ಮಂಗಳೂರು(ಜ.26): ‘ಈ ಕುಗ್ರಾಮದಲ್ಲಿ ಬಡ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ನೆರವಾಗಲು ಶಾಲೆಯನ್ನು ತೆರೆದೆ. ನನ್ನ ಬದುಕಿನ ಎಲ್ಲ ಸಂಪತ್ತನ್ನು ಶಿಕ್ಷಣಕ್ಕಾಗಿ ಶಾಲೆಗೆ ದಾನ ಮಾಡಿದೆ. ಇದರಿಂದಾಗಿ ಈಗ ಹೈಸ್ಕೂಲ್‌ವರೆಗೆ ಹಳ್ಳಿ ಮಕ್ಕಳು ಓದುತ್ತಿದ್ದಾರೆ. ನನ್ನ ಜೀವನದ ಮಹತ್ವದ ಆಸೆ ಎಂದರೆ, ಇಲ್ಲಿ ಪದವಿ ಪೂರ್ವ ಕಾಲೇಜು ಆರಂಭವಾಗಬೇಕು. ಇದಕ್ಕಾಗಿ ಸಾಕಷ್ಟುಪ್ರಯತ್ನ ನಡೆಸಿದರೂ ಇದುವರೆಗೂ ಈಡೇರಲೇ ಇಲ್ಲ.’

ಇದು ಕೇಂದ್ರ ಸರ್ಕಾರದಿಂದ ‘ಪದ್ಮಶ್ರೀ’ ಪ್ರಶಸ್ತಿಗೆ ಭಾಜನರಾದ ಅಕ್ಷರ ಸಂತ ಹರೇಳಕಳ ಹಾಜಬ್ಬ ಅವರ ಬೇಸರದ ಮಾತು.

ಕೇಂದ್ರದಿಂದ ಪದ್ಮಶ್ರೀ ಪ್ರಶಸ್ತಿ ಘೋಷಣೆಯಾದರೂ ಹಾಜಬ್ಬರು ಸ್ವಲ್ಪವೂ ಹಮ್ಮುಬಿಮ್ಮು ತೋರಿಸದೆ ಎಂದಿನಂತೆ ದೈನ್ಯತೆಯಿಂದ ಮಾತನಾಡಿದರು. ಅಷ್ಟೊಂದು ದೊಡ್ಡ ಮಟ್ಟದ ಪ್ರಶಸ್ತಿ ಪ್ರಕಟವಾಗಿರುವುದಕ್ಕೆ ಹಾಜಬ್ಬರಲ್ಲಿ ಅಚ್ಚರಿ ಮನೆಮಾಡಿತ್ತು. ಯಾಕೆಂದರೆ, ಪ್ರಶಸ್ತಿಗಾಗಿ ಹಾಜಬ್ಬರಲ್ಲಿ ಎಂದ ಹಾತೊರೆಯುವವರಲ್ಲ. ಹಾಗೆಯೇ ಈ ಪ್ರಶಸ್ತಿ ಹಾಜಬ್ಬರನ್ನು ಅರಸಿಕೊಂಡು ಬಂದಿದೆ. ಇದು ಹಾಜಬ್ಬರಿಗೆ ಸಹಜವಾಗಿ ಖುಷಿ ಕೊಟ್ಟಿದೆ. ಪ್ರಶಸ್ತಿ ಘೋಷಣೆ ಹಿನ್ನೆಲೆಯಲ್ಲಿ ಹಾಜಬ್ಬ ‘ಕನ್ನಡಪ್ರಭ’ ಜೊತೆ ಮನಬಿಚ್ಚಿ ಮಾತನಾಡಿದ್ದಾರೆ.

