Chamarajanagar News: ಆಧುನಿಕ ತಂತ್ರಜ್ಞಾನವೇ ಇಲ್ಲದ ಕಾಲದಲ್ಲಿ, ಕೇವಲ ಸುಣ್ಣದ ಗಾರೆ ಮತ್ತು ಕಲ್ಲು ಕಂಬಗಳಿಂದಲೇ ನಿರ್ಮಿಸಲಾದ ಆ ಅದ್ಭುತ ನಿಮಾರ್ಣಕ್ಕೆ ಈಗ ಕಾಲದ ಕುತ್ತು ಬಂದೊದಗಿದೆ.
ವರದಿ: ಪುಟ್ಟರಾಜು. ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ.
ಚಾಮರಾಜನಗರ (ಆ.02): ಆಧುನಿಕ ತಂತ್ರಜ್ಞಾನವೇ ಇಲ್ಲದ ಕಾಲದಲ್ಲಿ, ಕೇವಲ ಸುಣ್ಣದ ಗಾರೆ ಮತ್ತು ಕಲ್ಲು ಕಂಬಗಳಿಂದಲೇ ನಿರ್ಮಿಸಲಾದ ಆ ಅದ್ಭುತ ನಿಮಾರ್ಣಕ್ಕೆ ಈಗ ಕಾಲದ ಕುತ್ತು ಬಂದೊದಗಿದೆ. ಹೌದು, ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರದ ಬಳಿ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಲಾದ ಇತಿಹಾಸ ಪ್ರಸಿದ್ಧ 'ವೆಸ್ಲಿ ಸೇತುವೆ' ಈಗ ಸಂಪೂರ್ಣವಾಗಿ ಶಿಥಿಲಾವಸ್ಥೆ ತಲುಪಿದೆ. ಇತಿಹಾಸದ ಹೆಗ್ಗುರುತಾಗಿ, ಅದೆಷ್ಟೋ ಸಿನಿಮಾಗಳು ಚಿತ್ರೀಕರಣಕ್ಕೆ ಸಾಕ್ಷಿಯಾಗಿದ್ದ ಈ ಪಾರಂಪರಿಕ ಸೇತುವೆ ಕಣ್ಣೆದುರೇ ಉರುಳಿ ಬೀಳುತ್ತಿದ್ದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಮಾತ್ರ ಕಣ್ಣು ಮುಚ್ಚಿ ಕುಳಿತಿದ್ದಾರೆ..
ಇತಿಹಾಸ ಪ್ರಸಿದ್ಧ ಭರಚುಕ್ಕಿ ಜಲಪಾತ ಹಾಗೂ ಶಿವನಸಮುದ್ರದ ಸಮೂಹ ದೇವಾಲಯಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದ ಕಾವೇರಿ ಒಡಲಿನ ಹೆಮ್ಮೆಯ ಕೊಂಡಿ ಈ ವೆಸ್ಲಿ ಸೇತುವೆ. ಬ್ರಿಟಿಷ್ ರಾಯಭಾರಿ ವೆಸ್ಲಿಯ ನೆನಪಿನಲ್ಲಿ 1818ರಲ್ಲಿ ನಿರ್ಮಾಣವಾದ ಈ ಪಾರಂಪರಿಕ ಸೇತುವೆ, ಹಿಂದಿನ ಕಾಲದ ಇಂಜಿನಿಯರಿಂಗ್ ತಂತ್ರಜ್ಞಾನಕ್ಕೆ ಹಿಡಿದ ಕೈಗನ್ನಡಿಯಾಗಿತ್ತು. ಕೇವಲ ಸುಣ್ಣದ ಗಾರೆ ಮತ್ತು ಕಲ್ಲು ಕಂಬಗಳಿಂದಲೇ ನಿರ್ಮಾಣವಾಗಿ ಶತಮಾನಗಳ ಕಾಲ ಗಟ್ಟಿಯಾಗಿ ನಿಂತಿದ್ದ ಈ ಸೇತುವೆ, ಇಂದು ಸೂಕ್ತ ನಿರ್ವಹಣೆ ಇಲ್ಲದೆ ನಲುಗಿ ಹೋಗಿದೆ. ಇದರ ಕಲ್ಲಿನ ಕಂಬಗಳು ಒಂದೊಂದಾಗಿ ಉರುಳಿ ಬೀಳುತ್ತಿದ್ದು, ಇತಿಹಾಸದ ಪುಟ ಸೇರುವ ಭೀತಿ ಎದುರಾಗಿದೆ.
