಿಟಿಡಿ ಭೇಟಿಯಾಗಿ ಬೆಂಬಲ ಕೋರಿದ ವಿಶ್ವನಾಥ್‌

ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಗುಂಡ್ಲುಪೇಟೆ ಕ್ಷೇತ್ರಕ್ಕೆ ಸೇರಿದ್ದ ಹೆಗ್ಗಡದೇವನ ಕೋಟೆಯನ್ನು ಸೇರಿಸಿದ್ದರಿಂದ 1957 ರಲ್ಲಿ ಹುಣಸೂರು ದ್ವಿಸದಸ್ಯ ಕ್ಷೇತ್ರವಾಯಿತು. ಕಾಂಗ್ರೆಸ್‌ನ ಡಿ. ದೇವರಾಜ ಅರಸು, ಎನ್‌. ರಾಚಯ್ಯ ಆಯ್ಕೆಯಾದರು. ಪಕ್ಷೇತರರಾದ ಕೆ. ಲಿಂಗಪ್ಪ, ಎಸ್‌. ಕುಂಟಯ್ಯ ಪೈಪೋಟಿ ನೀಡಿದ್ದರು. ಪಿಎಸ್ಪಿಯ ಆರ್‌. ಪೀರಣ್ಣ, ಭಾರತೀಯ ಜನಸಂಘದ ಬಿ.ವಿ. ರಾಮರಾವ್‌ ಸಿಂಧೆ ಕಣದಲ್ಲಿದ್ದರು. 1962 ರಲ್ಲಿ ಮತ್ತೆ ಏಕಸದಸ್ಯ ಕ್ಷೇತ್ರವಾದಾಗ ಡಿ. ದೇವರಾಜ ಅರಸು ಅವಿರೋಧವಾಗಿ ಆಯ್ಕೆಯಾದರು.

'ಸಿದ್ದು ಸಿಎಂ ಆದಾಗ ಉತ್ತರ ಕರ್ನಾಟಕದ ಕುರಿಗಳೆಲ್ಲಾ ಬ್ಯಾ ಅಂತ ಕುಣಿದವು'..!

1967 ರಲ್ಲಿ ಡಿ. ದೇವರಾಜ ಅರಸು ಅವರು ಪಕ್ಷೇತರಾದ ತಿಮ್ಮಪ್ಪ ಅವರನ್ನು ಸೋಲಿಸಿ, ಆಯ್ಕೆಯಾದರು. 1972ರ ಸಾರ್ವತ್ರಿಕ ಚುನಾವಣೆಯಲ್ಲಿ ಡಿ. ದೇವರಾಜ ಅರಸರು ಸ್ಪರ್ಧಿಸಿರಲಿಲ್ಲ. ಕೆಪಿಸಿಸಿ ಅಧ್ಯಕ್ಷರಾಗಿ ರಾಜ್ಯಾದ್ಯಂತ ಪ್ರಚಾರ ಮಾಡಬೇಕಿದ್ದು ಇದಕ್ಕೆ ಕಾರಣ. ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಡಿ. ಕರಿಯಪ್ಪಗೌಡರು ಸಂಸ್ಥಾ ಕಾಂಗ್ರೆಸ್‌ನ ಎಚ್‌. ಹೊಂಬೇಗೌಡರನ್ನು ಸೋಲಿಸಿ, ಆಯ್ಕೆಯಾದರು. ಆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದು ಅರಸರು ಮುಖ್ಯಮಂತ್ರಿಯಾದರು. ಕರಿಯಪ್ಪಗೌಡರು ಅರಸರಿಗೆ ಸ್ಥಾನ ತೆರವು ಮಾಡಿ, ವಿಧಾನ ಪರಿಷತ್‌ ಸದಸ್ಯರಾದರು. ಅರಸರು ಉಪ ಚುನಾವಣೆಯಲ್ಲಿ ಪಕ್ಷೇತರರಾದ ರಂಗಸ್ವಾಮಿ ಅವರನ್ನು ಸೋಲಿಸಿ, ಆಯ್ಕೆಯಾದರು.

