ಕೊಲೆ ಬೆದರಿಕೆ: ಹಿಂದುತ್ವ ವಿಷಯದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ: ಯಶ್ಪಾಲ್ ಸುವರ್ಣ

*   ಸೂಕ್ತ ಕ್ರಮಕ್ಕೆ ಹಿಂದೂ ಯುವ ಸೇನೆ ಆಗ್ರಹ
*  ಸೋಶಿಯಲ್ ಮೀಡಿಯಾ ಹೀರೋಗಳ ಹತ್ರ ಏನು ಮಾಡಲು ಆಗಲ್ಲ
*  ನಾನು ಹೋರಾಟದ ಮನೋಭಾವದಿಂದಲೇ ಬಂದವನು. ನನಗೆ ಯಾವುದೇ ಗನ್ ಮ್ಯಾನ್ ಅಗತ್ಯ ಇಲ್ಲ
 

Yashpal Suvarna React on Murder Threat Message grg

ವರದಿ- ಶಶಿಧರ ಮಾಸ್ತಿಬೈಲು, ಏಷಿಯಾನೆಟ್ ಸುವರ್ಣ ನ್ಯೂಸ್

ಉಡುಪಿ(ಜೂ.08):  ಬಿಜೆಪಿ ಮುಖಂಡ, ಹಿಂದೂ ನಾಯಕ ಯಶಪಾಲ್ ಸುವರ್ಣಗೆ, ಇನ್ಸ್ಟ್ರಾಗ್ರಾಮ್ ಪೇಜ್ ಮೂಲಕ ಬೆದರಿಕೆ ಹಾಕಿರುವ ಪ್ರಕರಣದ ಶೀಘ್ರ ತನಿಖೆಗೆ ಹಿಂದೂ ಯುವಸೇನೆ ಸಹಿತ ವಿವಿಧ ಹಿಂದೂ ಸಂಘಟನೆಗಳು ಒತ್ತಾಯಿಸಿವೆ. ಕಠಿಣ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ನೀಡಿದೆ.

ಮಾರಿಗುಡಿ ಎಂಬ ಇನ್ಸ್ಟಾಗ್ರಾಮ್ ಪೇಜಿನಲ್ಲಿ ಈ ಎರಡು ಹಂದಿಗಳ ತಲೆ ಕಡೆದರೆ 20 ಲಕ್ಷ ಎಂದು ಘೋಷಿಸಲಾಗಿತ್ತು. ಯಶ್ಪಾಲ್ ಸುವರ್ಣ ಮತ್ತು ಪ್ರಮೋದ್ ಮುತಾಲಿಕ್ ತಲೆ ಉರುಳುವುದು ಖಚಿತ ಎಂದು ಬೆದರಿಕೆ ಒಡ್ಡಲಾಗಿತ್ತು. ಈ ಕುರಿತು ಸ್ವತಃ ಯಶ್ಪಾಲ್ ಸುವರ್ಣ ಯಾವುದೇ ದೂರು ನೀಡಿಲ್ಲವಾದರೂ ಹಿಂದೂ ಸಂಘಟನೆಗಳು ಸೂಕ್ತ ಕ್ರಮಕ್ಕಾಗಿ ಆಗ್ರಹಿಸುತ್ತಿವೆ.

ಹಿಂದುತ್ವದ ವಿಚಾರದಲ್ಲಿ ಹಿಂದೆಮುಂದೆ ನೋಡುವ ಪ್ರಶ್ನೆ ಇಲ್ಲ

ತನಗೆ ಬಂದಿರುವ ಬೆದರಿಕೆಯ ಕುರಿತು ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆ ಮಾತನಾಡಿದ ಯಶ್ಪಾಲ್ ಸುವರ್ಣ, ಸಾರ್ವಜನಿಕ ಜೀವನದಲ್ಲಿ ಇಂತಹ ಬೆದರಿಕೆ ಬಹಳಷ್ಟು ನೋಡಿದ್ದೇನೆ. ಮಳೆಗಾಲದಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿ, ಯಾರೋ ಒಬ್ಬ ಹಾಕಿದ ಬೆದರಿಕೆಗೆ ಜಗ್ಗುವುದಿಲ್ಲ. ನನ್ನ ಬೆಲೆ ಎಷ್ಟು ಎಂದು ಬೆದರಿಕೆ ಹಾಕಿದವನಿಗೆ ಗೊತ್ತಿಲ್ಲ. 10 ಲಕ್ಷ ಅಲ್ಲ ಒಂದು ಕೋಟಿ ಬೆಲೆ ಕಟ್ಟಿದರೂ ಬೆದರುವುದಿಲ್ಲ ಎಂದು ಹೇಳಿದ್ದಾರೆ.

