ಚಾಮರಾಜನಗರದ ಕಾವೇರಿ ವನ್ಯಜೀವಿಧಾಮದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಶಂಕಿತ ಬೇಟೆಗಾರರು ಮೃತಪಟ್ಟ ಘಟನೆಯು ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ಘಟನೆಯ ಬಳಿಕ ನಡೆದ ಪ್ರತೀಕಾರದ ದಾಳಿಗಳು, ರಾಜಕೀಯ ಸ್ವರೂಪ ಹಾಗೂ ಕಳ್ಳಬೇಟೆಯ ಹಿಂದಿರುವ ಜಾಲವು ಅರಣ್ಯ ಸಂರಕ್ಷಣೆಯ ಗಂಭೀರ ಸವಾಲು ತೆರೆದಿಟ್ಟಿದೆ.

ವಿನೋದ್ ಕುಮಾರ್ ಬಿ. ನಾಯ್ಕ್

ಏಷ್ಯಾನೆಟ್‌ ಸುವರ್ಣ ನ್ಯೂಸ್‌ ವಿಶೇಷ ಯೋಜನೆಗಳ ಸಂಪಾದಕ

--

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಜೀವಿಧಾಮ(Cauvery Wildlife Sanctuary)ದಲ್ಲಿ ಆಗಸ್ಟ್ 15ರಂದು ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ಚಕಮಕಿಯಲ್ಲಿ ಮೂವರು ಶಂಕಿತ ಬೇಟೆಗಾರರು ಸಾವನ್ನಪ್ಪಿದರು. ಈ ಘಟನೆ ಇತ್ತೀಚಿನ ವರ್ಷಗಳಲ್ಲಿ ಪೊಲೀಸ್ ಇಲಾಖೆ ಕೂಡ ಎಂದೂ ನಡೆಸದ ಕಾರ್ಯಾಚರಣೆಗಿಂತ ದೊಡ್ಡದಾಗಿದೆ ಎನ್ನುವ ಕಾರಣಕ್ಕೆ ಬಹಳ ವಿವಾದಕ್ಕೀಡಾಗಿದೆ. ಅರಣ್ಯ ಪ್ರದೇಶಗಳಲ್ಲಿ ಆಗಿಂದಾಗ್ಗೆ ಕಳ್ಳ ಬೇಟೆಗಾರರು ಮತ್ತು ಅರಣ್ಯ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆಯುತ್ತಿರುತ್ತದೆ. ಆದರೆ, ಒಂದೇ ಘಟನೆಯಲ್ಲಿ ಮೂವರು ಶಂಕಿತ ಬೇಟೆಗಾರರು ಮೃತಪಟ್ಟಿದ್ದು ಸಹ ಇದೇ ಮೊದಲು. ಈ ಘಟನೆಯ ಅಗಾಧತೆಯೇ ಇದೀಗ ಅರಣ್ಯ ಸಂರಕ್ಷಣೆಯ ಅನೇಕ ಸವಾಲುಗಳನ್ನು ನಮ್ಮ ಮುಂದೆ ತೆರೆದಿಡುತ್ತಿದೆ.

ಈ ಘಟನೆ ಬಳಿಕ ಸ್ಥಳೀಯರು ನಡೆಸಿದ ಪ್ರತೀಕಾರದ ದಾಳಿಯಲ್ಲಿ ಅರಣ್ಯ ಇಲಾಖೆಯ ಕಚೇರಿ, ವಾಹನಗಳು ಧ್ವಂಸಗೊಂಡಿದ್ದು ಮಾತ್ರವಲ್ಲ, ದಟ್ಟ ಕಾಡೊಳಗೆ ನಿರ್ಮಿಸಲಾಗಿದ್ದ ಕಳ್ಳ ಬೇಟೆ ತಡೆ ಶಿಬಿರಗಳನ್ನು ಜಿಲೆಟಿನ್ ಇಟ್ಟು ಸ್ಫೋಟಿಸಿದ ಸುದ್ದಿಗಳು ಬರುತ್ತಿವೆ. ಮೂವರ ಸಾವಿಗೆ ಪ್ರತೀಕಾರವಾಗಿ ಜಿಲೆಟಿನ್ನಂತಹ ಅಪಾಯಕಾರಿ ಸ್ಫೋಟಕಗಳನ್ನು ಬಳಸಿ ಕ್ಯಾಂಪುಗಳನ್ನು ಧ್ವಂಸ ಮಾಡುತ್ತಾರೆ ಎಂದರೆ, ಅವರು ಖಂಡಿತವಾಗಿಯೂ ಮುಗ್ಧ ಹಳ್ಳಿಗರಲ್ಲ. ಹಳ್ಳಿಗರ ಹೆಸರಿನಲ್ಲಿ ವಿಧ್ವಂಸಕ ಶಕ್ತಿಗಳು ಸಕ್ರಿಯವಾಗಿವೆ ಎನಿಸುತ್ತದೆ. ಇವುಗಳ ನಡುವೆಯೇ ಈ ಎಲ್ಲ ಘಟನೆಗಳು ರಾಜಕೀಯ ಸ್ವರೂಪ ಪಡೆದುಕೊಂಡು ಇಡೀ ಪ್ರಕರಣವನ್ನು ಗೋಜಲು ಮಾಡಿಬಿಟ್ಟಿವೆ.

