‘ಆರೋಗ್ಯ ಕ್ಷೇತ್ರ ಲಾಭದ ಉದ್ಯಮವಾಗಬಾರದು’

ಆರೋಗ್ಯ ಕ್ಷೇತ್ರ ಲಾಭದ ಉದ್ಯಮವಾಗಬಾರದು ಎಂದು ಕೇರಳದ ಮಾಜಿ ಆರೋಗ್ಯ ಸಚಿವೆ ಶೈಲಜಾ ಟೀಚರ್‌ ಪ್ರತಿಪಾದಿಸಿದರು.

 Health sector should not be a profit making industry

 ತುಮಕೂರು :  ಆರೋಗ್ಯ ಕ್ಷೇತ್ರ ಲಾಭದ ಉದ್ಯಮವಾಗಬಾರದು ಎಂದು ಕೇರಳದ ಮಾಜಿ ಆರೋಗ್ಯ ಸಚಿವೆ ಶೈಲಜಾ ಟೀಚರ್‌ ಪ್ರತಿಪಾದಿಸಿದರು.

ತುಮಕೂರಿನ ಗಾಂಧಿನಗರದಲ್ಲಿರುವ ಜನ ಚಳವಳಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಜನರ ಆರೋಗ್ಯ-ಸರ್ಕಾರದ ಹೊಣೆಗಾರಿಕೆ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜನ ಸಾಮಾನ್ಯರ ಆರೋಗ್ಯ ಕಾಪಾಡುವುದು ಯಾವುದೇ ಸರ್ಕಾರದ ಆದ್ಯ ಕರ್ತವ್ಯ. ಇದನ್ನು ಉದ್ಯಮದ ದೃಷ್ಟಿಯಿಂದ ಅಥವಾ ಲಾಭದ ದೃಷ್ಟಿಯಿಂದ ನೋಡಬಾರದು ಎಂದು ಕಿವಿಮಾತು ಹೇಳಿದರು.

ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಕನಿಷ್ಠ ಶೇ.10ರಷ್ಟುಆರೋಗ್ಯ ಕ್ಷೇತ್ರಕ್ಕೆ ಅನುದಾನ ನೀಡಬೇಕು. ಆದರೆ ಬಜೆಟ್‌ನಲ್ಲಿ ಶೇ.1ರಷ್ಟುಮಾತ್ರ ಆರೋಗ್ಯ ಕ್ಷೇತ್ರಕ್ಕೆ ವಿನಿಯೋಗಿಸಲಾಗುತ್ತಿದೆ. ಅನಿರ್ವಾಯವಾಗಿ ರಾಜ್ಯ ಸರ್ಕಾರಗಳು ವಿವಿಧ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದು ಆಸ್ಪತ್ರೆಗಳ ಉನ್ನತೀಕರಣಕ್ಕೆ ಮುಂದಾಗುವಂತಹ ದುಸ್ಥಿತಿ ಉಂಟಾಗಿದೆ ಎಂದು ವಿಷಾದಿಸಿದರು.

ಕೋವಿಡ್‌ ಸಾಂಕ್ರಾಮಿಕವನ್ನು ನಿಭಾಯಿಸಲು ಕೇರಳ ರಾಜ್ಯದಲ್ಲಿ ಕಮ್ಯುನಿಸ್ಟ್‌ ಸರ್ಕಾರ ನಡೆಸಿದ ಪ್ರಯತ್ನಗಳನ್ನು ವಿವರಿಸಿದ ಶೈಲಜಾ ಟೀಚರ್‌, ರೋಗದ ಆರಂಭಿಕ ಹಂತದಲ್ಲಿ ಸೋಂಕಿತರನ್ನು ಗುರುತಿಸಿ, ಅವರಿಗೆ ಸೂಕ್ತ ಚಿಕಿತ್ಸೆ ನೀಡುವ ಜೊತೆಗೆ, ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಪರಿಸ್ಥಿತಿಯನ್ನು ಎದುರಿಸಲು ಬೇಕಾದ ಯೋಜನಾಬದ್ಧ ಸಿದ್ಧತೆಯಿಂದ ಇಡೀ ದೇಶದಲ್ಲೇ ಕೇರಳ ರಾಜ್ಯಕ್ಕೆ ಅತ್ಯುತ್ತಮ ಹೆಸರು ಬಂದಿತು ಎಂಬುದು ಗಮನಾರ್ಹ. ಜೊತೆಗೆ ಖಾಸಗಿ ಕ್ಷೇತ್ರದವರು ಕೈಜೋಡಿಸಿದ್ದು ಪರಿಸ್ಥಿತಿಯನ್ನು ನಿಭಾಯಿಸಲು ಸಹಕಾರಿಯಾಯಿತು. ರಾಜ್ಯದ ಆಸ್ಪತ್ರೆಗಳನ್ನು ಖಾಸಗಿಯವರಿಗೆ ನೀಡಲು ಸಾಧ್ಯವೇ ಎಂಬ ಕೇಂದ್ರ ಸರ್ಕಾರದ ಮನವಿಗೆ ಸಾಧ್ಯವಿಲ್ಲ ಎಂಬ ಕೇರಳ ರಾಜ್ಯ ಸರ್ಕಾರದ ಉತ್ತರ ಜನ ಸಾಮಾನ್ಯರ ಆರೋಗ್ಯದ ಬಗೆಗಿನ ಕಾಳಜಿಯನ್ನು ಎತ್ತಿ ತೋರಿಸಿತ್ತು ಎಂದು ವಿಶ್ಲೇಷಿಸಿದರು.

