ಸ್ಟಿಂಗ್ ಕಾರ್ಯಾಚರಣೆ ಪ್ರಶ್ನೆಗೆ ಗರಂ ಆದ ಹೆಚ್.ಡಿ. ರೇವಣ್ಣ, ಹಾಸನ ಜಿಲ್ಲೆಯ ಭೀಕರ ಬರಗಾಲ ಮತ್ತು ಕುಡಿಯುವ ನೀರಿನ ಅಭಾವದ ಬಗ್ಗೆ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮಿಳುನಾಡಿಗೆ ನೀರು ಹರಿಸಿದ್ದನ್ನು ಅವರು ಪ್ರಶ್ನಿಸಿದ್ದಾರೆ.
ಹಾಸನ (ಅ.14): ಇತ್ತೀಚಿನ 'ಸ್ಟಿಂಗ್ ಕಾರ್ಯಾಚರಣೆ' (Sting Operation) ಕುರಿತು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಮಾಜಿ ಸಚಿವ ಹಾಗೂ ಹಿರಿಯ ಜೆಡಿಎಸ್ ನಾಯಕ ಹೆಚ್.ಡಿ. ರೇವಣ್ಣ (HD Revanna) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಸ್ಟಿಂಗ್ ವಿಚಾರವನ್ನು ಕಟ್ಟಿಕೊಂಡು ನನಗೇನು ಆಗಬೇಕಾಗಿದೆ? ನಾನಿಲ್ಲಿ ನನ್ನ ಜಿಲ್ಲೆಯ ಜನರ ಮತ್ತು ದನಕರುಗಳ ಪ್ರಾಣ ಉಳಿಸಲು ಹೋರಾಡುತ್ತಿದ್ದೇನೆ" ಎಂದು ವೇದಿಕೆಯಲ್ಲೇ ಗುಡುಗಿದ್ದಾರೆ. ಹಾಸನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಚ್.ಡಿ. ರೇವಣ್ಣ, ಜಿಲ್ಲೆಯಲ್ಲಿ ತಲೆದೋರಿರುವ ಭೀಕರ ಬರಗಾಲ ಹಾಗೂ ಕುಡಿಯುವ ನೀರಿನ ಅಭಾವದ ಕುರಿತು ಸರ್ಕಾರದ ನಿರ್ಲಕ್ಷ್ಯವನ್ನು ಕಟುವಾಗಿ ತರಾಟೆಗೆ ತೆಗೆದುಕೊಂಡರು.
ನನ್ನ ಹಾಸನದ ಜನರು, ದನಕರುಗಳು ಸಾಯತ್ತಿವೆ
ಸ್ಟಿಂಗ್ ವಿಚಾರವನ್ನು ತಳ್ಳಿಹಾಕಿದ ರೇವಣ್ಣ, "ಆ ಸ್ಟಿಂಗ್ ವಿಚಾರವನ್ನು ಕಟ್ಟಿಕೊಂಡು ನನಗೇನಾಗಬೇಕಿದೆ? ಪ್ರಸ್ತುತ ನನ್ನ ಹಾಸನ ಜಿಲ್ಲೆಯ ಜನರು, ರೈತರು ಹಾಗೂ ದನಕರುಗಳು ನೀರಿಲ್ಲದೆ ಸಾಯುತ್ತಿದ್ದಾರೆ. ದನಕರುಗಳಿಗೆ ಕುಡಿಯಲು ನೀರಿಲ್ಲ, ಕೆರೆಕಟ್ಟೆಗಳು ಸಂಪೂರ್ಣವಾಗಿ ಒಣಗಿ ಭೀಕರ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಜಿಲ್ಲೆಯ ಜನ ನನ್ನನ್ನು ಕಳೆದ 30 ವರ್ಷಗಳಿಂದ ಶಾಸಕನನ್ನಾಗಿ ಮಾಡಿದ್ದಾರೆ. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಕಾಲದಿಂದಲೂ ಈ ಜಿಲ್ಲೆಯ ಜನ ಈ ಪಕ್ಷವನ್ನು ಬೆಳೆಸಿ, ಉಳಿಸಿಕೊಂಡು ಬಂದಿದ್ದಾರೆ. ಅವರ ಋಣ ತೀರಿಸುವುದು ನನ್ನ ಮೊದಲ ಆದ್ಯತೆಯಾಗಿದೆ" ಎಂದು ಹೇಳಿದ್ದಾರೆ.
