ರಾಣಿಬೆನ್ನೂರಿನ ಶ್ಯಾಮಸುಂದರ ದೈವಜ್ಞ ಮತ್ತು ಅವರ ಸ್ನೇಹಿತರು 47 ದಿನಗಳ ಮೋಟಾರ್ ಸೈಕಲ್ ಪ್ರವಾಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಈ ಯಾತ್ರೆಯು ಉತ್ತರಾಖಂಡದ ಪಂಚ ಕೇದಾರದಿಂದ ಲಡಾಖ್‌ನ ಉಮ್ಲಿಂಗ್ ಲಾ ಪಾಸ್‌ವರೆಗೆ ಸಾಗಿ, ಆಧ್ಯಾತ್ಮಿಕ, ದೇಶಭಕ್ತಿ ಮತ್ತು ಸಾಹಸಮಯ ಅನುಭವಗಳನ್ನು ನೀಡಿತು.

ಬಸವರಾಜ ಸರೂರ 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹಾವೇರಿ: ರಾಣಿಬೆನ್ನೂರು ನಗರದ ಶಾಮಸುಂದರ ದೈವಜ್ಞ ತನ್ನ ಸ್ನೇಹಿತರ ಜತೆ ಇತ್ತೀಚಿಗೆ ಉತ್ತರ ಭಾರತದಾದ್ಯಂತ 47 ದಿನಗಳ ಮೋಟಾರ್ ಸೈಕಲ್ ಪ್ರವಾಸವನ್ನು ಯಶಸ್ವಿಯಾಗಿ ಪೂರೈಸಿ ಸಾಧನೆ ಮೆರೆದಿದ್ದಾರೆ.

ಈ ತಂಡವು ಉತ್ತರಾಖಂಡದ ಪಂಚ ಕೇದಾರ ದೇವಾಲಯಗಳಿಂದ ಲಡಾಖ್‌ನ ಉಮ್ಲಿಂಗ್ ಲಾ ಕಣಿವೆ ವರೆಗಿನ ಮಾರ್ಗಗಳಲ್ಲಿ ಸಾವಿರಾರು ಕಿಲೋಮೀಟರ್‌ಗಳಷ್ಟು ಪ್ರಯಾಣಿಸಿತು. ಈ ಯಾತ್ರೆಯ ಭಾಗವಾಗಿ, ಅವರು ಹರಿದ್ವಾರಕ್ಕೆ ಹೋಗುವ ಮಾರ್ಗಮಧ್ಯೆ 188 ಕಿ.ಮೀ. ಕಠಿಣ ಪಾದಯಾತ್ರೆಯನ್ನು ಕೈಗೊಂಡರು. ಇದು ಅವರ ಸಹಿಷ್ಣುತೆ ಮತ್ತು ದೃಢಸಂಕಲ್ಪಕ್ಕೆ ಸಾಕ್ಷಿಯಾಗಿದೆ. 

ರೈಡರ್ಸ್ ಶ್ಯಾಮಸುಂದರ ದೈವಜ್ಞ (ರಾಣಿಬೆನ್ನೂರು), ಬಾಹುಬಲಿ ಹುಕ್ಕೇರಿ, ಶುಭಂ ಬಡವೆ (ಚಿಕ್ಕೋಡಿ), ಸೋಮನಾಥ ಸುತಾರ್, ವಿವೇಕ ಪಾಟೀಲ, ಆದರ್ಶ ಪಾಟೀಲ (ಕುರಂದವಾಡ, ಮಹಾರಾಷ್ಟ್ರ) ಒಳಗೊಂಡ ತಂಡವು ಪ್ರಕೃತಿಯನ್ನು ಅನುಭವಿಸಲು, ಸವಾಲಿನ ಭೂಪ್ರದೇಶವನ್ನು ಸುತ್ತಾಡಲು ಮತ್ತು ಗಡಿ ಪ್ರದೇಶಗಳಲ್ಲಿ ಭಾರತೀಯ ಸೇನೆಯ ಶಕ್ತಿಯನ್ನು ವೀಕ್ಷಿಸಲು ತೆರಳಿದರು.

