ಕೊಡಗಿನ ಪಾನೀಯವಾದ 'ಭತ್ತದ ಸಾರಾಯಿ' ಈಗ 'ಹುಲಿ ರೈಸ್ ಮಾಲ್ಟ್ ವಿಸ್ಕಿ' ಎಂಬ ಪ್ರೀಮಿಯಂ ರೂಪದಲ್ಲಿ ಮಾರುಕಟ್ಟೆಗೆ ಬಂದಿದೆ. ಅರುಣ್ ಅರಸ್ ಅವರು 100% ಮಾಲ್ಟೆಡ್ ಭತ್ತದಿಂದ ತಯಾರಿಸಿದ ಈ ವಿಸ್ಕಿ, ಬೆಂಗಳೂರು ಮತ್ತು ಮೈಸೂರಿನಲ್ಲಿ ಲಭ್ಯವಿದ್ದು, ತನ್ನ ವಿಶಿಷ್ಟ ತಯಾರಿಕಾ ವಿಧಾನದಿಂದ ಗಮನ ಸೆಳೆದಿದೆ.

ಬೆಂಗಳೂರು (ಆ.15): ಕೊಡಗಿನ ಹಸಿರು ಬೆಟ್ಟಗಳು, ಪವಿತ್ರ ನದಿಗಳು ಹಾಗೂ ಅಲ್ಲಿನ ಮಣ್ಣಿನ ಸೊಗಡಿನ ನಂಟಿರುವ ಪ್ರಾಚೀನ ದೇಸಿ ಪಾನೀಯವಾದ ‘ಭತ್ತದ ಸಾರಾಯಿ’ ಇದೀಗ ಆಧುನಿಕ ಸುವಾಸನೆಯೊಂದಿಗೆ ಪ್ರೀಮಿಯಂ ವಿಸ್ಕಿ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಹಿಂದೆ ಬೆಲ್ಲದ ಆಧಾರಿತ 'ಹುಲಿ' (Huli) ರಮ್ ತಯಾರಿಸಿ ಗಮನ ಸೆಳೆದಿದ್ದ ಡಿಸ್ಟಿಲರ್ ಅರುಣ್ ಅರಸ್‌ (Arun Urs), ಇದೀಗ ಭಾರತದಲ್ಲೇ ಮೊದಲ ಬಾರಿಗೆ 100% ಮಾಲ್ಟೆಡ್ ಬತ್ತದಿಂದ (Malted Paddy) ತಯಾರಿಸಿದ 'ಹುಲಿ ರೈಸ್ ಮಾಲ್ಟ್ ವಿಸ್ಕಿ' ಅನ್ನು ಪರಿಚಯಿಸಿದ್ದಾರೆ.

ಕೊಡಗಿನಲ್ಲಿ ಸಮೃದ್ಧ ಸುಗ್ಗಿ ಬಂದಾಗ ಧನ್ಯವಾದ ಸಲ್ಲಿಸುವ ಸಂಕೇತವಾಗಿ ಕೊಡವ ಸಮುದಾಯದವರು ಮೊಳಕೆ ಬರಿಸಿದ ಭತ್ತದಿಂದ (ಭತ್ತದ ಸಾರಾಯಿ) ಸಾಂಪ್ರದಾಯಿಕವಾಗಿ ಸಾರಾಯಿ ತಯಾರಿಸುತ್ತಿದ್ದರು. ಈ ಮೂಲ ಸಾಂಪ್ರದಾಯಿಕ ಕಲೆಗೆ ಗೌರವ ಸೂಚಿಸುವ ಸಲುವಾಗಿ, ಅದೇ ತಂತ್ರಜ್ಞಾನವನ್ನು ಬಳಸಿ ಈ ವಿಸ್ಕಿಯನ್ನು ಅಭಿವೃದ್ಧಿಪಡಿಸಲಾಗಿದೆ.

ತಯಾರಿಕಾ ವಿಧಾನ ಮತ್ತು ವೈಶಿಷ್ಟ್ಯಗಳು

ತಮ್ಮದೇ ಡಿಸ್ಟಿಲರಿಯಲ್ಲಿ ಭತ್ತವನ್ನು ಮೊಳಕೆ ಬರಿಸಿ (Malt), ಒಣಗಿಸಿ, ರೈಸ್ ಮಿಲ್‌ನಲ್ಲಿ ಸಿಪ್ಪೆ ತೆಗೆದು ಹಿಟ್ಟು (Grist) ಮಾಡಲಾಗುತ್ತದೆ. ಸಂಸ್ಥೆಯೇ ಪ್ರತ್ಯೇಕ ಈಸ್ಟ್ (Yeast) ತಳಿಯನ್ನು ಬೆಳೆಸಿ ಇದನ್ನು ತಯಾರಿಸುತ್ತಿದೆ. ಭಾರತದಲ್ಲಿ ಸಿಗುವ ಬಹುತೇಕ ವಿಸ್ಕಿಗಳು ಕೇವಲ ಎಥನಾಲ್‌ಗೆ ಫ್ಲೇವರ್ ಸೇರಿಸಿ ತಯಾರಿಸಿದವು ಎಂಬ ದೂರುಗಳಿವೆ. ಆದರೆ 'ಹುಲಿ' ವಿಸ್ಕಿಯನ್ನು ವಿದೇಶಿ ಮಾದರಿಯ ವಿಸ್ಕಿ ತಯಾರಿಕೆಯ ಕಟ್ಟುನಿಟ್ಟಿನ ಹಾಗೂ ನೈಜ ಪ್ರಕ್ರಿಯೆಯನ್ನೇ ಅನುಸರಿಸಿ ಡಿಸ್ಟಿಲ್ ಮಾಡಲಾಗಿದೆ.

