ಹಾಸನಾಂಬೆ ಉತ್ಸವ ಮತ್ತು ಪಕ್ಷದ ಸಂಘಟನೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡರು ಮೂಲ ಕಾಂಗ್ರೆಸ್ಸಿಗರನ್ನು ಕಡೆಗಣಿಸುತ್ತಿದ್ದಾರೆ ಎಂದು ಯುವ ಕಾಂಗ್ರೆಸ್ ಮತ್ತು ಹಿರಿಯ ಮುಖಂಡ ಬಿ. ಶಿವರಾಂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾರತಮ್ಯ ಮುಂದುವರಿದರೆ ಪ್ರತಿಭಟನೆಯ ಎಚ್ಚರಿಕೆ ನೀಡಲಾಗಿದೆ.
ಬೇಲೂರು ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡರು(Minister Shivalingegowda) ಹಾಸನಾಂಬೆ ಉತ್ಸವ(Hassanamba Utsav) ಸೇರಿದಂತೆ ಪಕ್ಷದ ಸಂಘಟನೆಯ ವಿಚಾರಲ್ಲಿ ಕಾಂಗ್ರೆಸ್ಸಿಗರನ್ನು ಕಡೆಗಣಿಸಿ ಅಪಮಾನ ಮಾಡುತ್ತಿದ್ದು, ತಮ್ಮ ಮಾತೃ ಪಕ್ಷ. ಜೆಡಿಎಸ್ ನಂತ ತಾರತಮ್ಯ ಧೋರಣೆಯನ್ನು ಸರಿಪಡಿಸಿಕೊಳ್ಳದಿದ್ದಲ್ಲಿ ಸಚಿವರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಯುವ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಶರತ್ ಆಕ್ರೋಶ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹಾಸನಾಂಬೆ ಜಾತ್ರೆ(Hassanambe jatra)ಗೆ ಬಂದಿದ್ದ ರಾಜ್ಯದ ಮುಖ್ಯ ಮಂತ್ರಿಗಳ ಸ್ವಾಗತಕ್ಕೆ ಮಾಜಿ ಶಾಸಕರು ಮುಖಂಡರನ್ನು ಪರಿಗಣಿಸದೆ ಎಲ್ಲದಕ್ಕೂ ಉಸ್ತುವಾರಿಗಳೇ ನೋಡಿಕೊಳ್ಳುವುದಾದರೆ ಮೂಲ ಕಾಂಗ್ರೆಸ್ಸಿಗರು ಎಲ್ಲಿಗೆ ಹೋಗಬೇಕು? ಸಚಿವರು ಜೆಡಿಎಸ್ ತತ್ವ ಸಿದ್ಧಾಂತದಲ್ಲೇ ಆಡಳಿತ ನಡೆಸುತ್ತಿದ್ದಾರೆ, ಯಾರನ್ನೂ ಗಣನೆಗೆ ತೆಗೆದುಕೊಳ್ಳುತ್ತಿಲ್ಲ, ಕೇಳಿದರೆ ಪ್ರೋಟೋಕಾಲ್ ಎಂದು ಜಿಲ್ಲಾಧಿಕಾರಿಗಳಿಂದ ಹೇಳಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಶಿವಲಿಂಗೇಗೌಡ ಕಾಂಗ್ರೆಸ್ ಸೇರಿದರೆ ಜೆಡಿಎಸ್ ಚಾಳಿ ಬಿಟ್ಟಿಲ್ಲ
