ನೆರೆಯಿಂದ ತತ್ತರಿಸಿರುವ ಉತ್ತರ ಕರ್ನಾಟಕ ಭಾಗಕ್ಕೆ ಕೇಂದ್ರದಿಂದ ನೆರವಿನ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಗುರುಮಠಕಲ್‌ನ ಜೆಡಿಎಸ್‌ ಶಾಸಕ ಶರಣಗೌಡ ಕಂದಕೂರ್ ಅವರು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ.

ಯಾದಗಿರಿ (ಸೆ.30): ಅತಿವೃಷ್ಟಿ ಮತ್ತು ನೆರೆಯಿಂದ ತತ್ತರಿಸಿರುವ ಉತ್ತರ ಕರ್ನಾಟಕ ಭಾಗಕ್ಕೆ ಕೇಂದ್ರದಿಂದ ನೆರವಿನ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಗುರುಮಠಕಲ್‌ನ ಜೆಡಿಎಸ್‌ ಶಾಸಕ ಶರಣಗೌಡ ಕಂದಕೂರ್ ಅವರು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ. ಒಮ್ಮೆ ಬರ, ಮಗದೊಮ್ಮೆ ನೆರೆ ಹೀಗೆ ಪ್ರಕೃತಿ ವಿಕೋಪದಿಂದ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳು ನಲಗುವಂತೆ ಮಾಡಿದೆ.

ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು, ವಿಜಯಪುರ ಸೇರಿದಂತೆ ವಿವಿಧೆಡೆ ಸತತ ಮಳೆಯಿಂದ ಮತ್ತು ಮಹಾರಾಷ್ಟ್ರದ ಭೀಮಾ ನದಿಯಿಂದ ಬೀಡಲಾದ 24 ಲಕ್ಷ ಕ್ಯೂಸೆಕ್‌ ನೀರಿನಿಂದಾಗಿ ಪ್ರವಾಹಕ್ಕೆ ಕಾರಣವಾಗಿದೆ‌. ಇದರಿಂದಾಗಿ ಸೇತುವೆ, ಹಳ್ಳಕೊಳ್ಳಗಳು ಜಲಾವೃತಗೊಂಡಿವೆ. ಗ್ರಾಮೀಣ ಭಾಗದ ರಸ್ತೆ ಹಾಳಾಗಿವೆ. ಮನೆಗಳು‌ ಜಖಂಗೊಂಡಿವೆ. ನೂರಾರು ಕೋಟಿ ರು. ಮೌಲ್ಯದ ಲಕ್ಷಾಂತರ ಎಕರೆ ಬೆಳೆ ಹಾಳಾಗಿದೆ. ಇದರಿಂದಾಗಿ ರೈತರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಶಾಸಕರು‌ ವಿವರಿಸಿದ್ದಾರೆ.

ಹತ್ತಿ, ತೊಗರಿ, ಭತ್ತ, ಹೆಸರು, ಮೆಣಸಿನಕಾಯಿ, ಸೋಯಾಬಿನ್ ಸೇರಿದಂತೆಯೇ ಅನೇಕ ಬೆಳೆಗಳು ಅತಿವೃಷ್ಟಿಯಿಂದ ಹಾಳಾಗಿವೆ. ಯಾದಗಿರಿ ಜಿಲ್ಲೆಯೊಂದರಲ್ಲಿಯೇ ಸುಮಾರು 1.50 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ತಾವು (ಎಚ್ಡಿಕೆ) ಈ ಹಿಂದೆ ಸಿಎಂ ಆಗಿದ್ದಾಗ ಇಂತಹ ಪರಸ್ಥಿತಿ ಅತ್ಯಂತ ಸಮರ್ಥವಾಗಿ ನಿಭಾಯಿಸುವ‌ ಮೂಲಕ ರೈತ ಜೀವನಾಡಿಯಾಗಿದ್ದಿರಿ, ಸಕಾಲಕ್ಕೆ ಪರಿಹಾರ ಒದಗಿಸಿದ್ದಿರಿ ಮತ್ತು ರೈತರ ಸಾಲ ಮನ್ನಾ ಮಾಡುವ ಮೂಲಕ ನಿಜವಾದ ರೈತನ ಮಗನ ಕೆಲಸ ಮಾಡಿದ್ದೀರಿ.

ಆನೆ ನಡೆದಿದ್ದೇ ದಾರಿ

ಪ್ರವಾಹ ವೇಳೆಯಲ್ಲಿ ಕೇಂದ್ರ ಸರ್ಕಾರದೊಡನೆ ಸಮನ್ವಯತೆ ಸಾಧಿಸಿ, ತಾಳ್ಮೆಯಿಂದ ವರ್ತಿಸಿ ಜನರಿಗೆ ನೆರವು-ಪರಿಹಾರ ನೀಡಬೇಕಾಗಿರುವ ರಾಜ್ಯ ಸರ್ಕಾರ, ತಪ್ಪನ್ನ ಮರೆತು ಆನೆ ನಡೆದಿದ್ದೇ ದಾರಿ ಎನ್ನುವಂತೆ ತನ್ನ ತೀರ್ಮಾನವೇ ಅಂತಿಮ ಎಂದು ವರ್ತಿಸುತ್ತಿರುವುದು ಆಘಾತಕಾರಿಯಾಗಿದೆ. ಈಗ ಕೇಂದ್ರದಲ್ಲಿ ತಾವು ಸಚಿವರಾಗಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಈ ಬಗ್ಗೆ ಮನವರಿಕೆ ಮಾಡಿಕೊಟ್ಟು ಪರಿಹಾರದ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿಸುವ ಮೂಲಕ ಉತ್ತರ ಕರ್ನಾಟಕ ರೈತರ ಕಣ್ಣಿರು ಒರೆಸಬೇಕೆಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.