ಈದ್ಗಾದಲ್ಲಿ ಜಮೀರ್ ಧ್ವಜಾರೋಹಣ ಬೇಡ, ಒಂದು ವೇಳೆ ಮಾಡಿದರೆ ಅಶಾಂತಿ ಸೃಷ್ಟಿ: ಹಿಂದೂ ಸಂಘಟನೆ
ರಾಜ್ಯ ಸರ್ಕಾರವೇ ಧ್ವಜಾರೋಹಣ ನೆರವೇರಿಸಿದರೆ ಸಂತೋಷ. ಇಲ್ಲದಿದ್ದರೆ ನಾವೇ ಧ್ವಜಾರೋಹಣ ನೆರವೇರಿಸುತ್ತೇವೆ: ರಾಮೇಗೌಡ
ಬೆಂಗಳೂರು(ಆ.10): ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಸ್ಥಳೀಯ ಶಾಸಕ ಜಮೀರ್ ಅಹಮದ್ ಖಾನ್‌ಗೆ ಯಾವುದೇ ಕಾರಣಕ್ಕೂ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣಕ್ಕೆ ಅವಕಾಶ ನೀಡಬಾರದು. ರಾಜ್ಯ ಸರ್ಕಾರವೇ ಧ್ವಜಾರೋಹಣ ನೆರವೇರಿಸಿದರೆ ಸಂತೋಷ. ಇಲ್ಲದಿದ್ದರೆ ನಾವೇ ಧ್ವಜಾರೋಹಣ ನೆರವೇರಿಸುತ್ತೇವೆ ಎಂದು ಚಾಮರಾಜಪೇಟೆ ನಾಗರಿಕರ ಒಕ್ಕೂಟ ವೇದಿಕೆ ಅಧ್ಯಕ್ಷ ರಾಮೇಗೌಡ ಹೇಳಿದರು. ಮಂಗಳವಾರ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಡಿಸಿಪಿ ಲಕ್ಷ್ಮಣ್ ನಿಂಬರಗಿ ಅವರ ನೇತೃತ್ವದಲ್ಲಿ ಈದ್ಗಾ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಕುರಿತು ನಡೆದ ಶಾಂತಿ ಸಭೆಯಲ್ಲಿ ಅವರು ಪಾಲ್ಗೊಂಡಿದ್ದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಸ್ವಾತಂತ್ರ್ಯ ದಿನದಂದು ಶಾಸಕ ಜಮೀರ್ ಅಹಮದ್‌ಖಾನ್ ಅವರಿಂದ ಧ್ವಜಾರೋಹಣ ಮಾಡಿಸಬಾರದು ಎಂದು ಅಭಿಪ್ರಾಯವನ್ನು ತಿಳಿಸಿದ್ದೇವೆ. ಜಮೀರ್ ಅವರಿಗೆ ಧ್ವಜಾರೋಹಣಕ್ಕೆ ಅವಕಾಶ ಕೊಟ್ಟರೆ ಚಾಮರಾಜಪೇಟೆಯಲ್ಲಿ ಅಶಾಂತಿ ಉಂಟಾಗುತ್ತದೆ. ಆದ್ದರಿಂದ ಜಮೀರ್ ಧ್ವಜಾರೋಹಣ ಮಾಡಲು ನಮ್ಮ ವಿರೋಧವಿದೆ ಎಂದು ಹೇಳಿದರು.
ಚಾಮರಾಜಪೇಟೆ ಈದ್ಗಾ ವಿವಾದ: ಉರಿಯೋ ಬೆಂಕಿಗೆ ತುಪ್ಪ ಸುರಿದ್ರಾ ಜಮೀರ್ ಅಹ್ಮದ್ ಖಾನ್?
