Asianet Suvarna News Asianet Suvarna News

ಡೆಲ್ಟಾಪ್ಲಸ್‌ ವೈರಸ್‌ ಬಗ್ಗೆ ರಾಜ್ಯದಲ್ಲಿ ತೀವ್ರ ನಿಗಾ: ಸಚಿವ ಬೊಮ್ಮಾಯಿ

* ದೇಶದಲ್ಲಿ ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಮೊದಲು ಡೆಲ್ಟಾಪ್ಲಸ್‌ ವೈರಸ್‌ ಪತ್ತೆ
* ಕೇಂದ್ರ ಆರೋಗ್ಯ ಇಲಾಖೆ ನೀಡುವ ಸಲಹೆ ನಿಯಮಾವಳಿ ಪಾಲನೆ
* ಮೂರನೇ ಅಲೆ ಎದುರಿಸಲು ಹೆಚ್ಚಿನ ಮಾನವ ಸಂಪನ್ಮೂಲ ಅಗತ್ಯತೆ 

Home Minister Basavaraj Bommai Talks Over Delta Plus Virus in Karnataka grg
Author
Bengaluru, First Published Jun 24, 2021, 1:57 PM IST

ಹಾವೇರಿ(ಜೂ.24): ಕೋವಿಡ್‌ ರೂಪಾಂತರ ತಳಿಯೆನ್ನಲಾದ ಡೆಲ್ಟಾಪ್ಲಸ್‌ ವೈರಸ್‌ ಮೇಲೆ ಸರ್ಕಾರ ತೀವ್ರ ನಿಗಾವಹಿಸಿದೆ ಎಂದು ಗೃಹ, ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಮಹಾರಾಷ್ಟ್ರ ಮತ್ತು ಕೇರಳ ರಾಜ್ಯದಲ್ಲಿ ಮೊದಲು ಪತ್ತೆಯಾಗಿದ್ದು, ದೇಶದಲ್ಲಿಯೇ 35ರಿಂದ 40 ಡೆಲ್ಟಾ ಪ್ರಕರಣಗಳು ಮಾತ್ರ ಪತ್ತೆಯಾಗಿವೆ ಎಂದು ತಿಳಿಸಿದ್ದಾರೆ. 

ರಾಜ್ಯದಲ್ಲಿ ಡೆಲ್ಟಾ ಮತ್ತು ಡೆಲ್ಟಾಪ್ಲಸ್‌ ಪ್ರಕರಣಗಳ ಕುರಿತಂತೆ ತೀವ್ರ ನಿಗಾ ವಹಿಸಲಾಗಿದೆ. ನಮ್ಮಲ್ಲಿ ಜಿನೋನ್‌ ಸೆಂಟರ್‌ಗಳಿದ್ದು, ಡೆಲ್ಟಾಪ್ಲಸ್‌ ಕುರಿತು ಹೆಚ್ಚಿನ ಅಧ್ಯಯನ ನಡೆಸಲಾಗುತ್ತಿದೆ. ಈ ವೈರಸ್‌ನ ಬೇರೆ ಪ್ರಕಾರಗಳು, ಪರಿಣಾಮ ಹಾಗೂ ಈಗಿನ ವ್ಯಾಕ್ಸಿನ್‌ ಬಳಕೆಗಳ ಕುರಿತಂತೆ ಅಧ್ಯಯನ ನಡೆಸಲಾಗುತ್ತಿದೆ. ಕೇಂದ್ರ ಆರೋಗ್ಯ ಇಲಾಖೆ ನೀಡುವ ಸಲಹೆಗಳನ್ನು ನಿಯಮಾವಳಿಗಳನ್ನು ಪಾಲಿಸಲಾಗುವುದು ಎಂದು ಹೇಳಿದ್ದಾರೆ. 

ದೇಶದಲ್ಲಿ ಡೆಲ್ಟಾ + ವೈರಾಣು ಸೋಂಕಿತರ ಸಂಖ್ಯೆ 40 ಕ್ಕೆ ಏರಿಕೆ

ಜಿಲ್ಲೆಯಲ್ಲಿ ಕೋವಿಡ್‌ ಪಾಸಿಟಿವ್‌ ಪ್ರಕರಣಗಳು ಇಳಿಮುಖವಾದರೂ ಮರಣ ಪ್ರಮಾಣ ಜಾಸ್ತಿ ಇದೆ. ಜಿಲ್ಲೆಯ ಮರಣ ಪ್ರಕರಣಗಳ ಆಡಿಟ್‌ ಮಾಡಲು ರಾಜ್ಯದ ವೈದ್ಯಕೀಯ ತಜ್ಞರ ತಂಡ ಜಿಲ್ಲೆಗೆ ಬಂದಿದೆ. ಈ ತಂಡ ನೀಡುವ ಆಡಿಟ್‌ ವರದಿ ಆಧರಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. 