ಇನ್ಸ್ಟಾಗ್ರಾಮ್‌ನಲ್ಲಿ ಯಶ್ಪಾಲ್‌ ಸುವರ್ಣ, ಮುತಾಲಿಕ್‌ ಹತ್ಯೆಗೆ ಪ್ರಚೋದನೆ: 20 ಲಕ್ಷ ಬಹುಮಾನ

ಇಂತಹ ಟೀಕೆಗಳಿಂದ ಮತ್ತಷ್ಟು ಶಕ್ತಿ ಬಂದಂತಾಗುತ್ತದೆ. ಹಿಂದುತ್ವದ ಸಿದ್ಧಾಂತದಲ್ಲಿ ಯಾವುದೇ ರಾಜಿ ಇಲ್ಲ. ರಾಷ್ಟ್ರೀಯತೆಯ ವಿಚಾರದಲ್ಲಿ ಹಿಂದೆ ಸರಿಯುವುದಿಲ್ಲ. ಕಳೆದ 20 ವರ್ಷಗಳಿಂದ ಸಂಘಟನಾತ್ಮಕವಾಗಿ ಕೆಲಸ ಮಾಡುತ್ತಿದ್ದೇನೆ. ನಾನು ಅನ್ಯಾಯದ ದಾರಿಯಲ್ಲಿ ನಡೆದವನಲ್ಲ ಸ್ವಂತ ದುಡಿಮೆಯಿಂದ ಬದುಕುವವ.ಆ ವ್ಯಕ್ತಿ ಯಾರೆಂಬುದು ಗೊತ್ತಾದರೆ ಸರಿಯಾದ ಸಮಯದಲ್ಲಿ ಉತ್ತರ ನೀಡುತ್ತೇನೆ. ಹಿಂದುಗಳಿಗೆ ಅನ್ಯಾಯವಾದಾಗ ನಾನು ಎದ್ದು ನಿಂತಿದ್ದೇನೆ. ನನಗೆ ಬೆದರಿಕೆ ಹಾಕಿದವರು ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.

ಹಿಜಾಬ್ ವಿಚಾರದಲ್ಲಿ ರಾಜಿ ಪ್ರಶ್ನೆ ಇಲ್ಲ

ಹಿಜಾಬ್ ಸಂಘರ್ಷ ಆರಂಭವಾದಾಗಿನಿಂದ ಹೊರಾಟ ಮಾಡಿದ್ದೇನೆ. ಹಿಜಾಬ್ ವಿಚಾರದಲ್ಲಿ ಯಾವುದೇ ರಾಜಿಯ ಪ್ರಶ್ನೆಯೇ ಇಲ್ಲ. ಹಿಂದುತ್ವದ ವಿಚಾರ ಬಂದಾಗ ಅಗ್ರೆಸ್ಸಿವ್ ಆಗಿಯೇ ಹೋಗುತ್ತೇನೆ. ಹಿಂದುತ್ವದ ವಿಚಾರದಲ್ಲಿ ಹಿಂದೆ ಮುಂದೆ ನೋಡುವ ಪ್ರಶ್ನೆಯೇ ಇಲ್ಲ. ಮುತಾಲಿಕ್‌ಗೂ ಬೆದರಿಕೆ ಕೊಟ್ಟಿದ್ದಾರೆ ಅವರ ಜೊತೆ ನಾನು ಮಾತನಾಡಿಲ್ಲ. ನಾನು ಹಿಂದೆ ಸರಿಯಬಹುದು ಎಂದು ಭಾವಿಸಿದರೆ ತಪ್ಪು. ನಾನು ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಮತ್ತಷ್ಟು ಕೆಲಸ ಮಾಡಲು ಮುಂದಾಗುತ್ತೇನೆ ಎಂದರು.

ಹೊರರಾಜ್ಯ ಹೊರದೇಶದಲ್ಲಿ ಕುಳಿತುಕೊಂಡು ಇಂತಹ ಪೇಜ್ ಆಪರೇಟ್ ಮಾಡುತ್ತಾರೆ. ನಮ್ಮ ಊರಿನಲ್ಲಿ ಇದ್ದುಕೊಂಡು ಇದರ ಹಿಂದೆ ಕೆಲಸ ಮಾಡುವವರು ಇದ್ದಾರೆ. ಅಂತಹ ವ್ಯಕ್ತಿಯ ಬಗ್ಗೆ ಗಮನ ನೀಡಬೇಕು. ಅಂತಹ ವ್ಯಕ್ತಿಗಳು ನಮ್ಮ ಊರಿಗೆ ಮಾರಕ ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಮೊದಲು ಹುಡುಕಬೇಕು. ಅಂತವರನ್ನು ನಮ್ಮ ಊರಲ್ಲಿ ಇರಲು ಬಿಡಬಾರದು. ಅಂತಹ ವ್ಯಕ್ತಿಗಳು ದೇಶದ್ರೋಹಿಗಳು ಎಂದಿದ್ದಾರೆ.

ಸೋಶಿಯಲ್ ಮೀಡಿಯಾ ಹೀರೋಗಳ ಹತ್ರ ಏನು ಮಾಡಲು ಆಗಲ್ಲ. ದೇಶ ಸಿದ್ಧಾಂತ ವಿಚಾರ ಬಂದಾಗ ರಾಜಿ ಮಾಡುವ ಪ್ರಶ್ನೆಯಿಲ್ಲ. ನಾನು ಹೋರಾಟದ ಮನೋಭಾವದಿಂದಲೇ ಬಂದವನು. ನನಗೆ ಯಾವುದೇ ಗನ್ ಮ್ಯಾನ್ ಅಗತ್ಯ ಇಲ್ಲ, ಬೇಡಿಕೆ ಇಡುವುದಿಲ್ಲ. ದೇವರು ಆರೋಗ್ಯ ಕೊಟ್ಟವರೆಗೆ ನನ್ನ ಸ್ವೀಡ್  ಬ್ರೇಕ್ ಆಗೋದಿಲ್ಲ ಎಂದರು.
 

Latest Videos
Follow Us:
Download App:
  • android
  • ios