Asianet Suvarna News Asianet Suvarna News

ಕೊರೋನಾ ಸೋಂಕು ಹೆಚ್ಚಾಗದಂತೆ ಎಚ್ಚರಿಕೆ ವಹಿಸಿ: ಸಚಿವ ಬಸವರಾಜ ಬೊಮ್ಮಾಯಿ

ವಿಡಿಯೋ ಸಂವಾದ ನಡೆಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೂಚನೆ|ವೈದ್ಯಾಧಿಕಾರಿಗಳೇ ಮನೆ ಮನೆಗೆ ತೆರಳಿ ಆರೋಗ್ಯ ತಪಾಸಣೆ ನಡೆಸಿ| ಚೆಕ್‌ಪೋಸ್ಟ್‌ ಬಿಗಿಗೊಳಿಸಿ ಎಲ್ಲ ವಾಹನಗಳನ್ನು ಕಡ್ಡಾಯವಾಗಿ ತಪಾಸಣೆಗೊಳಪಡಿಸಿ| ಯಾವುದೇ ದೂರುಗಳಿಗೂ ತಲೆಕಡಿಸಿಕೊಳ್ಳಬೇಡಿ, ಪಾಸ್‌ ಇದ್ದವರಿಗೆ ಮಾತ್ರ ಗಡಿಯೊಳಗೆ ಪ್ರವೇಶ ನೀಡಿ|

Home Minister Basavaraj Bommai Talks Over Coronavirus
Author
Bengaluru, First Published May 6, 2020, 8:33 AM IST

ಹಾವೇರಿ(ಮೇ.06): ಕೊರೋನಾ ಪಾಸಿಟಿವ್‌ ಪ್ರಕರಣ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸೋಂಕು ಹೆಚ್ಚಾಗದಂತೆ ಗರಿಷ್ಠ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಬೇಕು. ಅಗತ್ಯ ವೈದ್ಯಕೀಯ ಸೌಲಭ್ಯಗಳೊಂದಿಗೆ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ನಿಭಾಯಿಸಲು ಸಿದ್ಧರಿರುವಂತೆ ವೈದ್ಯಾಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ. 

ಬೆಂಗಳೂರಿನಿಂದ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಮಂಗಳವಾರ ವೀಡಿಯೋ ಸಂವಾದ ನಡೆಸಿ, ಜಿಲ್ಲೆಯ ಕೋವಿಡ್‌ ಸ್ಥಿತಿಗತಿ ಹಾಗೂ ಲಾಕ್‌ಡೌನ್‌ ಸಡಿಲಿಕೆ ನಂತರದ ವಿವರಗಳನ್ನು ಪಡೆದುಕೊಂಡರು. ಜಿಲ್ಲಾ ಆಸ್ಪತ್ರೆಯಲ್ಲಿ ಆಂತರಿಕ ವ್ಯವಸ್ಥೆಯನ್ನು ಬಲಪಡಿಸಿಕೊಳ್ಳಿ. ಅಗತ್ಯ ವೈದ್ಯಕೀಯ ಸಿಬ್ಬಂದಿ, ವೈದ್ಯಕೀಯ ಸೌಲಭ್ಯಗಳನ್ನು ಬಲಪಡಿಸಿಕೊಳ್ಳಿ, ಕನಿಷ್ಠ ಮೂರು ಸಾವಿರ ಗುಣಮಟ್ಟದ ಪಿಪಿ ಕಿಟ್‌ಗಳನ್ನು ತರಿಸಿಕೊಳ್ಳಲು ಇಂದೇ ಪ್ರಸ್ತಾವನೆ ಸಲ್ಲಿಸಿ ಎಂದು ಸೂಚನೆ ನೀಡಿದ್ದಾರೆ.

'ದೇವಸ್ಥಾನದ ತೀರ್ಥಕ್ಕಿಂತ ಬಾರ್‌ ತೀರ್ಥವೇ ಜನರಿಗೆ ಬೇಕಾಗಿದೆ'

