ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ ಜಾತ್ರೋತ್ಸವದಲ್ಲಿ ಈ ಬಾರಿ 28 ಲಕ್ಷ ಭಕ್ತರು ಆಗಮಿಸಿದ್ದಾರೆ. 26 ಕೋಟಿ ರೂ. ಆದಾಯ ಹರಿದುಬಂದಿದ್ದು, ಇಂದು ಸಂಜೆ ಸಾರ್ವಜನಿಕ ದರ್ಶನ ಮುಕ್ತಾಯಗೊಳ್ಳಲಿದೆ.

ಹಾಸನ (ನ.10): ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ಹಾಸನದ ಐತಿಹಾಸಿಕ ಹಾಸನಾಂಬೆ ದೇವಿಯ ದರ್ಶನೋತ್ಸವ ಈ ಬಾರಿ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಈ ಬಾರಿಯ ಜಾತ್ರೋತ್ಸವದಲ್ಲಿ ಇದುವರೆಗೆ ಬರೋಬ್ಬರಿ 28 ಲಕ್ಷ ಭಕ್ತರು ದೇವಿಯ ದರ್ಶನ ಪಡೆದು ಪುನೀತರಾಗಿದ್ದು, ದೇವಾಲಯದ ಬೊಕ್ಕಸಕ್ಕೆ ಆನ್‌ಲೈನ್-ಆಫ್‌ಲೈನ್ ಟಿಕೆಟ್ ಹಾಗೂ ಲಾಡು ಪ್ರಸಾದ ಮಾರಾಟದಿಂದ 26 ಕೋಟಿ ರೂಪಾಯಿ ದಾಖಲೆ ಆದಾಯ ಹರಿದುಬಂದಿದೆ. ಈ ಮಹತ್ವದ ಮಾಹಿತಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಅವರು ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ನೀಡಿದ್ದಾರೆ.

ಇಂದು ಸಂಜೆ 6 ಗಂಟೆಗೆ ಸಾರ್ವಜನಿಕ ದರ್ಶನ ಮುಕ್ತಾಯ

  • ಹಾಸನಾಂಬೆ ದೇವಿಯ ಸಾರ್ವಜನಿಕ ದರ್ಶನಕ್ಕೆ ಇಂದು (ನವೆಂಬರ್ 10) ಕೊನೆಯ ದಿನವಾಗಿದೆ.
  • - ಸಂಜೆ 4 ಗಂಟೆಗೆ: ಸಾರ್ವಜನಿಕರ ಸರತಿ ಸಾಲುಗಳು (Queue lines) ಅಧಿಕೃತವಾಗಿ ಕ್ಲೋಸ್ ಆಗಲಿವೆ.
  • - ಸಂಜೆ 6 ಗಂಟೆಗೆ: ಸಾರ್ವಜನಿಕ ದರ್ಶನ ಸಂಪೂರ್ಣವಾಗಿ ಮುಕ್ತಾಯಗೊಳ್ಳಲಿದೆ.

ದರ್ಶನ ಮುಗಿಯುತ್ತಿದ್ದಂತೆ ಸಂಜೆಯಿಂದಲೇ ದೇವಾಲಯದಲ್ಲಿ ಧಾರ್ಮಿಕ ಪೂಜಾ ವಿಧಿವಿಧಾನಗಳು ಪ್ರಾರಂಭವಾಗಲಿದ್ದು, ಸಿದ್ದೇಶ್ವರ ಜಾತ್ರೋತ್ಸವ ವಿಜೃಂಭಣೆಯಿಂದ ನಡೆಯಲಿದೆ. ನಾಳೆ (ನವೆಂಬರ್ 11) ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಗರ್ಭಗುಡಿಯ ಬಾಗಿಲನ್ನು ಶಾಸ್ತ್ರೋಕ್ತವಾಗಿ ಮುಚ್ಚಲಾಗುವುದು. ಇದರೊಂದಿಗೆ ಈ ವರ್ಷದ ಹಾಸನಾಂಬೆ ದರ್ಶನೋತ್ಸವಕ್ಕೆ ವಿದ್ಯುಕ್ತ ತೆರೆ ಬೀಳಲಿದೆ.

ಮಳೆಯನ್ನೂ ಲೆಕ್ಕಿಸದೆ ಹರಿದುಬಂದ ಭಕ್ತ ಸಾಗರ!

