ರೈಲ್ವೆಯಲ್ಲಿ 200 ಜನರ ನೇಮಕ, ನೇಮಕಾತಿ ಪತ್ರ ವಿತರಿಸಿದ ಸಚಿವೆ ಶೋಭಾ ಕರಂದ್ಲಾಜೆ
ಮುಂದಿನ ಒಂದು ವರ್ಷದಲ್ಲಿ ಕೇಂದ್ರ ಸರ್ಕಾರದಿಂದ 10 ಲಕ್ಷ ಉದ್ಯೋಗ ಒದಗಿಸಲಾಗುತ್ತಿದೆ ಎಂದ ಸಚಿವೆ ಶೋಭಾ ಕರಂದ್ಲಾಜೆ, ರೈಲ್ವೆಯಲ್ಲಿ 200 ಜನರ ನೇಮಕ. ನೇಮಕಾತಿ ಪತ್ರ ವಿತರಿಸಿದರು.
ಹುಬ್ಬಳ್ಳಿ (ಅ.23): ಮುಂದಿನ ಒಂದು ವರ್ಷದಲ್ಲಿ ಕೇಂದ್ರ ಸರ್ಕಾರದಿಂದ 10 ಲಕ್ಷ ಉದ್ಯೋಗ ಒದಗಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಈ ಕಾರ್ಯಕ್ಕೆ ಇದೀಗ ಚಾಲನೆ ನೀಡಲಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ಯುವ ಸಮುದಾಯಕ್ಕೆ 10 ಲಕ್ಷ ಉದ್ಯೋಗ ನೀಡುವ ಸಂಬಂಧ ದೇಶವ್ಯಾಪಿ ಹಮ್ಮಿಕೊಂಡಿರುವ ಉದ್ಯೋಗ ಮೇಳ ಭಾಗವಾಗಿ ನೈಋುತ್ಯ ರೈಲ್ವೆ ವಲಯದ ಹುಬ್ಬಳ್ಳಿ ಶ್ರೀಸಿದ್ಧಾರೂಢಸ್ವಾಮಿ ರೈಲು ನಿಲ್ದಾಣದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಹೊಸ ಉದ್ಯೋಗಿಗಳಿಗೆ ನೇಮಕಾತಿ ಆದೇಶ ಪತ್ರ ವಿತರಿಸಿ ಅವರು ಮಾತನಾಡಿದರು. ಈಗಾಗಲೇ 10 ಲಕ್ಷ ಉದ್ಯೋಗ ಕಲ್ಪಿಸುವ ಮೊದಲ ಹಂತದ ಕೆಲಸ ಆರಂಭಗೊಂಡಿದೆ. ಕೇಂದ್ರ ಸರ್ಕಾರ ಉದ್ಯೋಗ ಕಲ್ಪಿಸಿಲ್ಲ ಎಂದು ಟೀಕಿಸಿದವರಿಗೆ ಈ ಉದ್ಯೋಗ ಮೇಳ ಉತ್ತರ ನೀಡಿದಂತಾಗಿದೆ. ಟೀಕಿಸಿದ ಪಕ್ಷಗಳಿಗೆ ಮುಂದಿನ ದಿನಗಳಲ್ಲಿ ಈಗ ಉದ್ಯೋಗ ಪಡೆದವರು ಸಹ ತಕ್ಕ ಉತ್ತರ ನೀಡಲಿದ್ದಾರೆ ಎಂದರು.
75 ಸಾವಿರ ನೇಮಕ ಪತ್ರ: ಈ ಉದ್ಯೋಗ ಮೇಳದ ಮೂಲಕ ಈಗಾಗಲೇ ಮೋದಿ ಅವರು ದೇಶಾದ್ಯಂತ 50 ಕೇಂದ್ರಗಳಲ್ಲಿ 75 ಸಾವಿರ ಉದ್ಯೋಗಿಗಳಿಗೆ ನೇಮಕಾತಿ ಪತ್ರ ನೀಡಿದ್ದಾರೆ. ಅದರಂತೆ ಬರುವ ವರ್ಷದಲ್ಲಿ ಕೇಂದ್ರ ಸರ್ಕಾರದ ರೈಲ್ವೆ, ಅಂಚೆ ಮತ್ತು ರಕ್ಷಣಾ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ 10 ಲಕ್ಷ ಉದ್ಯೋಗ ಕಲ್ಪಿಸಲು ಕ್ರಮ ವಹಿಸಿದ್ದಾರೆ ಎಂದು ತಿಳಿಸಿದರು.
