ಲಾಕ್‌ಡೌನ್ 4.0: ಹಾವೇರಿ ಜಿಲ್ಲೆಗೆ ವಿಶೇಷ ಆರ್ಥಿಕ ಪ್ಯಾಕೇಜ್ ರೂಪಿಸಿ, ಸಚಿವ ಬೊಮ್ಮಾಯಿ
ಕೇಂದ್ರ ಮತ್ತು ರಾಜ್ಯ ಸರ್ಕಾರ ಕೊರೋನಾ ಹಿನ್ನೆಲೆಯಲ್ಲಿ ಹಲವಾರು ಆರ್ಥಿಕ ಪ್ಯಾಕೇಜ್‌ಗಳನ್ನು ಘೋಷಿಸಿವೆ| ಈ ಪ್ಯಾಕೇಜ್‌ಗಳ ಅಧ್ಯಯನಮಾಡಿ ಜಿಲ್ಲೆಯೆ ಜನತೆಗೆ ಹೇಗೆ ಅನುಕೂಲ ಮಾಡಿಕೊಡಬಹುದು, ವಲಯವಾರು, ಕ್ಷೇತ್ರವಾರು ಈ ಯೋಜನೆಗಳನ್ನು ಹೇಗೆ ಅನ್ವಯಿಸಿಕೊಳ್ಳಬಹುದು| ಜಿಲ್ಲೆಗೆ ಗರಿಷ್ಠವಾದ ನೆರವು ಪಡೆಯಲು ಅನುಕೂಲವಾಗುವಂತೆ ವಲಯವಾರು ಯೋಜನೆಗಳನ್ನು ರೂಪಿಸಲು ಸಲಹೆ|
ಹಾವೇರಿ(ಮೇ.20): ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಲಾಕ್‌ಡೌನ್ 4.0 ಜಾರಿಗೊಂಡಿರುವುದರಿಂದ ಕೆಲ ನಿರ್ಬಂಧ ಹೊರತುಪಡಿಸಿ ಸಾಕಷ್ಟು ಚಟುವಟಿಕೆಗಳು ಆರಂಭಗೊಂಡಿದ್ದು ಹೊಸದಾಗಿ ಕೊರೋನಾ ಪ್ರಕರಣಗಳು ಪತ್ತೆಯಾಗದಂತೆ ಹೆಚ್ಚಿನ ಗಮನ ಹರಿಸಬೇಕು. ರಾಜ್ಯ ಸರ್ಕಾರದ ಹೊಸ ಬಜೆಟ್ ಘೋಷಿತ ಕಾರ್ಯಕ್ರಮಗಳ ಆರಂಭ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಘೋಷಿಸಿರುವ ಆರ್ಥಿಕ ಪ್ಯಾಕೇಜ್ ಅಡಿ ಜಿಲ್ಲೆಗೆ ಅನ್ವಯಿಸುವ ಆರ್ಥಿಕ ಕಾರ್ಯಕ್ರಮಗಳ ಪಡೆಯುವ ನಿಟ್ಟಿನಲ್ಲಿ ಜಿಲ್ಲೆಗೆ ವಿಶೇಷ ಆರ್ಥಿಕ ಪ್ಯಾಕೇಜ್ ರೂಪಿಸುವಂತೆ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೊರೋನಾ ವೈರಸ್ ಕುರಿತಂತೆ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳು ಹಾಗೂ ಲಾಕ್‌ಡೌನ್ 4.0 ಕುರಿತಂತೆ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಗೃಹ ಸಚಿವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊರೋನಾ ಹಿನ್ನೆಲೆಯಲ್ಲಿ ಹಲವಾರು ಆರ್ಥಿಕ ಪ್ಯಾಕೇಜ್‌ಗಳನ್ನು ಘೋಷಿಸಿದೆ. ಈ ಪ್ಯಾಕೇಜ್‌ಗಳ ಅಧ್ಯಯನಮಾಡಿ ಜಿಲ್ಲೆಯೆ ಜನತೆಗೆ ಹೇಗೆ ಅನುಕೂಲ ಮಾಡಿಕೊಡಬಹುದು, ವಲಯವಾರು, ಕ್ಷೇತ್ರವಾರು ಈ ಯೋಜನೆಗಳನ್ನು ಹೇಗೆ ಅನ್ವಯಿಸಿಕೊಳ್ಳಬಹುದು ಎಂಬುದನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸಿ ಜಿಲ್ಲೆಗೆ ಗರಿಷ್ಠವಾದ ನೆರವು ಪಡೆಯಲು ಅನುಕೂಲವಾಗುವಂತೆ ವಲಯವಾರು ಯೋಜನೆಗಳನ್ನು ರೂಪಿಸುವಂತೆ ತಿಳಿಸಿದರು.