ಜಗತ್ತಿನಲ್ಲಿ ಬಂಡವಾಳ ಶಾಹಿ ದೇಶಗಳು ಲಾಭಕ್ಕೆ ಮಾತ್ರ ಪ್ರಾಧಾನÜ್ಯತೆ ನೀಡುತ್ತಿರುವಾಗಲೇ, ಸಮಾಜವಾದಿ ಕ್ಯೂಬಾ ಮೂರನೇ ಜಗತ್ತಿನ ದೇಶಗಳಿಗೆ ಕೋವಿಡ್‌ ಸಂದರ್ಭದಲ್ಲಿ ವೈದ್ಯಕೀಯ ನೆರವು ನೀಡುತ್ತಿತ್ತು ಎಂದ ಅವರು, ಕಮ್ಯುನಿಸ್ಟ್‌ ಚಿಂತನೆಗಳು ಸದಾ ಜನಪರ ಎಂದರಲ್ಲದೆ, ಕಮ್ಯೂನಿಸ್ಟ್‌ ಪಕ್ಷಗಳನ್ನು ಜನತೆ ಬೆಂಬಲಿಸಬೇಕು ಎಂದು ಕರೆ ನೀಡಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿವೃತ್ತ ಉಪನಿರ್ದೇಶಕರಾದ ಡಾ.ಎಚ್‌.ವಿ.ರಂಗಸ್ವಾಮಿ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿ, ದೇಶದಲ್ಲಿ ಆರೋಗ್ಯ ಕಾರ್ಯಕರ್ತೆಯರು ಸಮುದಾಯದ ಮಟ್ಟದಲ್ಲಿ ಕೆಲಸ ಮಾಡುವಂತೆ ಸರ್ಕಾರಗಳು ಗಮನ ಹÜರಿಸಬೇಕು. 3-4 ರಾಜ್ಯಗಳಲ್ಲಿ ಮಾತ್ರ ಈ ವ್ಯವಸ್ಥೆ ಇದೆ ನೀತಿ-ಯೋಜನಾ ಹಂತದಲ್ಲೆ ಇದನ್ನು ಒಳಗೊಳ್ಳಬೇಕಾದ ಅಗತ್ಯವಿದೆ ಎಂದರು.

ಸಂವಾದದಲ್ಲಿ ಪರಿಸರವಾದಿ ಸಿ.ಯತಿರಾಜು, ನಿವೃತ್ತ ಪಿಯೂ ಜಂಟಿ ಉಪನಿರ್ದೇಶಕ ಪ್ರೊ.ಕೆ.ದೊರೈರಾಜ್‌, ಔಷಧ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ಪಂಡಿತ್‌ ಜವಾಹರ್‌, ಸ್ಲಂ ಜನಾಂದೋಲದ ಎ.ನರಸಿಂಹಮೂರ್ತಿ, ಕೇರಳ ಸಮಾಜದ ಜಾಯ್‌ ಕುಟ್ಟಿಇತರರು ಪಾಲ್ಗೊಂಡಿದ್ದರು.

ಅಧ್ಯಕ್ಷತೆ ವಹಿಸಿದ್ದ ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಸೈಯದ್‌ ಮುಜೀಬ್‌ ಮಾತನಾಡಿ, ಆರೋಗ್ಯವೆಂದರೆ ದೈಹಿಕ, ಮಾನಸಿಕ ಮತ್ತು ಆರ್ಥಿಕ, ಸಾಮಾಜಿಕ ಆರೋಗ್ಯವಾಗಿದೆ. ಸಾಮಾಜಿಕ ಆರೋಗ್ಯ ಹದೆಗಡಿಸುವ ಶಕ್ತಿಗಳನ್ನು ಸರ್ಕಾರವೇ ಬೆಂಬಲಿಸುವುದು ವಿಪರ್ಯಾಸ ಎಂದರು.

ಜಿಲ್ಲಾ ಸಿಪಿಐ(ಎಂ) ಕಾರ್ಯದರ್ಶಿ ಎನ್‌.ಕೆ. ಸುಬ್ರಮಣ್ಯ ಪ್ರಾಸ್ತಾವಿಕ ಮಾತನಾಡಿದರು. ನಗರ ಕಾರ್ಯದರ್ಶಿ ಲೋಕೇಶ್‌ ಸ್ವಾಗತಿಸಿ, ಖಲೀಲ್‌ ವಂದಿಸಿದರು.

ಸರ್ಕಾರಿ ಆಸ್ಪತ್ರೆ, ಆರೋಗ್ಯ ವ್ಯವಸ್ಥೆಯಲ್ಲಿ ಸಾಕಷ್ಟುಬದಲಾವಣೆಗಳು ಅತ್ಯಗತ್ಯವಾಗಿ ಆಗಬೇಕಾಗಿದೆ. ಸರ್ಕಾರಿ ಆಸ್ಪತ್ರೆಗಳನ್ನು ಖಾಸಗೀಕರಿಸಲು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರಬಾರದು. ಎಷ್ಟೇ ಕಷ್ಟವಾದರೂ ಆರೋಗ್ಯ ಕ್ಷೇತ್ರವನ್ನು ಸಾರ್ವಜನಿಕ ಕ್ಷೇತ್ರದಲ್ಲೇ ಉಳಿಸಿಕೊಂಡು, ಜನ ಸಾಮಾನ್ಯರ ಹಿತ ಕಾಯಬೇಕು.

ಶೈಲಜಾ ಕೇರಳದ ಮಾಜಿ ಆರೋಗ್ಯ ಸಚಿವೆ

Latest Videos
Follow Us:
Download App:
  • android
  • ios