ಹುಣಸೂರು: ಉಪಸಮರದ ತ್ರಿಕೋನ ಸ್ಪರ್ಧೆಗೆ ವೇದಿಕೆ ಸಜ್ಜು

1978 ರಲ್ಲಿ ಇಂದಿರಾ ಕಾಂಗ್ರೆಸ್‌ನ ಡಿ. ದೇವರಾಜ ಅರಸರು ಜನತಾಪಕ್ಷದ ಎಚ್‌.ಎಲ್‌. ತಿಮ್ಮೇಗೌಡರನ್ನು ಸೋಲಿಸಿ, ಆಯ್ಕೆಯಾದರು. ಎರಡನೇ ಬಾರಿ ಸಿಎಂ ಆದರು. ಎಸ್‌. ಚಿಕ್ಕಮಾದು ಪಕ್ಷೇತರರಾಗಿದ್ದರು. 1983 ರಲ್ಲಿ ಜನತಾಪಕ್ಷದ ಚಂದ್ರಪ್ರಭ ಅರಸು ಅವರು ಕಾಂಗ್ರೆಸ್‌ನ ಎಚ್‌.ಎನ್‌. ಪ್ರೇಮಕುಮಾರ್‌ ಅವರನ್ನು ಸೋಲಿಸಿ, ಆಯ್ಕೆಯಾದರು. ಚಿಕ್ಕಮಾದು ಮತ್ತೆ ಪಕ್ಷೇತರರಾಗಿದ್ದರು. 1985 ರಲ್ಲಿ ಜನತಾಪಕ್ಷದ ಎಚ್‌.ಎಲ್‌. ತಿಮ್ಮೇಗೌಡರು ಕಾಂಗ್ರೆಸ್‌ನ ಚಂದ್ರಪ್ರಭ ಅರಸರನ್ನು ಸೋಲಿಸಿ, ಆಯ್ಕೆಯಾದರು. 1989 ರಲ್ಲಿ ಕಾಂಗ್ರೆಸ್‌ನ ಚಂದ್ರಪ್ರಭ ಅರಸು ಅವರು ಜನತಾದಳದ ಡಿ. ಕರಿಯಪ್ಪಗೌಡ, ಸಜಪದ ಎಚ್‌.ಎಲ್‌. ತಿಮ್ಮೇಗೌಡರನ್ನು ಸೋಲಿಸಿ, ಆಯ್ಕೆಯಾದರು. ಚಂದ್ರಪ್ರಭ ಅವರು ಲೋಕಸಭೆಗೆ ಆಯ್ಕೆಯಾಗಿದ್ದರಿಂದ 1991 ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಸ್‌. ಚಿಕ್ಕಮಾದು ಅವರು ಬಿಜೆಪಿಯ ಸಿ.ಎಚ್‌. ವಿಜಯಶಂಕರ್‌ ಅವರನ್ನು ಸೋಲಿಸಿದರು.

ಸರ್ಕಾರಿ ಬಸ್‌ನಲ್ಲಿ ಉಚಿತ ಕುಡಿಯುವ ನೀರು

1994 ರಲ್ಲಿ ಬಿಜೆಪಿಯ ಸಿ.ಎಚ್‌. ವಿಜಯಶಂಕರ್‌ ಜನತಾದಳದ ವಿ. ಪಾಪಣ್ಣ ಅವರನ್ನು ಸೋಲಿಸಿ, ಆಯ್ಕೆಯಾದರು. ವಿಜಯಶಂಕರ್‌ ಲೋಕಸಭೆಗೆ ಆಯ್ಕೆಯಾಗಿದ್ದರಿಂದ 1998ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಜನತಾದಳದ ಜಿ.ಟಿ. ದೇವೇಗೌಡರು ಬಂಡಾಯ ಅಭ್ಯರ್ಥಿ ವಿ. ಪಾಪಣ್ಣ ಅವರನ್ನು ಸೋಲಿಸಿ, ಆಯ್ಕೆಯಾದರು. 1999ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ವಿ. ಪಾಪಣ್ಣ ಜನತಾದಳದ ಜಿ.ಟಿ. ದೇವೇಗೌಡರನ್ನು ಸೋಲಿಸಿ, ಆಯ್ಕೆಯಾದರು. 2004 ರಲ್ಲಿ ಜೆಡಿಎಸ್‌ನ ಜಿ.ಟಿ. ದೇವೇಗೌಡರು ಕಾಂಗ್ರೆಸ್‌ನ ಎಸ್‌. ಚಿಕ್ಕಮಾದು ಅವರನ್ನು ಸೋಲಿಸಿ, ಆಯ್ಕೆಯಾದರು. 2008 ರಲ್ಲಿ ಕಾಂಗ್ರೆಸ್‌ನ ಎಚ್‌.ಪಿ. ಮಂಜುನಾಥ್‌ ಜನತಾದಳದ ಎಸ್‌. ಚಿಕ್ಕಮಾದು ಹಾಗೂ ಬಿಜೆಪಿಯ ಜಿ.ಟಿ. ದೇವೇಗೌಡರನ್ನು ಸೋಲಿಸಿ, ಆಯ್ಕೆಯಾದರು. 2013 ರಲ್ಲಿ ಎಚ್‌.ಪಿ. ಮಂಜುನಾಥ್‌ ಪುನಾರಾಯ್ಕೆಯಾದರು. ಜೆಡಿಎಸ್‌ನಿಂದ ಕುಮಾರಸ್ವಾಮಿ, ಕೆಜೆಪಿಯಿಂದ ಡಿ. ದೇವರಾಜ ಅರಸರ ಮೊಮ್ಮಗ ಹಾಗೂ ಚಂದ್ರಪ್ರಭ ಅವರ ಪುತ್ರ ಮಂಜುನಾಥ ಅರಸು, ಬಿಜೆಪಿಯಿಂದ ಅಣ್ಣಯ್ಯನಾಯಕ್‌ ಕಣದಲ್ಲಿದ್ದರು.

