ಹಾವೇರಿ(ಮೇ.20): ರಾಜ್ಯದ ಆರ್ಥಿಕ ಸ್ಥಿತಿ ಮೊದಲಿನಿಂದಲೂ ಸದೃಢವಾಗಿದೆ. ಕೊರೋನಾದಿಂದ ತಾತ್ಕಾಲಿಕವಾಗಿ ಹಣಕಾಸಿನ ಕೊರತೆಯಾಗಿದ್ದರೂ ಅದರಿಂದ ಪುಟಿದೇಳುವ ಶಕ್ತಿ ರಾಜ್ಯಕ್ಕಿದೆ. ಬಜೆಟ್‌ನಲ್ಲಿ ಘೋಷಿಸಿದ ಎಲ್ಲ ಕಾರ್ಯಕ್ರಮಗಳು ಅನುಷ್ಠಾನಗೊಳ್ಳುತ್ತವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಇಲ್ಲಿಯ ಜಿಲ್ಲಾಧಿಕಾರಿ ಕಚೇರಿ ಸಭಾಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಇತ್ತೀಚೆಗೆ ಕೊರೋನಾ ಪಾಸಿಟಿವ್‌ ಪ್ರಕರಣಗಳ ಸಂಖ್ಯೆ ರಾಜ್ಯದಲ್ಲಿ ಹೆಚ್ಚಾಗುತ್ತಿದ್ದು ಇದರಲ್ಲಿ ಶೇ. 70ರಷ್ಟು ಪ್ರಕರಣಗಳು ಮಹಾರಾಷ್ಟ್ರ ಹಾಗೂ ಬೇರೆ ರಾಜ್ಯದಿಂದ ಬಂದವರಿಂದಾಗಿಯೇ ಕಂಡು ಬಂದಿದೆ. ಹಾಗಾಗಿ ಮೇ 31ರ ವರೆಗೆ ಹೊಸ ಪಾಸ್‌ ನೀಡುವುದಿಲ್ಲ. ಇವತ್ತಿನವರೆಗೆ ಸೇವಾಸಿಂಧುವಿನಲ್ಲಿ ಪಾಸ್‌ ಪಡೆದವರಿಗೆ ಮಾತ್ರ ಬರಲು ಅವಕಾಶ ನೀಡಲಾಗುವುದು ಎಂದರು.

ಹಾವೇರಿ: 9 ತಿಂಗಳು ತುಂಬು ಗರ್ಭಿಣಿಯಾದ್ರೂ ಕೊರೋನಾ ಸೇವೆ..!

ಕೇಂದ್ರ ಸರ್ಕಾರ ಎಲ್ಲ ರಂಗ, ಎಲ್ಲ ವರ್ಗದವರ ಅಭಿವೃದ್ಧಿಗೆ 20 ಲಕ್ಷ ಕೋಟಿ ಪ್ಯಾಕೇಜ್‌ ಘೋಷಿಸಿದ್ದು, ಇದರಿಂದ ಆರ್ಥಿಕ ಚೇತರಿಕೆಗೆ ಅನುಕೂಲವಾಗಲಿದೆ. ರಾಜ್ಯ ಸರ್ಕಾರಗಳ ಸಾಲದ ಮಿತಿಯನ್ನು ಶೇ. 3 ರಿಂದ 5ಕ್ಕೆ ಹೆಚ್ಚಿಸಿರುವುದರಿಂದ ರಾಜ್ಯಕ್ಕೆ 15 ರಿಂದ 20 ಸಾವಿರ ಕೋಟಿ ಹೆಚ್ಚುವರಿಯಾಗಿ ಸಾಲ ಸಿಗಲಿದೆ. ದೇಶದ ಜಿಡಿಪಿ ಆರಂಭದ ಎರಡು ತ್ರೈಮಾಸಿಕ ಹಂತದಲ್ಲಿ ಇಳಿಕೆ ಕಂಡರೂ ಮೂರನೇ ಹಾಗೂ ನಾಲ್ಕನೇ ತ್ರೈಮಾಸಿಕದಲ್ಲಿ ಏರಿಕೆ ಕಾಣುವ ವಿಶ್ವಾಸವಿದೆ ಎಂದರು.