ತಕ್ಷಣಕ್ಕೆ ಒಂದು ಸಾವಿರ ಗುಣಮಟ್ಟದ ಪಿಪಿ ಕಿಟ್‌ಗಳನ್ನ ಖರೀದಿಸಿ, ಮಾಸ್ಕ್‌, ಸ್ಯಾನಿಟೈಜರ್‌ ಸೇರಿದಂತೆ ಯಾವುದೇ ಕೊರತೆಯಾಗಬಾರದು. ಜಿಲ್ಲಾಸ್ಪತ್ರೆಯಲ್ಲಿ ಈಗಿರುವ ಕೇಂದ್ರೀಕೃತ ಆ್ಯಕ್ಸಿಜನ್‌ ಪೂರೈಕೆ 30 ಬೆಡ್‌ಗಳಿಂದ 50 ಬೆಡ್‌ಗಳಿಗೆ ಹೆಚ್ಚಿಸಿ ತಕ್ಷಣ ಸಿದ್ಧತೆ ಮಾಡಿಕೊಳ್ಳಿ. ಎಲ್ಲ ತಾಲೂಕಾಸ್ಪತ್ರೆಗಳಿಗೂ ಮಾಸ್ಕ್‌, ಸ್ಯಾನಿಟೈಜರ್‌, ಕೋವಿಡ್‌ ಸುರಕ್ಷಾ ಕಿಟ್‌ಗಳನ್ನು ಹೆಚ್ಚುವರಿ ಪೂರೈಸಿ ಎಂದು ಹೇಳಿದರು.

ಮನೆ ಮನೆ ಆರೋಗ್ಯ ತಪಾಸಣೆ:

ಮನೆ ಮನೆ ಆರೋಗ್ಯ ತಪಾಸಣೆ, ಕ್ಷೀಪ್ರ ಆರೋಗ್ಯ ತಪಾಸಣೆ ಹೊರತಾಗಿಯೂ ವಿಶೇಷವಾಗಿ ಕೋವಿಡ್‌ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಶಿಗ್ಗಾಂವ ಹಾಗೂ ಸವಣೂರು ತಾಲೂಕಿನಲ್ಲಿ ವೈದ್ಯಾಧಿಕಾರಿಗಳೇ ಖುದ್ದಾಗಿ ಮನೆ ಮನೆಗೆ ಭೇಟಿ ನೀಡಿ ಪ್ರತಿಯೊಬ್ಬರ ಆರೋಗ್ಯ ತಪಾಸಣೆಯನ್ನು ಕೈಗೊಳ್ಳಬೇಕು. ಸವಣೂರಿನಲ್ಲಿ ಫಿವರ್‌ ಕ್ಲಿನಿಕ್‌ ಸ್ಥಾಪಿಸಿ, ಸವಣೂರ ಸಾರ್ವಜನಿಕ ಆಸ್ಪತ್ರೆಯನ್ನು ಕೋವಿಡ್‌ ಆಸ್ಪತ್ರೆಯಾಗಿ ಪರಿವರ್ತಿಸಿ. ಕನಿಷ್ಠ 20 ಬೆಡ್‌ಗಳ ಕೇಂದ್ರೀಕೃತ ಆ್ಯಕ್ಸಿಜನ್‌ ವ್ಯವಸ್ಥೆಯ ವಾರ್ಡ್‌ಗಳನ್ನು ಸಿದ್ಧಮಾಡಿಕೊಳ್ಳಿ. ಸೀಲ್‌ಡೌನ್‌ ಪ್ರದೇಶದಲ್ಲಿ ನಿಯಮಿತವಾಗಿ ಚರಂಡಿಗಳ ಸ್ವಚ್ಛತೆ, ಔಷಧಿ ಸಿಂಪರಣೆ, ಅಗತ್ಯವಿದ್ದರೆ ಅಗ್ನಿಶಾಮಕ ವಾಹನ ಬಳಿಸಿ ಔಷಧಿ ಸಿಂಪರಣೆಗೆ ಕ್ರಮವಹಿಸಿ. ಈ ಪ್ರದೇಶವನ್ನು ಅತ್ಯಂತ ಸೂಕ್ಷ್ಮವಾಗಿ ನಿಭಾಯಿಸಿ. ಸೋಂಕು ಹೆಚ್ಚಾಗದಂತೆ ಗರಿಷ್ಠವಾದ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಿ, ಸಮನ್ವಯತೆಯಿಂದ ಪರಿಸ್ಥಿತಿಯನ್ನು ಎದುರಿಸಿ ಯಾವುದೇ ಸೌಕರ್ಯಗಳು ಬೇಕಾದರೂ ನೇರವಾಗಿ ನನ್ನೊಂದಿಗೆ ಮಾತನಾಡಿ. ಯಾವುದೇ ಹಿಂಜರಿಕೆ ಬೇಡ ಎಂದು ಅಧಿಕಾರಿಗಳಿಗೆ ಆತ್ಮವಿಶ್ವಾಸ ತುಂಬಿದರು.