ಬಿ. ಶಿವರಾಮ್ ಅವರು ನಾಲ್ಕು ಬಾರಿ ಶಾಸಕರಾಗಿ ಒಮ್ಮೆ ಸಚಿವರಾಗಿ ಕಾರ್ಯನಿರ್ವಾಹಿಸಿದ್ದಾರೆ, ಅಲ್ಲದೆ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಲು ಶ್ರಮಿಸಿದ್ದಾರೆ ಅಂತವರನ್ನು ಉಸ್ತುವಾರಿಗಳು ಅಪಮಾನ ಮಾಡಿರುವುದು ಖಂಡನಿಯ, ಇವರಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಬಿರುಕು ಮೂಡಿದೆ. ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್. ಪಕ್ಷ ವಿಚಾರವನ್ನು ಮಾತನಾಡಲು ಪಕ್ಷದ ಮುಖಂಡರ ಸಭೆ ಕರೆದಿಲ್ಲ. ಎಲ್ಲಾ ವಿಚಾರವನ್ನು ಏಕ ಪಕ್ಷಿಯವಾಗಿ ನಿರ್ವಹಿಸುತ್ತಿದ್ದಾರೆ. ಹಾಸನಾಂಬೆ ಉತ್ಸವದಲ್ಲಿ ಇವರ ಕಾರ್ಯವೈಖರಿ ಕೇವಲ ಶಿವರಾಮ್ ಒಬ್ಬರಿಗಲ್ಲ ಜಿಲ್ಲೆಯ ಆರು ವಿಧಾನಕ್ಷೇತ್ರಕ್ಕೆ ಅಪಮಾನ ಮಾಡಿದ್ದಾರೆ. ಮಾಜಿ ಶಾಸಕರು ವಿಧಾನ ಪರಿಷತ್ ಸದಸ್ಯರು, ಮುಖಂಡರನ್ನು ಗಣನೆಗೆ ತೆಗೆದುಕೊಂಡಿಲ್ಲ. ಕೇವಲ ಜಿಲ್ಲಾಧಿಕಾರಿ ಜೊತೆ ಮಾತುಕತೆ ಮಾಡಿಕೊಂಡು ಆಡಳಿತ ನಡೆಸುತ್ತಿದ್ದಾರೆ. ಮುಖ್ಯಮಂತ್ರಿಗಳ ಸ್ವಾಗತಕ್ಕೆ ಸೌಜನ್ಯಕ್ಕಾದರೂ ಎಲ್ಲರನ್ನು ಕರೆಯಬೇಕಿತ್ತಲ್ಲ? ಜಿಲ್ಲಾ ಮಂತ್ರಿಗಳು ಎಲ್ಲರನ್ನು ಒಟ್ಟು ಗೂಡಿಸುವ ಕೆಲಸ ಮಾಡಬೇಕು. ಆದರೆ ಆ ಕೆಲಸ ಮಾಡದೆ ಎಲ್ಲವನ್ನೂ ತಾವೊಬ್ಬರೇ ನಿರ್ವಹಿಸುವುದಾದರೆ ಪಕ್ಷವನ್ನು ಕಟ್ಟಿ ಬೆಳೆಸಿರುವ ಮೂಲ ಕಾಂಗ್ರೆಸಿಗರು ಎಲ್ಲಿಗೆ ಹೋಗಬೇಕು? ಶಿವಲಿಂಗೇಗೌಡರು ಜೆಡಿಎಸ್ ಪಕ್ಷದ ನಿಲುವನ್ನು ಇಲ್ಲಿ ಪಾಲಿಸುತ್ತಿದ್ದು ಇಂತವರಿಂದ ಜಿಲ್ಲೆಯಲ್ಲಿ ಪಕ್ಷ ಬೆಳವಣಿಗೆ ಕಾಣಲು ಸಾಧ್ಯವಿಲ್ಲ. ಮುಂದೆ ಇದೆ ದೋರಣೆ ಕಂಡುಬಂದರೆ ಕಚೇರಿಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಿಲ್ಲಾ ಮಾಧ್ಯಮ ವಕ್ತಾರ ರಾಕೇಶ್ ಮಾತನಾಡಿ ಈ ಬಾರಿ ಹಾಸನಾಂಬೆ ಜಾತ್ರೆ ಒಂದರ ಹಿಂದೆ ಒಂದು ಲೋಪ ಕಂಡು ಬರುತ್ತಿದೆ. ಈ ಹಿಂದೆ ಉಸ್ತುವಾರಿ ಸಚಿವರಾಗಿದ್ದ ಕೃಷ್ಣ ಬೈರೇಗೌಡ ಅವರು ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದು ಎಲ್ಲರನ್ನು ಪರಿಗಣಿಸುತ್ತಿದ್ದರು. ಸಭೆಗಳನ್ನು ಕರೆದು ಪ್ರೋಟೋಕಾಲ್ ನಿಯಮದಂತೆ ನಡೆದುಕೊಂಡಿದ್ದರು. ಆದರೆ ಶಿವಲಿಂಗೇಗೌಡರು ಮೂಲ ಕಾಂಗ್ರೆಸ್ಸಿಗರಲ್ಲ, ಇವರಿಗೆ ಕಾಂಗ್ರೆಸ್ ಪಕ್ದದ ತತ್ವ ಸಿದ್ಧಾಂತಗಳನ್ನು ಆ ರೀತಿಲ್ಲ. ತಮ್ಮ ಮೂಲ ಪಕ್ಷ ಜೆಡಿಎಸ್ ಪಕ್ಷದ ಗುಂಗಿನಲ್ಲೇ ಇರುವುದರಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಹಿನಾಯ ಸ್ಥಿತಿ ತಲುಪುವುದರಲ್ಲಿ ಸಂಶಯವಿಲ್ಲ. ಹೈಕಮಾಂಡ್ ಮಧ್ಯ ಪ್ರವೇಶಿಸಿ ಉಸ್ತುವಾರಿಗಳ ನಡುವಳಿಕೆ ಸರಿಪಡಿಸಿಕೊಳ್ಳಲು ಸೂಚಿಸಬೇಕು, ಉಸ್ತುವಾರಿಗಳು ನಡೆದುಕೊಂಡಿರುವ ಬಗ್ಗೆ ರಾಜ್ಯಾಧ್ಯಕ್ಷರಿಗೆ ಪತ್ರ ಬರೆಯುತ್ತವೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಭಾರತ್ ಜೋಡೋ ತಾಲೂಕು ಅಧ್ಯಕ್ಷ ಜಗದೀಶ್ ಹಾಜರಿದ್ದರು.
ಶಿವಲಿಂಗೇಗೌಡ ವಿರುದ್ಧ ಶಿವರಾಂ ಕೆಂಡಾಮಂಡಲ
ಜಿಲ್ಲಾ ಕಾಂಗ್ರೆಸ್ ನೊಳಗಿರುವ ಭಿನ್ನಮತ ಮತ್ತೊಮ್ಮೆ ಸ್ಪೋಟವಾಗಿದ್ದು, ಮಾಜಿ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಬಿ. ಶಿವರಾಂ ಅವರು ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯ ಅಬಕಾರಿ ಸಚಿವರಾದ ಕೆ.ಎಂ.ಶಿವಲಿಂಗೇಗೌಡರ ವಿರುದ್ಧ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಮ್ಮುಖದಲ್ಲೇ ಏಕವಚನದಲ್ಲಿ ವಾಗ್ದಾಳಿ ನಡೆಸಿರುವುದು ಬಿ.ಶಿವರಾಂ ಹಾಗೂ ಶಿವಲಿಂಗೇಗೌಡರ ನಡುವೆ ಇರುವ ಶೀತಲಸಮರಕ್ಕೆ ಸಾಕ್ಷಿಯಾಗಿದೆ.