ಮರಳು ಸಮಸ್ಯೆ ನಿವಾರಿಸಲು ಹೊಸ ಮರಳು ನೀತಿ ತರಲಾಗಿದ್ದು, ಗ್ರಾಮ ಪಂಚಾಯಿತಿಗಳಿಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಜಿಲ್ಲಾಡಳಿತಕ್ಕೆ ವಹಿಸಲಾಗಿದೆ. ನೆರೆ ಸಂದರ್ಭದಲ್ಲಿ ಮನೆ ಕಳೆದುಕೊಂಡವರಿಗೆ ಎರಡನೇ ಕಂತಿನ ಹಣ ಬಿಡುಗಡೆ ಮಾಡಲಾಗುತ್ತಿದೆ. ಅವರಿಗೆ ಪಂಚಾಯ್ತಿ ಮಟ್ಟದಲ್ಲೇ ಮರಳು ಲಭ್ಯವಾಗುವಂತೆ ಮಾಡಲಾಗುವುದು ಎಂದ ಅವರು, ಮನೆ ಕಟ್ಟಿಕೊಳ್ಳದಿರುವ ನೆರೆ ಸಂತ್ರಸ್ತರಿಗೆ ಮನೆ ಬಾಡಿಗೆ ಹಣ ನೀಡುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಬಸವರಾಜ ಬೊಮ್ಮಾಯಿ ಉತ್ತರಿಸಿದರು.

ಮತ್ತೆ ಗ್ರೀನ್‌ ಝೋನ್‌ ಮಾಡಲು ಕ್ರಮ

ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ 58 ಬೆಡ್‌ಗಳನ್ನು ಕೋವಿಡ್‌ ರೋಗಿಗಳಿಗೆ ಸಿದ್ಧ ಮಾಡಲಾಗಿದೆ. ಮೊದಲು 10 ಬೆಡ್‌ ಐಸಿಯು ಇತ್ತು. ಈಗ ಮತ್ತೆ 10 ಬೆಡ್‌ ಸಿದ್ಧಮಾಡಲಾಗಿದೆ. ಸುಮಾರು 11 ವೆಂಟಿಲೇಟರ್‌ ಬಂದಿವೆ. ಕಳೆದ 10 ದಿನಗಳ ಹಿಂದಿನವರೆಗೂ ಜಿಲ್ಲೆ ಗ್ರೀನ್‌ ಝೋನ್‌ನಲ್ಲಿತ್ತು. ಮುಂಬೈಯಿಂದ ಬಂದ ಮೂವರು ಕೊರೋನಾ ತಂದಿದ್ದಾರೆ. ಈಗಾಗಲೇ ಅವರನ್ನು ಕ್ವಾರಂಟೈನ್‌ ಮಾಡಲಾಗಿದೆ. ಮತ್ತೆ ಜಿಲ್ಲೆಯನ್ನು ಗ್ರೀನ್‌ ಝೋನ್‌ ಮಾಡಲು ಜಿಲ್ಲಾಡಳಿತ ಎಲ್ಲ ರೀತಿ ಕೆಲಸ ಮಾಡುತ್ತಿದೆ ಎಂದು ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. 

ಸವಣೂರಿನ ಕೊರೋನಾ ಸೋಂಕಿತರ ಪ್ರಾಥಮಿಕ, ದ್ವಿತೀಯ ಸಂಪರ್ಕದಲ್ಲಿದ್ದ ಎಲ್ಲರ ಮಾದರಿ ನೆಗೆಟಿವ್‌ ಬಂದಿವೆ. ಅಂದಲಗಿ ರೋಗಿಯ ಸಂಪರ್ಕದ ಪ್ರಥಮ, ದ್ವಿತೀಯ ಜನರನ್ನು ಮಾದರಿ ಪಡೆದು ಪರೀಕ್ಷೆ ನಡೆಸಲಾಗುತ್ತಿದೆ. ಕಂಟೈನ್ಮೆಂಟ್‌ ಝೋನ್‌ನಲ್ಲಿ ಎಲ್ಲ ರೀತಿಯ ಬಂದೋಬಸ್ತ್‌ ಮಾಡಲಾಗಿದೆ. ಈಗಿರುವ ಮೂವರನ್ನು ಸಂಪೂರ್ಣವಾಗಿ ಆರೋಗ್ಯವಾಗುವಂತೆ ವೈದ್ಯರು ಶ್ರಮಿಸುತ್ತಿದ್ದಾರೆ. ಬಸ್‌ ಸಂಚಾರ ಸೇರಿ ಇತರ ಪ್ರಯಾಣ ವ್ಯವಸ್ಥೆ ಮಾಡಲಾಗಿದೆ. ರಾಣಿಬೆನ್ನೂರ ಎಪಿಎಂಸಿಗೆ ಶಿವಮೊಗ್ಗದಿಂದ ಬರುವವರ ಹಾಗೂ ದಾವಣಗೆರೆಯಿಂದ ಬಟ್ಟೆಖರೀದಿಸಲು ಬರುವವರ ಬಗ್ಗೆ ನಿಗಾವಹಿಸಲಾಗಿದೆ ಎಂದು ಅವರು ಹೇಳಿದರು.