ಜಿಲ್ಲಾ ಆಸ್ಪತ್ರೆಯಲ್ಲಿ 21 ಜನ ಕೋವಿಡ್‌ ರೋಗಿಗಳು ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಜೀವ ಉಳಿಸುವ ನಿಟ್ಟಿನಲ್ಲಿ ತೀವ್ರ ನಿಗಾವಹಿಸಲು ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮೂರನೇ ಅಲೆ ಆರಂಭವಾಗುವ ಮುನ್ನ ಜಿಲ್ಲೆಯಲ್ಲಿ ಗರಿಷ್ಠ ಎಚ್ಚರಿಕೆಗಳೊಂದಿಗೆ ಸಿದ್ಧತೆ ಮಾಡಿಕೊಳ್ಳಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಮಕ್ಕಳ ಮೇಲೆ ಮೂರನೇ ಅಲೆ ಪ್ರಭಾವ ಬೀರುವ ತಜ್ಞರ ಅಭಿಪ್ರಾಯದ ಹಿನ್ನೆಲೆಯಲ್ಲಿ ಜೂ. 25ರಿಂದ ಜಿಲ್ಲೆಯ ಪ್ರತಿ ಗ್ರಾಮಗಳಲ್ಲಿ ಮಕ್ಕಳ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲು ಸೂಚನೆ ನೀಡಲಾಗಿದೆ. ಜು. 30ರೊಳಗೆ ಮಕ್ಕಳ ಆರೋಗ್ಯ ತಪಾಸಣೆ ಪೂರ್ಣಗೊಳಿಸಲು ಸೂಚಿಸಲಾಗಿದೆ. ಗುರುವಾರ ಮಕ್ಕಳ ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಲಾಗುವುದು. ರಾಜ್ಯದಲ್ಲೇ ಮೊದಲು ಜಿಲ್ಲೆಯಲ್ಲಿ ಮಕ್ಕಳ ಆರೋಗ್ಯ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಲಾಗುವುದು ಎಂದರು.

ಮಕ್ಕಳ ತಪಾಸಣೆ ಸಂದರ್ಭದಲ್ಲಿ ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ ಪೌಷ್ಟಿಕ ಆಹಾರದ ಕಿಟ್‌, ಪೂರಕ ಆಹಾರ ಹಾಗೂ ಔಷಧಿಗಳನ್ನು ನೀಡಿ ಕೋವಿಡ್‌ನಿಂದ ರಕ್ಷಣೆ ನೀಡಲು ಆದ್ಯತೆ ನೀಡಲಾಗುವುದು. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಸ್ಪತ್ರೆಯಲ್ಲಿ ಕನಿಷ್ಠ 30 ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ತಲಾ 10 ಹಾಸಿಗೆಯ ವಿಶೇಷ ಮಕ್ಕಳ ಐಸಿಯು ವಾರ್ಡ್‌ ಸಿದ್ಧತೆ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ ಎಂದರು.    

