Udupi: ಯಶ್ಪಾಲ್ ಸುವರ್ಣಗೆ ಮತ್ತೆ ಬೆದರಿಕೆ: ಇಲಾಖೆಯಿಂದ ಪೊಲೀಸ್ ಭದ್ರತೆ
ಹಿಂದೂ ನಾಯಕ ಯಶಪಾಲ್ ಸುವರ್ಣಗೆ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳ ಮೂಲಕ ಬೆದರಿಕೆ ಹಾಕಲಾಗಿದೆ. ಈ ಬಾರಿ ಮತ್ತಷ್ಟು ಗಂಭೀರ ಸಂದೇಶಗಳನ್ನು ರವಾನಿಸಿದ್ದು, ಪೊಲೀಸ್ ಇಲಾಖೆ ಗನ್ ಮ್ಯಾನ್ ಭದ್ರತೆ ನೀಡಲು ಮುಂದಾಗಿದೆ.
ವರದಿ: ಶಶಿಧರ ಮಾಸ್ತಿಬೈಲು ಏಷ್ಯಾನೆಟ್ ಸುವರ್ಣ ನ್ಯೂಸ್
ಉಡುಪಿ (ಜೂ.09): ಹಿಂದೂ ನಾಯಕ ಯಶಪಾಲ್ ಸುವರ್ಣಗೆ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳ ಮೂಲಕ ಬೆದರಿಕೆ ಹಾಕಲಾಗಿದೆ. ಈ ಬಾರಿ ಮತ್ತಷ್ಟು ಗಂಭೀರ ಸಂದೇಶಗಳನ್ನು ರವಾನಿಸಿದ್ದು, ಪೊಲೀಸ್ ಇಲಾಖೆ ಗನ್ ಮ್ಯಾನ್ ಭದ್ರತೆ ನೀಡಲು ಮುಂದಾಗಿದೆ. ಆದರೆ ಯಶ್ಪಾಲ್ ಸುವರ್ಣ ಭದ್ರತೆ ಪಡೆಯಲು ನಿರಾಕರಿಸಿದ್ದಾರೆ.
ಶ್ರದ್ಧಾಂಜಲಿ ಬ್ಯಾನರ್ ರೆಡಿ ಮಾಡಿಕೋ: ಹಿಜಾಬ್ ವಿಚಾರದಲ್ಲಿ ಮುಂಚೂಣಿಯಲ್ಲಿದ್ದ ಸರಕಾರಿ ಪದವಿಪೂರ್ವ ಹೆಮ್ಮಕ್ಕಳ ಕಾಲೇಜಿನ ಆಡಳಿತ ಮಂಡಳಿ ಉಪಾಧ್ಯಕ್ಷ ಯಶಪಾಲ ಸುವರ್ಣ ಅವರಿಗೆ ಜೀವ ಬೆದರಿಕೆ ಮುಂದುವರೆದಿದೆ. ಎರಡು ದಿನಗಳ ಹಿಂದೆ ಮಾರಿಗುಡಿ 6 ಎಂಬ ಇನ್ಸ್ಟ್ರಾಗ್ರಾಮ್ ಪೇಜ್ ಮೂಲಕ ಬೆದರಿಕೆ ಹಾಕಲಾಗಿತ್ತು. ಯಶ್ಪಾಲ್ ಹಾಗೂ ಪ್ರಮೋದ್ ಮುತಾಲಿಕ್ ತಲೆಗೆ 20 ಲಕ್ಷ ಬೆಲೆ ಕಟ್ಟಲಾಗಿತ್ತು. ಆದರೆ ಯಶ್ಪಾಲ್ ಸುವರ್ಣ ಡೋಂಟ್ ಕೇರ್ ಎಂದಿದ್ದರು.