ಸಭೆಯಲ್ಲಿ ಧ್ವಜಾರೋಹಣ ನೆರವೇರಿಸಲು ಅನುಮತಿ ಕೋರಿದ್ದೇವೆ. ಪೊಲೀಸರು ಯಾವುದೇ ರೀತಿಯ ಸ್ಪಷ್ಟನೆ ಕೊಟ್ಟಿಲ್ಲ. ಮನವಿ ಬಗ್ಗೆ ಸರ್ಕಾರಕ್ಕೆ ತಲುಪಿಸುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ. ಈ ವಿವಾದ ಇಷ್ಟುದೊಡ್ಡದಾಗಲು ಜಮೀರ್ ಅವರೇ ಕಾರಣ. ಸ್ವಾತಂತ್ರ್ಯ ದಿನದ ಕಾರ್ಯಕ್ರಮಕ್ಕೆ ಜಮೀರ್ ಬಂದು ಧ್ವಜಕ್ಕೆ ಸಲ್ಯೂಟ್ ಮಾಡಿ ಹೋಗಬಹುದು. ಅದಕ್ಕೆ ನಮ್ಮ ಅಭ್ಯಂತರವಿಲ್ಲ ಎಂದರು.
ವಿಶ್ವ ಸನಾತನ ಪರಿಷತ್ ಮುಖಂಡ ಭಾಸ್ಕರನ್ ಮಾತನಾಡಿ, ಅಮೃತ ಮಹೋತ್ಸವದಲ್ಲಿ ಶಾಸಕ ಜಮೀರ್ ಅಹಮದ್, ಮುಸ್ಲಿಂ ಸಂಘಟನೆಯಾಗಲೀ ಅಥವಾ ವಕ್ಫ್ ಬೋರ್ಡ್ ಆಗಲೀ ಧ್ವಜಾರೋಹಣಕ್ಕೆ ಮುಂದಾದರೆ ನಮ್ಮ ವಿರೋಧವಿದೆ. ಕಳೆದ 20 ವರ್ಷಗಳಿಂದ ಧ್ವಜಾರೋಹಣಕ್ಕೆ ಅಡ್ಡಿಪಡಿಸಿದ್ದೇ ಜಮೀರ್. ಈಗ ಅವರಿಂದ ಧ್ವಜಾರೋಹಣ ಮಾಡಿಸಿದರೆ ನಮ್ಮ ಹೋರಾಟ ವ್ಯರ್ಥವಾಗುತ್ತದೆ. ಹೀಗಾಗಿ ಅವರಿಂದ ಧ್ವಜಾರೋಹಣ ಮಾಡಿಸಬಾರದು ಎಂದು ತಿಳಿಸಿದರು.
ಚಾಮರಾಜಪೇಟೆ ನಾಗರಿಕ ಒಕ್ಕೂಟ ವೇದಿಕೆ ಪ್ರಧಾನ ಕಾರ್ಯದರ್ಶಿ ರುಕ್ಮಾಂಗದ ಮಾತನಾಡಿ, ಸಭೆಯಲ್ಲಿ ನಮ್ಮ ಅಭಿಪ್ರಾಯ ತಿಳಿಸಿದ್ದು, ಧ್ವಜಾರೋಹಣಕ್ಕೆ ಅನುಮತಿ ಕೋರಿದ್ದೇವೆ. 15ರಂದು ಧ್ವಜಾರೋಹಣಕ್ಕೆ ಪೊಲೀಸರು ಅನುಮತಿ ಕೊಟ್ಟಿಲ್ಲ. ಇದರಿಂದ ಅಶಾಂತಿ ಆದರೆ ನಾವು ಜವಾಬ್ದಾರರಲ್ಲ. ನಾವು ಶಾಂತಿಯಿಂದಲೇ ವರ್ತಿಸಿದ್ದೇವೆ. ಈ ಬಗ್ಗೆ ಪೊಲೀಸರಿಗೆ ಸ್ಪಷ್ಟವಾಗಿ ಮನವರಿಕೆ ಮಾಡಿಕೊಟ್ಟಿದ್ದೇವೆ. ಆ.13ರಿಂದ 15ರವರೆಗೆ ಸ್ವಾತಂತ್ರ್ಯ ದಿನ ಆಚರಣೆ ಮಾಡಲು ತೀರ್ಮಾನಿಸಿದ್ದು, ಆ.13 ಮತ್ತು 14ರಂದು ಚಾಮರಾಜಪೇಟೆಯಲ್ಲೆಲ್ಲ ಧ್ವಜಾರೋಹಣ ಮಾಡುತ್ತೇವೆ. ಆ.15ರಂದು ಮೈದಾನದಲ್ಲಿ ಧ್ವಜಾರೋಹಣ ನಡೆಯಲಿದೆ. ಅದಕ್ಕೆ ಬೇಕಾದ ಎಲ್ಲ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.
