ಹಾಸನದಲ್ಲಿ ಒಂದೇ ದಿನದಲ್ಲಿ ನಾಲ್ವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. 40 ದಿನಗಳಲ್ಲಿ ಒಟ್ಟು 21 ಹೃದಯಾಘಾತ ಸಾವುಗಳು ಸಂಭವಿಸಿವೆ. ಆರೋಗ್ಯ ಇಲಾಖೆ ಪರಿಶೀಲನೆ ನಡೆಸುತ್ತಿದೆ.
ಹಾಸನ (ಜೂ.30): ಹಾಸನದಲ್ಲಿ ಕೇವಲ 40 ದಿನದಲ್ಲಿ 21 ಹೃದಯಾಘಾತ ಸಾವುಗಳು ಸಂಭವಿಸಿವೆ. ಜೊತೆಗೆ ಜೂ.30ರಂದು ಒಂದೇ ದಿನದಲ್ಲಿ ಬೆಳಗ್ಗೆ 12 ಗಂಟೆಯೊಳಗೆ 3 ಜನರು ಹೃದಯಾಘಾತಕ್ಕೆ ಬಲಿಯಾಗಿದ್ದರು. ಇದೀಗ ಸಂಜೆ ವೇಳೆಗೆ ಮತ್ತೊಬ್ಬ ಆಟೋ ಚಾಲಕ ಹೃದಯಾಘಾತವಾಗಿ ಆಟೋದಲ್ಲಿ ಕುಸಿದುಬಿದ್ದು ಸಾವನ್ನಪ್ಪಿದ ದುರ್ಘಟನೆ ನಡೆದಿದೆ.
ಹಾಸನದಲ್ಲಿ ಹೃದಯಾಘಾತ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಆಟೋ ಚಾಲನೆ ಮಾಡುತ್ತಲೇ ತೀವ್ರ ಹೃದಯಾಘಾತಕ್ಕೊಳಗಾಗಿ 63 ವರ್ಷದ ವ್ಯಕ್ತಿ ಸಾವನ್ನಪ್ಪಿದ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ. ಈ ಮೂಲಕ ಇಂದಿನ ದಿನದಲ್ಲೇ ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಮೃತಪಟ್ಟವರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.
ಮೃತರನ್ನು ಹಾಸನ ನಗರದ ರಂಗೋಲಿ ಹಳ್ಳ ಬಡಾವಣೆ ನಿವಾಸಿ ಸತ್ಯನಾರಾಯಣ ರಾವ್ (63) ಎಂದು ಗುರುತಿಸಲಾಗಿದೆ. ಅವರು ಪ್ರತಿದಿನದಂತೆ ಈ ಬೆಳಗ್ಗೆಯೂ ಆಟೋ ಚಾಲನೆಗಾಗಿ ಮನೆಯಿಂದ ಹೊರಟಿದ್ದರು. ಹಾಸಬಾಂಬ ದೇಗುಲ ಹಿಂಭಾಗದ ಹೊಸಲೈನ್ ರಸ್ತೆಯ ಬಳಿ ಆಟೋ ಚಲಾಯಿಸುತ್ತಿದ್ದ ವೇಳೆ ಅಸ್ವಸ್ಥರಾಗಿದ್ದು, ತಕ್ಷಣವೇ ಆಟೋದೊಳಗೇ ಕುಸಿದು ಬಿದ್ದರು. ಈ ಘಟನೆಯ ಸಮಯದಲ್ಲಿ ಅಕ್ಕಪಕ್ಕದಲ್ಲಿದ್ದ ಜನರು ಬೆಚ್ಚಿಬಿದ್ದು, ಸಹಾಯಕ್ಕೆ ಓಡಿದರು. ಸ್ಥಳದಲ್ಲೇ ಹಾಜರಿದ್ದ ನರ್ಸಿಂಗ್ ವಿದ್ಯಾರ್ಥಿಗಳು ತಕ್ಷಣ ಸತ್ಯನಾರಾಯಣರನ್ನು ಆಸ್ಪತ್ರೆಗೆ ಕರೆದೊಯ್ದರೂ, ಆಗಲೇ ಅವರ ಪ್ರಾಣ ಹೋಗಿದ್ದಾಗಿ ವೈದ್ಯರು ದೃಢಪಡಿಸಿದರು.
ಪರಿವಾರದ ಮೂಲಗಳ ಪ್ರಕಾರ, ಸತ್ಯನಾರಾಯಣ ರಾವ್ ಅವರು ಕೆಲ ಸಮಯದ ಹಿಂದೆ ಹೃದಯ ಸಂಬಂಧಿ ಖಾಯಿಲೆಗೆ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದರು. ಆದರೆ ಇಂದು ಬೆಳ್ಳಿಗ್ಗೆ ಮನೆಯಿಂದ ಆಟೋ ಚಾಲನೆಗಾಗಿ ಹೊರಟ ಕೆಲವೇ ನಿಮಿಷಗಳಲ್ಲಿ ಅಕಾಲಿಕ ಹೃದಯಾಘಾತದಿಂದ ಅವರು ಮೃತಪಟ್ಟಿದ್ದಾರೆ. ಇನ್ನು ಸತ್ಯನಾರಾಯಣ ರಾವ್ ಅವರಿಗೆ ಹೆಂಡತಿ ಹಾಗೂ ಹೆಣ್ಣು ಮಕ್ಕಳಿದ್ದು, ಬಡತನ ಕುಟುಂಬವಾಗಿತ್ತು. ಮನೆ ಹಾಗೂ ಮಕ್ಕಳ ಜವಾಬ್ದಾರಿ ನಿಭಾಯಿಸುವ ನಿಟ್ಟಿನಲ್ಲಿ ಹೃದಯ ಸಮಸ್ಯೆಯನ್ನೂ ಲೆಕ್ಕಿಸದೇ ಆಟೋ ಓಡಿಸಿ ದುಡಿಮೆ ಮಾಡುತ್ತಿದ್ದರು. ಆದರೆ, ಇಂದು ಆಟೋದಲ್ಲಿಯೇ ಕುಸಿದು ಪ್ರಾಣ ಬಿಟ್ಟಿದ್ದಾರೆ.
ಹಾಸನದಲ್ಲಿ ಹೃದಯಾಘಾತದಿಂದ ಇಂದೇ ನಾಲ್ಕು ಮಂದಿ ಮೃತಪಟ್ಟಿರುವ ಈ ಸರಣಿ ಘಟನೆಗಳು ಜಿಲ್ಲೆಯ ಆರೋಗ್ಯ ಪರಿಸ್ಥಿತಿಯ ಮೇಲೆ ಗಂಭೀರ ಪ್ರಶ್ನೆ ಎಬ್ಬಿಸುತ್ತಿವೆ. ತಜ್ಞರ ಪ್ರಕಾರ, ಈ ಹಠಾತ್ ಅಘಾತಗಳಿಗೆ ಆಧುನಿಕ ಜೀವನಶೈಲಿ, ಆಹಾರದ ಅಕ್ರಮ ಕ್ರಮ ಹಾಗೂ ಜಾಸ್ತಿ ಒತ್ತಡ ಪ್ರಮುಖ ಕಾರಣಗಳಾಗಿವೆ ಎಂದು ತಿಳಿಸಲಾಗಿದೆ. ಜಿಲ್ಲಾ ಆರೋಗ್ಯ ಇಲಾಖೆ ಈ ಕುರಿತು ಈಗಾಗಲೇ ಪರಿಶೀಲನೆ ನಡೆಸಲು ಮುಂದಾಗಿದ್ದು, ಮುಂದಿನ ದಿನಗಳಲ್ಲಿ ಸಾರ್ವಜನಿಕರಲ್ಲಿ ಹೃದಯಸಂಬಂಧಿ ಅರಿವು ಮೂಡಿಸಲು ಜಾಗೃತಿ ಅಭಿಯಾನ ನಡೆಸುವ ಸಾಧ್ಯತೆಯಿದೆ.