ಅತಿ ಹೆಚ್ಚು ಕಳ್ಳಬೇಟೆ ನಡೆವ ಕಾಡು

ಹನೂರು ಗುಂಡಿನ ಚಕಮಕಿ ಪ್ರಕರಣವನ್ನು ಖಂಡಿತವಾಗಿಯೂ ನಾವು ರಾಜಕೀಯ ದೃಷ್ಟಿಕೋನದಿಂದ ನೋಡಲೇಬಾರದು. ಚಾಮರಾಜನಗರ ಅತಿ ಹಿಂದುಳಿದ ಜಿಲ್ಲೆ. ಅಲ್ಲಿನ ಭೌಗೋಳಿಕ ಪ್ರದೇಶದ ಪೈಕಿ ಶೇ.80ರಷ್ಟು ಅರಣ್ಯ ಪ್ರದೇಶದಿಂದ ಕೂಡಿದೆ. ಈ ಕಾಡಿನಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಜನರು ವಾಸ ಮಾಡುತ್ತಿದ್ದಾರೆ. ಬಂಡೀಪುರ ಹೊರತುಪಡಿಸಿ ಬಿಆರ್ ಹಿಲ್ಸ್ ಹುಲಿ ಸಂರಕ್ಷಿತ ಪ್ರದೇಶ, ಮಲೈಮಹದೇಶ್ವರ ವನ್ಯಜೀವಿಧಾಮ ಮತ್ತು ಕಾವೇರಿ ವನ್ಯಜೀವಿಧಾಮಗಳಲ್ಲಿ ಸಾವಿರಾರು ಕುಟುಂಬಗಳು ನೆಲೆಸಿವೆ. ಈ ಭಾಗಗಳು ಎಲ್ಲ ರೀತಿಯ ಮೂಲಸೌಕರ್ಯಗಳಿಂದ ವಂಚಿತವಾಗಿವೆ. ಹೀಗಿರುವಾಗ ನಾವು ಇಡೀ ಘಟನೆಯನ್ನು ತಾಂತ್ರಿಕ ಅಂದರೆ ಟೆಕ್ನಿಕಲ್ ಅಥವಾ ವೈಜ್ಞಾನಿಕ ದೃಷ್ಟಿಕೋನದಿಂದ ನೋಡಬೇಕು.