ಸೀಲ್‌ಡೌನ್‌ ಮಾಡಿರುವ ಸವಣೂರು ಪಟ್ಟಣದ ಎಸ್‌.ಎಂ. ಕೃಷ್ಣ ನಗರದಲ್ಲಿ ತೀವ್ರ ನಿಗಾವಹಿಸಬೇಕು. ಸಾರ್ವಜನಿಕರ ಓಡಾಟವನ್ನು ನಿಯಂತ್ರಿಸಬೇಕು. ಜನರಿಗೆ ಬೇಕಾದ ಹಾಲು, ಹಣ್ಣು, ತರಕಾರಿ, ದಿನಸಿ ಸೇರಿದಂತೆ ಅಗತ್ಯ ಸಾಮಗ್ರಿಗಳಿಗೆ ತೊಂದರೆಯಾಗದಂತೆ ಕ್ರಮವಹಿಸಬೇಕು. ಶಿಗ್ಗಾಂವ, ಸವಣೂರ ಭಾಗದಲ್ಲಿ ಜನರಿಗೆ ಆಹಾರದ ಕಿಟ್‌ ವಿತರಣೆ, ಪಡಿತರ ವಿತರಣೆಯಲ್ಲಿ ತೊಂದರೆಯಾಗಬಾರದು. ದಾನಿಗಳಿಂದಲೂ ಅಗತ್ಯ ನೆರವು ಒದಗಿಸಲಾಗುವುದು. ವ್ಯವಸ್ಥಿತವಾಗಿ ಅಗತ್ಯ ಸಾಮಗ್ರಿಗಳನ್ನು ಜನರಿಗೆ ಒದಗಿಸಬೇಕು ಎಂದು ಸೂಚನೆ ನೀಡಿದರು.

ಚೆಕ್‌ಪೋಸ್ಟ್‌ ಬಿಗಿಗೊಳಿಸಿ:

ಚೆಕ್‌ಪೋಸ್ಟ್‌ ಬಿಗಿಗೊಳಿಸಿ ಎಲ್ಲ ವಾಹನಗಳನ್ನು ಕಡ್ಡಾಯವಾಗಿ ತಪಾಸಣೆಗೊಳಪಡಿಸಿ. ಯಾವುದೇ ದೂರುಗಳಿಗೂ ತಲೆಕಡಿಸಿಕೊಳ್ಳಬೇಡಿ. ಪಾಸ್‌ ಇದ್ದವರಿಗೆ ಮಾತ್ರ ಗಡಿಯೊಳಗೆ ಪ್ರವೇಶ ನೀಡಿ. ಪ್ರತಿ ವಾಹನದ ಚಲನವಲನಗಳು ಸಿಸಿ ಕ್ಯಾಮೆರಾಗಳಲ್ಲಿ ದಾಖಲಾಗಬೇಕು. ಜಿಲ್ಲೆಯಲ್ಲಿ ಸ್ಥಾಪಿಸಲಾದ ಎಲ್ಲ 24 ಚೆಕ್‌ ಪೋಸ್ಟ್‌ಗಳಲ್ಲಿ ತಪಾಸಣೆ ಬಿಗಿಗೊಳಿಸಬೇಕು. ಪ್ರತಿ ವಾಹನದ ವಿವರ, ವಾಹನ ಚಾಲಕನ ಹೆಸರು, ಕ್ಲಿನಿರ್‌ ಹೆಸರು, ವಾಹನ ಮಾಲಿಕನ ಹೆಸರು, ವಿಳಾಸ ಮತ್ತು ಮೊಬೈಲ್‌ ಸಂಖ್ಯೆಗಳನ್ನು ಪಡೆದು ದಾಖಲು ಮಾಡಿಕೊಳ್ಳಬೇಕು. ಇದರಿಂದ ಸಂಪರ್ಕ ವಿಳಾಸ ಪತ್ತೆಗೆ ಸುಲಭವಾಗಲಿದೆ ಎಂದು ಸಲಹೆ ನೀಡಿದರು.

ವಿಡಿಯೋ ಸಂವಾದದಲ್ಲಿ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಜಿ. ದೇವರಾಜ, ಜಿಪಂ ಸಿಇಒ ರಮೇಶ ದೇಸಾಯಿ, ಅಪರ ಜಿಲ್ಲಾಧಿಕಾರಿ ಯೋಗೇಶ್ವರ, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಇದ್ದರು.
 

Follow Us:
Download App:
  • android
  • ios