ಉತ್ತರ ಕನ್ನಡದಲ್ಲಿ ಭಾರೀ ಮಳೆ: ಅನಮೋಡ ಹೈವೇಯಲ್ಲಿ ಗುಡ್ಡ ಕುಸಿತ

*   ಮರ ಬಿದ್ದು ಆರು ಜನರಿಗೆ ಗಾಯ
*  ಸಂಪರ್ಕ ಕಳೆದುಕೊಂಡ ಅಂಕೋಲಾ, ಸಿದ್ದಾಪುರ ತಾಲೂಕಿನ ಹಲವು ಗ್ರಾಮಗಳು
*  ಕುಸಿತದಿಂದ ವಾಹನ ಸಂಚಾರ ಸ್ಥಗಿತ
 

Hill Collapse Due to Heavy Rain in Uttara Kannada grg

ಕಾರವಾರ(ಜು.05):  ಜಿಲ್ಲೆಯಲ್ಲಿ ಮಳೆ ಮತ್ತೆ ಅಬ್ಬರಿಸುತ್ತಿದೆ. ಹೊನ್ನಾವರದಲ್ಲಿ ಮನೆಯ ಮೇಲೆ ಮರ ಉರುಳಿ ಆರು ಜನರು ಗಾಯಗೊಂಡಿದ್ದಾರೆ. ನದಿಗಳು ಉಕ್ಕೇರಿ ಸೇತುವೆಗಳು ಮುಳುಗಿದ್ದರಿಂದ ಅಂಕೋಲಾ ಹಾಗೂ ಸಿದ್ದಾಪುರ ತಾಲೂಕಿನಲ್ಲಿ ಕೆಲವು ಗ್ರಾಮಗಳು ಸಂಪರ್ಕ ಕಳೆದುಕೊಂಡಿವೆ. ಜೋಯಿಡಾ ಗೋವಾ ಗಡಿಯಲ್ಲಿ ಹೆದ್ದಾರಿ ಮೇಲೆ ಗುಡ್ಡ ಕುಸಿದು ಸಂಚಾರ ಸ್ಥಗಿತಗೊಂಡಿತ್ತು.

ಮರ ಬಿದ್ದು ಆರು ಮಂದಿಗೆ ಗಾಯ:

ಸೋಮವಾರ ನಸುಕಿನಿಂದ ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗುತ್ತಿದೆ. ಹೊನ್ನಾವರದ ಹಳದೀಪುರದಲ್ಲಿ ಗಂಗಾಧರ ಶೇಟ ಎನ್ನುವವರ ಮನೆಯ ಮೇಲೆ ಬೃಹತ್‌ ಮರ ಉರುಳಿಬಿದ್ದು ಮನೆಯಲ್ಲಿದ್ದ ಆರು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳು ಹೊನ್ನಾವರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Karnataka Rain Update: ವರುಣನ ಆರ್ಭಟಕ್ಕೆ ಕೊಡಗು, ಮಡಿಕೇರಿ ಗಢ ಗಢ: ಕರಾವಳಿಗೆ ಜಲ ಗಂಡಾಂತರ!

ಜೋಯಿಡಾ ಹಾಗೂ ಗೋವಾ ಗಡಿಯಾದ ಆನಮೋಡದಲ್ಲಿ ಹೆದ್ದಾರಿ ಮೇಲೆ ಗುಡ್ಡ ಕುಸಿದಿದ್ದರಿಂದ ವಾಹನ ಸಂಚಾರ ಬೆಳಗ್ಗೆಯಿಂದ ಸ್ಥಗಿತವಾಗಿತ್ತು. ಬೆಳಗ್ಗೆಯಿಂದ ಮಧ್ಯಾಹ್ನದ ತನಕ ವಾಹನಗಳು ಸಾಲುಗಟ್ಟಿನಿಲ್ಲುವಂತಾಗಿ ಪ್ರಯಾಣಿಕರು ತೊಂದರೆಗೀಡಾದರು. ಜೆಸಿಬಿಗಳಿಂದ ಮಣ್ಣು-ಕಲ್ಲನ್ನು ತೆರವುಗೊಳಿಸಿದ ತರುವಾಯ ಸಂಜೆ ವೇಳೆಗೆ ಹೆದ್ದಾರಿ ಸಂಚಾರಕ್ಕೆ ಮುಕ್ತವಾಯಿತು.

ಮುಳುಗಿದ ಪಣಸಗುಳಿ ಸೇತುವೆ:

ಗಂಗಾವಳಿ ನದಿಗೆ ಪ್ರವಾಹ ಬಂದಿದ್ದು ಪಣಸಗುಳಿ ಸೇತುವೆ ನೀರಿನಲ್ಲಿ ಮುಳುಗಿದೆ. ಇದರಿಂದ ಅಂಕೋಲಾ ತಾಲೂಕಿನ ಕೈಗಡಿ, ಶೇವಕಾರ, ಹೆಗ್ಗಾರ, ಹಳ್ಳವಳ್ಳಿ, ಕಲ್ಲೇಶ್ವರಗಳಿಗೆ ಸಂಪರ್ಕ ಕಡಿತಗೊಂಡಿದೆ. ಸಿದ್ದಾಪುರ ತಾಲೂಕಿನಲ್ಲಿ ಕಾನಸೂರು ಮಾದ್ನಕಳ ರಸ್ತೆ ಜಲಾವೃತವಾಗಿದ್ದರಿಂದ ಮಾದ್ನಕಳ, ಅಮ್ಮಚ್ಚಿ, ದೇವಿಸರ, ಅರೇಹಳ್ಳ, ಕೊಪ್ಪ, ಆನಗಳ್ಳಿ, ಘಟ್ಟಿಕೈ, ಗಿರಗಡ್ಡೆ, ಈರಗೊಪ್ಪ, ಶ್ರೀನಗರ ಇತರ ಗ್ರಾಮದ ಜನತೆಗೆ ಕಾನಸೂರಿಗೆ ಬಾರಲಾರದೇ ಸಂಪರ್ಕ ಕಡಿದುಕೊಂಡಿದ್ದಾರೆ. ಸಿದ್ದಾಪುರ, ಕಾರವಾರ, ಕುಮಟಾ, ಹೊನ್ನಾವರ, ಅಂಕೋಲಾ, ಶಿರಸಿ, ಯಲ್ಲಾಪುರ, ಜೋಯಿಡಾ, ದಾಂಡೇಲಿಗಳಲ್ಲೂ ಮಳೆ ಭಾರಿ ಪ್ರಮಾಣದಲ್ಲಿ ಬಿದ್ದಿದೆ.

ಬಿರುಗಾಳಿ ಸಾಧ್ಯತೆ:

ಕರಾವಳಿಯಲ್ಲಿ ಮಂಗಳವಾರ ರಾತ್ರಿ 11.30ರ ತನಕ ಗಂಟೆಗೆ 40-50 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸುವ ಎಚ್ಚರಿಕೆ ನೀಡಲಾಗಿದೆ. ಸಮುದ್ರದಲ್ಲಿ 3.5 ಮೀ.ನಿಂದ 4.4 ಮೀ. ಎತ್ತರದ ಅಲೆಗಳು ಏಳುವ ಸಾಧ್ಯತೆ ಇರುವುದರಿಂದ ಮೀನುಗಾರರಿಗೆ ಕಡಲಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಜಿಲ್ಲೆಯಲ್ಲಿ ದಟ್ಟವಾದ ಮೋಡ ಕವಿದ ವಾತಾವರಣ ಉಂಟಾಗಿದೆ.
 

Latest Videos
Follow Us:
Download App:
  • android
  • ios