'51 ದಿನಗಳ ಬಳಿಕ ಹೊರಗೆ ಬಂದಿದ್ದೇನೆ' ಬಿಜೆಪಿ ನಾಯಕರಿಗೆ ಧನ್ಯವಾದ ತಿಳಿಸಿದ ವಕೀಲ ದೇವರಾಜೇಗೌಡ
51 ದಿನಗಳ ಬಳಿಕ ಹೊರಗೆ ಬಂದಿದ್ದೇನೆ. ಬಿಜೆಪಿ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರಿಗೆ ಹಲವು ಗಣ್ಯರಿಗೆ ತುಂಬು ಹೃದಯದಿಂದ ಧನ್ಯವಾದಗಳು ಎಂದು ವಕೀಲ ದೇವರಾಜೇಗೌಡ ತಿಳಿಸಿದರು.
ಹಾಸನ (ಜು.2): 51 ದಿನಗಳ ಬಳಿಕ ಹೊರಗೆ ಬಂದಿದ್ದೇನೆ. ಬಿಜೆಪಿ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರಿಗೆ ಹಲವು ಗಣ್ಯರಿಗೆ ತುಂಬು ಹೃದಯದಿಂದ ಧನ್ಯವಾದಗಳು ಎಂದು ವಕೀಲ ದೇವರಾಜೇಗೌಡ ತಿಳಿಸಿದರು.
ಹಾಸನ ಅತ್ಯಾಚಾರ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ ವಕೀಲ ದೇವರಾಜೇಗೌಡ ಬಿಡುಗಡೆ ಬಳಿಕ ಸ್ವನಿವಾಸದ್ಲಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನ ಬಿಡುಗಡೆಗೆ ಸಹಕರಿಸಿದ, ಪ್ರತ್ಯಕ್ಷವಾಗಿ ಪರೋಕ್ಷವಾಗಿ ನನ್ನ ಬಂಧನ ದ ಬಗ್ಗೆ ಧ್ವನಿಯೆತ್ತಿದ ನಾಯಕರು, ನನ್ನ ಜಿಲ್ಲೆಯ ಲಕ್ಷಾಂತರ ಕಾರ್ಯಕರ್ತರು, ವಕೀಲರ ಪ್ರಾರ್ಥನೆ ಭಗವಂತನಿಗೆ ಮುಟ್ಟಿದೆ. 51 ದಿನಗಳ ಬಳಿಕ ಹೊರಗೆ ಬಂದಿದ್ದೇನೆ ಎಂದರು.
ಸಂಕಷ್ಟದಲ್ಲಿ ಸಹಾಯಕ್ಕೆ ನಿಂತ ಯಾರನ್ನೂ ಉಸಿರು ಇರೋವರೆಗೆ ಮರೆಯೊಲ್ಲ. ಹಲವು ಕಾರಣದಿಂದ ಕೆಲವು ವಿಚಾರ ಈಗ ಹೇಳೊಲ್ಲ. ಅದಕ್ಕಾಗಿ ಒಂದು ಸಮಯ ನಿಗದಿ ಆಗುತ್ತೆ. ನನ್ನ ಬಂಧನ ಅನಿರೀಕ್ಷಿತ ಅಲ್ಲ, ನಿರೀಕ್ಷಿತವಾಗಿತ್ತು. ಹಾಸನ ಜಿಲ್ಲೆಯ ಮಾನ ಹರಾಜು ಹಾಕೋ ಕೆಲಸ ಆಗಿದೆ. ಕುಟುಂಬದ ದ್ವೇಷಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಿಲ್ಲೆಯ ಮಾನ ಹರಾಜಾಗಿದೆ. ಈ ಎಲ್ಲದರ ಬಗ್ಗೆ ಮಾತಾಡಲು ಮುಂದಿನ ತಿಂಗಳು ಒಂದು ದಿನಾಂಕ ನಿಗದಿ ಮಾಡುತ್ತೇನೆ. ಕೇಂದ್ರದ ಅಧಿವೇಶನ ಮುಗಿದ ಬಳಿಕ ಪ್ರಧಾನಿ ಅವರನ್ನು ಭೇಟಿಯಾಗುತ್ತೇನೆ. ಎಲ್ಲ ಕೇಂದ್ರ ಸಚಿವರನ್ನು ಕರೆದು ಬೃಹತ್ ಸಮಾವೇಶ ಮಾಡುತ್ತೇನೆ. ಯಾವ ಜಿಲ್ಲೆಗೆ ಕಳಂಕ ತಂದರೋ ಅದೇ ಜಿಲ್ಲೆಯಿಂದ ಸಂಘಟನೆಗೆ ಮುಂದಾಗುತ್ತೇವೆ ಶಪಥ ಮಾಡಿದರು.
ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆ ಗೆಲ್ಲಲು ಮೈತ್ರಿ ಪಕ್ಷದ ಗೆಲುವಿಗೆ ಪ್ರಯತ್ನ ಮಾಡುತ್ತೇವೆ. ಕುಮಾರಸ್ವಾಮಿ ಅವರು ಶೀಘ್ರವಾಗಿ ಜಿಲ್ಲೆಗೆ ಎಂಟ್ರಿ ಕೊಡ್ತಾರೆ. ನನ್ನ ಹೊಳೆನರಸೀಪುರ ಕ್ಷೇತ್ರದಲ್ಲಿ ಬೃಹತ್ ಕೈಗಾರಿಕೆ ಸ್ಥಾಪನೆಗೆ ಕುಮಾರಸ್ವಾಮಿ ಅವರಿಗೆ ಮನವಿ ಮಾಡುತ್ತೇನೆ. ನಾನು ಈ ಜಿಲ್ಲೆಯ ನೇತೃತ್ವ ವಹಿಸುತ್ತೇನೆ. ನಾನು ಪ್ರೀತಂ ಜಿ ಎಲ್ಲರೂ ಒಂದಾಗಿ ಕೆಲಸ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಹೈಕಮಾಂಡ್ ತೀರ್ಮಾನದಂತೆ ಮುಂದೆ ಹೋಗುತ್ತೇವೆ. ಬಿಜೆಪಿ ಜೆಡಿಎಸ್ ಕಾರ್ಯಕರ್ತರು ಗೊಂದಲಕ್ಕೆ ಒಳಗಾಗೋದು ಬೇಡ. ಬಿಜೆಪಿ ಜೆಡಿಎಸ್ ಕಾರ್ಯಕರ್ತರೊಂದಿಗೆ ನಾನು ಇರುತ್ತೇನೆ. ನಾನು ಹಿಂದೆ ಮಾತಾಡಿದಾಗ ಪೆನ್‌ಡ್ರೈವ್ ವಿಚಾರ ಇರಲಿಲ್ಲ. ಈಗ ತನಿಖೆ ಆಗುತ್ತಿದೆ. ತನಿಖೆ ಆಗೋ ವೇಳೆ ಏನೂ ಮಾತಾಡೋದು ಬೇಡ ಎಸ್‌ಐಟಿಯಲ್ಲಿ ಒಳ್ಳೆ ಅಧಿಕಾರಿಗಳು ಇದ್ದಾರೆ ತನಿಖೆ ಆಗಲಿದೆ ಎಂದರು.