ಕೊರೋನಾ ಮಹಾಮಾರಿ ತೀವ್ರವಾಗಿದ್ದು ನಿತ್ಯವೂ ನೂರಾರು ಜೀವಗಳನ್ನು ಬಲಿ ಪಡೆಯುತ್ತಿದೆ. ಪ್ರತಿದಿನ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಈ ನಿಟ್ಟಿನಲ್ಲಿ ಹಾಸ್ಟೆಲ್‌ನ್ನು ಕೋವಿಡ್ ಸೆಂಟರ್‌ ಆಗಿ ಪರಿವರ್ತಿಸಲಾಗುತ್ತಿದೆ. 

ಆನೇಕಲ್‌ (ಮೇ.04):  ದೇಶದಲ್ಲಿ ಕೊರೋನಾ ಎರಡನೆಯ ಅಲೆ ತೀವ್ರವಾಗಿದ್ದು, ಎಲ್ಲ ವಯೋಮಾನದವರನ್ನೂ ಆಹುತಿ ಪಡೆಯುತ್ತಿದೆ. ಜನರೆಲ್ಲಾ ಜಾಗೃತರಾಗಿ ಮಾಸ್ಕ್‌ ಧಾರಣೆ, ಅಂತರ ಕಾಪಾಡುವಿಕೆ ಹಾಗೂ ಶುಚಿತ್ವಕ್ಕೆ ಆದ್ಯತೆ ಕೊಡುವ ಮೂಲಕ ವೈರಸ್‌ ಅಲೆಯನ್ನು ತುಂಡರಿಸಲು ಸಂಕಲ್ಪ ಮಾಡಬೇಕೆಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಎಂ. ಕೃಷ್ಣಪ್ಪ ತಿಳಿಸಿದರು.

ಜಿಗಣಿಯ ವಿದ್ಯಾರ್ಥಿ ನಿಲಯದಲ್ಲಿ ಪುರಸಭೆ ಹಾಗೂ ದಾನಿಗಳ ನೆರನಿಂದ ಸಿದ್ಧ ಪಡಿಸಲಾದ 50 ಹಾಸಿಗೆಗಳ ಸುಸಜ್ಜಿತ ಕೋವಿಡ್‌ ಕೇರ್‌ ಕೇಂದ್ರಕ್ಕೆ ಚಾಲನೆ ನೀಡಿದ ಅವರು, ಪಾಸಿಟಿವ್‌ ವರದಿ ಬರುತ್ತಿದ್ದಂತೆಯೇ ಜನರು ಭಯಪಡುವ ಅವಶ್ಯಕತೆಯಿಲ್ಲ. ಶೇ.90ರಷ್ಟುಮಂದಿ ಮನೆಯಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ. ಅತಿ ಅವಶ್ಯವಿರುವವರು ಮಾತ್ರ ಆಸ್ಪತ್ರೆಗೆ ದಾಖಲಾಗಿ. ಕೋವಿಡ್‌ ಕೇಂದ್ರದಲ್ಲಿ ತಜ್ಞ ವೈದ್ಯರು, ಅನುಭವಿ ನರ್ಸ್‌ಗಳು, ಅವಶ್ಯ ಔಷಧಿ, ಆಮ್ಲಜನಕ ಪೂರೈಕೆ ವ್ಯವಸ್ಥೆ, ಊಟೋಪಚಾರ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಉಚಿತವಾಗಿ ನೀಡಲಾಗುವುದು. ಮಾಧ್ಯಮಗಳೂ ಹೆಚ್ಚು ಹೆಚ್ಚು ಜನ ಜಾಗೃತಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಮೂಲಕ ಭೀತಿಯನ್ನು ದೂರಮಾಡಬೇಕೆಂದು ಕೋರಿದರು.

ರಾಜ್ಯದಲ್ಲಿ ಇನ್ನೂ 15 ದಿನ ಸೋಂಕು ತೀವ್ರ ಏರಿಕೆ: ಡಾ| ಬಲ್ಲಾಳ್! .

ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಮಾತನಾಡಿ, ನಗರ ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ಹಲವಾರು ಕ್ರಮಗಳನ್ನು ಜಾರಿಗೊಳಿಸಲಾಗಿದೆ. ರೋಗಿಗಳಿಗೆ ಅತಿ ಅವಶ್ಯವಾಗಿ ಬೇಕಾದ ಆಕ್ಸಿಜೆನ್‌ ಕೊರತೆಯನ್ನು ನೀಗಿಸಲು ಉತ್ಪಾದಕ ಕಂಪನಿಗಳಿಗೆ ಸೂಚಿಸಲಾಗಿದೆ. ನೋಡಲ್‌ ಅಧಿಕಾರಿಯನ್ನು ನೇಮಿಸಿದ್ದು ನಿರಂತರ ಪೂರೈಕೆಗೆ ವ್ಯವಸ್ಥೆ ಮಾಡಲಾಗಿದೆ. ರೆಮ್‌ಡೆಸಿವಿರ್‌ ಲಸಿಕೆಯ ಉತ್ಪಾದನೆಯನ್ನು ಹೆಚ್ಚು ಮಾಡುವಂತೆ ಕಂಪನಿಗಳಿಗೆ ಕೋರಲಾಗಿದೆ. ಆನೇಕಲ್‌ ಸರ್ಕಾರಿ ಆಸ್ಪತ್ರೆಯಲ್ಲಿ ಖಾಸಗಿಯವರ ಸಹಕಾರ ಪಡೆದು ವೆಂಟಿಲೇಟರ್‌ಗಳು ಸೂಕ್ತವಾಗಿ ಕಾರ್ಯಾಚರಣೆ ಮಾಡುವಂತೆ ವ್ಯವಸ್ಥೆ ಮಾಡಲಾಗಿದೆ. ಎಂತಹುದೇ ಪರಿಸ್ಥಿತಿಯನ್ನು ನಿಭಾಯಿಸಲು ಜಿಲ್ಲಾಡಳಿತ ಸಜ್ಜಾಗಿದ್ದು ಸಾರ್ವಜನಿಕರೂ ಸಹಕಾರ ನೀಡಬೇಕೆಂದರು.

ಸ್ಮಶಾನಕ್ಕೆ ಸೂಕ್ತ ವ್ಯವಸ್ಥೆ: ಬೆಂಗಳೂರು ಹೊರವಲಯದಲ್ಲಿ ಸರ್ಕಾರಿ ಸ್ಥಳಗಳನ್ನು ಗುರುತಿಸಿ ಕೊರೋನಾ ಸೋಂಕಿತರ ಅಂತ್ಯಕ್ರಿಯೆಗೆ ಸ್ಮಶಾನಗಳ ನಿರ್ಮಿಸಲಾಗಿದೆ. ವಿದ್ಯುತ್‌ ಚಿತಾಗಾರಗಳ ಜೊತೆಗೆ ವಿವಿಧ ಧರ್ಮೀಯರ ಆಚರಣೆಯಂತೆ ಹೂಳಲು ಸಹ ವ್ಯವಸ್ಥೆ ಮಾಡಿಕೊಡಲಾಗಿದೆ. ಅಂತಿಮ ಯಾತ್ರೆಯನ್ನು ಗೌರವವಾಗಿ ನಡೆಸಲು ಜಿಲ್ಲಾಡಳಿತ ಸಹಕಾರ ನೀಡಲಿದೆ ಎಂದರು.

ಕಾರ್ಯಕ್ರಮದಲ್ಲಿ ಬೆಂಗಳೂರು ಕೇಂದ್ರ ವಲಯ ಐಜಿಪಿ ಚಂದ್ರಶೇಖರ್‌, ಗ್ರಾಮಾಂತರ ಎಸ್ಪಿ ರವಿ ಡಿ ಚೆನ್ನಣ್ಣನವರ್‌, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ್‌, ತಹಶೀಲ್ದಾರ್‌ ಪಿ. ದಿನೇಶ್‌, ಡಿವೈಎಸ್ಪಿ ಡಾ. ಎಚ್‌.ಎಂ. ಮಹದೇವಪ್ಪ, ಜಿ.ಪಂ.ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ನಾಗೇಶ್‌ ರೆಡ್ಡಿ, ಜಿಗಣಿ ಪುರಸಭಾ ಅಧ್ಯಕ್ಷೆ ಮಮತಾ, ಸದಸ್ಯ ಗಿರೀಶ್‌, ಸಿಸಿಸಿ ಉಸ್ತುವಾರಿ ಎನೇಬಲ್‌ ಇಂಡಿಯಾ ಸಂಸ್ಥೆಯ ಅಶ್ವಿನ್‌, ಚೇತನ್‌, ವೈದ್ಯರಾದ ಡಾ.ಲತಾ, ಡಾ.ನೀತಾ ಪಾಲ್ಗೊಂಡಿದ್ದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona