ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಜಿ. ದೇವರಾಜೇಗೌಡ ಅವರಿಗೆ ಹೈಕೋರ್ಟ್‌ನಲ್ಲಿ ಹಿನ್ನಡೆಯಾಗಿದೆ. ತಮ್ಮ ವಿರುದ್ಧದ ಎಫ್‌ಐಆರ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಇತ್ಯರ್ಥಪಡಿಸಿದ ನ್ಯಾಯಾಲಯ, ಪೊಲೀಸರಿಗೆ ದೋಷಾರೋಪ ಪಟ್ಟಿ ಸಲ್ಲಿಸಲು ಅನುಮತಿ ನೀಡಿದೆ. ಆರೋಪಗಳು ಗಂಭೀರ ಸ್ವರೂಪದ್ದಾಗಿವೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಬೆಂಗಳೂರು: ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾ*ಚಾರದ ಗಂಭೀರ ಆರೋಪ ಎದುರಿಸುತ್ತಿರುವ ಹಾಸನದ ವಕೀಲ ಮತ್ತು ಬಿಜೆಪಿ ಮುಖಂಡ ಜಿ. ದೇವರಾಜೇಗೌಡ ಅವರಿಗೆ ಹೈಕೋರ್ಟ್‌ನಲ್ಲಿ ಭಾರಿ ಮುಖಭಂಗವಾಗಿದೆ. ದೇವರಾಜೇಗೌಡ ವಿರುದ್ಧ ಸಿದ್ಧವಾಗಿರುವ ದೋಷಾರೋಪ ಪಟ್ಟಿಯನ್ನು (ಅಂತಿಮ ತನಿಖಾ ವರದಿ) ಸಂಬಂಧಪಟ್ಟ ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಲು ಪೊಲೀಸರಿಗೆ ಹೈಕೋರ್ಟ್ ಮುಕ್ತ ಅನುಮತಿ ನೀಡಿದೆ. ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ (FIR) ರದ್ದುಪಡಿಸುವಂತೆ ಕೋರಿ ಜಿ. ದೇವರಾಜೇಗೌಡ ಅವರು ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯ ವಿಚಾರಣೆಯನ್ನು ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಈ ಮಹತ್ವದ ಆದೇಶ ಹೊರಡಿಸಿ, ಅರ್ಜಿಯನ್ನು ಇತ್ಯರ್ಥಪಡಿಸಿದೆ.
ಸರ್ಕಾರದ ತೀವ್ರ ವಾದ ಮತ್ತು ಹಳೇ ಆದೇಶ ತೆರವು
ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ನ್ಯಾಯಾಲಯಕ್ಕೆ ಮಧ್ಯಂತರ ಅರ್ಜಿಯೊಂದನ್ನು ಸಲ್ಲಿಸಿ, ಪ್ರಬಲ ವಾದ ಮಂಡಿಸಿದರು. ಈ ಹಿಂದೆ ಹೈಕೋರ್ಟ್, ನ್ಯಾಯಾಲಯದ ಪೂರ್ವಾನುಮತಿ ಇಲ್ಲದೆ ತನಿಖೆಯ ಅಂತಿಮ ವರದಿಯನ್ನು (ಚಾರ್ಜ್‌ಶೀಟ್) ಸಲ್ಲಿಸುವಂತಿಲ್ಲ ಎಂದು ಮಧ್ಯಂತರ ಆದೇಶ ನೀಡಿತ್ತು. ಆದರೆ, ಪ್ರಸ್ತುತ ಪೊಲೀಸರು ಪ್ರಕರಣದ ಸಮಗ್ರ ತನಿಖೆಯನ್ನು ಪೂರ್ಣಗೊಳಿಸಿದ್ದು, ದೋಷಾರೋಪ ಪಟ್ಟಿ ಸಲ್ಲಿಕೆಗೆ ಸಿದ್ಧವಾಗಿದೆ. ಆದ್ದರಿಂದ ಹಳೇ ಮಧ್ಯಂತರ ಆದೇಶವನ್ನು ತೆರವುಗೊಳಿಸಿ, ಆರೋಪ ಪಟ್ಟಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಲು ಪೊಲೀಸರಿಗೆ ಅನುಮತಿ ನೀಡಬೇಕು ಎಂದು ಕೋರಿದರು.
‘ಇದು ರಾಜಕೀಯ ಪ್ರೇರಿತ ಕೇಸ್’: ದೇವರಾಜೇಗೌಡ ಪರ ವಕೀಲರ ವಾದ
ದೇವರಾಜೇಗೌಡ ಪರ ವಕೀಲರು, "ಈ ಪ್ರಕರಣವು ಕಾನೂನು ದುರ್ಬಳಕೆಗೆ ಅತ್ಯಂತ ಸ್ಪಷ್ಟ ಉದಾಹರಣೆಯಾಗಿದೆ. ಆರಂಭದಲ್ಲಿ ದೂರುದಾರೆ ಮಹಿಳೆ ಅತ್ಯಾ*ಚಾರದ ಯಾವುದೇ ಆರೋಪ ಮಾಡಿರಲಿಲ್ಲ. ಮೊದಲಿಗೆ ಆಕೆಯ ಪತಿ ಎನ್ನಲಾದ ವ್ಯಕ್ತಿ ಅರ್ಜಿದಾರರ ವಿರುದ್ಧ ಅಟ್ರಾಸಿಟಿ (ಪರಿಶಿಷ್ಟ ಜಾತಿ/ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ) ಪ್ರಕರಣ ದಾಖಲಿಸಿದ್ದರು. ಪೊಲೀಸರು ಅದಕ್ಕೆ 'ಬಿ-ರಿಪೋರ್ಟ್' (ಸಾಕ್ಷ್ಯಾಧಾರಗಳಿಲ್ಲದ ವರದಿ) ಸಲ್ಲಿಸಿ ಆ ಪ್ರಕರಣ ಮುಕ್ತಾಯಗೊಳಿಸಿದ್ದರು. ಅದು ವಿಫಲವಾದ ಕಾರಣಕ್ಕೆ, ಈಗ ರಾಜಕೀಯ ಪ್ರೇರಿತವಾಗಿ ಅರ್ಜಿದಾರರನ್ನು ಸಿಲುಕಿಸಲು ಮಹಿಳೆಯ ಕೈಯಿಂದ ಸುಳ್ಳು ಅತ್ಯಾ*ಚಾರದ ಆರೋಪ ಹೊರಿಸಲಾಗಿದೆ" ಎಂದು ವಾದಿಸಿದರು.
ಆರೋಪಗಳು ಅತ್ಯಂತ ಗಂಭೀರ!
ಉಭಯ ಪಕ್ಷಗಳ ವಾದ ಆಲಿಸಿದ ನ್ಯಾಯಪೀಠ, ದೇವರಾಜೇಗೌಡ ಪರ ವಕೀಲರ ವಾದವನ್ನು ಪುರಸ್ಕರಿಸಲು ನಿರಾಕರಿಸಿತು. "ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧ ಕೇಳಿಬಂದಿರುವ ಆರೋಪಗಳು ಅತ್ಯಂತ ಗಂಭೀರ ಸ್ವರೂಪದ್ದಾಗಿವೆ. ಸದ್ಯ ಪೊಲೀಸರ ತನಿಖೆ ಮುಗಿದು ದೋಷಾರೋಪ ಪಟ್ಟಿ ಸಿದ್ಧವಾಗಿರುವುದರಿಂದ, ಅದನ್ನು ಸಂಬಂಧಪಟ್ಟ ನ್ಯಾಯಾಲಯಕ್ಕೆ ಸಲ್ಲಿಸಲು ಪೊಲೀಸರಿಗೆ ಅವಕಾಶ ನೀಡಬೇಕಾಗುತ್ತದೆ. ಪೊಲೀಸರು ಮೊದಲು ಚಾರ್ಜ್‌ಶೀಟ್ ಸಲ್ಲಿಸಲಿ, ಆ ಬಳಿಕ ಅರ್ಜಿದಾರರು ಆ ದೋಷಾರೋಪ ಪಟ್ಟಿಯನ್ನೇ ಪ್ರಶ್ನಿಸಿ ಮತ್ತೆ ಹೈಕೋರ್ಟ್‌ಗೆ ಹೊಸ ಅರ್ಜಿ ಸಲ್ಲಿಸಬಹುದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.
ನ್ಯಾಯಾಲಯದ ಈ ನಿಲುವಿಗೆ ದೇವರಾಜೇಗೌಡ ಪರ ವಕೀಲರು ಸಹಮತಿ ಸೂಚಿಸಿದ ಹಿನ್ನೆಲೆಯಲ್ಲಿ, ಪೊಲೀಸರಿಗೆ ಚಾರ್ಜ್‌ಶೀಟ್ ಸಲ್ಲಿಸಲು ಅನುಮತಿ ನೀಡಿದ ಹೈಕೋರ್ಟ್, ಅದನ್ನು ಮುಂದೆ ಪ್ರಶ್ನಿಸಲು ಅರ್ಜಿದಾರರಿಗೆ ಕಾನೂನಾತ್ಮಕ ಸ್ವಾತಂತ್ರ್ಯ ಕಲ್ಪಿಸಿ ಸದ್ಯದ ಅರ್ಜಿಯನ್ನು ಇತ್ಯರ್ಥಪಡಿಸಿತು.
ಏನಿದು ಪ್ರಕರಣ?
ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರು 2024ರ ಏಪ್ರಿಲ್ 1ರಂದು ಜಿ. ದೇವರಾಜೇಗೌಡ ವಿರುದ್ಧ ಗಂಭೀರ ದೂರು ದಾಖಲಿಸಿದ್ದರು. "ದೇವ ರಾಜೇಗೌಡ ಅವರು ನನ್ನ ಮೈಕೈ ಮುಟ್ಟಿ ದೈಹಿಕ ಹಿಂಸೆ ನೀಡಿದ್ದಾರೆ. ಅಲ್ಲದೆ ನನ್ನನ್ನು ತಮಗೊತ್ತಿರುವ ಮನೆಗೆ ಬಲವಂತವಾಗಿ ಕರೆದೊಯ್ದು ದೈಹಿಕವಾಗಿ ಬಳಸಿಕೊಂಡಿದ್ದಾರೆ. ಆ ನಂತರ ಆ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಹೆದರಿಸಿ, ಜೀವ ಬೆದರಿಕೆ ಹಾಕಿ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ" ಎಂದು ಮಹಿಳೆ ಆರೋಪಿಸಿದ್ದರು. ಈ ದೂರಿನ ಅನ್ವಯ ಪೊಲೀಸರು ಲೈಂಗಿಕ ಕಿರುಕುಳ, ಲೈಂಗಿಕ ದೌರ್ಜನ್ಯ, ಜೀವ ಬೆದರಿಕೆ ಹಾಗೂ ಮಹಿಳೆಗೆ ಅಪಮಾನ ಮಾಡಿದ ಆರೋಪದಡಿ (IPC ಸೆಕ್ಷನ್ ಅಡಿ) ಎಫ್ಐಆರ್ ದಾಖಲಿಸಿದ್ದರು.
ಈ ಎಫ್‌ಐಆರ್ ರದ್ದು ಕೋರಿ ದೇವರಾಜೇಗೌಡ ಹೈಕೋರ್ಟ್ ಮೆಟ್ಟಿಲೇರಿದ್ದರು. ಅಂದು ಅಕ್ಟೋಬರ್ ೨೨, ೨೦೨೪ರಂದು ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್, ದೇವರಾಜೇಗೌಡ ಅವರ ವಿರುದ್ಧ ಯಾವುದೇ ಬಲವಂತದ ಕ್ರಮ ಜರುಗಿಸಬಾರದು ಮತ್ತು ಕೋರ್ಟ್ ಅನುಮತಿಯಿಲ್ಲದೆ ಅಂತಿಮ ವರದಿ ಸಲ್ಲಿಸಬಾರದು ಎಂದು ತನಿಖೆಗೆ ತಡೆಯೊಡ್ಡಿತ್ತು. ಆದರೆ ಈಗ ತನಿಖಾ ವರದಿಯನ್ನು ಕೋರ್ಟ್‌ಗೆ ಸಲ್ಲಿಸಲು ಅನುಮತಿ ಸಿಕ್ಕಿರುವುದರಿಂದ ದೇವರಾಜೇಗೌಡ ಅವರಿಗೆ ಕಾನೂನು ಸಂಕಷ್ಟ ಮತ್ತಷ್ಟು ಬಿಗಿಗೊಂಡಿದೆ.
ವಕೀಲನ ಹಿನ್ನೆಲೆ:
ಪ್ರಜ್ವಲ್ ರೇವಣ್ಣ ಅಶ್ಲೀಲ ಪೆನ್ ಡ್ರೈವ್ ಪ್ರಕರಣದಲ್ಲಿ ಕೂಡ ವಕೀಲ ಹಾಗೂ ಬಿಜೆಪಿ ಮುಖಂಡ ದೇವರಾಜೇಗೌಡರನ್ನು ಬಂಧಿಸಿದ್ದರು.ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಅವರು ಪ್ರಮುಖ ಮಾಹಿತಿದಾರರಾದ್ದರಿಂದ ದೇವರಾಜೇಗೌಡ ಹೆಸರು ಬೆಳಕಿಗೆ ಬಂದಿದೆ. ಪ್ರಜ್ವಲ್ ರೇವಣ್ಣ ಪ್ರಕರಣದ ಬಗ್ಗೆ ಬಿಜೆಪಿ ನಾಯಕರಿಗೆ ಎಚ್ಚರಿಕೆ ನೀಡಿದ್ದ ದೇವರಾಜೇಗೌಡರು, ಹಾಸನದಿಂದ ಜೆಡಿಎಸ್ ಸಂಸದರಿಗೆ ಲೋಕಸಭೆ ಟಿಕೆಟ್ ನೀಡದಂತೆ ಆಗ್ರಹಿಸಿದ್ದರು. 2023ರ ವಿಧಾನಸಭಾ ಚುನಾವಣೆಯಲ್ಲಿ ಹೊಳೆನರಸೀಪುರ ಶಾಸಕ ಹೆಚ್ ಡಿ ರೇವಣ್ಣ ವಿರುದ್ಧ ಸ್ಪರ್ಧಿಸಿದ್ದ ದೇವರಾಜೇಗೌಡ, ಲೈಂಗಿಕ ಕಿರುಕುಳದ ವೀಡಿಯೊಗಳನ್ನು ಸೋರಿಕೆ ಮಾಡಿದ್ದಾರೆಂದು ರಾಜ್ಯದ ಕಾಂಗ್ರೆಸ್ ನಾಯಕರನ್ನು ದೂಷಿಸಿದ್ದರು.