ಕಿತ್ತಳೆ ಮಾರಿ ಶಿಕ್ಷಣ ದೇಗುಲ ಕಟ್ಟಿದ ಅಕ್ಷರ ಸಂತನಿಗೆ ಪದ್ಮಶ್ರೀ

ನನ್ನ ಹರೇಕಳ ಶಾಲೆಯಲ್ಲಿ ಈಗ ಮಕ್ಕಳ ಸಂಖ್ಯೆ ಕುಸಿತವಾಗಿದೆ. ಇದಕ್ಕೆ ಸಮೀಪದಲ್ಲೇ ಖಾಸಗಿ ಶಾಲೆ ಆರಂಭಗೊಂಡಿರುವುದು ಕಾರಣವಾಗಿರಬಹುದು. ಈ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರು ಉತ್ತಮವಾಗಿ ಪಾಠ ಮಾಡುತ್ತಾರೆ. ಆದ್ದರಿಂದ ಮಕ್ಕಳ ಸಂಖ್ಯೆ ಕಡಿಮೆಯಾದರೂ ತರಗತಿಗೆ ತೊಂದರೆಯಾಗಿಲ್ಲ ಎಂದು ಹೇಳುತ್ತಾರೆ. ಈ ಶಾಲೆಗೆ ಸ್ವಂತ ಜಾಗ, ಆಟದ ಮೈದಾನ, ಅಗತ್ಯ ಕಟ್ಟಡ ಹಾಗೂ ಎಲ್ಲ ರೀತಿಯ ಮೂಲಸೌಕರ್ಯಗಳನ್ನು ಒದಗಿಸಿಕೊಟ್ಟಿದ್ದೇನೆ. ಆದರೂ ಮಕ್ಕಳ ಸಂಖ್ಯೆ ಜಾಸ್ತಿಯಾಗುತ್ತಿಲ್ಲ ಎನ್ನುವ ಕೊರಗು ಇದೆ ಎನ್ನುತ್ತಾರೆ ಹಾಜಬ್ಬ.

ಬಾಂಬರ್ ಆದಿತ್ಯರಾವ್‌ನ ಇಂಟ್ರೆಸ್ಟಿಂಗ್ ಕಹಾನಿ ಕೇಳಿದ ಪೊಲೀಸರು

ಕಳೆದ ಮೂರು ವರ್ಷಗಳಿಂದ ಹರೇಕಳಕ್ಕೆ ಪಿಯು ಕಾಲೇಜು ಮಂಜೂರಾತಿಗೆ ಇನ್ನಿಲ್ಲದ ಪ್ರಯತ್ನ ನಡೆಸಿದ್ದೇನೆ. ಈಗಿನ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದ ನಳಿನ್‌ ಕುಮಾರ್‌ ಕಟೀಲ್‌, ಶಾಸಕ ಯು.ಟಿ.ಖಾದರ್‌ ಸೇರಿದಂತೆ ಎಲ್ಲರಲ್ಲೂ ಮನವಿ ಸಲ್ಲಿಸುತ್ತಾ ಬಂದಿದ್ದೇನೆ. ಆದರೆ ಇದುವರೆಗೂ ಈಡೇರಲೇ ಇಲ್ಲ ಎಂದು ಬೇಸರದಿಂದ ಹೇಳುತ್ತಾರೆ.

ಪ್ರಶಸ್ತಿ ಮೊತ್ತವೆಲ್ಲ ಶಾಲೆಗೆ!:

2004ರಲ್ಲಿ ‘ಕನ್ನಡಪ್ರಭ’ ವರ್ಷದ ವ್ಯಕ್ತಿ ಪುರಸ್ಕಾರ ಪ್ರದಾನ ಮಾಡಿದಾಗ, ಒಂದು ಲಕ್ಷ ರು. ನಗದು ನೀಡಿ ಗೌರವಿಸಿತ್ತು. ಆ ಮೊತ್ತದಿಂದ ತೊಡಗಿ ಸಿಎನ್‌ಎನ್‌-ಐಬಿಎನ್‌ 5 ಲಕ್ಷ ರು. ನೀಡಿತ್ತು. ಬಳಿಕ ಅನೇಕ ಮಂದಿ ನಗದು ಪುರಸ್ಕಾರ ನೀಡಿದ್ದಾರೆ. ಸುಮಾರು 10 ಲಕ್ಷ ರು.ಗೂ ಅಧಿಕ ಪ್ರಶಸ್ತಿ ಮೊತ್ತವನ್ನು ನನ್ನ ಶಾಲೆಗೆ ದಾನವಾಗಿ ನೀಡಿದ್ದೇನೆ. ಈ ಮೊತ್ತದಿಂದ ಶಾಲೆಗೆ ಅನೇಕ ಮೂಲಸೌಕರ್ಯಗಳನ್ನು ಕಲ್ಪಿಸಲು ಸಾಧ್ಯವಾಗಿದೆ. ಈಗಲೂ ಯಾವುದೇ ನಗದು ಪ್ರಶಸ್ತಿ ಸಿಕ್ಕಿದರೆ ಅದನ್ನು ಶಾಲೆಗೆ ಕೊಡುಗೆಯಾಗಿ ನೀಡುತ್ತಿದ್ದೇನೆ. ಅದರಲ್ಲೇ ನಾನು ಸಂತೃಪ್ತಿಯನ್ನು ಕಾಣುತ್ತಿದ್ದೇನೆ ಎನ್ನುತ್ತಾರೆ ಹಾಜಬ್ಬ.