ರೋಗಿಗಳಿಲ್ಲದ ಕಾರಣ ಕೋವಿಡ್‌ ಕೇರ್‌ ಸೆಂಟರ್‌ಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗುವುದು. ಈ ಕೇಂದ್ರಗಳಿಗೆ ಪೂರೈಕೆ ಮಾಡಲಾದ ಸಾಮಗ್ರಿಗಳನ್ನು ಕಾಯ್ದಿರಿಸಿ ಮೂರನೇ ಅಲೆಯ ಸಂದರ್ಭದಲ್ಲಿ ಅಗತ್ಯಬಿದ್ದರೆ ಮಕ್ಕಳು ಹಾಗೂ ಪಾಲಕರಿಗಾಗಿ ಬಳಸಿಕೊಳ್ಳಲು ಸೂಚನೆ ನೀಡಲಾಗಿದೆ. ಮೂರನೇ ಅಲೆ ಎದುರಿಸಲು ವ್ಯಾಕ್ಸಿನ್‌ ಪ್ರಮಾಣವನ್ನು ಹೆಚ್ಚಳ ಮಾಡುವುದು ಅಗತ್ಯವಿದೆ. ಪ್ರತಿದಿನ ಕನಿಷ್ಠ 10 ಸಾವಿರ ಜನರಿಗೆ ಕೋವಿಡ್‌ ವ್ಯಾಕ್ಸಿನ್‌ ನೀಡಲು ಅಧಿಕಾರಿಗಳಿಗೆ ಗುರಿ ನೀಡಲಾಗಿದೆ. ಬೇಕಾದ ಪ್ರಮಾಣದ ವ್ಯಾಕ್ಸಿನ್‌ ಪೂರೈಕೆಗೆ ಕ್ರಮವಹಿಸಲಾಗುವುದು. ಜೊತೆಗೆ ಎಲ್ಲ ಕಾಲೇಜುಗಳಲ್ಲಿ ಉಪ ಸೆಂಟರ್‌ ಆರಂಭಿಸಿ ವಿದ್ಯಾರ್ಥಿಗಳಿಗೆ ಹಾಗೂ ಉಪನ್ಯಾಸಕರಿಗೆ ವ್ಯಾಕ್ಸಿನ್‌ ನೀಡಲಾಗುವುದು. ಇದಲ್ಲದೆ ಮುಂಚೂಣಿ ವಾರಿಯರ್‌ಗಳಿಗೂ ವ್ಯಾಕ್ಸಿನ್‌ ನೀಡಲಾಗುವುದು. ಮೊದಲ ಮತ್ತು ಎರಡನೇ ಡೋಸ್‌ನ ವ್ಯಾಕ್ಸಿನ ನಿಗದಿತ ಅವಧಿಯಲ್ಲಿ ನೀಡಲು ಸೂಚನೆ ನೀಡಲಾಗಿದೆ. ಎರಡನೇ ಡೋಸ್‌ ವ್ಯಾಕ್ಸಿನ್‌ ಪಡೆಯಲು ಕಡ್ಡಾಯವಾಗಿ ಎಸ್‌ಎಂಎಸ್‌ ಸಂದೇಶ ರವಾನಿಸಲು ಸೂಚನೆ ನೀಡಲಾಗಿದೆ ಹೇಳಿದರು.

ಏಪ್ರಿಲ್‌ನಲ್ಲೇ ಮಹಾರಾಷ್ಟ್ರದಲ್ಲಿ ಡೆಲ್ಟಾ+ ಸೃಷ್ಟಿ

ಈಗ 48 ವೆಂಟಿಲೇಟರ್‌ ಲಭ್ಯವಿದ್ದು, ಸರ್ಕಾರ ಹಾಗೂ ದಾನಿಗಳಿಂದ ಪಡೆದು ಮೂರನೇ ಅಲೆಯ ಮುನ್ನ ಆಗಸ್ಟ್‌ ಅಂತ್ಯದೊಳಗೆ 100 ವೆಂಟಿಲೇಟರ್‌ ಪಡೆಯುವ ಗುರಿ ಹೊಂದಲಾಗಿದೆ. ಜಿಲ್ಲೆಯ ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ 135 ಆಕ್ಸಿಜನ್‌ ಕಾನ್ಸಂಟ್ರೇಟರ್‌ಗಳಿದ್ದು, ಇವುಗಳ ಹೆಚ್ಚಳಕ್ಕೆ ಕ್ರಮವಹಿಸಲಾಗುವುದು ಎಂದರು.

ಎಂಬಿಬಿಎಸ್‌ ವೈದ್ಯರ ಕೊರತೆ ಸಮಯದಲ್ಲಿ ಆಯುಷ್‌ ವೈದ್ಯರು ಕಳೆದ ಹಲವು ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಮೂರನೇ ಅಲೆ ಎದುರಿಸಲು ಹೆಚ್ಚಿನ ಮಾನವ ಸಂಪನ್ಮೂಲ ಅಗತ್ಯತೆ ಕಾರಣ ಆಯುಷ್‌ ವೈದ್ಯರನ್ನು ತಾತ್ವಿಕವಾಗಿ ಮುಂದುವರಿಸಬೇಕು ಎಂಬುದು ನನ್ನ ವಿಚಾರವಾಗಿದೆ. ಈ ಕುರಿತಂತೆ ಸರ್ಕಾರದೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದರು. ಸಂಸದ ಶಿವಕುಮಾರ ಉದಾಸಿ, ಶಾಸಕರಾದ ನೆಹರು ಓಲೇಕಾರ, ವಿರೂಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಗುತ್ತೂರ ಇದ್ದರು.
 

Follow Us:
Download App:
  • android
  • ios