ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆಯ ಈ ಬಾರಿಯ ದರ್ಶನೋತ್ಸವದಲ್ಲಿ 30 ಲಕ್ಷಕ್ಕೂ ಅಧಿಕ ಭಕ್ತರು ದೇವಿ ದರ್ಶನ ಪಡೆದಿದ್ದು, ಆದಾಯ 29.55 ಕೋಟಿ ರೂ. ತಲುಪಿ ಹೊಸ ಇತಿಹಾಸ ಸೃಷ್ಟಿಸಿದೆ. ಹಿಂದಿನ ದಾಖಲೆಗಳನ್ನು ಮುರಿದು ಅಭೂತಪೂರ್ವ ಯಶಸ್ಸು ಕಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಆದಾಯ ಎಷ್ಟಿದೆ?

ಹಾಸನ (ನ.12): ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ಶಕ್ತಿ ದೇವತೆ ಹಾಸನಾಂಬೆ ದರ್ಶನೋತ್ಸವವು ಈ ಬಾರಿ ಎಲ್ಲಾ ಹಳೆಯ ದಾಖಲೆಗಳನ್ನು ಮುರಿದು ಸಾರ್ವಕಾಲಿಕ ಇತಿಹಾಸ ನಿರ್ಮಿಸಿದೆ. ದೇವಾಲಯದ ಹುಂಡಿ ಎಣಿಕೆ ಕಾರ್ಯವು ಗುರುವಾರ ಸಂಪೂರ್ಣಗೊಂಡಿದ್ದು, ಈ ವರ್ಷ ಬರೋಬ್ಬರಿ 29 ಕೋಟಿ 55 ಲಕ್ಷದ 27 ಸಾವಿರದ 852 ರೂಪಾಯಿ (₹29,55,27,852) ಆದಾಯ ಸಂಗ್ರಹವಾಗಿದೆ ಎಂದು ದೇವಾಲಯದ ಆಡಳಿತಾಧಿಕಾರಿ ಜಗದೀಶ್ ಗಂಗಣ್ಣನವರ್ ಅಧಿಕೃತವಾಗಿ ತಿಳಿಸಿದ್ದಾರೆ.

ಒಟ್ಟು 14 ದಿನಗಳ ಕಾಲ ನಡೆದ ಹಾಸನಾಂಬೆ ಜಾತ್ರಾ ಮಹೋತ್ಸವದಲ್ಲಿ 12 ದಿನಗಳ ಕಾಲ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ರಾಜ್ಯ ಹಾಗೂ ಹೊರರಾಜ್ಯಗಳಿಂದ ಹರಿದುಬಂದ 30 ಲಕ್ಷದ 600 ಭಕ್ತರು ದೇವಿಯ ದರ್ಶನ ಪಡೆದು ಪುನೀತರಾಗಿದ್ದಾರೆ. ಕಳೆದ ವರ್ಷ (2025) 25 ಲಕ್ಷದ 60 ಸಾವಿರ ಭಕ್ತರು ದರ್ಶನ ಪಡೆದು 25.59 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿತ್ತು. ಆದರೆ ಈ ಬಾರಿ ಕಳೆದ ವರ್ಷಕ್ಕಿಂತ 4 ಲಕ್ಷದ 40 ಸಾವಿರಕ್ಕೂ ಅಧಿಕ ಭಕ್ತರು ಹೆಚ್ಚುವರಿಯಾಗಿ ಆಗಮಿಸಿದ್ದು, ಆದಾಯದಲ್ಲಿ ಸುಮಾರು 4 ಕೋಟಿ ರೂಪಾಯಿಗಳಷ್ಟು ಭಾರಿ ಹೆಚ್ಚಳ ಕಂಡುಬಂದಿದೆ.

ಯಾವ ಮೂಲದಿಂದ ಎಷ್ಟು ಆದಾಯ ಸಂಗ್ರಹವಾಗಿದೆ?

ಹಾಸನಾಂಬೆ ದೇವಾಲಯಕ್ಕೆ ಟಿಕೆಟ್, ಲಾಡು ಪ್ರಸಾದ, ಹುಂಡಿ ಹಾಗೂ ವಿವಿಧ ಮೂಲಗಳಿಂದ ಬಂದಿರುವ ಆದಾಯದ ಸಂಪೂರ್ಣ ವಿವರ ಇಲ್ಲಿದೆ.

ಯಾವ ಮೂಲದಿಂದ ಎಷ್ಟು ಆದಾಯ ಸಂಗ್ರಹವಾಗಿದೆ?

ಆದಾಯದ ಮೂಲಸಂಗ್ರಹವಾದ ಮೊತ್ತ (ರೂಪಾಯಿಗಳಲ್ಲಿ)
1,000 ರೂ. ವಿಶೇಷ ದರ್ಶನ ಟಿಕೆಟ್ ಮಾರಾಟ₹16,98,11,257
300 ರೂ. ದರ್ಶನ ಟಿಕೆಟ್ ಮಾರಾಟ₹7,24,00,000
ಹಾಸನಾಂಬೆ ಹುಂಡಿ ಕಾಣಿಕೆ₹3,71,63,933
ಲಾಡು ಪ್ರಸಾದ ಮಾರಾಟ₹1,35,99,156
ದೇಣಿಗೆ (Donations)₹5,91,228
ಜಾಹೀರಾತು ಆದಾಯ₹5,74,000
ಇ-ಹುಂಡಿ (E-Hundi)₹13,264
ಒಟ್ಟು ಆದಾಯ₹29,55,27,852

ಚಿನ್ನ, ಬೆಳ್ಳಿ ಹಾಗೂ ಸಿದ್ದೇಶ್ವರ ಸ್ವಾಮಿ ಹುಂಡಿ ಕಾಣಿಕೆ:

ಹಣದ ಜೊತೆಗೆ ಭಕ್ತರು ಹಾಸನಾಂಬೆ ದೇವಿಗೆ 43 ಗ್ರಾಂ ಚಿನ್ನಾಭರಣ ಹಾಗೂ 1 ಕೆಜಿ 255 ಗ್ರಾಂ ಬೆಳ್ಳಿ ವಸ್ತುಗಳನ್ನು ಕಾಣಿಕೆಯಾಗಿ ಅರ್ಪಿಸಿದ್ದಾರೆ. ಇದೇ ವೇಳೆ ದೇವಾಲಯದ ಆವರಣದಲ್ಲಿರುವ ಶ್ರೀ ಸಿದ್ದೇಶ್ವರ ಸ್ವಾಮಿ ದೇವಾಲಯದ ಹುಂಡಿಯಿಂದ 18 ಲಕ್ಷದ 99 ಸಾವಿರದ 100 ರೂಪಾಯಿ ಆದಾಯ ಸಂಗ್ರಹವಾಗಿದೆ.