ಕಳೆದ ಎರಡು ದಿನಗಳ ಹಿಂದೆ ದೇವಿ ದರ್ಶನಕ್ಕಾಗಿ ಭಕ್ತರ ಮಹಾಪೂರವೇ ಹರಿದುಬಂದಿತ್ತು. ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯನ್ನೂ ಲೆಕ್ಕಿಸದೆ ಸಾವಿರಾರು ಭಕ್ತರು ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದಿದ್ದರು. ಕೆಲವು ಭಕ್ತರು ಮಳೆಯಿಂದ ರಕ್ಷಣೆ ಪಡೆಯಲು ಚೇರ್‌ಗಳನ್ನು (ಖುರ್ಚಿ) ತಲೆ ಮೇಲೆ ಹೊತ್ತುಕೊಂಡು ಸಾಲಿನಲ್ಲಿ ಸಾಗುತ್ತಿದ್ದ ದೃಶ್ಯಗಳು ಕಂಡುಬಂದಿದ್ದವು. ಮಳೆಯ ಕಿರಿಕಿರಿ ಮತ್ತು ತೊಂದರೆಯ ನಡುವೆಯೂ ಭಕ್ತರ ಶ್ರದ್ಧೆ ಹಾಗೂ ಭಕ್ತಿ ಮುಗಿಲು ಮುಟ್ಟಿತ್ತು.

ಕಳೆದ ವರ್ಷ ಡಿಸಿಎಂ, ಈ ವರ್ಷ ಸಿಎಂ ಆಗಿ ದರ್ಶನ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾನುವಾರ ಹಾಸನಾಂಬೆ ದರ್ಶನ ಪಡೆದಿದ್ದರು. ನಂತರ ಮಾತನಾಡಿದ ಅವರು, ಎಲ್ಲಿ ಭಕ್ತಿ ಇದ್ಯೋ ಅಲ್ಲಿ ಭಗವಂತ ಇರ್ತಾನೆ. ಧರ್ಮದಲ್ಲಿ 3 ತತ್ವ ಇವೆ. ದೇಶ ಸೇವೆ, ಈಶ ಸೇವೆ , ಪ್ರಜಾ ಸೇವೆಗಳಿವೆ. ನಾವು ಧರ್ಮವನ್ನು ರಕ್ಷಿಸಿದರೆ ಧರ್ಮ ರಕ್ಷಿಸುತ್ತದೆ. ಪೂಜೆ ಮಾತ್ರ ಧರ್ಮವಲ್ಲ. ಸತ್ಯ, ನಿಷ್ಟೆ, ಪ್ರಾಮಾಣಿಕತೆ ಇಟ್ಟುಕೊಂಡಾಗ ಧರ್ಮ ಆಗುತ್ತೆ. ಮಾನವನ ಕಲ್ಯಾಣಕ್ಕೋಸ್ಕರ ಇವತ್ತು ತಾಯಿಯ ದೇವಿ ದರ್ಶನಕ್ಕೆ ಬಂದಿದ್ದೇವೆ. ಮಳೆ-ಬೆಳೆ ಆಗಿ ಜನರಿಗೆ ನೆಮ್ಮದಿ ಸಿಗಲೆಂದು ಪ್ರಾರ್ಥಿಸಿದ್ದೇನೆ. ನಾನು ಕಳೆದ ವರ್ಷ ಡಿಸಿಎಂ ಆಗಿ ಬಂದಿದ್ದೆ. ಇಂದು ಸಿಎಂ ಮತ್ತು ಭಕ್ತ ನಾಗಿ ಬಂದಿದ್ದೇನೆ. ಅರ್ಚಕರ ಏನು ಬೇಕಿದೆ ಸೌಲಭ್ಯ ಕೇಳಿದೆ, ಸ್ವಲ್ಪ ಜಾಗ ಇತ್ತಂತೆ. ವರದಿ ತರಿಸಿಕೊಂಡು ಮನೆಗಳ ಜಾಗ ಬಿಡಿಸಿಕೊಳ್ಳುವ ಬಗ್ಗೆ ಚರ್ಚಿಸುತ್ತೇನೆ. ರಾಜ್ಯಕ್ಕೆ ಹಿತಕ್ಕಾಗಿ ಜನರಿಗೆ, ಧರ್ಮ ಕಾಪಾಡೋರಿಗೆ ಒಳ್ಳೆಯದಾಗುತ್ತದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.