ಉತ್ತರ ಕನ್ನಡ ಜಿಲ್ಲೆಯಲ್ಲಿ ವರುಣನ ಆರ್ಭಟ: ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ ಜಿಲ್ಲಾಡಳಿತ
ಜಿಲ್ಲೆಯಾದ್ಯಂತ ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಅಲ್ಲಲ್ಲಿ ನೆರೆ ಕಾಟ ಕಾಣಿಸಿಕೊಂಡಿದೆ. ಜಿಲ್ಲೆಯ ಹಲವೆಡೆ ಮನೆಗಳಿಗೆ ನೀರು ಹೊಕ್ಕರೆ, ಸೇತುವೆಗಳು ಕೂಡಾ ಮುಳುಗಡೆಯಾಗಿವೆ.
ಭರತ್‌ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ
ಉತ್ತರ ಕನ್ನಡ (ಜು.05): ಜಿಲ್ಲೆಯಾದ್ಯಂತ ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಅಲ್ಲಲ್ಲಿ ನೆರೆ ಕಾಟ ಕಾಣಿಸಿಕೊಂಡಿದೆ. ಜಿಲ್ಲೆಯ ಹಲವೆಡೆ ಮನೆಗಳಿಗೆ ನೀರು ಹೊಕ್ಕರೆ, ಸೇತುವೆಗಳು ಕೂಡಾ ಮುಳುಗಡೆಯಾಗಿವೆ. ಈ ನಡುವೆ ಅವೈಜ್ಞಾನಿಕ ಹೆದ್ದಾರಿ ಕಾಮಗಾರಿಯಿಂದಲೂ ಕೃತಕ ನೆರೆ ಸೃಷ್ಠಿಯಾಗಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ಇಂದು ಶಾಲಾ- ಕಾಲೇಜಿಗೆ ರಜೆ ನೀಡಿದ್ದ ಜಿಲ್ಲಾಡಳಿತ ನಾಳೆ ಮತ್ತೆ ರಜೆ ಘೋಷಣೆ ಮಾಡಿದ್ದಾರೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ. ಜಿಲ್ಲೆಯಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜನಜೀವನವಂತೂ ಅಕ್ಷರಶಃ ನಲುಗಿ ಹೋಗಿದೆ. ಒಂದೆರಡು ದಿನಗಳ ಕಾಲ ಸುರಿದ ಮಳೆಯಿಂದಾಗಿ ಜಲಪ್ರಳಯವೇ ಉಂಟಾಗಿದ್ದು, ಜನರು ತತ್ತರಿಸಿ, ಕಣ್ಣೀರಿಡುವಂತಾಗಿದೆ.
ಕಾರವಾರ ತಾಲೂಕಿನ ಅರಗಾ, ಬಿಣಗಾ ಭಾಗದಲ್ಲಿ ಸುರಿದ ಭಾರೀ ಮಳೆಗೆ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿದುಬಂದಿದ್ದು, ಜನವಸತಿ ಪ್ರದೇಶಗಳು ಕೆರೆಯಂತಾಗಿವೆ. ಅದರಲ್ಲೂ ಹೆದ್ದಾರಿಗೆ ಹೊಂದಿಕೊಂಡಿರುವ ಭಾಗಗಳಲ್ಲೇ ಭಾರೀ ಪ್ರಮಾಣದಲ್ಲಿ ನೀರು ತುಂಬಿ ನಿಂತಿದ್ದು, ನೀರು ಹರಿದುಹೋಗಲು ಮಾರ್ಗವಿಲ್ಲದೇ ಮನೆಗಳಿಗೆ ನೀರು ನುಗ್ಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಣಾಮ ಅರಗಾ, ಬಿಣಗಾ ಭಾಗದಲ್ಲಿ ಸುಮಾರು 30 ಮನೆಗಳಿಗೆ ನೀರು ನುಗ್ಗಿದ್ದು, ಮನೆಯಲ್ಲಿದ್ದ ದಿನಬಳಕೆ ವಸ್ತುಗಳು, ಅಕ್ಕಿ, ಬೇಳೆಯಂತಹ ದಿನಸಿ ಸಾಮಾನುಗಳು ನೀರು ಪಾಲಾಗಿವೆ. ಜಿಲ್ಲೆಯಲ್ಲಿ ಹೆದ್ದಾರಿ ಅಗಲೀಕರಣ ಜವಾಬ್ದಾರಿ ಹೊತ್ತಿರುವ ಐಆರ್‌ಬಿ ಕಂಪೆನಿ ಅವೈಜ್ಞಾನಿಕ ಕಾಮಗಾರಿಯಿಂದಾಗಿಯೇ ಮಳೆಯ ನೀರು ಜನವಸತಿ ಪ್ರದೇಶಕ್ಕೆ ನುಗ್ಗುತ್ತಿದೆ.
