ಡಿಜಿಟಲ್‌ ಜಾಹಿರಾತು ಫಲಕಕ್ಕೆ ಸಿದ್ಧತೆ,  ವಿವಿಧೆಡೆ ರಾರಾಜಿಸಲಿವೆ 26 ಫಲಕ ಹೋರ್ಡಿಂಗ್‌ ತೆರವುಗೊಳಿಸುವುದು ಅಸಾಧ್ಯ

ಶಿವಾನಂದ ಗೊಂಬಿ

ಹುಬ್ಬಳ್ಳಿಅ.27): ಹಸಿರು ನ್ಯಾಯಾಧಿಕರಣದ ಸೂಚನೆಯಂತೆ ಮಹಾನಗರದಲ್ಲಿನ ಹೋರ್ಡಿಂಗ್‌ ತೆರವುಗೊಳಿಸುವುದು ಅಸಾಧ್ಯದ ಮಾತು. ಆದರೆ 26 ಡಿಜಿಟಲ್‌ ಜಾಹೀರಾತು ಫಲಕ ಅಳವಡಿಸಲು ಪಾಲಿಕೆ ಸಿದ್ಧತೆ ನಡೆಸಿದೆ. ಮಹಾನಗರದಲ್ಲಿ ಎಲ್ಲಿ ನೋಡಿದರೂ ಬ್ಯಾನರ್‌, ಕಟೌಟ್‌, ಹೋರ್ಡಿಂಗ್‌ಗಳದ್ದೇ ಹಾವಳಿ. ಇದರಿಂದ ಸಾರ್ವಜನಿಕರಿಗೆ ಕಿರಿಕಿರಿ ತಪ್ಪುತ್ತಿಲ್ಲ. ಈ ಬಗ್ಗೆ ಹಲವಾರು ಬಾರಿ ಬ್ಯಾನರ್‌ ತೆರವುಗೊಳಿಸಿದರೂ ಮತ್ತೆ ಮರುದಿನವೇ ಕಾಣಿಸುತ್ತದೆ. ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ರಾಜ್ಯ ಸಮಿತಿ ಅಧ್ಯಕ್ಷರೂ ಆಗಿರುವ ನಿವೃತ್ತ ನ್ಯಾಯಾಧೀಶ ಸುಭಾಸ ಆಡಿ ಇತ್ತೀಚಿಗೆ ಸಭೆ ನಡೆಸಿ ಹಸಿರು ನ್ಯಾಯಾಧಿಕರಣದ ನಿಯಮದ ಬಗ್ಗೆ ಮಾಹಿತಿ ನೀಡಿದ್ದರು. ಕೆಲವೊಂದಿಷ್ಟುಸೂಚನೆಯನ್ನೂ ನೀಡಿದ್ದಾರೆ. ನಗರದ ಸೌಂದರ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು. ಎಲ್ಲೂ ಫುಟ್‌ಪಾತ್‌ ಒತ್ತುವರಿಯಾಗಿರಬಾರದು. ಬ್ಯಾನರ್‌, ಕಟೌಟ್‌ ಕಾಣಿಸಬಾರದು. ಹೋರ್ಡಿಂಗ್‌ಗಳನ್ನು ತೆರವುಗೊಳಿಸಿ ಎಂದು ಕಟ್ಟಪ್ಪಣೆ ಹೊರಡಿಸಿದ್ದಾರೆ.

ಏನಾಗುತ್ತಿದೆ ಈಗ:

ಮಹಾನಗರ ಪಾಲಿಕೆಯೂ ಕಳೆದ ನಾಲ್ಕೈದು ದಿನಗಳ ಕಾಲ ಬ್ಯಾನರ್‌, ಕಟೌಟ್‌ ತೆರವುಗೊಳಿಸಿತ್ತು. ಗಿಡ-ಮರಗಳಿಗೆ ಅಂಟಿಸಿದ್ದ ಜಾಹೀರಾತು ಫಲಕ ತೆರವುಗೊಳಿಸುತ್ತಿದೆ. ಆದರೂ ಪೂರ್ಣವಾಗಿಲ್ಲ. ಇದೀಗ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಇದನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಹಬ್ಬ ಮುಗಿದ ಬಳಿಕ ಮತ್ತೆ ಕಾರ್ಯಾಚರಣೆ ಚುರುಕುಗೊಳಿಸಲಾಗುವುದು. ಎಲ್ಲ ಬ್ಯಾನರ್‌, ಫುಟ್‌ಪಾತ್‌ ಒತ್ತುವರಿ ತೆರವುಗೊಳಿಸಲಾಗುವುದು. ಈ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ಪಾಲಿಕೆ ಅಧಿಕಾರಿ ವರ್ಗ ತಿಳಿಸುತ್ತದೆ.

ರೈಲ್ವೆಯಲ್ಲಿ 200 ಜನರ ನೇಮಕ, ನೇಮಕಾತಿ ಪತ್ರ ವಿತರಿಸಿದ ಸಚಿವೆ ಶೋಭಾ ಕರಂದ್ಲಾಜೆ

ಆದರೆ ಹೋರ್ಡಿಂಗ್‌ ತೆರವು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸುತ್ತದೆ. ಹೋರ್ಡಿಂಗ್‌ಗಾಗಿ ಪಾಲಿಕೆಯಿಂದ ಅನುಮತಿ ಪಡೆದಿರುತ್ತಾರೆ. ಪಾಲಿಕೆಗೆ ಪ್ರತಿವರ್ಷ ಇಂತಿಷ್ಟೆಂದು ತೆರಿಗೆ ಪಾವತಿಸುತ್ತಾರೆ. ಇವುಗಳನ್ನು ತೆರವುಗೊಳಿಸುವುದು ಸಾಧ್ಯವಿಲ್ಲ. ಆದರೆ ಮುಂದಿನ ದಿನಗಳಲ್ಲಿ ಅನುಮತಿ ಕೊಡುವ ಮುಂಚೆ ಈ ಬಗ್ಗೆ ಯೋಚಿಸಿ ಕ್ರಮಕೈಗೊಳ್ಳಲಾಗುವುದು ಎಂದು ಪಾಲಿಕೆ ಮೂಲಗಳು ತಿಳಿಸಿವೆ.