ಶೃಂಗೇರಿ: ಸಂಕಷ್ಟ ನಿವಾರಣೆಗೆ ಗೋದಾನ ಮಾಡಿದ ಡಿಕೆಶಿ

2018ರ ಚುನಾವಣೆಯಲ್ಲಿ ಜೆಡಿಎಸ್‌ನ ಎಚ್‌. ವಿಶ್ವನಾಥ್‌ ಆಯ್ಕೆಯಾದರು. ಕಾಂಗ್ರೆಸ್‌ನ ಎಚ್‌.ಪಿ. ಮಂಜುನಾಥ್‌ ಸೋತು, ಹ್ಯಾಟ್ರಿಕ್‌ ಗೆಲವು ತಪ್ಪಿಸಿಕೊಂಡರು. ಬಿಜೆಪಿಯಿಂದ ಜಿಪಂ ಮಾಜಿ ಸದಸ್ಯ ಜೆ.ಎಸ್‌. ರಮೇಶ್‌ಕುಮಾರ್‌ ಕಣದಲ್ಲಿದ್ದರು.

ಚಂದ್ರಪ್ರಭ ಅರಸು ಹಾಗೂ ಜಿ.ಟಿ. ದೇವೇಗೌಡರು ಮಂತ್ರಿಗಳಾಗಿ ಕೆಲಸ ಮಾಡಿದ್ದಾರೆ. ವಿಜಯಶಂಕರ್‌ ವಿಧಾನ ಪರಿಷತ್‌ ಸದಸ್ಯರಾಗಿದ್ದಾಗ ಮಂತ್ರಿಯಾಗಿದ್ದರು

 

 