ಪತ್ರಿಕೆಯೊಂದಿಗೆ ತನ್ನ ಪ್ರವಾಸದ ಅನುಭವವನ್ನು ಹಂಚಿಕೊಂಡ ಶ್ಯಾಮಸುಂದರ ಅವರು, ಮೇ 11ರಂದು ಆರಂಭವಾದ ನಮ್ಮ ಪ್ರಯಾಣವು ಕೇವಲ ವಿವಿಧ ರಾಜ್ಯಗಳ ಮೂಲಕ ಸಾಗುವ ರಸ್ತೆ ಪ್ರಯಾಣಕ್ಕಿಂತ ಮಿಗಿಲಾಗಿದ್ದಾಗಿತ್ತು. ಇದು ಭಗವಂತ ಶಿವನನ್ನು ಅರಸುವ ಆಧ್ಯಾತ್ಮಿಕ ಅನ್ವೇಷಣೆ, ಪ್ರಕೃತಿಯೊಂದಿಗಿನ ಗಾಢವಾದ ವೈಯಕ್ತಿಕ ನಂಟು ಹಾಗೂ ಸೈನಿಕರ ತ್ಯಾಗವನ್ನು ಕಣ್ತುಂಬಿಕೊಂಡ ದೇಶಭಕ್ತಿಯ ಅನುಭವವಾಗಿತ್ತು. ಇದು ನಮಗೆ ಧೈರ್ಯ ಮತ್ತು ಆತ್ಮವಿಶ್ವಾಸದಂತಹ ಜೀವನ ಪಾಠಗಳನ್ನೂ ಕಲಿಸಿತು. ಇಂತಹ ಪ್ರಯಾಣಗಳು ವ್ಯಕ್ತಿಯ ವ್ಯಕ್ತಿತ್ವ ಮತ್ತು ಆತ್ಮವಿಶ್ವಾಸವನ್ನು ರೂಪಿಸುತ್ತವೆ.

ಸುಮಾರು 188 ಕಿಮೀ ಚಾರಣ ಮತ್ತು 400 ಕಿಮೀ ಚಾಲನೆ

 ಘರ್ವಾಲ್ ಹಿಮಾಲಯದಲ್ಲಿರುವ ಕೇದಾರನಾಥ, ತುಂಗನಾಥ, ರುದ್ರನಾಥ, ಮಧ್ಯ ಮಹೇಶ್ವರ ಮತ್ತು ಕಪಿಲೇಶ್ವರವನ್ನು ಒಳಗೊಂಡ ಪಂಚ ಕೇದಾರ ಯಾತ್ರೆಯು ಸುಮಾರು 188 ಕಿಮೀ ಚಾರಣ ಮತ್ತು 400 ಕಿಮೀ ಚಾಲನೆಯನ್ನು ಒಳಗೊಂಡಿತ್ತು. ನಾವು ಕಡಿದಾದ ಮೆಟ್ಟಿಲುಗಳು, ನಿರ್ಜನ ಕಣಿವೆಗಳು, ಕಲ್ಲುಬಂಡೆಗಳ ಹಾದಿಗಳು, ದಟ್ಟ ಅರಣ್ಯಗಳು ಮತ್ತು ಹಿಮಾವೃತ ಶಿಖರಗಳನ್ನು ದಾಟಿದೆವು. ಬೈಕಿಂಗ್ ಮತ್ತು ಪರ್ವತಾರೋಹಣ ಸೇರಿದಂತೆ ಪ್ರತಿಯೊಂದು ಹಂತವು ನಮ್ಮ ಶಕ್ತಿಯನ್ನು ಪರೀಕ್ಷಿಸಿತು. ನಾವು ಶಿಮ್ಲಾದಲ್ಲಿ ಮೊದಲ ಹಂತವನ್ನು ಪೂರ್ಣಗೊಳಿಸಿದೆವು.

ಟಿಬೆಟ್ ಮತ್ತು ಭಾರತದ ನಡುವೆ ಇರುವ ಸ್ಥಿತಿ ಕಣಿವೆಯ ಭೂ ಪ್ರದೇಶವು ಒಂದು ಭಿನ್ನ ಲೋಕದಂತೆ ಭಾಸವಾಗುತ್ತದೆ. ಶಿಮ್ಲಾದಿಂದ ನಿರ್ಜನ ಪ್ರದೇಶಗಳ ಮೂಲಕ ಪ್ರಯಾಣಿಸಿ ಬುದ್ಧ ವಿಹಾರಗಳು ಮತ್ತು ಒರಟಾದ ಭೂಪ್ರದೇಶಕ್ಕೆ ಹೆಸರುವಾಸಿಯಾದ ಭಾರತ-ಟಿಬೆಟ್ ಗಡಿಯಲ್ಲಿರುವ ಕೊನೆಯ ಗ್ರಾಮವಾದ ಚಿಟ್ಕುಲ್ ತಲುಪಿದೆವು. ಅಲ್ಲಿಂದ ಕುನು ಮನಾಲಿ, ಲೆಹ್, ಲಡಾಕ್, ಸಿಯಾಚಿನ್ ಗಡಿ ಪ್ರದೇಶ, ರೇಜಾಂಗ್ ಲಾ, ಕಾರ್ಗಿಲ್, ಶ್ರೀನಗರ, ಅಮೃತಸರ, ವಾಘಾ ಗಡಿ, ಹರಿಯಾಣ, ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ ಮಾರ್ಗವಾಗಿ ರಾಣಿಬೆನ್ನೂರಿಗೆ ಮರಳಿದೆವು.