ಸಭೆಯಲ್ಲಿ ಶ್ರೀರಾಮಸೇನೆಯ ಚಂದ್ರಶೇಖರ್, ಸುಂದರೇಶ್, ವಂದೇ ಮಾತರಂ ಸಂಘಟನೆಯ ಶಿವಕುಮಾರ್ ನಾಯಕ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.
ಈದ್ಗಾದಲ್ಲಿ ಧ್ವಜಾರೋಹಣ ಮಾತ್ರ, ಧಾರ್ಮಿಕ ಆಚರಣೆ ಇಲ್ಲ: ಜಮೀರ್ ಅಹಮದ್
ಕಾನೂನು ಉಲ್ಲಂಘಿಸಿದರೆ ಕಠಿಣ ಕ್ರಮ: ಡಿಸಿಪಿ ಲಕ್ಷ್ಮಣ್
ಚಾಮರಾಜಪೇಟೆ ಮೈದಾನ ಕಂದಾಯ ಇಲಾಖೆಯದ್ದು ಎಂಬ ಆದೇಶವಿದೆ. ಈ ಸಂಬಂಧ ಎರಡು ಸಮುದಾಯಗಳಿಂದ ವಿಭಿನ್ನ ಹೇಳಿಕೆ ಬರುತ್ತಿದೆ. ಹೀಗಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರದಂತೆ ನಡೆದುಕೊಳ್ಳುವಂತೆ ಮನವರಿಕೆ ಮಾಡಲಾಗಿದೆ. ಮಂಗಳವಾರ ಕೇವಲ ಹಿಂದು ಪರ ಸಂಘಟನೆಗಳ ಮುಖಂಡರ ಸಭೆಯನ್ನು ಮಾತ್ರ ನಡೆಸಲಾಗಿದೆ. ನಾಳೆ ಸಂಜೆ 4.30ಕ್ಕೆ ಮುಸ್ಲಿಂ ಮುಖಂಡರನ್ನು ಕರೆದು ಶಾಂತಿ ಸಭೆ ನಡೆಸಲಾಗುವುದು. ಸಭೆಯ ವಿಚಾರಗಳ ಬಗ್ಗೆ ಹಿರಿಯ ಅಧಿಕಾರಿಗಳಿಗೆ ವರದಿ ನೀಡಲಾಗುವುದು. ಈ ನಡುವೆ ಕಿಡಿಗೇಡಿಗಳು ಕಾನೂನು ಉಲ್ಲಂಘನೆ ಮಾಡಿದರೆ ಕಠಿಣ ಕ್ರಮ ಜರುಗಿಸುತ್ತೇವೆ ಎಂದು ಪಶ್ಚಿಮ ವಲಯ ಡಿಸಿಪಿ ಲಕ್ಷ್ಮಣ್ ನಿಂಬರಗಿ ಎಚ್ಚರಿಸಿದರು.
ಸ್ವಾತಂತ್ರ್ಯೋತ್ಸವದ ಬಗ್ಗೆ ಮಾತ್ರ ಚರ್ಚೆ
ಈ ಸಭೆಯಲ್ಲಿ ಕೇವಲ ಸ್ವಾತಂತ್ರ್ಯೋತ್ಸವ ಆಚರಣೆ ಬಗ್ಗೆ ಮಾತ್ರ ಚರ್ಚೆ ನಡೆಯಿತು. ಹಿಂದೂಪರ ಸಂಘಟನೆಗಳ ಮುಖಂಡರು ಮಾತ್ರ ಸಭೆಯಲ್ಲಿ ಪಾಲ್ಗೊಂಡಿದ್ದರು. ಗಣೇಶ ಉತ್ಸವಕ್ಕೆ ಸಂಬಂಧಿಸಿದಂತೆ ಯಾವುದೇ ಚರ್ಚೆ ನಡೆದಿಲ್ಲ. ಅದಕ್ಕೆ ಬೇರೆಯದಾದ ಇನ್ನೊಂದು ಸಮಿತಿ ಇದೆ ಎಂದು ಚಾಮರಾಜಪೇಟೆ ನಾಗರಿಕ ಒಕ್ಕೂಟ ವೇದಿಕೆ ಅಧ್ಯಕ್ಷ ರಾಮೇಗೌಡ ತಿಳಿಸಿದರು.