ಸ್ವಾರಸ್ಯಗಳು

  • - ಈ ಕ್ಷೇತ್ರ ಮೊದಲ ಚುನಾವಣೆಯಿಂದಲೂ ಅಸ್ತಿತ್ವದಲ್ಲಿದೆ. ಮೊದಲು ಏಕಸದಸ್ಯ, ಎರಡನೇ ಚುನಾವಣೆಯಲ್ಲಿ ಮಾತ್ರ ದ್ವಿಸದಸ್ಯ ಕ್ಷೇತ್ರವಾಗಿತ್ತು. ಅರಸು ಅವರು 1952 ರಿಂದ 1978 ರವರೆಗೆ ಆರು ಬಾರಿ ಆಯ್ಕೆಯಾಗಿದ್ದರು. ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರು.
  • - ದ್ವಿಸದಸ್ಯ ಕ್ಷೇತ್ರವಾಗಿದ್ದಾಗ ಅರಸು ಅವರೊಂದಿಗೆ ಆಯ್ಕೆಯಾಗಿದ್ದ ಎನ್‌. ರಾಚಯ್ಯ ಅದಕ್ಕೂ ಮೊದಲು ಲೋಕಸಭೆಗೆ ಆಯ್ಕೆಯಾಗಿದ್ದರು. ನಂತರ ವಿಧಾನಸಭೆ ಚುನಾವಣೆಯಲ್ಲಿ ಸೋತು, ವಿಧಾನ ಪರಿಷತ್‌ ಸದಸ್ಯರಾಗಿದ್ದರು. ಎರಡು ಬಾರಿ ಸಚಿವರಾಗಿದ್ದರು.
  • - ಅರಸು ಅವರ ಪುತ್ರಿ ಚಂದ್ರಪ್ರಭ ಅರಸು ಅವರು ಎರಡು ಬಾರಿ ಆಯ್ಕೆಯಾಗಿ, ರಾಮಕೃಷ್ಣ ಹೆಗಡೆ ಸಂಪುಟದಲ್ಲಿ ಸಚಿವರಾಗಿದ್ದರು. 1991 ರಲ್ಲಿ ಮೈಸೂರಿನಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ಆಗ ನಡೆದ ಉಪ ಚುನಾವಣೆಯಲ್ಲಿ ಎಸ್‌. ಚಿಕ್ಕಮಾದು ಆಯ್ಕೆಯಾಗಿದ್ದರು.
  • - ಅರಸು ಅವರ ಮತ್ತೊರ್ವ ಪುತ್ರಿ ಭಾರತಿ ಅರಸು 1998ರ ಉಪ ಚುನಾವಣೆಯಲ್ಲಿ ಲೋಕಶಕ್ತಿ- ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಸೋತರು. ಅರಸು ಅವರ ಮೊಮ್ಮಗ ಮಂಜುನಾಥ ಅರಸು 2013 ರಲ್ಲಿ ಕೆಜೆಪಿ ಅಭ್ಯರ್ಥಿಯಾಗಿ ಸೋತರು.
  • -1991ರ ಉಪ ಚುನಾವಣೆಯಲ್ಲಿ ಸೋತು, 1994 ರಲ್ಲಿ ಈ ಕ್ಷೇತ್ರದಿಂದ ಆಯ್ಕೆಯಾಗಿದ್ದ ಸಿ.ಎಚ್‌. ವಿಜಯಶಂಕರ್‌ 1998 ಹಾಗೂ 2004 ರಲ್ಲಿ ಮೈಸೂರಿನಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. 1998 ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಜನತಾದಳದ ಜಿ.ಟಿ. ದೇವೇಗೌಡ ಆಯ್ಕೆಯಾಗಿದ್ದರು.
  • - ಎಸ್‌. ಚಿಕ್ಕಮಾದು ನಂತರ ವಿಧಾನ ಪರಿಷತ್‌ ಸದಸ್ಯರಾದರೇ, ವಿಜಯಶಂಕರ್‌ ಕೂಡ ವಿಧಾನ ಪರಿಷತ್‌ ಸದಸ್ಯರಾಗಿ ಬಿ.ಎಸ್‌. ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದರು.
  • - ಈ ಹಿಂದೆ ಹುಣಸೂರು ಪ್ರತಿನಿಧಿಸಿದ್ದ ಎಸ್‌. ಚಿಕ್ಕಮಾದು 2013 ರಲ್ಲಿ ಎಚ್‌.ಡಿ. ಕೋಟೆ ಆಯ್ಕೆಯಾಗಿದ್ದರು. ಜಿ.ಟಿ. ದೇವೇಗೌಡ ಚಾಮುಂಡೇಶ್ವರಿಯಿಂದ 2013 ಹಾಗೂ 2018 ರಲ್ಲಿ ಆಯ್ಕೆಯಾಗಿದ್ದಾರೆ.
  • - ಈ ಕ್ಷೇತ್ರದಲ್ಲಿ 11 ಬಾರಿ ಕಾಂಗ್ರೆಸ್‌, ಐದು ಬಾರಿ ಜನತಾ ಪರಿವಾರ, ಎರಡು ಬಾರಿ ಬಿಜೆಪಿ ಗೆದ್ದಿದೆ.
  • - ಈ ಕ್ಷೇತ್ರದಲ್ಲಿ 1983 ಹಾಗೂ 1998ರ ಉಪ ಚುನಾವಣೆಯಲ್ಲಿ ಎಚ್‌.ಎನ್‌. ಪ್ರೇಮಕುಮಾರ್‌ ಸೋತಿದ್ದರು. ಆದರೆ ಪುತ್ರ ಎಚ್‌.ಪಿ. ಮಂಜುನಾಥ್‌ ಸತತ ಎರಡು ಬಾರಿ ಆಯ್ಕೆಯಾಗಿದ್ದಾರೆ.
  • - ಹಿಂದಿನ ಮೂರು ಉಪ ಚುನಾವಣೆಗಳು ಕ್ರಮವಾಗಿ ಅರಸರಿಗೆ ಅವಕಾಶ ಮಾಡಿಕೊಡಲು ಡಿ. ಕರಿಯಪ್ಪಗೌಡರ ರಾಜೀನಾಮೆ, ಲೋಕಸಭೆಗೆ ಆಯ್ಕೆಯಾಗಿದ್ದರಿಂದ ಚಂದ್ರಪ್ರಭ ಅರಸು, ಸಿ.ಎಚ್‌. ವಿಜಯಶಂಕರ್‌ ಅವರ ರಾಜೀನಾಮೆಯಿಂದ ನಡೆದಿದ್ದರೆ ನಾಲ್ಕನೇ ಉಪ ಚುನಾವಣೆಯು ಎಚ್‌. ವಿಶ್ವನಾಥ್‌ ಅವರ ಶಾಸಕತ್ವದ ಅನರ್ಹತೆಯಿಂದಾಗಿ ನಡೆಯುತ್ತಿರುವುದು ವಿಶೇಷ.