ಉತ್ತರ ಕನ್ನಡದಲ್ಲಿ ಭಾರೀ ಮಳೆ: ಅನಮೋಡ ಹೈವೇಯಲ್ಲಿ ಗುಡ್ಡ ಕುಸಿತ
ಮಳೆ ನೀರು ಹರಿದು ಹೋಗಲು ಕಾಲುವೆ ಇಲ್ಲದ್ದರಿಂದಲೇ ಕೃತಕ ನೆರೆ ಸೃಷ್ಠಿಯಾಗಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಜಿಲ್ಲೆಯ ಯಲ್ಲಾಪುರದ ಗುಳ್ಳಾಪುರದ ತಾತ್ಕಾಲಿಕ ಸೇತುವೆ, ಪಣಸಗುಳಿಯ ಹಾಸು ಸೇತುವೆ ಮುಳುಗಡೆಯಾಗಿದ್ದು, ಡೋಂಗ್ರಿ ಸೇರಿದಂತೆ ಇತರ ಭಾಗದ ಜನರು ದ್ವೀಪದಲ್ಲಿ ಸಿಲುಕಿಕೊಂಡಂತಾಗಿದೆ. ಇನ್ನು ಬಿಣಗಾದಲ್ಲೂ ಸಣ್ಣ ಸೇತುವೆ ಮುಳುಗಡೆಯಾಗಿದ್ದು, ಜನರು ಉತ್ತಮ ಸೇತುವೆ ನಿರ್ಮಾಣಕ್ಕೆ ಒತ್ತಾಯಿಸಿದ್ದಾರೆ. ಅಂದಹಾಗೆ, ಕಳೆದ ಕೆಲವು ದಿನಗಳ ಹಿಂದೆ ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ಮಳೆಯ ಸುರಿದಿದ್ದ ಸಂದರ್ಭದಲ್ಲೂ ಅರಗಾ ಭಾಗದಲ್ಲಿ ಹೆದ್ದಾರಿಯಂಚಿನ ಮನೆಗಳಿಗೆ ನೀರು ನುಗ್ಗಿತ್ತು.
ಐಆರ್‌ಬಿ ಕಂಪೆನಿ ಹೆದ್ದಾರಿ ಇಕ್ಕೆಲಗಳಲ್ಲಿ ಸೂಕ್ತ ಕಾಲುವೆ ನಿರ್ಮಿಸದೇ ಮಳೆನೀರು ಹರಿದುಹೋಗುವ ಪೈಪ್‌ಗಳನ್ನು ಬೇಕಾಬಿಟ್ಟಿಯಾಗಿ ಅಳವಡಿಸಿತ್ತು. ಪರಿಣಾಮ ಮಳೆಯ ನೀರು ಸರಾಗವಾಗಿ ಹರಿದು ಹೋಗದೇ ಹೆದ್ದಾರಿ ಅಕ್ಕಪಕ್ಕದ ಮನೆಗಳಿಗೆ ನೀರು ನುಗ್ಗಿತ್ತು. ಈ ವೇಳೆಯೇ ಅಲ್ಲಿನ ನಿವಾಸಿಗರು ಸೂಕ್ತ ಕಾಲುವೆಗಳನ್ನು ನಿರ್ಮಿಸುವಂತೆ ಆಗ್ರಹಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಕಾರಣ ಇದೀಗ ಮತ್ತೆ ಈ ಸ್ಥಳಗಳಲ್ಲಿ ನೆರೆ ಸೃಷ್ಠಿಯಾಗಿದೆ. ಇನ್ನು ನೆರೆ ಪರಿಸ್ಥಿತಿ ನಿರ್ಮಾಣವಾದ ಮನೆಗಳಿಗೆ ಸ್ಥಳೀಯ ಶಾಸಕಿ ರೂಪಾಲಿ ನಾಯ್ಕ ಭೇಟಿ ನೀಡಿ ಪರಿಶೀಲಿಸಿದ್ದು, ಈ ವೇಳೆ ಐಆರ್‌ಬಿ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು. ಈ ಹಿಂದೆಯೇ ಸಭೆ ನಡೆಸಿ ಸಂಬಂಧಪಟ್ಟವರಿಗೆ ಸೂಕ್ತ ಸೂಚನೆ ನೀಡಿದ್ದರೂ, ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರು.
ಸಾಫ್ಟ್‌ವೇರ್ ದೋಷದಿಂದ ಸಿಗದ ಎಣ್ಣೆ: ಚಡಪಡಿಸಿದ ಮದ್ಯ ಪ್ರಿಯರು
ಇದರೊಂದಿಗೆ ನೌಕಾನೆಲೆ ಭಾಗದಲ್ಲೂ ಅಧಿಕಾರಿಗಳು ನೀರು ಹರಿದುಹೋಗುವ ಸ್ಥಳದಲ್ಲಿ ನೆಟ್ ಹಾಕಿದ್ದರಿಂದ ಕಸ ತುಂಬಿಕೊಂಡು ನೀರು ಹರಿಯಲು ಸಾಧ್ಯವಾಗದೆ ಕೃತಕ ನೆರೆ ಸೃಷ್ಟಿಯಾಗಿತ್ತು. ಇದರಿಂದ ಗಂಟೆಗಟ್ಟಲೆ ಸಂಚಾರವೂ ಅಸ್ತವ್ಯಸ್ತವಾಗಿತ್ತು. ಎರಡು ದಿನಗಳ ಕಾಲ ಭಾರೀ ಮಳೆ ಸುರಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ಈ ಹಿನ್ನೆಲೆ ಅರಗಾದಲ್ಲಿ ಕಾಳಜಿ ಕೇಂದ್ರವನ್ನೂ ತೆರೆಯಲಾಗಿದೆ. ಸದ್ಯ ಮಳೆಯ ನೀರು ಹರಿದುಹೋಗಲು ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಐಆರ್‌ಬಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುವ ಸೂಚನೆ ಹಿನ್ನೆಲೆ ತಗ್ಗು ಪ್ರದೇಶದ ನಿವಾಸಿಗಳ ಸುರಕ್ಷತೆಯತ್ತ ಜಿಲ್ಲಾಡಳಿತ ಗಮನಹರಿಸಬೇಕಾಗಿದೆ.