ಪ್ರಧಾನಿ ದೇಶದ ಅಭಿವೃದ್ಧಿ ಬಗ್ಗೆ ದೂರದೃಷ್ಟಿಹೊಂದಿದ್ದಾರೆ. ಈಗ ಉದ್ಯೋಗ ಪಡೆದವರು ದೇಶದ ಸ್ವಾತಂತ್ರ್ಯದ ಶತಮಾನೋತ್ಸವ ಸಂದರ್ಭದಲ್ಲಿ 25 ವರ್ಷ ಅನುಭವ ಪಡೆದಿರುತ್ತಾರೆ. ಹೊಸದಾಗಿ ಉದ್ಯೋಗಕ್ಕೆ ಸೇರಿದವರು ಬದ್ಧತೆ, ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು. ಆಗ ಮಾತ್ರ ಭಾರತವನ್ನು ವಿಶ್ವದಲ್ಲಿಯೇ ನಂ.1 ಮಾಡಲು ಸಾಧ್ಯ ಎಂದರು.
ಈ ಹಿಂದೆ ರೈಲು ನಿಲ್ದಾಣ, ರೈಲುಗಳ ಒಳಭಾಗದಲ್ಲಿ ಸ್ವಚ್ಛತೆ ಕೊರತೆ ಕಾಣುತ್ತಿತ್ತು. ಈಗ ವಿಮಾನ ನಿಲ್ದಾಣಗಳ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದರ ಜತೆ ಜತೆಗೆ ರಾಷ್ಟ್ರೀಯ ಹೆದ್ದಾರಿಗಳು, ಬಸ್ ನಿಲ್ದಾಣಗಳ ಅಭಿವೃದ್ಧಿಯೂ ಆಗಿದೆ ಎಂದು ಸಚಿವೆ ತಿಳಿಸಿದರು.
ಕರ್ನಾಟಕದಲ್ಲಿ 1,747 ಕೋಟಿ ಹೂಡಿಕೆಗೆ ಅಸ್ತು, 4,900 ಉದ್ಯೋಗ ಸೃಷ್ಟಿ, ಸಚಿವ ನಿರಾಣಿ
ಇದೇ ಸಂದರ್ಭದಲ್ಲಿ ಸಚಿವೆ ಕರಂದ್ಲಾಜೆ 25 ಹೊಸ ಉದ್ಯೋಗಗಳಿಗೆ ಸಾಂಕೇತಿಕವಾಗಿ ನೇಮಕಾತಿ ಆದೇಶ ಪತ್ರ ವಿತರಿಸಿದರು. ಶಾಸಕ ಅರವಿಂದ ಬೆಲ್ಲದ, ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ, ಪ್ರದೀಪ ಶೆಟ್ಟರ್, ಎಸ್.ವಿ. ಸಂಕನೂರ, ರಾಜ್ಯ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ತವನಪ್ಪ ಅಷ್ಟಗಿ, ನೈಋುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್, ಮೇಯರ್ ಈರೇಶ ಅಂಚಟಗೇರಿ ಮತ್ತಿತರರು ಇದ್ದರು.
ROZGAR MELA: ರಾಜ್ಯದಲ್ಲಿ 1000 ಯುವಕರಿಗೆ ಕೇಂದ್ರ ನೌಕರಿ
ಯಾರ್ಯಾರಿಗೆ ನೇಮಕಾತಿ: ನೈಋುತ್ಯ ರೈಲ್ವೆ ವಲಯದ ವ್ಯಾಪ್ತಿಯಲ್ಲಿ 200 ಜನರಿಗೆ ನೇಮಕಾತಿ ಪತ್ರ ವಿತರಿಸಲಾಯಿತು. 85 ಜ್ಯೂನಿಯರ್ ಎಂಜಿನಿಯರ್, 93 ಟ್ರ್ಯಾಕ್ ನಿರ್ವಹಣೆಕಾರರು, 2 ಸ್ಟೇನೋಗ್ರಾಫರ್ಸ್, 1 ಜ್ಯುನಿಯರ್ ಟ್ರಾನ್ಸ್‌ಲಿಟರ್, ಇಬ್ಬರು ಪೋಸ್ಟ್‌ಮನ್, 1 ಕ್ಲರ್ಕ್, 13 ಹೆಲ್ಪರ್ಸ್ ಹೀಗೆ 200 ಜನರ ನೇಮಕ ಮಾಡಲಾಗಿದೆ ಎಂದು ನೈರುತ್ಯ ರೈಲ್ವೆ ವಲಯ ತಿಳಿಸಿದೆ.