ಈವರೆಗೆ ಗೆದ್ದವರು

ಡಿ. ದೇವರಾಜ ಅರಸು, ಎನ್‌. ರಾಚಯ್ಯ, ಡಿ. ಕರಿಯಪ್ಪಗೌಡ, ಚಂದ್ರಪ್ರಭ ಅರಸು, ಡಾ.ಎಚ್‌.ಎಲ್‌. ತಿಮ್ಮೇಗೌಡ, ಎಸ್‌. ಚಿಕ್ಕಮಾದು, ಸಿ.ಎಚ್‌. ವಿಜಯಶಂಕರ್‌, ಜಿ.ಟಿ. ದೇವೇಗೌಡ. ವಿ. ಪಾಪಣ್ಣ, ಎಚ್‌.ಪಿ. ಮಂಜುನಾಥ್‌, ಎಚ್‌. ವಿಶ್ವನಾಥ್‌

1952- ಡಿ. ದೇವರಾಜ ಅರಸು (ಕಾಂಗ್ರೆಸ್‌), 1957- (ದ್ವಿಸದಸ್ಯ ಕ್ಷೇತ್ರ)- ಡಿ. ದೇವರಾಜ ಅರಸು, ಎನ್‌. ರಾಚಯ್ಯ (ಇಬ್ಬರೂ ಕಾಂಗ್ರೆಸ್‌), 1962- ಡಿ. ದೇವರಾಜ ಅರಸು (ಕಾಂಗ್ರೆಸ್‌- ಅವಿರೋಧ ಆಯ್ಕೆ), 1967- ಡಿ. ದೇವರಾಜ ಅರಸು (ಕಾಂಗ್ರೆಸ್‌), 1972- ಡಿ. ಕರಿಯಪ್ಪಗೌಡ (ಕಾಂಗ್ರೆಸ್‌), 1972- (ಉಪ ಚುನಾವಣೆ)- ಡಿ. ದೇವರಾಜ ಅರಸು (ಕಾಂಗ್ರೆಸ್‌), 1978- ಡಿ. ದೇವರಾಜ ಅರಸು (ಇಂದಿರಾ ಕಾಂಗ್ರೆಸ್‌), 1983- ಚಂದ್ರಪ್ರಭ ಅರಸು (ಜನತಾಪಕ್ಷ), 1985- ಡಾ.ಎಚ್‌.ಎಲ್‌. ತಿಮ್ಮೇಗೌಡ (ಜನತಾಪಕ್ಷ), 1989- ಚಂದ್ರಪ್ರಭ ಅರಸು (ಕಾಂಗ್ರೆಸ್‌), 1991- (ಉಪ ಚುನಾವಣೆ)- ಎಸ್‌. ಚಿಕ್ಕಮಾದು (ಕಾಂಗ್ರೆಸ್‌), 1994- ಸಿ.ಎಚ್‌. ವಿಜಯಶಂಕರ್‌ (ಬಿಜೆಪಿ), 1998- (ಉಪ ಚುನಾವಣೆ)- ಜಿ.ಟಿ. ದೇವೇಗೌಡ (ಜನತಾದಳ), 1999- ವಿ. ಪಾಪಣ್ಣ (ಬಿಜೆಪಿ), 2004- ಜಿ.ಟಿ. ದೇವೇಗೌಡ (ಜೆಡಿಎಸ್‌), 2008- ಎಚ್‌.ಪಿ. ಮಂಜುನಾಥ್‌ (ಕಾಂಗ್ರೆಸ್‌), 2013- ಎಚ್‌.ಪಿ. ಮಂಜುನಾಥ್‌ (ಕಾಂಗ್ರೆಸ್‌), 2018- ಎಚ್‌. ವಿಶ್ವನಾಥ್‌ (ಜೆಡಿಎಸ್‌).

-ಅಂಶಿ ಪ್ರಸನ್ನಕುಮಾರ್‌