ಜೆಡಿಎಸ್ನಿಂದ ಬಂದು ಇವನದ್ದೇ ದರ್ಬಾರ್
ಹಾಸನದ ಸಮೀಪ ಹೆಲಿಪ್ಯಾಡಿಗೆ ಮುಖ್ಯಮಂತ್ರಿಗಳು ಬಂದಾಗ ಪ್ರತಿಭಟಿಸಿ ಮಾಧ್ಯಮದೊಂದಿಗೆ ಮಾತನಾಡಿದ ಬಿ. ಶಿವರಾಂ, ಜೆಡಿಎಸ್ನಿಂದ ಬಂದ ಶಿವಲಿಂಗೇಗೌಡ ನಮ್ಮ ಕಾಂಗ್ರೆಸ್ನವರ ಮೇಲೆಯೇ ಸವಾರಿ ಮಾಡುತ್ತಿದ್ದಾರೆ. ಸೌಜನ್ಯಕ್ಕೂ ನಮ್ಮನ್ನು ಮೀಟಿಂಗ್ ಗೆ ಕರೆಯುವುದಿಲ್ಲ. ಜೆಡಿಎಸ್ ನಿಂದ ಬಂದು ಇವನದೆ ದರ್ಬಾರ್ ಮಾಡುತ್ತಿದ್ದಾನೆ. ನಾವು ಸೋತಿರಬಹುದು, ನಾವೂ ಕೂಡ ಹಿಂದೆ ಒಂದು ಕಾಲದಲ್ಲಿ ಕಾಂಗ್ರೆಸ್ ಆಳಿದ್ದೇವೆ. ಕಾಂಗ್ರೆಸ್ ಪಕ್ಷವನ್ನು ಕಟ್ಟಿದವರು ಯಾರು, ಪಕ್ಷದ ಇತಿಹಾಸ ಏನು ಎಂಬುದನ್ನು ಅರಿತುಕೊಳ್ಳಬೇಕು. ಜೆಡಿಎಸ್ನಿಂದ ಕಾಂಗ್ರೆಸ್ಗೆ ಬಂದವರು ಪಕ್ಷದ ಹಿರಿಯರು ಮತ್ತು ಮೂಲ ಕಾರ್ಯಕರ್ತರನ್ನು ಕಡೆಗಣಿಸುವ ಧೋರಣೆ ತಾಳಬಾರದು ಎಂಬ ಅರ್ಥದಲ್ಲಿ ಕಿಡಿಕಾರಿದರು.
ಸಭೆಯಲ್ಲಿ ಭಾಗವಹಿಸುವವರಿಗೆ ಕನಿಷ್ಠ ಸೌಜನ್ಯ ತೋರಿಸಬೇಕು. ಸಭೆಗೆ ಬಂದು ಕುಳಿತುಕೊಂಡು, ಹೇಳಬೇಕಾದ ವಿಚಾರವನ್ನು ಹೇಳದೆ ಎದ್ದು ಹೊರಟುಹೋಗುವುದು ಸರಿಯಾದ ನಡವಳಿಕೆಯಲ್ಲ. ಚುನಾವಣೆಯಲ್ಲಿ ಸೋತಿರಬಹುದು, ಆದರೆ ಹಿಂದೆ ಪಕ್ಷಕ್ಕಾಗಿ ಕೆಲಸ ಮಾಡಿದವರು ಮತ್ತು ರಾಜಕೀಯ ಅನುಭವ ಹೊಂದಿದವರು ಇನ್ನೂ ಇದ್ದಾರೆ. ಅವರನ್ನು ಗೌರವದಿಂದ ನಡೆಸಿಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷದ ಇತಿಹಾಸ, ಪಕ್ಷದ ಸಂಘಟನೆ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರನ್ನು ಎದುರಿಸಿ ಮಾಡಿದ ರಾಜಕೀಯ ಪ್ರಭಾವದ ಬಗ್ಗೆಯೂ ಪ್ರಸ್ತಾಪಿಸಿದ ಅವರು, ಕಾಂಗ್ರೆಸ್ ಪಕ್ಷದ ಹಿರಿಯರನ್ನು ಹಾಗೂ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸುವ ಪ್ರವೃತ್ತಿ ಸರಿಯಲ್ಲ ಎಂದು ಏರುದನಿಯಲ್ಲಿ ಕೂಗಾಡಿದರು.