ಈ ಭಾಗದಲ್ಲಿ ಅತಿ ಹೆಚ್ಚು ಕಳ್ಳ ಬೇಟೆ ನಡೆಯುತ್ತದೆ. ಇದಕ್ಕೆ ಕಾರಣವೇನು..? ಇಲ್ಲಿನ ಜನರನ್ನು ಪಕ್ಕದ ತಮಿಳುನಾಡಿನ ಶ್ರೀಮಂತ ಜಮೀನ್ದಾರರು ಕೂಲಿಗಳಂತೆ ನಡೆಸಿಕೊಳ್ಳುತ್ತಾರೆ. ತಮಿಳುನಾಡಿನ ಕಾಡಿನಲ್ಲಿ ದನ ಮೇಯಿಸಲು ಹೈಕೋರ್ಟ್ ನಿರ್ಬಂಧಿಸಿದ ನಂತರ ಕರ್ನಾಟಕದ ಗಡಿಭಾಗದಲ್ಲಿರುವ ಬಡಜನರಿಗೆ ಲಕ್ಷಾಂತರ ರುಪಾಯಿ ಸಾಲ ಕೊಟ್ಟು, ಅದನ್ನು ತೀರಿಸಲು ಅವರ ಸಾವಿರಾರು “ಬರಗೂರು” ತಳಿಯ ದನಗಳನ್ನು ಕರ್ನಾಟಕದ ಕಾಡಿನಲ್ಲಿ ಮೇಯಿಸಿ ಎಂದು ಕೊಟ್ಟುಬಿಡುತ್ತಾರೆ. ತಮಿಳುನಾಡಿನ ಹಸು, ಕರ್ನಾಟಕದ ಕಾಡಿನ ಸಸ್ಯ ಸಂಪತ್ತು, ಅದನ್ನು ತಡೆಯಲು ಅರಣ್ಯ ಸಿಬ್ಬಂದಿ ಕ್ರಮ ಕೈಗೊಂಡರೆ ಅವರ ವಿರುದ್ಧ ಸುಳ್ಳು ಎಸ್ಸಿ/ಎಸ್ಟಿ ದೌರ್ಜನ್ಯದ ಕೇಸುಗಳನ್ನು ಹಾಕಿಸಿ ದುರ್ಬಲರನ್ನಾಗಿ ಮಾಡುತ್ತಾರೆ. ಅದಕ್ಕೂ ಜಗ್ಗದಿದ್ದರೆ ಬೇಸಿಗೆಯಲ್ಲಿ ಕಾಡಿಗೆ ಬೆಂಕಿ ಹಾಕಿ ಅರಣ್ಯಾಧಿಕಾರಿಗಳನ್ನು ಮಟ್ಟ ಹಾಕುವ ಪ್ರಯತ್ನ ನಡೆಯುತ್ತದೆ. ಅಷ್ಟೇ ಅಲ್ಲ, ಅಕ್ರಮವಾಗಿ ಬೇಟೆಯಾಡಿ ಜಿಂಕೆ ಮಾಂಸವನ್ನು ನೆರೆಯ ತಮಿಳುನಾಡು ರಾಜ್ಯಕ್ಕೆ ಮಾರಾಟ ಮಾಡುತ್ತಾರೆ. ಈಗಲೂ ಕರ್ನಾಟಕದಲ್ಲಿ ಸಿಗುವ ಹುಲಿ ಉಗುರು ಅಥವಾ ಚರ್ಮದ ಜಪ್ತಿ ಪ್ರಕರಣಗಳನ್ನು ಜಾಲಾಡಿದಾಗ ಅದರ ಎಳೆ ಚಾಮರಾಜನಗರ ಜಿಲ್ಲೆಯ ಕಾಡಿಗೆ ಲಿಂಕ್ ಇರುವುದನ್ನು ತೋರಿಸುತ್ತದೆ.

ಜಾಗೃತಿ ಎಂಬುದೇ ಇಲ್ಲಿ ಮರೀಚಿಕೆ

ಸುಳ್ವಾಡಿ ದೇವಸ್ಥಾನದ ಪ್ರಸಾದಕ್ಕೆ ವಿಷ ಬೆರೆಸಿದ ಪ್ರಕರಣ ಇರಬಹುದು, 5 ಹುಲಿಗಳಿಗೆ ವಿಷ ಹಾಕಿ ಕೊಂದ ಘಟನೆ ಇರಬಹುದು, ಹುಲಿಯ ದೇಹವನ್ನು ತುಂಡು ತುಂಡು ಮಾಡಿ ಬಿಸಾಡಿದ್ದ ಪ್ರಕರಣ ಇರಬಹುದು, ಇವೆಲ್ಲವೂ ಈ ಪ್ರದೇಶದಲ್ಲಿ ಅದೆಷ್ಟು ಜನಜಾಗೃತಿಯ ಅವಶ್ಯಕತೆ ಇದೆ ಎನ್ನುವುದನ್ನು ಎತ್ತಿ ತೋರಿಸುತ್ತದೆ. ಅರಣ್ಯ ಇಲಾಖೆಯಿಂದ ಹಿಡಿದು ಜಿಲ್ಲಾಡಳಿತದ ತನಕ ಯಾರೂ ಸಹ ಕಾಡಂಚಿನ ಮತ್ತು ಕಾಡೊಳಗಿನ ಗ್ರಾಮಗಳ ಜನರಲ್ಲಿ ಎಲ್ಲ ವಿಚಾರಗಳ ಬಗ್ಗೆ ಜಾಗೃತಿ ಮೂಡಿಸುವ ಯಾವುದೇ ಕೆಲಸ ಮಾಡಿಲ್ಲ. ಇಲ್ಲಿನ ಜನರನ್ನು ತಲುಪುವ ಕೆಲಸಗಳನ್ನು ಸರ್ಕಾರಗಳು ಸಹ ಮಾಡಿಲ್ಲ. ಕರ್ನಾಟಕದಲ್ಲಿ ತಮಿಳರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಹೇಳಿಕೆ ನೀಡಿದ ತಮಿಳುನಾಡಿನ ಮುಖ್ಯಮಂತ್ರಿ ಜೋಸೆಫ್ ವಿಜಯ್, ಆ ಪ್ರದೇಶದ ಸಮಸ್ಯೆಗಳ ನೈಜತೆಯ ಅರಿವಿಲ್ಲದೇ ಮಾತನಾಡಿರುವುದು ಹಾಸ್ಯಾಸ್ಪದ.