ಮಗನ ದುಡಿತದಿಂದಲೇ ಜೀವನ!:

ಅನಾರೋಗ್ಯದ ಕಾರಣ ನಾನು ಈಗ ಕಿತ್ತಳೆ ಮಾರಲು ಹೋಗುತ್ತಿಲ್ಲ. ನನ್ನ ಮಗ ಪೈಂಟಿಂಗ್‌ ಕೆಲಸ ಮಾಡುತ್ತಿದ್ದಾನೆ. ಅದರಿಂದಲೇ ಜೀವನ ಸಾಗಿಸಬೇಕು. ನನಗೆ ಮೂರು ವರ್ಷದ ಹಿಂದೆ ಮಂಗಳೂರಿನ ಕ್ರೈಸ್ತ ಸಮುದಾಯದ ಮುಖಂಡರು ಅವರದೇ ಖರ್ಚಿನಲ್ಲಿ ಮನೆ ನಿರ್ಮಿಸಿಕೊಟ್ಟಿದ್ದಾರೆ. ಅದರಲ್ಲಿ ಜೀವನ ಸಾಗಿಸುತ್ತಿದ್ದೇನೆ. ಕುಟುಂಬದಲ್ಲಿ ಅಸೌಖ್ಯ ಇದ್ದರೂ ಸಂಸಾರ ನಿಭಾಯಿಸುತ್ತಿದ್ದೇನೆ ಎಂದು ಹೇಳುತ್ತಾರೆ.

ಮಾನವೀಯ ನೆರವು:

ಕನ್ನಡಪ್ರಭ ವರ್ಷದ ವ್ಯಕ್ತಿ ಪುರಸ್ಕಾರದ ಬಳಿಕ ಮುಳುಬಾಗಿಲು ನಿವಾಸಿ ಅಜಿತ್‌ ಕುಮಾರ್‌ ಎಂಬವರು ಸ್ವಯಂ ಆಗಿ ಮಾಸಿಕ ವರ್ಷಕ್ಕೆ 3 ಸಾವಿರ ರು. ನೆರವಿನ ಮೊತ್ತವನ್ನು ಕಳುಹಿಸಿಕೊಡುತ್ತಿದ್ದಾರೆ. ನಮ್ಮದೇ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿದ್ದ ವೀಣಾ ಅವರು ನನ್ನ ಮೊಬೈಲ್‌ಗೆ ರಿಚಾರ್ಜ್ ಮಾಡುತ್ತಿರುತ್ತಾರೆ. ಸರ್ಕಾರದಿಂದ ಮಾಸಿಕ 35 ಕಿಲೋ ಉಚಿತ ಅಕ್ಕಿ ಸಿಗುತ್ತಿದೆ. ಹೀಗೆ ಎಲ್ಲರ ಸಹಕಾರದಿಂದ ಕುಟುಂಬ ನಿರ್ವಹಿಸುತ್ತಿದ್ದೇನೆ ಎಂದು ಹಾಜಬ್ಬ ವಿನೀತರಾಗಿ ಹೇಳುತ್ತಾರೆ.

ಪ್ರಶಸ್ತಿ ಕರೆ ಬಂದಾಗ ರೇಷನ್‌ ಅಂಗಡಿಯಲ್ಲಿದ್ದರು!

ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ಘೋಷಿಸಿದ ವಿಚಾರ ಹಾಜಬ್ಬರಿಗೆ ಗೊತ್ತಾಗಿದ್ದು ಶನಿವಾರ ಸಂಜೆ ವೇಳೆಗೆ ಬಸ್ಸಿನಲ್ಲಿ ಮನೆಗೆ ತೆರಳುತ್ತಿದ್ದಾಗ. ವಾಸ್ತವದಲ್ಲಿ ಹಾಜಬ್ಬರಿಗೆ ಶನಿವಾರ ಬೆಳಗ್ಗೆ 11.45ಕ್ಕೆ ದೆಹಲಿಯಿಂದ ಕರೆ ಬಂದಿತ್ತು. ಕೇಂದ್ರ ಗೃಹ ಇಲಾಖೆಯಿಂದ ಇಂಗ್ಲಿಷ್‌ ಮತ್ತು ಹಿಂದಿ ಭಾಷೆಯಲ್ಲಿ ಮಾತನಾಡಿದ ವ್ಯಕ್ತಿಯೊಬ್ಬರು ಪ್ರಶಸ್ತಿ ಘೋಷಣೆ ಬಗ್ಗೆ ತಿಳಿಸಿದ್ದರು.

ಕೋಪಿಷ್ಠ ಕೊಳಕು ಮಂಡಲ ಹಾವು ಕಡಿದು ತುಂಬು ಗರ್ಭಿಣಿ ಸಾವು

ಆಗ ಹಾಜಬ್ಬ ಅವರು ಹರೇಕಳ ರೇಷನ್‌ ಅಂಗಡಿಯಲ್ಲಿ ಪಡಿತರ ಚೀಟಿಗೆ ಹೆಬ್ಬೆಟ್ಟು ಹಾಕಲು ಸರತಿ ಸಾಲಿನಲ್ಲಿ ನಿಂತಿದ್ದರು. ಮೊಬೈಲ್‌ಗೆ ಕರೆ ಬಂದಾಗ, ಇಂಗ್ಲಿಷ್‌ ಹಾಗೂ ಹಿಂದಿ ಭಾಷೆಯಲ್ಲಿ ಮಾತನಾಡುವುದು ಅರ್ಥವಾಗದೆ ಬೇರೊಬ್ಬರಿಗೆ ಮೊಬೈಲ್‌ ನೀಡಿದ್ದರು. ಅವರಿಗೆ ಕೂಡ ಕರೆ ಮಾಡಿದವರು ಏನು ಹೇಳುತ್ತಿದ್ದಾರೆ ಎಂದು ಸರಿಯಾಗಿ ಗೊತ್ತಾಗಿರಲಿಲ್ಲ. ಆದರೆ ಪ್ರಶಸ್ತಿ ಬಗ್ಗೆ ಏನು ಅಭಿಪ್ರಾಯ ಎಂದು ಕರೆ ಮಾಡಿದವರು ಕೇಳಿ ಬಳಿಕ ಕರೆ ಕಡಿತಗೊಳಿಸಿದ್ದರು ಎನ್ನುತ್ತಾರೆ ಹಾಜಬ್ಬ.

ಸಂಜೆ ಮಂಗಳೂರಿಗೆ ಬಂದಿದ್ದ ಹಾಜಬ್ಬರು ಮಾಧ್ಯಮ ಮಿತ್ರರೊಬ್ಬರಲ್ಲಿ ಈ ವಿಚಾರ ತಿಳಿಸಿದ್ದರು. ಅವರಿಗೂ ಬೆಳಗ್ಗೆ ಕರೆ ಮಾಡಿದವರು ಯಾರು ಎಂಬುದು ಗೊತ್ತಾಗಿರಲಿಲ್ಲ. ಆದರೆ ಸಂಜೆ ಮನೆಗೆ ಬಸ್‌ನಲ್ಲಿ ಮರಳುತ್ತಿದ್ದಾಗ ಮಾಧ್ಯಮ ಮಿತ್ರರು ಕರೆ ಮಾಡಿದಾಗಲೇ ಪ್ರಶಸ್ತಿ ಘೋಷಣೆಯ ವಿವರ ಗೊತ್ತಾಗಿತ್ತು. ಆಗಲೇ ಬೆಳಗ್ಗೆ ಕರೆ ಮಾಡಿರುವುದು ಇದೇ ವಿಚಾರಕ್ಕೆ ಎಂದು ಹಾಜಬ್ಬ ಅರ್ಥಮಾಡಿಕೊಂಡರು.

-ಆತ್ಮಭೂಷಣ್‌