ತಮಿಳುನಾಡಿಗೆ ಹರಿಸಿದ ನೀರಿಗೆ ಲೆಕ್ಕ ಕೊಡಿ - ರೇವಣ್ಣ ಆಗ್ರಹ
ರಾಜ್ಯ ಸರ್ಕಾರದ ನೀರಾವರಿ ನೀತಿಯ ವಿರುದ್ಧ ಭಾರಿ ವಾಗ್ದಾಳಿ ನಡೆಸಿದ ಅವರು, "ಇಂತಹ ಭೀಕರ ಬರಗಾಲದ ಸಮಯದಲ್ಲಿ ಜನರ ಕಷ್ಟಕ್ಕೆ ಸ್ಪಂದಿಸಲು ಸರ್ಕಾರದ ಬಳಿ ಹತ್ತು ರೂಪಾಯಿ ದುಡ್ಡಿಲ್ಲ. ಕೆಆರ್ಎಸ್ ಹಾಗೂ ಇತರ ಜಲಾಶಯಗಳಲ್ಲಿ ಬರೋಬ್ಬರಿ 18 ಟಿಎಂಸಿ ನೀರಿತ್ತು, ಅದನ್ನು ತಗೊಂಡು ಹೋಗಿ ಎಲ್ಲಿಗೆ ಬಿಟ್ಟರು? ನೀರಾವರಿ ಇಲಾಖೆಯ ಅಧಿಕಾರಿಗಳು ಸಾರ್ವಜನಿಕವಾಗಿ ಬಂದು ಲೆಕ್ಕ ಕೊಡಲಿ; ತಮಿಳುನಾಡಿಗೆ ಎಷ್ಟು ನೀರು ಬಿಟ್ಟಿದ್ದಾರೆ? ಹೆಚ್ಆರ್ಬಿಸಿ (HRBC) ಹಾಗೂ ಹೆಚ್ಎಲ್ಬಿಸಿ (HLBC) ನಾಲೆಗಳಿಗೆ ಎಷ್ಟು ನೀರು ಹರಿಸಿದ್ದಾರೆ ಎಂಬುದಕ್ಕೆ ತಕ್ಷಣವೇ ಉತ್ತರ ನೀಡಲಿ. ಇಲ್ಲಿ ಕೇಳುವವರು, ಹೇಳುವವರು ಯಾರೂ ಇಲ್ಲದಂತಾಗಿದೆ" ಎಂದು ಕಿಡಿಕಾರಿದರು.
₹150 ಕೋಟಿ ವೆಚ್ಚದ ಡ್ಯಾಮ್ನಲ್ಲಿ ಹನಿ ನೀರಿಲ್ಲ!
ಜಿಲ್ಲೆಯ ಜಲಮೂಲಗಳ ಸ್ಥಿತಿಗತಿಯನ್ನು ವಿವರಿಸಿದ ರೇವಣ್ಣ, "ನಾವು ಬರೋಬ್ಬರಿ ₹150 ಕೋಟಿ ಖರ್ಚು ಮಾಡಿ 'ಶ್ರೀರಾಮ ದೇವರ ಕಟ್ಟೆ' ಡ್ಯಾಮ್ (Srirama Devara Katte Dam) ಕಟ್ಟಿಸಿದೆವು. ಆದರೆ ಇವತ್ತು ಆಣೆಕಟ್ಟಿನಲ್ಲಿ ಒಂದು ಡ್ರಾಪ್ ನೀರಿಲ್ಲದ ಹಾಗೆ ಸಂಪೂರ್ಣ ಖಾಲಿಯಾಗಿದೆ. ಬೇರೆ ಎಲ್ಲಾ ವಿಷಯಗಳು ನನಗೆ ಆಮೇಲೆ, ಮೊದಲು ನನ್ನ ಜಿಲ್ಲೆಯ ರೈತರನ್ನು ಮತ್ತು ಜನರನ್ನು ಉಳಿಸಬೇಕಾಗಿದೆ. ಇವತ್ತೇ ರಾಜಕಾರಣ ಮುಗಿದು ಹೋಗುವುದಿಲ್ಲ. ನನ್ನ ತಾಲೂಕಿನ ಜನರನ್ನು, ರೈತರನ್ನು ನನ್ನಿಂದ ಉಳಿಸಿಕೊಳ್ಳುವುದಕ್ಕೆ ಆಗುವುದಿಲ್ಲ ಅಂದರೆ ನಾನ್ಯಾಕೆ ಶಾಸಕನಾಗಿ ಇರಲಿ?" ಎಂದು ಕಟುವಾಗಿ ಪ್ರಶ್ನಿಸಿದರು.
ಸರ್ಕಾರಕ್ಕೆ 1 ವಾರದ ಗಡುವು, ಬೃಹತ್ ಹೋರಾಟದ ಎಚ್ಚರಿಕೆ
"ನಾನು ಹೋದ ಕಡೆಯಲ್ಲೆಲ್ಲಾ ಜನರು, 'ಅಣ್ಣ ಇನ್ನು ಸುಮ್ಮನಿರಬೇಡಿ, ನಮಗೆ ಕುಡಿಯಲು ನೀರು ಹಾಗೂ ದನಕರುಗಳಿಗೆ ಮೇವು-ನೀರು ಒದಗಿಸಿ' ಎಂದು ಕಣ್ಣೀರಿಡುತ್ತಿದ್ದಾರೆ. ಜಿಲ್ಲೆಯ ದನಕರುಗಳಿಗೆ ತಕ್ಷಣವೇ ಕುಡಿಯುವ ನೀರು ಹಾಗೂ ಮೇವಿನ ವ್ಯವಸ್ಥೆ ಮಾಡಬೇಕು. ನಾನು ರಾಜ್ಯ ಸರ್ಕಾರಕ್ಕೆ ಕಟ್ಟುನಿಟ್ಟಿನ 'ಒಂದು ವಾರದ ಗಡುವು' ನೀಡುತ್ತಿದ್ದೇನೆ. ಒಂದು ವೇಳೆ ವಾರದೊಳಗೆ ಸರ್ಕಾರ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಬೀದಿಗಿಳಿದು ಬೃಹತ್ ಮಟ್ಟದ ಹೋರಾಟ ಮಾಡುತ್ತೇನೆ" ಎಂದು ಹೆಚ್.ಡಿ. ರೇವಣ್ಣ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.