ಹನೂರು ಗುಂಡಿನ ಚಕಮಕಿಯ ಘಟನೆಯ ಮ್ಯಾಜಿಸ್ಟ್ರೇಟ್ ತನಿಖೆ ನಡೆಯುತ್ತಿದೆ. ಅದರ ವರದಿಯಿಂದ ನಿಜಾಂಶ ಹೊರಗೆ ಬರುತ್ತದೆ. ಅರಣ್ಯ ಸಿಬ್ಬಂದಿಯಿಂದ ತಪ್ಪಾಗಿದೆಯಾ...? ಅಥವಾ ಸತ್ತವರೆಲ್ಲರೂ ಕಳ್ಳಬೇಟೆಗೆ ಬಂದಿದ್ದವರೇ ಎನ್ನುವುದು ಗೊತ್ತಾಗಲಿದೆ. ಆದರೆ, ನಂತರದ ಘಟನೆಗಳನ್ನು ನೋಡಿದಾಗ ಸ್ಥಳೀಯ ಜನರು ಮತ್ತು ಅರಣ್ಯಾಧಿಕಾರಿಗಳ ಮೇಲೆ ನಿಯಂತ್ರಣ ಸಾಧಿಸಲು ಕಳ್ಳ ಬೇಟೆಗಾರರು ಮತ್ತು ಅವರನ್ನು ಪ್ರೋತ್ಸಾಹಿಸುವ ಜಾಲ ಬಹಳ ಸಕ್ರಿಯವಾದ ಹಾಗೆ ಕಾಣಿಸುತ್ತಿದೆ. ಮತ ರಾಜಕಾರಣವನ್ನೇ ಉಸಿರನ್ನಾಗಿಸಿಕೊಂಡಿರುವ ಜನಪ್ರತಿನಿಧಿಗಳು ಇಂತಹ ಪ್ರಕರಣಗಳನ್ನು ಸೂಕ್ಷ್ಮವಾಗಿ ನೋಡುವುದನ್ನು ಬಿಟ್ಟು, ಪೈಪೋಟಿಗೆ ಬಿದ್ದವರಂತೆ ಅರಣ್ಯ ಸಿಬ್ಬಂದಿ ಮೇಲೆ ಆರೋಪಗಳನ್ನು ಮಾಡಿ ಅರಣ್ಯ ಪಡೆಯ ನೈತಿಕ ಸ್ಥೈರ್ಯವನ್ನೇ ಕುಂದಿಸಿಬಿಟ್ಟಿದ್ದಾರೆ.

ಕಾನೂನು ಜಾರಿಗೊಳಿಸುವ ಪಡೆಗಳಿಂದಲೂ ತಪ್ಪುಗಳು ಆಗಬಹುದು. ಆದರೆ, ಅವುಗಳನ್ನು ದುರ್ಬಲ ಮಾಡುವ ಪ್ರವೃತ್ತಿ ಬಹಳ ಕೆಟ್ಟದ್ದು, ವನ್ಯಜೀವಿಗಳ ದಾಳಿ, ಕುಟುಂಬದಿಂದ ದೂರವುಳಿದು ಕಾಡಿನಲ್ಲಿ ಕರ್ತವ್ಯ ನಿರ್ವಹಿಸುವ ಅರಣ್ಯ ಸಿಬ್ಬಂದಿ ಮಾಡುವ ಕೆಲಸಕ್ಕೆ ಜನರಿಂದಲೂ ಬೈಗುಳ ಕೇಳುವಾಗ ಅವರ ಮನಸ್ಥಿತಿ ಹೇಗಿರಬಹುದು ಎನ್ನುವುದನ್ನು ಊಹಿಸಿಕೊಳ್ಳೋಣ. ಉಳಿದೆಲ್ಲ ಖಾಕಿ ಪಡೆಗಳಿಗಿಂತಲೂ ಅರಣ್ಯ ಪಡೆ ಅತಿ ಹೆಚ್ಚು ಶತ್ರುಗಳನ್ನು ತನ್ನ ಸುತ್ತ ಹೊಂದಿದೆ. ಜನಪ್ರತಿನಿಧಿಗಳು, ಕಾಡಂಚಿನ ಜನರು ಹೀಗೆ ಎಲ್ಲರೂ ಅರಣ್ಯ ಇಲಾಖೆಯ ದ್ವೇಷಿಗಳೇ. ಆದರೆ, ಅವರ ಸೇವೆಯಿಂದ, ತ್ಯಾಗದಿಂದ ಲಾಭ ಪಡೆವ ನಾಗರಿಕ ಸಮಾಜ ಎಂದಿಗೂ ಅವರಿಗೆ ಕೃತಜ್ಞತೆಯನ್ನು ತೋರಿಸದಿರುವುದು ದುರಂತ.