ಒಂದು ಕಾಲದಲ್ಲಿ ಈ ಸೇತುವೆ ಪ್ರವಾಸಿಗರ ನೆಚ್ಚಿನ ತಾಣವಾಗಿತ್ತು. ಇದರ ಮೇಲೆ ನಿಂತು ಕಾವೇರಿಯ ವಿಹಂಗಮ ನೋಟವನ್ನು ಸವಿಯುವುದೇ ಒಂದು ರೋಮಾಂಚನ. ಅಷ್ಟೇ ಯಾಕೆ, ಸ್ಯಾಂಡಲ್ವುಡ್ನ ಅದೆಷ್ಟೋ ಸೂಪರ್ ಹಿಟ್ ಸಿನಿಮಾ ಹಾಡುಗಳ ಚಿತ್ರೀಕರಣಕ್ಕೂ ಈ ವೆಸ್ಲಿ ಸೇತುವೆ ಸುಂದರ ಬ್ಯಾಕ್ಡ್ರಾಪ್ ಆಗಿತ್ತು. ಆದರೆ, ಇಂತಹ ಪ್ರೇಕ್ಷಣೀಯ ಸ್ಥಳಕ್ಕೀಗ ಗ್ರಹಣ ಹಿಡಿದಿದೆ. ಕಳೆದ 2017 ರಲ್ಲಿ 2 ಕೋಟಿ ರೂಪಾಯಿ ವೆಚ್ಚದಲ್ಲಿ ಕುಸಿದಿದ್ದ ಭಾಗವನ್ನು ದುರಸ್ತಿ ಮಾಡಲಾಗಿತ್ತಾದರೂ, ಕಳೆದ ವರ್ಷ ಉಳಿದ ಭಾಗಗಳು ಸಹ ಧರಾಶಾಹಿಯಾಗಿವೆ.
ಸಾರ್ವಜನಿಕರ ಹಾಗು ವಾಹನಗಳ ಓಡಾಟಕ್ಕೆ ಪಕ್ಕದಲ್ಲೇ ಹೊಸ ಸೇತುವೆ ನಿರ್ಮಾಣವಾಗಿದೆಯಾದರೂ, ಈ ಪಾರಂಪರಿಕ ತಾಣವನ್ನು ಹೀಗೆಯೇ ಬಿಟ್ಟರೆ ಮುಂದೊಂದು ದಿನ ವೆಸ್ಲಿ ಸೇತುವೆ ಕೇವಲ ಇತಿಹಾಸದ ಪುಸ್ತಕಗಳಿಗಷ್ಟೇ ಸೀಮಿತವಾಗಬೇಕಾಗುತ್ತದೆ. ಇತಿಹಾಸ ಪ್ರಸಿದ್ಧ ಸೇತುವೆಯ ಸಂರಕ್ಷಣೆಗೆ ಪುರಾತತ್ವ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕಿದೆ ಎಂಬುದು ಸ್ಥಳೀಯರ ತೀವ್ರ ಒತ್ತಾಯವಾಗಿದೆ.
ಸಂಚಾರಕ್ಕೆ ಪರ್ಯಾಯವಾಗಿ ಹೊಸ ಸೇತುವೆ ಏನೋ ಇದೆ ನಿಜ. ಆದರೆ ಎಲ್ಲರ ಕಣ್ಣೆದುರೇ ನಶಿಸಿ ಹೋಗುತ್ತಿರುವ ಈ ಐತಿಹಾಸಿಕ ವೆಸ್ಲಿ ಸೇತುವೆಯನ್ನು ನೋಡಿದರೆ ಸಂಕಟವಾಗುತ್ತದೆ. ಸರ್ಕಾರ ತಕ್ಷಣವೇ ಎಚ್ಚೆತ್ತುಕೊಂಡು, ಇದರ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಮರುನಿರ್ಮಾಣ ಮಾಡಬೇಕು. ಮುಂದಿನ ಪೀಳಿಗೆಗೆ ಇತಿಹಾಸವನ್ನು ತಿಳಿಸುವ ಸಲುವಾಗಿಯಾದರೂ ಇದನ್ನು ಕನಿಷ್ಠ ವೀಕ್ಷಣೆಗೆ ಯೋಗ್ಯವಾಗುವಂತೆ ಸಂರಕ್ಷಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.