ಕೊರೋನಾ ಹೊಡೆತ: 'ಆರ್ಥಿಕ ಸಂಕಷ್ಟದಿಂದ ಪುಟಿದೇಳುವ ಶಕ್ತಿ ರಾಜ್ಯಕ್ಕಿದೆ'
ರಾಜ್ಯ ಸರ್ಕಾರ ಮುಂದಿನ ಎರಡ್ಮೂರು ದಿನಗಳಲ್ಲಿ 2020-21ನೇ ಸಾಲಿನ ಬಜೆಟ್ ಘೋಷಿತ ಯೋಜನೆಗಳ ಅನುಷ್ಠಾನಕ್ಕೆ ಆದೇಶ ಹೊರಡಿಸಲಿದೆ. ಬಜೆಟ್ ಘೋಷಿತ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಯಾವುದೇ ತೊಂದರೆ ಇಲ್ಲ. ಈ ಕುರಿತಂತೆ ಜಿಲ್ಲಾಡಳಿತಕ್ಕೆ ಹಣಕಾಸು ಇಲಾಖೆ ಆದೇಶ ನೀಡುತ್ತದೆ. ಇದರೊಂದಿಗೆ ನೀರಾವರಿ, ಕೃಷಿ, ತೋಟಗಾರಿಕೆ, ಲೋಕೋಪಯೋಗಿ, ಪಂಚಾಯತ್ ರಾಜ್ ಸೇರಿದಂತೆ ವಿವಿಧ ಇಲಾಖೆಯ ಹೊಸ ಯೋಜನೆಗಳ ವಿಸ್ತೃತ ಕ್ರಿಯಾಯೋಜನೆಗಳನ್ನು ತ್ವರಿತವಾಗಿ ತಯಾರಿಸಿಕೊಂಡು ಅನುಷ್ಠಾನಕ್ಕೆ ಸಿದ್ಧವಾಗಬೇಕು. ಗಂಭೀರವಾಗಿ ಈ ವಿಷಯವನ್ನು ಪರಿಗಣಿಸಿ ಈಗಿನಿಂದಲೇ ಕಾರ್ಯೋನ್ಮುಖರಾಗುವಂತೆ ಸೂಚನೆ ನೀಡಿದರು.
ಕುಡಿಯುವ ನೀರು ಯೋಜನೆಗಳ ಬಾಕಿ ಇರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಉದ್ಯೋಗ ಖಾತ್ರಿಯಡಿ ಕಾರ್ಮಿಕರಿಗೆ ಯಾವುದೇ ತೊಂದರೆ ಇಲ್ಲದಂತೆ ಕೂಲಿ ಹಣ ಬಿಡುಗಡೆಗೆ ಕ್ರಮವಹಿಸಬೇಕು. ಉದ್ಯೋಗ ಸೃಜನೆ ಕುರಿತಂತೆ ಹೆಚ್ಚಿನ ಮಾನವ ದಿನಗಳ ಸೃಜನೆಗೆ ಅವಕಾಶ ಕಲ್ಪಿಸಿಕೊಡಬೇಕೆಂದು ಸೂಚನೆ ನೀಡಿದರು. ವರದಾ ನದಿಯ ಮರಳು ಸಾಗಾಣಿಕೆಗೆ ನಿರ್ಬಂಧ ಹಾಕಬಾರದು. ಈ ಕುರಿತಂತೆ ಜಿಲ್ಲಾಧಿಕಾರಿಗಳು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ನಾಳೆಯೇ ಆದೇಶ ಹೊರಡಿಸಲು ಸೂಚಿಸುವಂತೆ ತಿಳಿಸಿದರು. ಜಿಲ್ಲೆಯ ಪುರಸಭೆ, ನಗರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ಬಹಳ ವರ್ಷದಿಂದ ಪೌರಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿರುವವರ ಪೈಕಿ ಕಾಯಂ ಆಗದೇ ಉಳಿದಿರುವವರನ್ನು ಅವರ ಸೇವೆ ಹಾಗೂ ಮಾನವೀಯತೆಯ ದೃಷ್ಟಿಯಿಂದ ಪರಿಗಣಿಸಿ ಕಾಯಂ ಮಾಡಲು ಅಗತ್ಯ ಕ್ರಮವಹಿಸುವಂತೆ ಸೂಚನೆ ನೀಡಿದರು.
ಸಭೆಯಲ್ಲಿ ಸಂಸದರಾದ ಶಿವಕುಮಾರ ಉದಾಸಿ, ಶಾಸಕರಾದ ಸಿ.ಎಂ.ಉದಾಸಿ, ನೆಹರು ಓಲೇಕಾರ, ವಿರೂಪಾಕ್ಷಪ್ಪ ಬಳ್ಳಾರಿ, ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ. ದೇವರಾಜು, ಜಿಪಂ ಸಿಇಒ ರಮೇಶ ದೇಸಾಯಿ ಒಳಗೊಂಡಂತೆ ವಿವಿಧ ಅಧಿಕಾರಿಗಳು ಪಾಲ್ಗೊಂಡಿದ್ದರು.
ಬಿತ್ತನೆ ಬೀಜ, ಗೊಬ್ಬರ ಸರಬರಾಜು ಮಾಡಿ
ಮುಂಗಾರು ಬಿತ್ತನೆ ಚಟುವಟಿಕೆಗಳು ಆರಂಭಗೊಳ್ಳುವುದರಿಂದ ಜಿಲ್ಲೆಯ ಎಲ್ಲ ಸಹಕಾರಿ ಸಂಘಗಳು, ರೈತ ಸಂಪರ್ಕ ಕೇಂದ್ರಗಳು, ಬೀಜ ವಿತರಕರ ಬಳಿ ಗೊಬ್ಬರ ಮತ್ತು ಬಿತ್ತನೆ ಬೀಜ ಸರಬರಾಜು ಮಾಡಬೇಕು. ರೈತರ ಬೇಡಿಕೆಗೆ ಅನುಸಾರವಾಗಿ ಬಿತ್ತನೆ ಬೀಜ ಮತ್ತು ಗೊಬ್ಬರವನ್ನು ದಾಸ್ತಾನು ಮಾಡಬೇಕು, ವಿತರಣೆಗೆ ಕ್ರಮ ವಹಿಸುವಂತೆ ಸಚಿವ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದರು.