47 ವರ್ಷಗಳ ಹಿಂದೆ ಆರಂಭವಾಗಿ ಗ್ರಾಹಕರ ಮೆಚ್ಚುಗೆ ಗಳಿಸಿದ್ದ ಹೋಟೆಲ್ ಒಂದು ಇದೀಗ ಇತಿಹಾಸ ಪುಟ ಸೆರಿದೆ. ಇದೀಗ ನೆನಪು ಮಾತ್ರ ಆಗಿದೆ.
ಹಾಸನ (ಡಿ.06): ನಗರದಲ್ಲಿ 47 ವರ್ಷಗಳಿಂದ ನಿರಂತರವಾಗಿ ಶುಚಿಕರ ಹಾಗೂ ರುಚಿಕರವಾದ ತಿಂಡಿತಿನಿಸುಗಳನ್ನು ಒದಗಿಸುತ್ತಾ ಮನೆಮಾತಾಗಿದ್ದ ‘ಮೋತಿ’ ಹೋಟೆಲ್ ಇದೀಗ ಇತಿಹಾಸದ ಪುಟಗಳಲ್ಲಿ ಸೇರಿದೆ. ಕಾರಣಾಂತರಗಳಿಂದ ಹೋಟೆಲನ್ನು ಮುಚ್ಚುತ್ತಿರುವುದಾಗಿ ತಿಳಿಸಿರುವ ಹೋಟೆಲ್ ಮಾಲೀಕರಾಗಿದ್ದ ನಾರಾಯಣ್ ರಾವ್ ಹಾಗೂ ಸಿಬ್ಬಂದಿಯನ್ನು ಶನಿವಾರ ಆಸರೆ ಫೌಂಡೇಷನ್ ವತಿಯಿಂದ ಗೌರವಿಸಲಾಯಿತು.
1973 ರಲ್ಲಿ ಹಾಸನ ನಗರದ ಹಳೆ ಬಸ್ ನಿಲ್ದಾಣದ ರಸ್ತೆಯ ವಿದ್ಯಾಭವನದ ಮಳಿಗೆಯಲ್ಲಿ ಆರಂಭವಾದ ‘ಮೋತಿ’ ಹೋಟೆಲ್ ಜಿಲ್ಲೆಯಲ್ಲಿ ಯಾರಿಗೆ ಗೊತ್ತಿಲ್ಲ ಹೇಳಿ. ಬಲ್ಲವನೇ ಬಲ್ಲ ಮೋತಿ ಹೋಟೆಲ್‌ನ ಮಸಾಲೆ ದೋಸೆಯ ರುಚಿಯನ್ನು. ಅಲ್ಲಿನ ಇಡ್ಲಿ ಸಾಂಬಾರನ್ನು. ಇನ್ನು ಮುಂದಿನ ದಿನಗಳಲ್ಲಿ ಮೋತಿ ಹೋಟೆಲ್‌ನ ಮಸಾಲೆ ದೋಸೆ ಇನ್ನು ನೆನಪು ಮಾತ್ರ. ಇದೇ ಹೋಟೆಲ್‌ನ ಮುಂಭಾಗವೇ ಬಸ್ ನಿಲ್ದಾಣ ಇದ್ದುದರಿಂದ ರಾಜ್ಯದ ವಿವಿದ ಭಾಗಗಳಿಂದ ಬರುತ್ತಿದ್ದ ಜನರು ಇದೇ ಹೋಟೆಲ್‌ಗೆ ಬರುತ್ತಿದ್ದರು. ಒಮ್ಮೆ ಇಲ್ಲಿನ ದೋಸೆ ರುಚಿ ಸವಿದವರು ಹಾಸನಕ್ಕೆ ಬಂದಾಗಲೆಲ್ಲಾ ಈ ಹೋಟೆಲ್‌ಗೆ ಹೋಗಿ ಮಸಾಲೆ ದೋಸೆ ತಿನ್ನುತ್ತಿದ್ದರು. ಹಾಗೆಯೇ ಬೇರೆಯವರಿಗೂ ಈ ಹೋಟೆಲ್‌ಗೆ ಹೋಗುವಂತೆ ಸಲಹೆ ನೀಡುತ್ತಿದ್ದರು. ಹಾಗಾಗಿ ಈ ಹೋಟೆಲ್ ರಾಜ್ಯದಲ್ಲಷ್ಟೇ ಅಲ್ಲ ಅಕ್ಕಪಕ್ಕದ ರಾಜ್ಯಗಳಲ್ಲೂ ಹೆಸರು ಗಳಿಸಿತ್ತು.
ಮಂಡಕ್ಕಿ ಸ್ಪೆಷಲ್; ಕಲರ್‌ಫುಲ್ ಉಪ್ಮಾ, ಕಟ್ಲೆಟ್, ಲಡ್ಡು ರೆಸಿಪಿ ..
ಆಸರೆ ಫೌಂಡೇಶನ್ ಗೌರವಾಧ್ಯಕ್ಷ ಬಿ.ಆರ್. ಉದಯ ಕುಮಾರ್ ಮಾತನಾಡಿ, ಹೋಟೆಲ್ ಉದ್ದಿಮೆ ನಡೆಸುವುದು ಒಂದು ರೀತಿಯ ಸವಾಲು. ಇದನ್ನು ನಾಲ್ಕು ದಶಕಗಳಿಗೂ ಮೀರಿ ಯಶಸ್ವಿಯಾಗಿ ನಡೆಸಿರುವುದಕ್ಕೆ ಅವರು ಅಭಿನಂದನಕ್ಕೆ ಅರ್ಹರು ಎಂದರು.
ಹೋಟೆಲ್ ಮಾಲೀಕ ನಾರಾಯಣರಾವ್ ಮಾತನಾಡಿ, ತಾವು ಯಶಸ್ವಿಯಾಗಿ ಹೋಟೆಲ್ ನಡೆಸಲು ನೆರವು ಹಾಗೂ ಸಹಕಾರ ನೀಡಿದ ಹಾಸನ ನಗರದ ಜನತೆಗೆ ಮತ್ತು ಗ್ರಾಹಕರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಇತ್ತೀಚಿನ ದಿನಗಳಲ್ಲಿ ಹೋಟೆಲ್ ನಡೆಸುವುದು ತುಂಬಾ ದುಬಾರಿಯಾಗುತ್ತಿತ್ತು. ಕಟ್ಟಡದ ಬಾಡಿಗೆ, ನೌಕರರು, ವಸ್ತುಗಳು ಎಲ್ಲಾ ದುಬಾರಿಯಾಗಿದೆ ಎಂದು ಹೇಳಿದರು.
ಇದೆ ವೇಳೆ ಟ್ರಸ್ಟ್ ಅಧ್ಯಕ್ಷ ಗುರುಪ್ರಸಾದ್ ಕಾಮತ್, ಟ್ರಸ್ಟಿಗಳಾದ ಶ್ರೀಧರ್, ವೇಣುಗೋಪಾಲ್ ಮತ್ತು ಚಂದ್ರಶೇಖರ್ ಅವರು ಮಾತನಾಡಿ, ನಾರಾಯಣ್ ಅವರ ಶ್ರಮ, ಬದ್ಧತೆ ಮತ್ತು ಯಶಸ್ವಿ ಉದ್ದಿಮೆ ಬಗ್ಗೆ ಹೇಳಿದರು.
ನಾರಾಯಣ್ ಅವರ ಪುತ್ರ ಗೋಪಿಕೃಷ್ಣ, ಆಸರೆ ಫೌಂಡೇಶನ್ ಟ್ರಸ್ಟಿಗಳಾದ ಪುಟ್ಟಸ್ವಾಮಿ ಶೆಟ್ಟಿ, ಶ್ರೀಧರ್, ಚಂದ್ರಶೇಖರ್, ನರಸಿಂಹಮೂರ್ತಿ ವೇಣುಗೋಪಾಲ್, ಗಿರೀಶ್ ಠಾಕೂರ್ ಮತ್ತು ಹೋಟೆಲ್ ಸಿಬ್ಬಂದಿ ಉಪಸ್ಥಿತರಿದ್ದರು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 6, 2020, 2:48 PM IST