ಡಿಜಿಟಲ್‌ ಜಾಹೀರಾತು:

ಆದರೆ ಇದೀಗ ಪಾಲಿಕೆಯೂ ಸ್ಮಾರ್ಟ್‌ಸಿಟಿ ಯೋಜನೆಯಡಿ 26 ಡಿಜಿಟಲ್‌ ಬೋರ್ಡ್‌ ಅಳವಡಿಸಲು ಸಿದ್ಧತೆ ನಡೆಸಿದೆ. ಈ ಸಂಬಂಧ ಸ್ಮಾರ್ಟ್‌ಸಿಟಿ ಯೋಜನೆ ಅಧಿಕಾರಿಗಳೊಂದಿಗೆ ಪಾಲಿಕೆ ಚರ್ಚೆ ನಡೆಸಿದ್ದು, ಶೀಘ್ರದಲ್ಲೇ ಇವು ಮಹಾನಗರದಲ್ಲಿ ರಾರಾಜಿಸಲಿವೆ. ವಿವಿಧ ಆಯಕಟ್ಟಿನ ಸ್ಥಳಗಳಲ್ಲಿ ಇವುಗಳನ್ನು ಅಳವಡಿಸಲಾಗುವುದು. ಇದರಲ್ಲಿ ಉದ್ಯಮಿಗಳು ತಮ್ಮ ಜಾಹೀರಾತು ಪ್ರದರ್ಶಿಸಬಹುದಾಗಿದೆ. ಇದಕ್ಕೆ ಪಾಲಿಕೆಯೂ ಇಂತಿಷ್ಟುಎಂದು ದರ ನಿಗದಿಪಡಿಸಲಿದೆ. ಹೆಚ್ಚೆಚ್ಚು ಪ್ರಚಾರ ದೊರೆತು ಬಳಿಕ ಹೋರ್ಡಿಂಗ್‌ನಿಂದ ಡಿಜಿಟಲ್‌ನತ್ತ ಜನ ಸಣ್ಣದಾಗಿ ಹೊರಳುತ್ತಾರೆ ಎಂದು ಅಭಿಪ್ರಾಯ ಪಾಲಿಕೆಯದ್ದು.

ಶಾಲ್ಯಾಗಿದ್ದ ನಮ್ ಪುಸ್ತಕನೂ ಹೋಗ್ಯಾವ್; ನಮ್‌ ಮನಿನೂ ಸೋರತೈತಿ!

ಒತ್ತಡಕ್ಕೆ ಮಣಿಯಬೇಡಿ:

ಫುಟ್‌ಪಾತ್‌ ತೆರವು, ಬ್ಯಾನರ್‌, ಕಟೌಟ್‌ ತೆರವು ಬರೀ ಮಾತಿಗಷ್ಟೇ ಸೀಮಿತವಾಗಿವೆ. ಇತ್ತ ತೆರವುಗೊಳಿಸುತ್ತಾ ಹೋಗುತ್ತಿದ್ದಂತೆ ಅತ್ತ ಮತ್ತೆ ಒತ್ತುವರಿ ಶುರುವಾಗುತ್ತದೆ. ಬ್ಯಾನರ್‌ ವಿಷಯದಲ್ಲೂ ಇದೇ ರೀತಿ ಆಗುತ್ತದೆ. ಇನ್ನುಂದೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಸೂಚನೆಯಂತೆ ಕ್ರಮಕೈಗೊಳ್ಳಬೇಕು. ಯಾವುದೇ ಒತ್ತಡಕ್ಕೆ ಮಣಿಯಬಾರದು ಎಂಬುದು ಸಾರ್ವಜನಿಕರ ಆಗ್ರಹ.

ಬ್ಯಾನರ್‌ ತೆರವು ಹಾಗೂ ಫುಟ್‌ಪಾತ್‌ ಒತ್ತುವರಿ ತೆರವುಗೊಳಿಸಲಾಗುತ್ತಿತ್ತು. ಆದರೆ ದೀಪಾವಳಿ ಹಿನ್ನೆಲೆಯಲ್ಲಿ ಕೊಂಚ ಸ್ಥಗಿತಗೊಳಿಸಲಾಗಿದೆ. ಹಬ್ಬ ಮುಗಿದ ಬಳಿಕ ಮತ್ತೆ ಪ್ರಾರಂಭಿಸಲಾಗುವುದು. ಹೋರ್ಡಿಂಗ್‌ ತೆರವುಗೊಳಿಸಲು ಸಾಧ್ಯವಿಲ್ಲ. ಆದರೆ ಸ್ಮಾರ್ಟ್‌ಸಿಟಿ ಯೋಜನೆಯಡಿ 26 ಡಿಜಿಟಲ್‌ ಜಾಹೀರಾತು ಫಲಕ ಅಳವಡಿಸಲಾಗುವುದು. ಇದಕ್ಕೆ ಸಿದ್ಧತೆ ನಡೆದಿದೆ ಅಂತ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಹೆಚ್ಚುವರಿ ಆಯುಕ್ತ ಶಂಕರಾನಂದ ಬನಶಂಕರಿ ತಿಳಿಸಿದ್ದಾರೆ.