ಎಲ್ಲಿ ಸಿಗುತ್ತೆ? ಬೆಲೆ ಎಷ್ಟು?

ಸದ್ಯಕ್ಕೆ ಬೆಂಗಳೂರು ಮತ್ತು ಮೈಸೂರಿನ ಪ್ರಮುಖ ರಿಟೇಲ್ ಮಳಿಗೆಗಳಲ್ಲಿ ಮಾತ್ರವೇ ಹುಲಿ ರೈಸ್‌ ಮಾಲ್ಟ್‌ ವಿಸ್ಕಿ ಲಭ್ಯವಿದ್ದು 750 ಎಂಎಲ್‌ ಬಾಟಲ್‌ಗೆ 2650 ರೂಪಾಯಿ ಬೆಲೆ ಇದೆ. ಪ್ರಸ್ತುತ ತಿಂಗಳಿಗೆ ಸುಮಾರು 2,000 ಬಾಟಲಿಗಳನ್ನು ಮಾತ್ರ ಪೂರೈಸುವ ಸಾಮರ್ಥ್ಯವಿದ್ದು, ಸರಬರಾಜು ಸೀಮಿತವಾಗಿದೆ.

'ಸಾಕೆ' ಮಾದರಿಯಲ್ಲಿ ಕರ್ನಾಟಕದ ಸ್ವಂತ ಗುರುತು ಸಿಗಲಿ!

ಜಪಾನ್‌ನ ಅಕ್ಕಿ ಆಧಾರಿತ ಮದ್ಯಕ್ಕೆ "ಸಾಕೆ" (Sake) ಎಂದು ಕರೆಯುವಂತೆ, ಕರ್ನಾಟಕದ ಈ ಮಣ್ಣಿನ ಮೂಲದ ದೇಸಿ ಪಾನೀಯಗಳಿಗೂ 'ವಿಸ್ಕಿ' ಅಥವಾ 'ರಮ್' ಎನ್ನದೆ, ನಮ್ಮದೇ ಆದ ಪ್ರತ್ಯೇಕ ಹಾಗೂ ವಿಶಿಷ್ಟ ಹೆಸರು (Karnataka Identity) ನೀಡಬೇಕು ಎಂಬ ಅಭಿಪ್ರಾಯಗಳು ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿವೆ.

ಸದ್ಯಕ್ಕೆ ಕರ್ನಾಟಕಕ್ಕೆ ಮಾತ್ರವೇ ಸೀಮಿತ

ಇನ್ನು ಭತ್ತದ ಸಾರಾಯಿ ಸದ್ಯ ಕರ್ನಾಟಕಕ್ಕೆ ಮಾತ್ರವೇ ಸೀಮಿತ ಎಂದು ಅರುಣ್‌ ಅರಸ್‌ ಹೇಳಿದ್ದಾರೆ. ಇದು ಮಹಾರಾಷ್ಟ್ರದಲ್ಲಿ ಯಾವಾಗ ಸಿಗಬಹುದು ಎಂದು ಯೂಸರ್‌ ಒಬ್ಬರು ಕೇಳಿರುವ ಪ್ರಶ್ನೆಗೆ ಉತ್ತರ ನೀಡಿರುವ ಅರುಣ್‌ ಅರಸ್‌, 'ಸದ್ಯದ ಮಟ್ಟಿಗೆ ಕರ್ನಾಟಕದ ಉಳಿದ ಭಾಗಗಳಲ್ಲಿ ಇದನ್ನು ಪೂರೈಸುವಷ್ಟು ಸಾಮರ್ಥ್ಯ ಹೊಂದಿಲ್ಲ. ಸದ್ಯದ ಮಟ್ಟಿಗೆ ತಿಂಗಳಿಗೆ 2 ಸಾವಿರ ಬಾಟಲ್‌ಗಳನ್ನು ಉತ್ಪಾದನೆ ಮಾಡುವಷ್ಟು ಸಾಮರ್ಥ್ಯ ಮಾತ್ರವೇ ಇದೆ. ಹೊಸ ಹೂಡಿಕೆಗಳು ನಮಗೆ ಬೇಕು ಎಂದು ಉತ್ತರ ನೀಡಿದ್ದಾರೆ.

Scroll to load tweet…