ಕೊಲೆ ಬೆದರಿಕೆ: ಹಿಂದುತ್ವ ವಿಷಯದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ: ಯಶ್ಪಾಲ್ ಸುವರ್ಣ
ಇದೀಗ ಮತ್ತೊಮ್ಮೆ ಅದೇ ಪೇಜ್ ಮೂಲಕ ಬೆದರಿಕೆ ಹಾಕಲಾಗಿದೆ. ಶ್ರದ್ಧಾಂಜಲಿ ಬ್ಯಾನರ್ ರೆಡಿ ಮಾಡಿಕೋ ಮತ್ತೆ ಹುಟ್ಟಿ ಬರಬೇಡ ಎಂದು ಎಚ್ಚರಿಸಲಾಗಿದೆ. ಮತ್ತು ನಾನಾ ಥರದ ಕಮೆಂಟ್‌ಗಳ ಮೂಲಕವೂ ಜೀವ ಬೆದರಿಕೆ ಒಡ್ಡಲಾಗುತ್ತಿದೆ. ಪದೇ ಪದೇ ಈ ರೀತಿಯ ಸಂದೇಶಗಳು ಬರುತ್ತಿರುವುದರಿಂದ ಹಿಂದೂ ಕಾರ್ಯಕರ್ತರು ಆಕ್ರೋಶಗೊಂಡಿದ್ದಾರೆ. ಸೂಕ್ತ ಕ್ರಮ ಜರುಗಿಸುವಂತೆ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಭದ್ರತೆ ತೆಗೆದುಕೊಳ್ಳಲು ಇಷ್ಟವಿಲ್ಲ: ಸಾಮಾಜಿಕ ಜಾಲತಾಣಗಳ ಮೂಲಕ ಕೊಲೆಬೆದರಿಕೆ ಮರುಕಳಿಸಿರುವುದರಿಂದ ಪೊಲೀಸ್ ಇಲಾಖೆ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಅವರ ಸೂಚನೆಯ ಮೇರೆಗೆ ಡಿವೈಎಸ್ಪಿ ಸುಧಾಕರ್, ಯಶಪಾಲ್ ಸುವರ್ಣ ಅವರನ್ನು ಕಚೇರಿಗೆ ಕರೆಸಿಕೊಂಡಿದ್ದಾರೆ. ಕಾನೂನು ಗೌರವಿಸುವ ನಿಟ್ಟಿನಲ್ಲಿ ಪೊಲೀಸ್ ಭದ್ರತೆ ಪಡೆಯಬೇಕೆಂದು ಎಚ್ಚರಿಸಿದ್ದಾರೆ. ಇಂದು ಬೆಳಿಗ್ಗೆ ಗನ್ ಮ್ಯಾನ್ ಕಳಿಸಿಕೊಟ್ಟಿದ್ದಾರೆ. ಆದರೆ ಯಶ್ಪಾಲ್ ಸುವರ್ಣ ಭದ್ರತಾ ವ್ಯವಸ್ಥೆಯನ್ನು ನಿರಾಕರಿಸಿ ವಾಪಸು ಕಳುಹಿಸಿದ್ದಾರೆ.
ಹಿರಿಯರೊಂದಿಗೆ ಚರ್ಚಿಸಿ ಒಂದೆರಡು ದಿನಗಳಲ್ಲಿ ಭದ್ರತೆ ಬೇಕೇ ಬೇಡವೇ ಎಂಬ ಬಗ್ಗೆ ತೀರ್ಮಾನಿಸುವುದು ಹೇಳಿದ್ದಾರೆ. ಗನ್ ಮ್ಯಾನ್ ಸಂಸ್ಕೃತಿ ನನಗೆ ಒಗ್ಗುವುದಿಲ್ಲ. ಸಾರ್ವಜನಿಕ ಸೇವೆಗೆ ಇರುವ ಪೊಲೀಸರನ್ನು ವೈಯಕ್ತಿಕ ಭದ್ರತೆಗೆ ಬಳಸಿಕೊಳ್ಳುವುದು ಇಷ್ಟವಿಲ್ಲ. ಪೊಲೀಸರು ಭದ್ರತೆ ತೆಗೆದುಕೊಳ್ಳಲೇಬೇಕು ಎಂದು ಸೂಚಿಸಿದ್ದಾರೆ. ಈ ಬಗ್ಗೆ ಶೀಘ್ರ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಇಂತಹ ಬೆದರಿಕೆಗಳಿಗೆ ನಾನು ಹೆದರುವುದಿಲ್ಲ ಅಡ್ಡ ದಾರಿ ಹಿಡಿದರೆ ಇಲಾಖೆ ಮತ್ತು ನಮ್ಮ ಕಾರ್ಯಕರ್ತರು ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದ್ದಾರೆ.
ಇನ್ಸ್ಟಾಗ್ರಾಮ್‌ನಲ್ಲಿ ಯಶ್ಪಾಲ್ ಸುವರ್ಣ, ಮುತಾಲಿಕ್ ಹತ್ಯೆಗೆ ಪ್ರಚೋದನೆ: 20 ಲಕ್ಷ ಬಹುಮಾನ
ಇನ್ಸ್ಟ್ರಾಗ್ರಾಮ್ ಪೇಜ್ ಮೇಲೆ ಕ್ರಮ ಕೈಗೊಳ್ಳಬೇಕೆಂದು ಹಿಂದೂ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ. ಸ್ಥಳೀಯರನ್ನು ಬಳಸಿಕೊಂಡು ವಿದೇಶಗಳ ಮೂಲಕ ಈ ರೀತಿಯ ಬೆದರಿಕೆ ಸಂದೇಶ ರವಾನಿಸಲಾಗುತ್ತಿದೆ. ಕಾಪು ತಾಲೂಕಿನ ಮುಳೂರು, ಉಚ್ಚಿಲ ಪರಿಸರದವರು ಈ ಕೃತ್ಯದ ಹಿಂದಿರುವ ಸಾಧ್ಯತೆ ಇದೆ ಎಂದು ಸ್ವತ: ಯಶ್ಪಲ್ ಸುವರ್ಣ ಸಂಶಯ ವ್ಯಕ್ತಪಡಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸ್ ಇಲಾಖೆ ಕಠಿಣ ಕ್ರಮ ತೆಗೆದುಕೊಳ್ಳಬೇಕಾದ ಅಗತ್ಯಇದೆ.